Thursday, June 2, 2011

ಅದ್ಭುತ ಸಂಘಟನಾ ಶಕ್ತಿ



ಕನ್ನಡ ನಾಡು ಶರಣರ ಬೀಡು ಹನ್ನೆರಡನೆಯ ಶತಮಾನದಲ್ಲಿ ಕನ್ನಡದಲ್ಲಿ ವಚನಗಳನ್ನು ರಚಿಸಿ, ಆಡುಭಾಷೆಯನ್ನೇ ದೇವ ಭಾಷೆಯಾಗಿ ಮಾಡಿ ಜನಸಾಮಾನ್ಯರ ಬದುಕಿನ ನೆಲೆಗಟ್ಟಾಗಿ, ಕಾಯಕ-ದಾಸೋಹ, ಸಮಾನತೆ ತಳಹದಿಯ ಮೇಲೆ ಕನ್ನಡ ಸಾಮ್ರಾಜ್ಯ ನಿರ್ಮಾಣ ಮಾಡಿದ ಬಸವಾದಿ ಶರಣರ ಪುಣ್ಯಭೂಮಿ ಇದು. ಸಂತರು, ದಾಸರು, ರಾಷ್ಟ್ರಕವಿಗಳು, ವರಕವಿಗಳು, ಜ್ಞಾನಪೀಠ ಪ್ರಶಸ್ತಿ ಮೇರು ಸಾಹಿತಿಗಳ ನಾಡು ಪುಣ್ಯದ ಬೀಡು.
ಕನ್ನಡದ ನೆಲ, ಜಲ, ಭಾಷೆ ಗಡಿಗಾಗಿ ಹೋರಾಟ ಮಾಡುವ ವೀರ ಕನ್ನಡಿಗರು, ಆಗೊಮ್ಮೆ ಈಗೊಮ್ಮೆ ಹುಟ್ಟಿ ಬರುತ್ತಾರೆ. ಇಂತಹವರ ಸಾಲಿನಲ್ಲಿ ಕನ್ನಡದ ಕಣ್ಮಣಿಯಾಗಿ ಹೋರಾಟವೇ ತಮ್ಮ ಪ್ರಾಣ ಉಸಿರು ಮಾಡಿಕೊಂಡು ವಿಶ್ವಕನ್ನಡಿಗರ ಗಮನ ಸೆಳೆದಿರುವ ಏಕೈಕ ಶಕ್ತಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣಗೌಡರು. ಕನ್ನಡ ನುಡಿಗೆ ಯಾವುದೇ ಜಾತಿ ಧರ್ಮ ಸೀಮಿತವಲ್ಲವೆಂದು ಘಂಟಾಘೋಷವಾಗಿ ಸಾರಿ ಕ್ರಾಂತಿಯ ಕಹಳೆಯನ್ನು ಊದಿರುವ ನಾರಾಯಣಗೌಡರು ಕನ್ನಡಿಗರ ಮನೆ ಮಾತಾದರು. ಅದ್ಭುತ ಸಂಘಟನಾ ಶಕ್ತಿ ಪಡೆದಿರುವ ಶ್ರೀಯುತರು ಕೆಲವೇ ದಿನಗಳಲ್ಲಿ ಕನ್ನಡ ರಕ್ಷಣಾ ವೇದಿಕೆ ಸಾವಿರಾರು ಕಟ್ಟಿ ಕಿರಿಯರಿಂದ ಹಿರಿಯರವರೆಗೆ ಕನ್ನಡ ಪ್ರೇಮ ಪ್ರೀತಿ ಭಕ್ತಿ ಹುಟ್ಟಿಸುವಂತೆ ಮಾಡಿರುವ ಕನ್ನಡದ ನಿಜಶರಣರು.
ಅವರ ಹೋರಾಟದ ಬದುಕು ಕನ್ನಡದ ಬದುಕು ಸುವರ್ಣ ಕರ್ನಾಟಕದಲ್ಲಿ ಹುಟ್ಟಿದ ನಮಗೆ ಕನ್ನಡ ಪದದ ಅರ್ಥವೇ ಗೊತ್ತಿಲ್ಲ. ಅವರ ಬೆಲೆಯಂತೂ ತಿಳಿದೆಯಿಲ್ಲ. ಹಲವು ಭಾಷಿಕರ ದಬ್ಬಾಳಿಕೆಯಿಂದ ಕನ್ನಡ ಭಾಷೆ ನಲುಗಿದ ಸಂದರ್ಭದಲ್ಲಿ ಉದ್ಭವಿಸಿದ ಕನ್ನಡದ ಸೇನಾನಿ ಇವರು. ಕನ್ನಡಕ್ಕಾಗಿ ಮಾಡು ಇಲ್ಲವೇ ಮಡಿ ಗುರಿ ಮುಟ್ಟುವವರೆಗೆ ಹಗಲಿರುಳು ದುಡಿ ಎಂಬ ಧ್ಯೇಯ ವಾಕ್ಯದಂತೆ ಕರ್ನಾಟಕ ತುಂಬ ಕನ್ನಡ ಧ್ವಜ ಹಾರಿಸಿದ ಕನ್ನಡ ಪ್ರೇಮಿ ಇವರು. ಛಲಬೇಕು ಶರಣಂಗೆ ವಚನದಂತೆ ಕನ್ನಡ ನಾಡು ಕಟ್ಟುವೆನೆಂಬ ಛಲವತೊಟ್ಟವರಿವರು ಕನ್ನಡದ ಹೆಮ್ಮೆಯ ಸುಪುತ್ರರಾಗಿ ಕನ್ನಡದ ಧೀಮಂತ ನಾಯಕರಾದವರು. ಕನ್ನಡ ಇತಿಹಾಸದಲ್ಲಿ ನಿಮ್ಮ ಹೆಸರು ಸುವರ್ಣ ಅಕ್ಷರದಿಂದ ಬರೆದಿಡಬೇಕು. ಸುದ್ದಿ ಮಾಧ್ಯಮದಲ್ಲಿ ನಿಮ್ಮ ಹೋರಾಟದ ನಿಮ್ಮ ಹೋರಾಟದ ಹಲವಾರು ದೃಷ್ಟಿಕೋನವನ್ನು ನಾವು ಗಮನಿಸಿದ್ದೇವೆ. ಕನ್ನಡ ಭುವನೇಶ್ವರಿ ಮೇಲಿಟ್ಟಿರುವ ಭಕ್ತಿ ಕನ್ನಡ ಕಟ್ಟಿ ತೀರುವೆನೆಂಬ, ಹುಡುಗರಿಂದ ಮುದುಕರವರೆಗೆ ಸಿಡಿದೇಳಿಸುವ ನುಡಿಗಳು ನುಡಿದರೆ ಮುತ್ತಿನ ಹಾರದಂತಿರಬೇಕು. ಲಿಂಗ ಮೆಚ್ಚಿ ಹೌದೆನ್ನಬೇಕು ಎನ್ನುವ ಬಸವಣ್ಣನ ವಾಣಿ ಸಾಕಾರಗೊಳಿಸಿದ್ದೀರಿ. ಗೌಡರ ನೆನಪು ಚಿರಸ್ಥಾಯಿಯಾಗಿ ನಿಲ್ಲುವುದು. ಕನ್ನಡ ಚಳವಳಿ ನೆನಪಾದರೆ ನಾರಾಯಣಗೌಡರ ನೆನಪು ಮಾರ್ಗದರ್ಶನವಾಗುತ್ತದೆ.
ಶ್ರೀಯುತರಿಗೆ ಮತ್ತೊಮ್ಮ ಹೃದಯಾರೆ ಅಭಿನಂದಿಸಿ ಅವರ ಕನ್ನಡ ಚಳವಳಿಯ ಅಭಿನಂದನಾ ಗ್ರಂಥವಾಗಿ ಹೊರಬರುತ್ತಿರುವುದು ಮತ್ತು ಕನ್ನಡ ಜನತೆಯ ಕೈ ಸೇರುತ್ತಿರುವುದು ಹೆಮ್ಮೆಯ ಮಾತು.

ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು
ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠ, ಹುಲಸೂರು
ಬಸವಕಲ್ಯಾಣ ತಾಲೂಕು, ಬೀದರ ಜಿಲ್ಲೆ

No comments:

Post a Comment

ಹಿಂದಿನ ಬರೆಹಗಳು