Thursday, June 2, 2011

ಸ್ವಾಭಿಮಾನಿ ಕನ್ನಡಿಗ ನಾರಾಯಣಗೌಡರು

ಇತ್ತೀಚಿನ ದಿನಗಳಲ್ಲಿ ಕನ್ನಡದ ಬಗ್ಗೆ ಕಾಳಜಿ ಉಳ್ಳವರಲ್ಲಿ ನಾರಾಯಣಗೌಡರದು ದೊಡ್ಡ ಹೆಸರು. ದಿನನಿತ್ಯ ನಾಡಿನ ಒಂದಲ್ಲಾ ಒಂದು ಸಮಸ್ಯೆಯ ಬಗ್ಗೆ ಹೋರಾಡುವುದನ್ನು ದೂರದರ್ಶನ ಮತ್ತು ಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ. ಒಬ್ಬ ವ್ಯಕ್ತಿಯಾಗಿ ಕನ್ನಡದ ಬಗ್ಗೆ ಧ್ವನಿ ಎತ್ತುವವರು ಕರ್ನಾಟಕದಲ್ಲಿ ಕೆಲವರಿದ್ದಾರೆ. ಆದರೆ ಕರ್ನಾಟಕದ ತುಂಬ ಕಾರ್ಯಕರ್ತರ ಒಂದು ದೊಡ್ಡ ತಂಡವನ್ನು ಕಟ್ಟಿ ಹೋರಾಡಿದವರು ಇಲ್ಲವೆನ್ನುವಷ್ಟು ಬಹಳ ವಿರಳ. ಈ ದೃಷ್ಟಿಯಿಂದ ನಾರಾಯಣಗೌಡರು ನಮಗೆ ಮುಖ್ಯವಾಗುತ್ತಾರೆ. ಕರ್ನಾಟಕ ರಕ್ಷಣಾ ವೇದಿಕೆಯ ೫ನೇ ರಾಜ್ಯಮಟ್ಟದ ಸಮ್ಮೇಳನದಲ್ಲಿ ಸುಮಾರು ೪೦ ಸಾವಿರ ಜನ ಕಾರ್ಯಕರ್ತರು ಸೇರಿರುವುದು ಇವರ ಸಂಘಟನಾ ಶಕ್ತಿಯ ಸಾಂಘಿಕ ಸಾಮರ್ಥ್ಯವನ್ನು ತೋರಿಸಿಕೊಡುತ್ತದೆ. ಇವರೆಲ್ಲ ನನ್ನ ದೃಷ್ಟಿಯಲ್ಲಿ ಕನ್ನಡದ ಸೈನಿಕರು. ಕನ್ನಡ ನಾಡಿನ ಉಳಿವಿಗಾಗಿ ಯಾವಾಗಲೂ ಸನ್ನದ್ಧರಾಗಿರುತ್ತಾರೆ. ಬೆಳಗಾವಿಯ ಮೋರೆಯೆಂಬ ವ್ಯಕ್ತಿಗೆ ವಿಧಾನಸೌಧದ ಮುಂದೆ ಮಸಿಬಳಿದದ್ದು, ಕಾವೇರಿ ಹೋರಾಟದ ಮುಂಚೂಣಿಯಲ್ಲಿದ್ದದ್ದು. ಡಾ. ರಾಜಕುಮಾರ ಸ್ಮಾರಕದ ಬಗ್ಗೆ ದೊಡ್ಡ ಧ್ವನಿ ಎತ್ತಿದ್ದು, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸಿಗಬೇಕೆಂದು ಕೇಂದ್ರಕ್ಕೆ ಒಂದು ನಿಯೋಗ ತೆಗೆದುಕೊಂಡು ಹೋಗಿದ್ದನ್ನು ಕನ್ನಡಿಗರು ಎಂದೂ ಇವರನ್ನು ಮರೆಯುವುದಿಲ್ಲ.
ವಿವಿಧ ಮಾಧ್ಯಮಗಳಲ್ಲಿ ಇವರ ವಿಚಾರ ಕೇಳಿದ್ದೆನಾದರೂ ಇವರನ್ನು ಮೊದಲು ಮುಖತಃ ಭೆಟ್ಟಿಯಾಗಿದ್ದು ಬಳ್ಳಾರಿಯ ಕರ್ನಾಟಕ ರಕ್ಷಣಾವೇದಿಕೆಯ ರಾಜ್ಯ ಮಟ್ಟದ ಸಮಾವೇಶದಲ್ಲಿ. ಅಂದು ಅವರು ಮಾತನಾಡಿದ ರೀತಿ ಒಬ್ಬ ಕನ್ನಡಿಗನಿರಬೇಕಾದ ನೈಜ ಕಾಳಜಿಯನ್ನು ತೋರಿಸಿತು. ‘ನಾವು ಸ್ನೇಹಕ್ಕೂ ಸೈ ಸಂದರ್ಭ ಬಂದರೆ ಸಂಘರ್ಷಕ್ಕೂ ಸೈ ಎಂದು ಹೇಳಿಕೆ ಕೊಟ್ಟದ್ದು ಗಡಿಭಾಗದ ಜನರಿಗೆ ಅದರಲ್ಲೂ ಬೆಳಗಾವಿಯ ಬಗ್ಗೆ ಎಚ್ಚರಿಕೆಯ ಗಂಟೆಯಂತಿತ್ತು. ಕನ್ನಡದ ವಿಷಯದಲ್ಲಿ ಯಾವುದಕ್ಕೂ ರಾಜಿಯಾಗದ ಇವರು ನಮ್ಮ ನಾಡಿನ ಸ್ವಾಭಿಮಾನದ ಪ್ರತೀಕವಾಗಿ ಕಾಣುತ್ತಾರೆ.
ಜಾಗತೀಕರಣ ಮತ್ತು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಇಂದು ಪಟ್ಟಣ ಪ್ರದೇಶಗಳು ಕೂಡ ಪುಟ್ಟಭಾರತದಂತೆ ಕಾಣುತ್ತದೆ. ಜಿಲ್ಲಾ ಕೇಂದ್ರಗಳಲ್ಲಿ ಕೂಡ ದೊಡ್ಡ ದೊಡ್ಡ ಕಾರ್ಖಾನೆಗಳು ತಲೆ ಎತ್ತುತ್ತಿರುವಾಗ ಅಲ್ಲಿ ಎಲ್ಲಾ ಭಾಷೆಯನ್ನು ಮಾತನಾಡುವ ಜನ ಸಿಗುತ್ತಾರೆ. ಇದರಿಂದ ಕನ್ನಡದ ಕಂಪು ಎಲ್ಲಿ ಮಾಯವಾಗುತ್ತದೆಯೆಂದು ಒಮ್ಮೊಮ್ಮೆ ಭಯವಾಗುತ್ತದೆ. ಭಾಷಾ ವಿಷಯದಲ್ಲಿ ತಮಿಳುನಾಡಿನವರಷ್ಟು ನಾವು ಸ್ವಾಭಿಮಾನಿಗಳಲ್ಲ. ಇವತ್ತಿಗೂ ಕೂಡ ತಮಿಳುನಾಡಿನಲ್ಲಿ ಆ ಭಾಷೆ ಬರದವರು ಅಲ್ಲಿ ಬದುಕಲು ಸಾಧ್ಯವಿಲ್ಲ ಎನ್ನುವಂತಹ ಸ್ಥಿತಿ ಇದೆ. ಆದರೆ ನಮ್ಮಲ್ಲಿ ಈ ವಾತಾವರಣ ಇನ್ನೂ ಕನಸಿನ ಮಾತಾಗಿದೆ. ಇದರಿಂದ ಕನ್ನಡ ಭಾಷೆಯ ಶೋಷಣೆ ಕಾಲಾಂತರದಲ್ಲಿ ನಡೆಯುತ್ತಾ ಬಂದಿದೆ. ಶಾಸನಬದ್ದವಾದ ಕನ್ನಡಭಾಷೆಯ ರಕ್ಷಣೆಯ ಕುರಿತಾದ ಹೋರಾಟ ಇತ್ತೀಚಿನವರೆಗೂ ತೀವ್ರಗತಿಯದಾಗಿರಲಿಲ್ಲ. ನಾರಾಯಣಗೌಡರಂತಹ ಕನ್ನಡದ ಸ್ವಾಭಿಮಾನಿ ಈ ಹೋರಾಟವನ್ನು ಹಕ್ಕುಬದ್ಧವಾಗಿ ತೀವ್ರಗತಿಗೊಳಿಸಿರುವುದು ಪ್ರಶಂಸನೀಯವಾಗಿದೆ. ಬಹಳಷ್ಟು ಜನರು ಭಾವಿಸಿರುವಂತೆ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಕ್ಷಣೆಯು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಎಂದರಿಯದೇ ಅದು ಕೇವಲ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವವರಿಗೆ ಮಾತ್ರ ಎಂಬ ಭಾವನೆ ಇವತ್ತಿಗೂ ಇದೆ. ಅದು ನಮ್ಮ ಸಾಮಾಜಿಕ ಜವಾಬ್ದಾರಿಯೆಂಬುದು ಬಹಳಷ್ಟು ಗೊತ್ತೇ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕನ್ನಡಿಗನೂ ತನ್ನ ನಾಡ ನುಡಿಯ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಶ್ರೀ ನಾರಾಯಣಗೌಡರಂತಹ ಹೋರಾಟಗಾರರ ಜತೆ ಕೈ ಜೋಡಿಸಿದಾಗ ಮಾತ್ರ ಇಂತಹ ಹೋರಾಟಗಳು ಫಲಕಾರಿಯಾಗುವವು.
ಪ್ರಸ್ತುತ ಸಂದರ್ಭದಲ್ಲಿ ಶ್ರೀ ನಾರಾಯಣಗೌಡರಿಗೆ ಶುಭ ಹಾರೈಸುತ್ತೇವೆ. ಅವರ ಎಲ್ಲ ಜನಪರ ಹೋರಾಟಗಳಿಗೆ ಕರ್ನಾಟಕದ ಜನ ಸ್ಪಂದಿಸಲಿ. ಕನ್ನಡಿಗರ ಆಶಾ ದೀಪವಾಗಿ ನಾರಾಯಣಗೌಡರು ಬೆಳಗಲಿ ಎಂದು ಈ ಮೂಲಕ ಹಾರೈಸುತ್ತೇವೆ.

ಶ್ರೀ ಮ.ನಿ.ಪ್ರ. ಪ್ರಭುಸ್ವಾಮಿಗಳು
ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠ
ಸಂಡೂರು-೫೮೩೧೧೬

No comments:

Post a Comment

ಹಿಂದಿನ ಬರೆಹಗಳು