Tuesday, June 14, 2011
ರಂಗಭೂಮಿಯಲ್ಲಿ ನಿರ್ದೇಶಕನ ಪಾತ್ರ
ಡಾ.ರಾಜಪ್ಪ ದಳವಾಯಿ
ಕನ್ನಡದಲ್ಲಿ ನಟರಿಗಿಂತ ನಿರ್ದೇಶಕರೇ ಹೆಚ್ಚು. ಅವರಲ್ಲಿ ಬಹುತೇಕರು ವಿಫಲರಾದ ನಟರೇ. ಬಹುತೇಕರ ಆಯ್ಕೆ ಆರಂಭದಲ್ಲಿ ಬೇರೆ ಬೇರೆ ಇದ್ದರೂ ನಿರ್ದೇಶಕನಾಗಿ ಮರ್ಜ್ ಆಗುವುದರಲ್ಲಿ ಹಲವರ ರಂಗಪಯಣ ಇರುತ್ತದೆ. ನಾಟಕ ನೋಡಲು ನಿರ್ದೇಶಕ ಯಾಕೆ ಬೇಕು? ಎನ್ನುವವರೂ ಇದ್ದಾರೆ. ಪ್ರಸನ್ನ ‘ನಾಟಕ-ಪ್ರೇಕ್ಷಕರ ನಡುವೆ ನಿರ್ದೇಶಕ ಯಾರು? ಮತ್ತೆ ಯಾಕೆ?’ ಎನ್ನುತ್ತಾರೆ. ಬಿ.ವಿ.ಕಾರಂತರು. ನಿರ್ದೇಶಕ ನಾಟಕವನ್ನು ವ್ಯಾಖ್ಯಾನಿಸಲು ಬೇಕು’ ಎನ್ನುತ್ತಾರೆ. ಎದುರಿಗೆ ಹೆದರಿ ಹಿಂದೆ ಬೈದುಕೊಳ್ಳುವ ಈ ನಿರ್ದೇಶಕ ಸ್ಥಾನ ರೂಪು ಪಡೆಯಲು ಒಂದು ದೊಡ್ಡ ಚರಿತ್ರೆಯೇ ಇದೆ. ಮೊದಲ ನಿರ್ದೇಶಕ ಭರತ. ಇಂದ್ರನ ಮನವಿ ಮೇರೆಗೆ ದೇವದಾನವರಿಗೆ ’ಸಮುದ್ರ ಮಥನ’ ನಾಟಕವನ್ನು ಕಲಿಸಿದನಂತೆ. ದೇವಪಾಳಯದಲ್ಲಿ ಆನಂದವುಂಟಾದರೆ, ದಾನವ ಪಾಳಯದಲ್ಲಿ ಅತೃಪ್ತಿಯುಂಟಾಗಿ, ಅವರೆಲ್ಲ ಸಂಘಟಿತರಾಗಿ ನಿರ್ದೇಶಕನಾದ ಭರತನ ಕೊರಳುಪಟ್ಟಿ ಹಿರಿದುಕೊಂಡು ಕೇಳಿದರಂತೆ-’ಈ ಕತೆ ಸರಿಯಿಲ್ಲ. ಕತೆ ಬದಲಿಸಿ ನಮಗೆ ಅಮೃತ ಸಿಗುವಂತೆ ಮಾಡು’ ಎಂದು. ಭರತ ದಾನವರ ಹಲ್ಲೆಗೂ ಗುರಿಯಾದ. ಈ ಪ್ರಸಂಗವನ್ನು ಪ್ರತ್ಯಭಿಜ್ಞಾನ ದರ್ಶನದ ದಾರ್ಶನಿಕನಾದಂಥ ಅಬಿನವಗುಪ್ತಾಚಾರ‍್ಯ ಭರತನ ನಾಟ್ಯಶಾಸ್ತ್ರಕ್ಕೆ ಬರೆದ ’ಅಭಿನವ ಭಾರತಿ’ ಕೃತಿಯಲ್ಲಿ ರಸನಿಷ್ಪನ್ನ ಚರ್ಚೆ ಮಾಡುವಾಗ ರಸಭಂಗವುಂಟು ಮಾಡುವ ಸಪ್ತವಿಘ್ನಗಳನ್ನು ಪರಿಹರಿಸಿಕೊಂಡಾಗ ಮಾತ್ರ ರಸಾನುಭವ. ರಸಭಂಗಕ್ಕೆ ಕಾರಣವಾಗಿರುವ ’ದೇಶಕಾಲವಿಶೇಷಾವೇಶ’ ಎಂಬ ವಿಘ್ನ ಕುರಿತು ಮೇಲಿನ ಪ್ರಸಂಗವನ್ನು ನಿರೂಪಿಸುತ್ತಾನೆ. ಅಂದರೆ ಕಥಾವಸ್ತು ಆದಷ್ಟು ದೇಶ, ಕಾಲ ದೃಷ್ಟಿಗಳಿಂದ ದೂರ ಇರುವುದು ಒಳಿತು. ಈ ಕತೆ ನಮಗೇ ಸಂಬಂಧಿಸಿದ್ದು ಎಂದರೆ ಗಲಾಟೆ ಆಗುತ್ತವೆ. ಆದ್ದರಿಂದಲೇ ಸಿನಿಮಾ, ದೂರದರ್ಶನದಲ್ಲಿ ಈ ಕತೆ ಕಾಲ್ಪನಿಕ ಎಂಬ ಮಾತನ್ನು ಹಾಕಿರುತ್ತಾರೆ. ನಿರ್ದೇಶಕನಿಲ್ಲದ ರಂಗಭೂಮಿಯನ್ನು ನಾವು ಕಲ್ಪಿಸಿಕೊಳ್ಳುವುದು ಕಷ್ಟ. ಏಕೆಂದರೆ, ಕಂಪನಿ ನಾಟಕವಾಗಲಿ, ಹವ್ಯಾಸಿ ನಾಟಕವಾಗಲಿ ನಿರ್ದೇಶಕನ ನೇತೃತ್ವದಲ್ಲಿ ತಯಾರಾದ ಪ್ರದರ್ಶನಕ್ಕೆ ಅದರದೇ ಮಹತ್ವವಿರುತ್ತದೆ. ನಿರ್ದೇಶಕನಿಲ್ಲದಿದ್ದರೆ, ನಾಟಕ ಅರಾಜಕವಾಗುತ್ತದೆ. ಕಂಪನಿ ನಾಟಕದಲ್ಲಿ ಕೆಲವೊಮ್ಮೆ ಮಾಲೀಕನೇ ನಿರ್ದೇಶಕನೂ ಆಗಿರುತ್ತಿದ್ದ. ಪೇಟಿ ಮಾಸ್ತರ ನೇತೃತ್ವದಲ್ಲಿ ನಾಟಕ ನಿರ್ಮಾಣವಾಗುತ್ತಿತ್ತು. ಅದಕ್ಕೆ ಕಾರಣ ನಾಟಕಗಳು ಸಂಗೀತ ಪ್ರಧಾನವಾದುದರಿಂದ ಸಂಗೀತ ನಿರ್ದೇಶಕರೇ ನಾಟಕದ ನಿರ್ದೇಶಕರಾಗಿರುತ್ತಿದ್ದರು. ಇಂದಿಗೂ ಹಳ್ಳಿ ನಾಟಕಗಳಲ್ಲಿ ಹಾರ್ಮೋನಿಯಂ ಮೇಷ್ಟ್ರೇ ನಾಟಕ ನಿರ್ದೇಶಕರಾಗಿರುತ್ತಾರೆ. ಕೆಲವು ಕಂಪನಿಗಳಲ್ಲಿ ಒಂದೊಂದು ವಿಷಯಕ್ಕೆ ಒಬ್ಬೊಬ್ಬ ನಿರ್ದೇಶಕರನ್ನು ನೋಡುತ್ತೇವೆ. ಕೊಣ್ಣೂರು ಕಂಪನಿ, ಗುಬ್ಬಿ ಕಂಪನಿಗಳು ಅಂಥ ವೈಭವದ ದೊಡ್ಡ ಉದಾಹರಣೆಗಳು, ಕೆಲವೊಮ್ಮೆ ನಾಟಕಕಾರನೇ ನಿರ್ದೇಶಕನಾಗಬೇಕಾಗುತ್ತದೆ. ಇಂಥ ಕಂಪನಿಗಳೇ ಹೆಚ್ಚು. ರಚನೆ-ನಿರ್ದೇಶನ-ನಟನೆ ಮೂರರಲ್ಲೂ ಮಿಂಚಿದ ಸಾವಿರಾರು ಪ್ರತಿಭೆಗಳು ಕನ್ನಡ ನಾಡಿನಲ್ಲಿ ಆಗಿ ಹೋಗಿವೆ. ಕಂದಗಲ್ ಹಣಮಂತರಾಯ, ಧುತ್ತರಗಿ, ಸಾಳುಂಕೆ, ಟೇಲರ್ ಮುಂತಾದ ಪ್ರತಿಭೆಗಳು ಸ್ಮರಣೀಯ.
ನಿರ್ದೇಶನಕ್ಕೆ ಹೆಚ್ಚಿನ ಮಹತ್ವ ಬಂದದ್ದು ಹವ್ಯಾಸಿ ರಂಗಭೂಮಿಯಲ್ಲಿ ಕನ್ನಡಕ್ಕೆ ಕೈಲಾಸಂ ಮೂಲಕ ಅಂಥ ಹೊಸ ಪ್ರವೇಶವಾಯಿತು. ಕೈಲಾಸಂ ಇಂಗ್ಲೆಂಡಿನಲ್ಲಿ ಕಲಿಯಲು ಹೋಗಿದ್ದು ಭೂಗರ್ಭಶಾಸ್ತ್ರ. ಅದರ ಜೊತೆ ಅವರು ನಾಟಕ, ಸಿನಿಮಾ ಕೂಡ ಕಲಿತು ಬಂದರು. ತಾವು ಬರೆದ ನಾಟಕಗಳನ್ನು ಅವರೇ ಪ್ರಯೋಗಿಸಿದರು. ವಸಂತಸೇನಾದಲ್ಲಿ ಶಕಾರನಾಗಿ ಅಭಿನಯಿಸಿದರು. ನಾಟಕ ನಿರ್ದೇಶನಕ್ಕೂ ಸ್ಟಾರ್ ವ್ಯಾಲ್ಯೂ ತಂದುಕೊಟ್ಟ ನಿರ್ದೇಶಕರೆಂದರೆ ಶ್ರೀರಂಗ. ಅವರೂ ಲಂಡನ್ನಿನಲ್ಲಿ ನಾಟಕ ಅಭ್ಯಾಸ ಮಾಡಿ ಬಂದವರು. ರಂಗಕಲೆ ಎಂಬುದು ಕೇವಲ ನಾಟಕ ಸಂಭಾಷಣೆ ಹೇಳುವಂಥದಲ್ಲ. ಅದಕ್ಕೆ ಇತರೆ ಜವಾಬ್ದಾರಿಗಳೂ ಇವೆ. ರಂಗಕ್ರಿಯೆ ಮಾತಾಡುವುದಕ್ಕಿಂತ ಭಿನ್ನವೂ ವಿಶಿಷ್ಟವೂ ಆದುದೆಂಬುದನ್ನು ರಂಗಭೂಮಿಗೆ ತೋರಿಸಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಲಂಡನ್ನಿನಲ್ಲಿ ನಾಟಕ, ಸಿನಿಮಾ ಕಲಿತುಬಂದ ಮತ್ತೊಂದು ಪ್ರತಿಭೆಯೆಂದರೆ ಗಿರೀಶ್ ಕಾರ್ನಾಡ್. ಅವರು ಅಭಿನಯ ಮತ್ತು ಸಿನಿಮಾ ನಿರ್ದೇಶನಕ್ಕೆ ಹೆಚ್ಚು ತೊಡಗಿಕೊಂಡರು. ಆದರೆ ನಾಟಕಕಾರರಾಗಿ ಅವರದು ಜಾಗತಿಕ ಯಶಸ್ಸು. ಅವರೇ ನಿರ್ದೇಶಿಸಿದ ’ಒಡಕಲು ಬಿಂಬ’ (ಕೆ.ಎಂ.ಚೈತನ್ಯ ಅವರೊಂದಿಗೆ) ಇದಕ್ಕೆ ಮೊದಲು ’ಮದ್ರಾಸ್ ಪ್ಲೇಯರ‍್ಸ್’ಗಾಗಿ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅವರು ಪ್ರಧಾನವಾಗಿ ನಾಟಕಕಾರರಾಗಿಯೇ ಉಳಿದರು. ನಿರ್ದೇಶನದಿಂದ ಪಾರಾದರು.
ಕನ್ನಡದಲ್ಲಿ ಸತ್ವಶಾಲಿ ನಿರ್ದೇಶಕರು ಬಂದುದು ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತು ಬಂದ ಮೇಲೆ ಬಿ.ವಿ.ಕಾರಂತರಿಂದಿಡಿದು ದೊಡ್ಡದೊಂದು ಪರಂಪರೆಯೇ ಇದೆ. ಪ್ರೇಮಾ ಕಾರಂತ, ಪ್ರಸನ್ನ, ಜಯಶ್ರೀ, ಬಸವಲಿಂಗಯ್ಯ, ಸುರೇಶ್ ಆನಗಳ್ಳಿ, ಗೋಪಾಲಕೃಷ್ಣ ನಾಯರಿ, ಆರ್.ಟಿ.ರಮಾ, ರಘುನಂದನ, ಕೆ.ವಿ.ಅಕ್ಷರ, ಚಿದಂಬರರಾವ್ ಜಂಬೆ, ಜನಾರ್ಧನ್, ಮಾಲತಿ, ಕೆ.ಜಿ.ಕೃಷ್ಣಮೂರ್ತಿ, ಜಯರಾಮ್ ತಾತಾಚಾರ್, ಭಾಗೀರತಿಬಾಯಿ ಕದಂ, ಸುರೇಂದ್ರನಾಥ್, ಸುಂದರ ಶ್ರೀ, ಜಯತೀರ್ಥ ಜೋಶಿ, ಸುಮತಿ, ಜೆ.ವಿ.ಶಿವಾನಂದ, ಸಾಂಬಶಿವ ದಳವಾಯಿ, ಸುನಿಲ್ ಹುಡುಗಿ, ವಾಲ್ಮರ್ ಡಿಸೋಜ, ಓಂಕಾರ್, ಸವಿತಾ ಮುಂತಾದ ಅರವತ್ತಕ್ಕೂ ಹೆಚ್ಚು ಪ್ರತಿಭೆಗಳು ಕರ್ನಾಟಕದಲ್ಲಿ, ಭಾರತದಲ್ಲಿ ಹಲವು ರೀತಿಯ ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಗುಬ್ಬಿ ವೀರಣ್ಣ ಅವರು ತಮ್ಮ ಕುಟುಂಬದಿಂದ ಜಯಶ್ರೀ ಶಿವಾನಂದ್ ಅವರನ್ನು ಬಹುಹಿಂದೆಯೆ ರಂಗಕಲೆ ಕಲಿಕೆಗೆ ಕಳಿಸಿದ್ದರು.
ಈ ಪ್ರತಿಭೆಗಳಿಗಾಗಿ ಭಾರತ ಸರ್ಕಾರ ಅಪಾರ ಹಣ ಖರ್ಚು ಮಾಡಿದೆ. ಅನುದಾನ ನೀಡಿದೆ. ಇವರಿಗೆಲ್ಲ ಭಾರತೀಯ ರಂಗಭೂಮಿಯ ಪರಿಚಯ ಇರುತ್ತದೆ. ಡ್ರಾಮಾ ಸ್ಕೂಲ್‌ನ ಪರಂಪರೆ ಇದೆ. ಇದು ಒಂದು ನೆಲೆಯ ನಿರ್ದೇಶಕರ ಗುಂಪು. ಕರ್ನಾಟಕದಲ್ಲಿ ಎನ್‌ಎಸ್‌ಡಿ (ನ್ಯಾಷನಲ್ ಸ್ಕೂಲ್ ಆಪ್ ಡ್ರಾಮಾ)ಯಲ್ಲಿ ಕಲಿಯದಿದ್ದರೂ ಅವರನ್ನೂ ಮೀರಿಸುವಂಥ ಪ್ರತಿಭೆಗಳೂ ಇವೆ. ಪಿ.ಲಂಕೇಶ್, ಬಿ.ಸಿಂಧುವಳ್ಳಿ, ಅನಂತಮೂರ್ತಿ, ಎಚ್.ಎಂ.ಚೆನ್ನಯ್ಯ, ಆರ್.ನಾಗೇಶ್, ಸಿಜಿಕೆ, ಗಂಗಾಧರಸ್ವಾಮಿ, ನಾ.ದಾಮೋದರಶೆಟ್ಟಿ, ಕಾಸರಗೋಡು ಚಿನ್ನ, ಎಚ್.ಎಸ್.ಉಮೇಶ್, ಎಸ್.ಆರ್.ರಮೇಶ್, ಎ.ಎಸ್.ಮೂರ್ತಿ, ಪ್ರಭಾಕರ ಸಾತಖೇಡ, ಹೇಮಂತ ಕೊಲಾಪುರೆ, ಶಂಕರಯ್ಯ ಆರ್.ಘಂಟಿ, ಕೆಎಸ್‌ಡಿಎಲ್ ಚಂದ್ರು, ಮೈಕೋ ಶಿವಣ್ಣ, ಶಿವಶಂಕರ್, ರಾಮಕೃಷ್ಣ ಬೆಳ್ತೂರ್, ನಾಗಾಭರಣ, ಗುರುರಾವ್, ಭೂಪಟ್, ಓ.ಎಲ್. ನಾಗಭೂಷಣ ಸ್ವಾಮಿ, ಬಷೀರ್, ಶ್ರೀಪಾದಭಟ್ಟ ಮುಂತಾದವರನೇಕರು ಎಲ್ಲಿಯೂ ಕ್ರಮಬದ್ಧ ರಂಗಶಿಕ್ಷಣ ಪಡೆಯದಿದ್ದರೂ ಸಣ್ಣ ಉಟ್ಟ ವರ್ಕ್‌ಶಾಪ್ ಮತ್ತು ತಮ್ಮ ಸ್ವಂತ ಆಸಕ್ತಿಯಿಂದ ನಿರ್ದೇಶಕರಾಗಿ ಮಹತ್ವದ ರಂಗಕೃತಿಗಳನ್ನು ಕಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ರಂಗಭೂಮಿ, ಕಾಲೇಜು ರಂಗಭೂಮಿಯ ಕಾರಣಕ್ಕೆ ಅನೇಕ ಕಾರ್ಮಿಕರು, ಅಧ್ಯಾಪಕರು ರಂಗ ನಿರ್ದೇಶಕರಾದುದನ್ನು ಕಾಣಬಹುದು.
ಇತ್ತೀಚೆಗೆ ಅಭಿನಯ ತರಂಗ, ನೀನಾಸಂ, ರಂಗಾಯಣ, ಸಾಣಿಹಳ್ಳಿ, ಶಿವಕುಮಾರ ರಂಗಪ್ರಯೋಗ ಶಾಲೆ, ರಂಗ ಸಂಪನ್ಮೂಲ ಕೇಂದ್ರ, ಕುಂದಾಪುರ ಎನ್‌ಎಸ್‌ಡಿ ಚಾಪ್ಟರ‍್ಸ್, ಮುಂತಾದ ರಂಗಶಿಕ್ಷಣ ಕೇಂದ್ರಗಳು ಬರುವ ಮುನ್ನ ಡಾ.ಸಿಂಧುವಳ್ಳಿ ಅನಂತಮೂರ್ತಿಯವರ ನೇತೃತ್ವದಲ್ಲಿ ಮೈಸೂರು ವಿಶ್ವವಿದ್ಯಾಲಯ, ಎಚ್.ಎನ್.ಅವರ ಆಸಕ್ತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಂಗಶಿಕ್ಷಣ ಆರಂಭವಾದ ಮೇಲೆ ಅನೇಕ ನಿರ್ದೇಶಕರು ಹೊರಹೊಮ್ಮಿದರು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಎನ್‌ಎಸ್‌ಡಿ., ನೀನಾಸಮ್‌ಗಳಲ್ಲಿ ಸಿದ್ಧ ಮಾದರಿಗಳಿರುತ್ತವೆ. ಇತರೆಡೆ ಸಿದ್ಧಮಾದರಿಗಳಿಲ್ಲ. ಕಲಿಕೆಯಲ್ಲೆ ಕೊರತೆಗಳಿರುತ್ತವೆ. ಸ್ವತಃ ನಿರ್ದೇಶಕನನ್ನು ಯಾರೂ ನಿರ್ಮಾಣ ಮಾಡಲಾಗುವುದಿಲ್ಲ. ನಿರ್ದೇಶಕ ತಾನೇ ಆಗಬೇಕಾಗಿರುವ ಜವಾಬ್ದಾರಿ ಆಗಿರುತ್ತದೆ.
ಕೆಲವೊಮ್ಮೆ ಸಾಂದರ್ಭಿಕವಾಗಿ ನಿರ್ದೇಶಕರಾಗುವ ಅನಿವಾರ್ಯ ಹಲವರಿಗಿರುತ್ತದೆ. ಆಕಸ್ಮಿಕವಾಗಿ ಆಗುವುದೂ ಉಂಟು. ಅನಿವಾರ್ಯವಾಗಿಯೂ ಆಗುವುದಿರುತ್ತದೆ. ಆದ್ದರಿಂದ ಒಬ್ಬ ನಿರ್ದೇಶಕ ಒಂದು ಕಾಲಮಾನದ ದೊಡ್ಡ ಸಾಧಕರೇ ಆಗಿರುತ್ತಾರೆ. ರಂಗಕಲಿಕೆಯನ್ನು ಕಲಿಯುತ್ತಲೇ ಇತರ ಜ್ಞಾನಶಾಖೆಗಳ ಜೊತೆ ನಿರ್ದೇಶಕ ತಾನು ಸಾಧಿಸಬೇಕಾಗಿರುವ ರಂಗದರ್ಶನ ಮುಖ್ಯವಾಗುತ್ತದೆ. ಆದ್ದರಿಂದ ನಿರ್ದೇಶಕನು ವಿವಿಧ ಶಾಖೆಗಳ ಪ್ರತಿಭೆಗಳನ್ನು ತನ್ನ ಒಟ್ಟು ಪ್ರತಿಭೆಯ ಅನಾವರಣಕ್ಕೆ ಆತನದೇ ಆದ ಜವಾಬ್ದಾರಿ ಇರುತ್ತದೆ. ಪ್ರಚಾರ, ಸಂಗೀತ, ಬೆಳಕು, ವೇಷ, ಭೂಷಣ, ಡಾಕ್ಯುಮೆಂಟೇಶನ್. ಮುಂತಾದ ಅನೇಕ ವಿಷಯಗಳನ್ನು ಆತ ಆಯೋಜಿಸಬೇಕಾಗುತ್ತದೆ. ಕೆಲವೊಮ್ಮೆ ಕೆಲವು ನಿರ್ದೇಶಕರು ಇವೆಲ್ಲವಕ್ಕೂ ಗಮನಕೊಟ್ಟು ನಾಟಕದ ಜೀವಕ್ಕೆ ಕೊಡಲಿ ಹಾಕಿರುತ್ತಾರೆ. ಕೇವಲ ವೈಭವದಿಂದ ನಾಟಕ ಪ್ರೇಕ್ಷಕನನ್ನು ತಲುಪಲಾರದು. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ನಾಟಕ ಸೋಲಬಹುದು. ಪ್ರೇಕ್ಷಕನ ಜೊತೆ ಸಾವಯವತೆ ಪಡೆಯದ ನಾಟಕದಿಂದ ನಿರ್ದೇಶಕ ಏನು ತಾನೆ ಗಿಟ್ಟಿಸಿಕೊಳ್ಳಲು ಸಾಧ್ಯ? ಆದ್ದರಿಂದ ನಿರ್ದೇಶಕ ಪ್ರಸನ್ನ ಹೇಳಿದಂತೆ ನಾಟಕ ಕೃತಿಯನ್ನು ರಂಗಕೃತಿಯನ್ನಾಗಿಸುವ ಪ್ರಕ್ರಿಯೆಯಲ್ಲಿ ತಾನು ನಾಟಕವನ್ನು ಹೇಗೆ ವ್ಯಾಖ್ಯಾನ ಮಾಡುತ್ತಿದ್ದಾನೆ ಎಂಬುದು ಮುಖ್ಯ. ವಿವೇಕ ಮುಖ್ಯ. ’ಶೂದ್ರ ತಪಸ್ವಿ ಎಂಬ ಕುವೆಂಪು ಅವರ ನಾಟಕವನ್ನು ಬಸವಲಿಂಗಯ್ಯ ರಂಗಾಯಣಕ್ಕೆ ನಿರ್ದೇಶಿಸಿರುವುದಕ್ಕೂ ಮಂಜುನಾಥ ಬಡಿಗೇರ ನೀನಾಸಂಗೆ ನಿರ್ದೇಶನ ಮಾಡಿರುವುದಕ್ಕೂ ವ್ಯತ್ಯಾಸವಿದೆ. ಕೃತಿಯ ಅರ್ಥ ಬೆಳೆಯಬೇಕೇ ಹೊರತು ಕೊಲ್ಲುವ ಕೆಲಸವನ್ನು ನಿರ್ದೇಶಕ ಮಾಡಲು ಯಾವ ಹಕ್ಕನ್ನೂ ಹೊಂದಿಲ್ಲ. ಅರ್ಥವನ್ನು ವ್ಯಾಖ್ಯಾನಿಸುತ್ತಿದ್ದೇನೆಂದು ಕೃತಿಯನ್ನು ವಿಕಾರಗೊಳಿಸಲೂ ಬಾರದು.
ನಿರ್ದೇಶಕನ ಜವಾಬ್ದಾರಿ ಹೆಚ್ಚು. ಎಲ್ಲವನ್ನೂ ಸೂತ್ರಗೊಳಿಸಬೇಕು. ಒಪ್ಪ ಮಾಡಿ ರಂಗಕೃತಿಯನ್ನು ಪ್ರೇಕ್ಷಕರೆದುರಿಗೆ ಪ್ರದರ್ಶಿಸಬೇಕಾಗಿರುತ್ತದೆ. ಆದ್ದರಿಂದಲೇ ರಂಗಕೃತಿಯ ವ್ಯಾಖ್ಯಾನಕಾರನಾದ ನಿರ್ದೇಶಕರ ಸದಾ ಎಚ್ಚರದಿಂದಿರಬೇಕು. ಸಮಕಾಲೀನ ಸಾಮಾಜಿಕ ಜೀವನದ ಜೊತೆ ರಂಗಕ್ರಿಯೆಯನ್ನು ಕಟ್ಟಬೇಕಾಗಿರುವುದರಿಂದ ಅವನಿಗೆ ಸಾಮಾಜಿಕ ಜವಾಬ್ದಾರಿಯೂ ಮುಖ್ಯ. ಅದಿಲ್ಲದಿದ್ದರೆ ರಂಗಕ್ರಿಯೆಯ ಅರ್ಥಗಳು ವ್ಯರ್ಥವಾಗುವ ಸಾಧ್ಯತೆಗಳಿರುತ್ತವೆ. ’ರೂಪಾಂತರ’ ನಾಟಕದ ಮೊದಲ ಮಾತಿನಲ್ಲಿ ಡಾ.ಜಯಪ್ರಕಾಶ ಮಾವಿನಕುಳಿ ’ಈ ನಾಟಕ ಒಮ್ಮೊಮ್ಮೆ ಪೌರಾಣಿಕ ಅಂತ ಶುರು ಮಾಡ್ತೇನೆ, ಅದರೆ ಸಾಮಾಜಿಕವಾಗಿ ಬಿಡುತ್ತದೆ’ ಎಂಬ ಮಾತು ಹೇಳುತ್ತಾರೆ. ನಾಟಕ-ರಂಗಭೂಮಿ ಸದಾ ಸಾಮಾಜಿಕವೇ ಆಗಿರುತ್ತದೆ. ಆದ್ದರಿಂದಲೇ ನಿರ್ದೇಶಕನ ಜವಾಬ್ದಾರಿ ಎಲ್ಲಾ ಕಾಲಕ್ಕೂ ದೊಡ್ಡದೇ ಆಗಿರುತ್ತದೆ.
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2011
(92)
-
▼
June
(23)
- ನೆಲದ ಒಡಲ ಹಾಡೇ ಜಾನಪದ
- ಜನಪದ ಮಹಿಳೆ
- ಡಬ್ಬಿಂಗ್ ಮತ್ತು ಕನ್ನಡ ಚಿತ್ರಪ್ರೇಕ್ಷಕ
- ಪ್ರಜಾಪ್ರಭುತ್ವದ ನೆಲಗಟ್ಟೇ ಹಳ್ಳಿಗಳು: ಗೊ.ರು.ಚನ್ನಬಸಪ್ಪ
- ಬಸವ ಬೆಳಕು (ರೂಪಕ)
- ಬಹುಭಾಷಿಕತೆ ಮತ್ತು ಕನ್ನಡ
- ಬೆಂಗಳೂರು ಕೆಂಪೇಗೌಡ
- ರಂಗಭೂಮಿಯಲ್ಲಿ ನಿರ್ದೇಶಕನ ಪಾತ್ರ
- ಕನ್ನಡದ ಪ್ರಾದೇಶಿಕ ಉಪಭಾಷೆಗಳು
- ಮಹಾರತ್ನಮೆನಿಸಿದಂ ಕವಿರತ್ನಂ
- ಬಸವ ತತ್ವದ ದಂಡನಾಯಕ
- ಪುರಾಣಗಳ ಪುನರ್ರೂಪಿಕೆಯಾಗಿ ಶೂದ್ರತಪಸ್ವಿ
- ಪೂಜೆ ಮತ್ತು ಪ್ರತಿಭಟನೆ
- ಕರ್ನಾಟಕದ ವಚನಗುಮ್ಮಟ ಡಾ|| ಫ.ಗು.ಹಳಕಟ್ಟಿ
- ಕನ್ನಡಿಗರೆಡೆಗೆ ತೂರಿದ ಚಪ್ಪಲಿಯೇ ಇವರಿಗೆ ಆಭರಣ!
- ಬಸವಣ್ಣ, ಪೈಗಂಬರ್ ಮತ್ತು ಕಾರ್ಮಿಕರು
- ಸ್ವಾಭಿಮಾನಿ ಕನ್ನಡಿಗ ನಾರಾಯಣಗೌಡರು
- ಸ್ನೇಹಕ್ಕ್ಕೂ ಬದ್ಧ ಸಮರಕ್ಕೂ ಸಿದ್ಧ
- ಹೊಸ ದಿಕ್ಕಿನೆಡೆ ನಡೆಯಲಿ
- ಕನ್ನಡವೇ ಜಾತಿ ಕನ್ನಡವೇ ಧರ್ಮ ಕನ್ನಡವೇ ದೇವರು
- ಗುಡುಗಿನ ಶ್ರೀ ನಾರಾಯಣಗೌಡರು
- ಭಾಷಾ ಬದ್ಧತೆಯ ನಾರಾಯಣಗೌಡರು
- ಅದ್ಭುತ ಸಂಘಟನಾ ಶಕ್ತಿ
-
▼
June
(23)
No comments:
Post a Comment