Thursday, June 2, 2011

ಕನ್ನಡಿಗರೆಡೆಗೆ ತೂರಿದ ಚಪ್ಪಲಿಯೇ ಇವರಿಗೆ ಆಭರಣ!

ಟಿ.ಎ.ನಾರಾಯಣಗೌಡ



ಹೊಲಸು ರಾಜಕಾರಣ ಎಲ್ಲಿಗೆ ಬಂದು ನಿಂತಿತು ನೋಡಿ. ಬೆಳಗಾವಿಯಲ್ಲಿ ಈಗ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮಂದಾ ಬಾಳೆಕುಂದ್ರಿ ಮಹಾನಗರ ಪಾಲಿಕೆ ಮಹಾಪೌರರಾಗಿ ಆಯ್ಕೆಯಾಗಿದ್ದಾರೆ. ಇದು ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಿದ ತಪ್ಪಿಗಾಗಿ ಎಂಇಎಸ್ ಸಂಘಟನೆಗೆ ಸರ್ಕಾರ ಸಲ್ಲಿಸಿದ ಕಪ್ಪ-ಕಂದಾಯವೇ? ಬೆಳಗಾವಿಯ ಬಿಜೆಪಿ ಮುಖಂಡರು ಮರಾಠಿ ಮತಗಳಿಗಾಗಿ ತಮ್ಮನ್ನು ತಾವು ಮಾರಿಕೊಂಡಿದ್ದರ ಪ್ರತಿಫಲವೇ? ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಿರ್ವೀರ್ಯತನ, ಬೇಜವಾಬ್ದಾರಿಯ ಪ್ರತೀಕವೇ?
ಈ ಮಂದಾ ಬಾಳೇಕುಂದ್ರಿ ಬೇರಾರೂ ಅಲ್ಲ, ಹಿಂದೆ ಕನ್ನಡಿಗ ಎನ್.ಬಿ.ನಿರ್ವಾಣಿ ಮಹಾಪೌರ ಸ್ಥಾನಕ್ಕೆ ಏರಿದಾಗ ಚಪ್ಪಲಿ ತೋರಿಸಿದ್ದ ಹೆಂಗಸು. ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಅವರುಗಳ ನಾಡಿನಲ್ಲಿ ಈಗ ಕನ್ನಡಿಗರ ವಿರುದ್ಧ, ಕನ್ನಡತನದ ವಿರುದ್ಧ ಚಪ್ಪಲಿ ಝಳಪಿಸಿದ ಹೆಣ್ಣಮಗಳು ಮಹಾಪೌರ ಸ್ಥಾನಕ್ಕೆ ಏರುವಂಥ ಸ್ಥಿತಿ ನಿರ್ಮಾಣವಾಗಿದ್ದಕ್ಕೆ ಯಾರನ್ನು ದೂರುವುದು?
ಬೆಳಗಾವಿ ಮಹಾನಗರಪಾಲಿಕೆ ಅಸ್ತಿತ್ವಕ್ಕೆ ಬಂದಿದ್ದು ೧೯೮೪ರಲ್ಲಿ. ಆಗಿನಿಂದಲೂ ಅಲ್ಲಿ ಮೇಯರ್ ಸ್ಥಾನವನ್ನು ಕಬಳಿಸುತ್ತ ಬಂದಿದ್ದು ಮಹಾರಾಷ್ಟ್ರ ಏಕೀಕರಣ ಸಮಿತಿ. ಚುನಾವಣೆಗಳಲ್ಲಿ ಕನ್ನಡಿಗರ ಮತಗಳೆಲ್ಲ ಇತರ ಪಕ್ಷಗಳಲ್ಲಿ ಹರಿದು ಹಂಚಿ ಹೋಗುತ್ತಿದ್ದುದರ ಪರಿಣಾಮವಾಗಿ ಎಂಇಎಸ್ ಪದೇಪದೇ ಗೆದ್ದು ಬರುತ್ತಿತ್ತು. ೧೯೯೧ರಲ್ಲಿ ಸಿದ್ಧನಗೌಡ ಪಾಟೀಲರು ಮೊದಲ ಕನ್ನಡಿಗರ ಮೇಯರ್ ಆಗಿ ಆಯ್ಕೆಯಾಗಿದ್ದರು. ಅಂದು ಮುಖ್ಯಮಂತ್ರಿಗಳಾಗಿದ್ದ ಎಸ್.ಬಂಗಾರಪ್ಪನವರ ರಾಜಕೀಯ ಇಚ್ಛಾಶಕ್ತಿಯ ಪರಿಣಾಮವಾಗಿ ಇದು ಸಾಧ್ಯವಾಗಿತ್ತು.
ಅದಾದ ನಂತರ ಬೆಳಗಾವಿಯಲ್ಲಿ ಸತತ ಹದಿನೇಳು ವರ್ಷಗಳ ಕಾಲ ಮತ್ತೆ ಎಂಇಎಸ್ ರಾಜ್ಯಭಾರವೇ ನಡೆಯಿತು. ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ತನ್ನ ಧ್ವಜವನ್ನು ನೆಟ್ಟು, ಎಗ್ಗಿಲ್ಲದೆ ನಡೆಸಿದ ದುರಾಚಾರಗಳು ಒಂದೊಂದಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಒಂದಂಶದ ಆಗ್ರಹ ಎಂಇಎಸ್‌ನದು. ಆದರೆ ಆ ನಾಡದ್ರೋಹಿ ಪಕ್ಷದ ಮುಖಂಡರಿಗೆ ಬೇಕಾಗಿರುವುದು ಅಧಿಕಾರ. ಹೀಗಾಗಿ ಮುಗ್ಧ ಮರಾಠಿಗರನ್ನು ಅವರು ಸತತವಾಗಿ ದಾರಿತಪ್ಪಿಸಿಕೊಂಡೇ ಬಂದರು. ಬೇಕಾದಾಗೆಲ್ಲ ಅವರು ಮಹಾರಾಷ್ಟ್ರದಿಂದ ರಾಜಕಾರಣಿಗಳನ್ನು ಬಾಡಿಗೆಗೆ ತಂದು ಕರ್ನಾಟಕದ ವಿರುದ್ಧ ಭಾಷಣ ಮಾಡಿಸಿದರು. ಮರಾಠಿ ಮಹಾಮೇಳಾವ ಎಂಬ ಹೆಸರಿನ ಪುಂಡರ ಜಾತ್ರೆಗೂ ಮಹಾರಾಷ್ಟ್ರದಿಂದಲೇ ಬಾಡಿಗೆ ಜನರನ್ನು ಕರೆತಂದರು.
ಎಂಇಎಸ್ ಈ ವಿದ್ರೋಹಿ ಚಟುವಟಿಕೆಗಳನ್ನು ಎಲ್ಲ ರಾಜಕೀಯ ಪಕ್ಷಗಳೂ ಸಹಿಸಿಕೊಂಡೇ ಬಂದವು. ಎಂಇಎಸ್ ವಿರುದ್ಧ ಮಾತನಾಡಿದರೆ ಎಲ್ಲಿ ಮರಾಠಿಗಳು ತಮ್ಮ ಪಕ್ಷಕ್ಕೆ ವಿರುದ್ಧವಾಗಿ ಮತಚಲಾಯಿಸುತ್ತಾರೋ ಎಂಬ ಆತಂಕ ಈ ಪಕ್ಷಗಳದ್ದಾಗಿತ್ತು. ಹೀಗಾಗಿ ಅವುಗಳು ಕನ್ನಡದ್ರೋಹಿ ಎಂಇಎಸ್ ವಿರುದ್ಧ ತುಟಿಬಿಚ್ಚಲಿಲ್ಲ.
ಆದರೆ ಇದನ್ನೆಲ್ಲ ಎಷ್ಟು ದಿನ ಸಹಿಸಿಕೊಂಡಿರುವುದು ಎಂಬ ಕಾರಣಕ್ಕೆ ನಾವು ಬೆಳಗಾವಿಯನ್ನು ಪ್ರವೇಶಿಸಿದೆವು. ಅಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯನ್ನು ಹಳ್ಳಿಹಳ್ಳಿಯಲ್ಲೂ ಸಂಘಟಿಸಿದೆವು. ಎಂಇಎಸ್ ಪುಂಡರ ದೌರ್ಜನ್ಯದಿಂದ ಬೇಸತ್ತಿದ್ದ ಕನ್ನಡದ ಯುವಕರು ತಂಡೋಪತಂಡವಾಗಿ ನಮ್ಮೊಂದಿಗೆ ಸೇರಿಕೊಂಡರು. ಎಂಇಎಸ್ ನಿಲುವು ಧಿಕ್ಕರಿಸುವ, ಕರ್ನಾಟಕದ ಕುರಿತು ನಿಷ್ಠೆಯಿರುವ ಸಾಮಾನ್ಯ ಮರಾಠಿಗರೂ ಸಹ ನಮ್ಮನ್ನು ಕೂಡಿಕೊಂಡರು. ಮರಾಠಿ ಯುವಕರ ಪೈಕಿ ಹಲವರು ನಮ್ಮ ಸಂಘಟನೆಯ ಹಲವು ಘಟಕಗಳ ನೇತೃತ್ವವನ್ನೂ ವಹಿಸಿಕೊಂಡರು. ಎಂಇಎಸ್ ನಿಗ್ರಹಿಸಿ, ಕನ್ನಡ-ಮರಾಠಿ ಜನರ ನಡುವೆ ಸಹಬಾಳ್ವೆಯನ್ನು ಸ್ಥಾಪಿಸುವ, ಚನ್ನವ್ವಳ ನಾಡನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳುವ ಹೆಗ್ಗುರಿ ನಮ್ಮದಾಗಿತ್ತು.
ಆದರೆ ಇದು ಅಷ್ಟು ಸುಲಭದ್ದಾಗಿರಲಿಲ್ಲ. ಎಂಇಎಸ್ ವಿರುದ್ಧ ಬಾಯಿ ಮಾತಿನ ವಿರೋಧ ತೋರುವ ರಾಜಕಾರಣಿಗಳು ಅದೇ ದುಷ್ಟ ಸಂಘಟನೆಯ ಜತೆ ಹಲವು ಬಗೆಯ ಸಂಬಂಧಗಳನ್ನು ಇಟ್ಟುಕೊಂಡಿದ್ದರು. ಇದಕ್ಕೆ ಕನ್ನಡದ ರಾಜಕಾರಣಿಗಳೂ ಹೊರತಾಗಿರಲಿಲ್ಲ.
೨೦೦೫ರಲ್ಲಿ ಎಂಇಎಸ್‌ನ ವಿಜಯ ಮೋರೆ ಮಹಾನಗರ ಪಾಲಿಕೆ ಮಹಾಪೌರರಾಗಿದ್ದಾಗ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ನಾಡದ್ರೋಹಿ ನಿರ್ಣಯವನ್ನು ಮಂಡಿಸಿದಾಗ ನಮ್ಮ ರಕ್ತ ಕುದ್ದು ಹೋಯಿತು. ನಿರ್ಣಾಯಕ ಹೋರಾಟಕ್ಕೆ ಇದು ಸಕಾಲ ಎಂಬ ತೀರ್ಮಾನಕ್ಕೆ ಬಂದು ರಾಜ್ಯವ್ಯಾಪಿ ಬೃಹತ್ ಚಳವಳಿಯನ್ನು ಸಂಘಟಿಸಿದೆವು. ಬೆಂಗಳೂರಿಗೆ ಬಂದಿದ್ದ ವಿಜಯ ಮೋರೆ ಹಾಗು ಆತನ ಜತೆಗಾರರಿಗೆ ನಮ್ಮ ಕಾರ್ಯಕರ್ತರಿಂದ ದೊರೆತ ಸ್ವಾಗತದ ಬಹುಮಾನ ಏನೆಂಬುದನ್ನು ಇಡೀ ನಾಡು ಅರಿತಿದೆ.
ಆಗಲೂ ನಮ್ಮ ಹೋರಾಟದ ವಿಧಾನವನ್ನು ಹಲವರು ಟೀಕಿಸಿದರು. ‘ಆತನ ಮುಖಕ್ಕೆ ಮಸಿ ಬಳಿಯದೆ, ಫೇರ್ ಅಂಡ್ ಲವ್ಲಿ ಬಳಿಯಬೇಕಿತ್ತೆ?’ ಎಂದು ಸಾಹಿತಿ ಪೂರ್ಣಚಂದ್ರ ತೇಜಸ್ವಿ ನಮ್ಮ ಹೋರಾಟವನ್ನು ಸಮರ್ಥಿಸಿದರು. ಈ ಪ್ರಕರಣದಿಂದಾಗಿ ಸರ್ಕಾರ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿತು. ಧರ್ಮಸಿಂಗ್ ಸರ್ಕಾರ ಕನ್ನಡ ಚಳವಳಿಗಾರರ ಹೋರಾಟಕ್ಕೆ ಮಣಿದು, ನಿರ್ಣಯವನ್ನು ಅಸಿಂಧುಗೊಳಿಸಿದ್ದಲ್ಲದೆ, ಪಾಲಿಕೆಯನ್ನೇ ವಜಾಗೊಳಿಸಿತು.
ಹೋರಾಟ ಅಲ್ಲಿಗೆ ಮುಗಿದಿರಲಿಲ್ಲ. ಮುಂದೆ ಮತ್ತೆ ಮಹಾನಗರ ಪಾಲಿಕೆ ಚುನಾವಣೆಗಳು ಎದುರಾದವು. ಚುನಾವಣೆಯಲ್ಲಿ ನಾವು ಸಕ್ರಿಯವಾಗಿ ಪಾಲ್ಗೊಂಡೆವು. ವಿವಿಧ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದ್ದ, ಗೆಲ್ಲುವ ಸಾಮರ್ಥ್ಯವಿದ್ದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದೆವು. ಸಾಕಷ್ಟು ಮಂದಿ ಕನ್ನಡದ ಅಭ್ಯರ್ಥಿಗಳು ಗೆದ್ದು ಬಂದರು. ಎಂಇಎಸ್‌ಗೆ ಮುಖಭಂಗವಾಗಿತ್ತು. ಆದರೆ ಎಂಇಎಸ್‌ಗಾಗಾಗಲಿ, ಕನ್ನಡ ಸದಸ್ಯರಿಗಾಗಲೀ ಸ್ವತಂತ್ರವಾಗಿ ಮೇಯರ್ ಹುದ್ದೆ ಪಡೆಯುವಷ್ಟು ಸದಸ್ಯರ ಬೆಂಬಲ ಇರಲಿಲ್ಲ. ಗಣನೀಯ ಸಂಖ್ಯೆಯ ಸ್ಥಾನಗಳನ್ನು ಗೆದ್ದಿದ್ದ ಉರ್ದು ಭಾಷಿಕ ಸದಸ್ಯರ ಬೆಂಬಲ ಅನಿವಾರ್ಯವಾಗಿತ್ತು.
ಆ ಸಂದರ್ಭದಲ್ಲಿ ಮತ್ತೆ ನಾವು ಸಕ್ರಿಯರಾಗಬೇಕಾಯಿತು. ಆಗ ನಾನು ವೈಯಕ್ತಿಕವಾಗಿ ಅನುಭವಿಸಿದ ನೋವು ಹೇಳತೀರದು. ರಾಜಕಾರಣ ನನಗೆ ಆಗಿ ಬರದ ಕ್ಷೇತ್ರ. ಆದರೆ ಕನ್ನಡ ಮಹಾಪೌರರನ್ನು ಸ್ಥಾಪಿಸುವ ಹಿರಿದಾಸೆಯಿಂದ ಎಲ್ಲ ನೋವುಗಳನ್ನು ಹಲ್ಲು ಕಚ್ಚಿ ಸಹಿಸಬೇಕಾಯಿತು.
ಕನ್ನಡ ಮೇಯರ್ ಆಯ್ಕೆಯಾಗಬೇಕೆಂದರೆ ಇಂತಿಂಥದ್ದು ಆಗಬೇಕು ಎಂದು ಕೆಲವರು ಬೇಡಿಕೆ ಇಟ್ಟರು. ಅವುಗಳಲ್ಲಿ ಕೆಲವನ್ನು ಪೂರೈಸಿದ್ದಾಯಿತು. ಉರ್ದು ಭಾಷಿಕ ಸದಸ್ಯರನ್ನು ಒಪ್ಪಿಸುವ ಜವಾಬ್ದಾರಿ ಹೊತ್ತಿದ್ದ ಮರಾಠಿ ಮುಖಂಡರೊಬ್ಬರು (ಅವರು ಸರ್ವಭಾಷಿಕ ಸಮಿತಿಯ ಮುಖ್ಯಸ್ಥರೆಂದೇ ಖ್ಯಾತರು!) ತಮ್ಮ ತೋಟದ ಮನೆಗೆ ನನ್ನನ್ನು ಆಹ್ವಾನಿಸಿದರು. ಸರಿ ರಾತ್ರಿ ಅವರ ಮನೆಗೆ ನಾನು ಹೋಗಬೇಕಾಯಿತು. ನನ್ನೊಂದಿಗೆ ಯಾರೊಬ್ಬರೂ ಬರುವಂತಿಲ್ಲ ಎಂಬುದು ಅವರ ಕಟ್ಟಳೆಯಾಗಿತ್ತು. ಬೆಳಗಾವಿಯಲ್ಲಿ ಅಂದು ಇದ್ದ ಉದ್ರಿಕ್ತ ಪರಿಸ್ಥಿತಿಯಲ್ಲಿ ಯಾವ ಗಳಿಗೆಯಲ್ಲಿ ಏನು ಬೇಕಾದರೂ ಸಂಭವಿಸಬಹುದಾಗಿತ್ತು. ಆದರೂ ಜೀವದ ಹಂಗು ತೊರೆದು ಸರಿರಾತ್ರಿ ಹೋಗಿ ಮಾತನಾಡಿದ ನಂತರವೇ ನಾಪತ್ತೆಯಾಗಿದ್ದ ಕೆಲ ಸದಸ್ಯರು ಪ್ರತ್ಯಕ್ಷರಾಗಿದ್ದು! ಇದಾದ ನಂತರ ಮಹಾಪೌರರ ಚುನಾವಣೆ ನಡೆಯಿತು.
ಮಹಾಪೌರರಾಗಿ ಆಯ್ಕೆಯಾದವರು ಪ್ರಶಾಂತ ಬುಡವಿ. ಈಕೆ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿದ್ದವರು. ಆಕೆಯ ಪತಿ ನಮ್ಮ ವೇದಿಕೆಯ ನಗರ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಉಪ ಮೇಯರ್ ಆಗಿ ಯೂನುಸ್ ಮೋಮಿನ್ ಆಯ್ಕೆಯಾಗಿದ್ದರು. ಇವರಿಬ್ಬರನ್ನೂ ಬೆಂಗಳೂರಿಗೆ ಕರೆಯಿಸಿ, ಅಂಬೇಡ್ಕರ್ ಭವನದಲ್ಲಿ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿದೆವು. ನಮ್ಮ ಆಸೆ ಈಡೇರಿತ್ತು. ಹದಿನೇಳು ವರ್ಷಗಳ ನಂತರ ಕನ್ನಡ ಮಹಾಪೌರರನ್ನು ಬೆಳಗಾವಿಯಲ್ಲಿ ಸ್ಥಾಪಿಸುವ ಕಾರ್ಯದಲ್ಲಿ ನಾವು ಸಫಲರಾಗಿದ್ದೆವು.
ಮಹಾಪೌರರ ಅವಧಿ ಮುಗಿದು, ಮತ್ತೊಂದು ಚುನಾವಣೆ ಬಂದಾಗಲೂ ಸಮಸ್ಯೆಗಳು ಉದ್ಭವಿಸಿದ್ದವು. ಹೇಗಾದರೂ ಮಾಡಿ ಪಾಲಿಕೆಯನ್ನು ಕೈ ವಶ ಮಾಡಿಕೊಳ್ಳಲು ಎಂಇಎಸ್ ಹುನ್ನಾರ ನಡೆಸಿತ್ತು. ಆದರೆ ಅದನ್ನು ನಾವು ವಿಫಲಗೊಳಿಸಿದೆವು. ಒಂದೊಮ್ಮೆ ಬೆಳಗಾವಿಯ ರಾಜಕೀಯ ಮುಖಂಡರು ಕಿತಾಪತಿ ನಡೆಸಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ನಾನು ಬಹಿರಂಗ ಎಚ್ಚರಿಕೆಯನ್ನೇ ನೀಡಿ ಬಂದಿದ್ದೆ. ಎರಡನೇ ಬಾರಿಯೂ ಕನ್ನಡಿಗರಾದ ನಿರ್ವಾಣಿ ಮಹಾಪೌರರಾಗಿ ಆಯ್ಕೆಯಾದರು. ಆದರೆ ಈಗ ನಡೆದಿರುವುದನ್ನು ಗಮನಿಸಿ. ಇಡೀ ಚುನಾವಣೆಯ ಹಿಂದೆ ನಿಂತು ಸೂತ್ರ ಆಡಿಸಿದವರು ಶಾಸಕರಾದ ಅಭಯ ಪಾಟೀಲ್ ಮತ್ತು ಫಿರೋಜ್ ಸೇಠ್. ಅಭಯ ಪಾಟೀಲ್ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರು, ಬಿಜೆಪಿಯಿಂದ ಆರಿಸಿ ಬಂದವರು. ಫಿರೋಜ್ ಸೇಠ್ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರು, ಕಾಂಗ್ರೆಸ್‌ನಿಂದ ಆರಿಸಿ ಬಂದವರು. ಇಬ್ಬರೂ ಕೂಡಿಯೇ ಕನ್ನಡ ದ್ರೋಹದ ಕೆಲಸ ಮಾಡಿದ್ದಾರೆ. ಚಪ್ಪಲಿ ಖ್ಯಾತಿಯ ಮಂದಾ ಬಾಳೇಕುಂದ್ರಿಯನ್ನು ಪಟ್ಟದ ಮೇಲೆ ಕೂರಿಸಿದ್ದಾರೆ. ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಇದೇ ಶಾಸಕರು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿಗೆ ನರ್ತನ ಮಾಡಿದ್ದರು.
ಈ ಬಾರಿ ನಿಗದಿಯಾದ ಮೀಸಲಾತಿಯ ಪ್ರಕಾರ ಸ್ಪರ್ಧಿಸಲು ಅರ್ಹತೆ ಪಡೆದಿದ್ದು ಎಂಇಎಸ್‌ನ ಮಂದಾ ಬಾಳೇಕುಂದ್ರಿ ಹಾಗು ಕನ್ನಡತಿ ವಂದನಾ ಬೀಳಗಿ ಮಾತ್ರ. ಬೆಳಗಾವಿ ಅಭಿವೃದ್ಧಿಗೆ ಮಂಜೂರಾದ ೧೦೦ ಕೋಟಿ ರೂ. ಹಣವನ್ನು ಈ ಇಬ್ಬರು ಶಾಸಕರು ತಾವೇ ತಮ್ಮ ಬೆಂಬಲಿಗರಿಗೆ ಗುತ್ತಿಗೆ ಕೊಟ್ಟು ಖರ್ಚು ಮಾಡಿದ್ದನ್ನು ವಂದನಾ ಬೀಳಗಿ ಪ್ರಶ್ನಿಸಿದ್ದರು. ಹೀಗಾಗಿ ಇಬ್ಬರೂ ಶಾಸಕರು ಜಿದ್ದಿಗೆ ಬಿದ್ದು ಈಕೆಯ ಸೋಲಿಗೆ ಪಣ ತೊಟ್ಟರು.
ಆದರೆ ಇದಿಷ್ಟೇ ಇಡೀ ವಿದ್ಯಮಾನದ ಹಿಂದಿರುವ ಸತ್ಯವಲ್ಲ. ಪದೇಪದೇ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಮಹಾರಾಷ್ಟ್ರ ಏಕೀಕರಣ ಸಮಿತಿ ವಿಶ್ವ ಕನ್ನಡ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಸುಮ್ಮನೆ ಇದ್ದಿದ್ದೇ ಒಂದು ಆಶ್ಚರ್ಯವಾಗಿತ್ತು. ಬಿಜೆಪಿ ಮುಖಂಡರು ಯಾವ ಜಾದೂ ಮಾಡಿ ಎಂಇಎಸ್ ಬಾಯಿ ಮುಚ್ಚಿಸಿದ್ದಾರೆ ಎಂಬ ಪ್ರಶ್ನೆ ನಮ್ಮದೂ ಆಗಿತ್ತು.
ವಿಶ್ವ ಕನ್ನಡ ಸಮ್ಮೇಳನದ ಉಸ್ತುವಾರಿಯ ನೇತೃತ್ವ ವಹಿಸಿಕೊಂಡಿದ್ದ ಉಮೇಶ್ ಕತ್ತಿ, ಪ್ರಭಾಕರ್ ಕೋರೆ, ಸುರೇಶ್ ಅಂಗಡಿ ಅವರೆಲ್ಲ ಎಲ್ಲಿದ್ದಾರೆ? ವಿಶ್ವ ಕನ್ನಡ ಸಮ್ಮೇಳನವಾಗಿ ಸರಿಯಾಗಿ ಒಂದು ತಿಂಗಳಿಗೆ ಮಹಾನಗರ ಪಾಲಿಕೆ ಮಹಾಪೌರ ಸ್ಥಾನದಲ್ಲಿ ಕನ್ನಡದ್ರೋಹಿಯೊಬ್ಬರು ಕುಳಿತುಕೊಂಡರೂ ಇವರ ಸ್ವಾಭಿಮಾನ ಕೆರಳುವುದಿಲ್ಲವೇ?
ವಿಶ್ವಕನ್ನಡ ಸಮ್ಮೇಳನ ಸಂದರ್ಭದಲ್ಲಿ ಬಾಯಿ ಮುಚ್ಚಿಕೊಂಡು ಇದ್ದಿದ್ದಕ್ಕೆ ಎಂಇಎಎಸ್‌ಗೆ ಮೇಯರ್ ಹುದ್ದೆಯನ್ನು ಭಕ್ಷೀಸಾಗಿ ನೀಡಲಾಗಿದೆಯೇ ಎಂಬುದು ನಮ್ಮ ಅನುಮಾನ. ತಿರುವಳ್ಳುವರ್ ಪ್ರತಿಮೆಯನ್ನು ತಮಿಳು ಮತಗಳಿಗಾಗಿ ಅನಾವರಣಗೊಳಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಇತಿಹಾಸವೂ ಇಂಥ ಅನುಮಾನಗಳಿಗೆ ಪುಷ್ಟಿ ನೀಡುವಂತಿದೆ.
ರಾಜಕಾರಣ ಹೊಲಸೆದ್ದು ಹೋಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಕನ್ನಡಿಗರೆಡೆಗೆ ತೂರಿದ ಚಪ್ಪಲಿಯನ್ನೂ ರಾಜಕಾರಣಿಗಳು ತಮ್ಮ ತಲೆ ಮೇಲೆ ಇಟ್ಟುಕೊಳ್ಳುವಷ್ಟು ನೀಚರೆಂಬುದು ಈಗ ಗೊತ್ತಾಗುತ್ತಿದೆ. ಬೆಳಗಾವಿಯಲ್ಲಿ ಇಷ್ಟು ದಿನಗಳ ಕಾಲ ಎಂಇಎಸ್ ವಿರುದ್ಧ ನಾವು ಹೋರಾಟ ನಡೆಸಿದ್ದೆವು. ನಿಜವಾದ ಶತ್ರುಗಳು ರಾಜಕೀಯ ಪಕ್ಷಗಳ ವೇಷದಲ್ಲಿ ಇದ್ದಾರೆ. ಇನ್ನು ಮುಂದೆ ಅವರ ವಿರುದ್ಧವೇ ಹೋರಾಟ ಸಂಘಟಿಸುತ್ತೇವೆ. ಚೆನ್ನವ್ವ, ಮಲ್ಲಮ್ಮ, ರಾಯಣ್ಣರ ನಾಡಿನಲ್ಲಿ ಇರುವ ಮೀರ್ ಸಾಧಕ್‌ಗಳು, ಮಲ್ಲಪ್ಪಶೆಟ್ಟಿಗಳನ್ನು ಕಿತ್ತು ಒಗೆಯದ ಹೊರತು ಈ ಹೋರಾಟ ಸಫಲಗೊಳ್ಳದು. ಆ ನಿಟ್ಟಿನಲ್ಲಿ ನಮ್ಮ ಗಮನ ಇಡುತ್ತೇವೆ.

1 comment:

  1. ಹೊರಗಿನ ವಾಸನೆಯನ್ನು ತಡೆಯಲು ಮೂಗು ಮುಚ್ಚಿಕೊಂಡರೆ ಸಾಕು. ಆದರೆ ಮೂಗಿನೊಳಗೇ ವಾಸನೆಯಿದ್ದರೆ ಅದನ್ನು ಸ್ವಚ್ಛವಾಗಿಸಿಕೊಳ್ಳದೇ ಅನ್ಯಮಾರ್ಗವಿಲ್ಲ ಎಂದು ಬೀchiಯವರೊಮ್ಮೆ ಸಾಂಧರ್ಭಿಕವಾಗಿ ನುಡಿದಿದ್ದರು. ಮರಾಠಿಗರಿಗೆ ಕನ್ನಡಾಭಿಮಾನವಿಲ್ಲದಿದ್ದರೆ ಅದನ್ನು ಸಹಿಸಿಕೊಳ್ಳಬಹುದು ಆದರೇ ಕನ್ನಡಿಗರಿಗೇ ಕನ್ನಡದ ಬಗ್ಗೆ ನಿರಭಿಮಾನಿವಿದ್ದರೆ/ ಕನ್ನಡ ದ್ರೋಹ ಮಾಡಿದರೆ ಅದನ್ನು ಖಂಡಿತಾ ಸಹಿಸಿಕೊಳ್ಳಬಾರದು ....ಅದನ್ನು ಸ್ವಚ್ಛವಾಗಿಸಲೇಬೇಕು. ಕರ್ನಾಟಕ ರಕ್ಷಣಾ ವೇದಿಕೆಯ ಕಳಕಳಿಗೆ ನನ್ನ ನಮನಗಳು. ಶ್ರೀಧರ್ ಬಂಡ್ರಿ, ಹೈದರಾಬಾದ್.

    ReplyDelete

ಹಿಂದಿನ ಬರೆಹಗಳು