Thursday, June 2, 2011

ಹೊಸ ದಿಕ್ಕಿನೆಡೆ ನಡೆಯಲಿ



ಕರ್ನಾಟಕ ರಕ್ಷಣಾ ವೇದಿಕೆಯನ್ನು ಹುಟ್ಟು ಹಾಕಿ ಯಶಸ್ವಿ ಹೆಜ್ಜೆಯನ್ನು ಇಟ್ಟವರು ಶ್ರೀ ಟಿ.ಎ.ನಾರಾಯಣಗೌಡರು. ಅನೇಕ ರೀತಿಯ ಹೋರಾಟದ ಸಂಘಗಳು, ಚಳವಳಿಯ ಸಂಘಟನೆಗಳು ಕನ್ನಡ ನಾಡಿನಲ್ಲಿ ಅಸಂಖ್ಯಾತವಾಗಿ ಹುಟ್ಟಿವೆ ನಿಜ. ಆದರೆ ಅವುಗಳಲ್ಲಿ ಎಷ್ಟು ಜೀವಂತವಾಗಿವೆ? ಎಷ್ಟು ಕಾರ್ಯಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿವೆ ಎನ್ನುವುದನ್ನು ಗಮನಿಸಿದರೆ ಮನಸ್ಸಿಗೆ ತುಂಬಾ ಖೇದವಾಗುತ್ತದೆ. ಇಂದು ಹುಟ್ಟಿ ನಾಳೆ ಸಾವನ್ನಪ್ಪುವ ಇಂಥ ಅನೇಕ ಸಂಘಟನೆಗಳ ನಡುವೆ ಹುಟ್ಟಿ ಬೆಳೆದು ಕರ್ನಾಟಕದಾದ್ಯಂತ ತನ್ನ ಕನ್ನಡಪರ ಹೋರಾಟವನ್ನು ಗಟ್ಟಿಗೊಳಿಸಿಕೊಂಡ ತನ್ನ ವಿಶಿಷ್ಟ ಛಾಪನ್ನು ಮೂಡಿಸಿದ ವೇದಿಕೆ ಎಂದರೆ ಅದು ಕರ್ನಾಟಕ ರಕ್ಷಣಾ ವೇದಿಕೆ. ಆ ವೇದಿಕೆಗೆ ತನು-ಮನ-ಧನವನ್ನು ನಾರಾಯಣಗೌಡರು ಧಾರೆ ಎರೆದಿದ್ದಾರೆ. ತ್ರಿವಿಕ್ರಮನಂತೆ ಶೀಘ್ರವಾಗಿ ಬೆಳೆದು ನಿಂತ ಆ ವೇದಿಕೆಗೆ ಗೌಡರ ನಿರಂತರ ಶ್ರಮ-ಶ್ರದ್ಧೆಯೇ ಕಾರಣ. ನೂರಾರು ಸಂಖ್ಯೆಯಲ್ಲಿ ಕರ್ನಾಟಕದಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆಯನ್ನು ಕಟ್ಟಿ ಅವುಗಳಿಗೆ ಶಕ್ತಿ-ಚೈತನ್ಯವನ್ನು ತುಂಬಿದ್ದಾರೆ.
ಇಂದು ಕನ್ನಡ ವಿರೋಧಿಗಳ ಹೃದಯದಲ್ಲಿ ಭಯದ ಕಂಪನ ಮೂಡಿದ್ದರೆ ಅದರ ಯಶಸ್ಸು ನಾರಾಯಣಗೌಡರಿಗೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಕಾರ್ಯಕರ್ತರಿಗೆ ಸಲ್ಲಬೇಕು. ಇಂದು ಕನ್ನಡ ನಾಡು-ನುಡಿ-ಸಂಸ್ಕೃತಿಯ ಬಗೆಗೆ ಅವಜ್ಞೆ ತೋರಿದರೂ ಸಾಕು ಕರ್ನಾಟಕ ರಕ್ಷಣಾ ವೇದಿಕೆ ಅಲ್ಲಿ ಪ್ರತ್ಯಕ್ಷ. ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದರೆ ಮುಖಕ್ಕೆ ಮಸಿ ಬಳಸಿಕೊಳ್ಳಬೇಕಾಗುತ್ತದೆ. ಸಾಹಿತಿಗಳನ್ನು ಕಡೆಗಣಿಸಿದರೆ ’ಪಂಚೆ’ ಪ್ರಕರಣ ಅಲ್ಲಿ ನಡೆಯುತ್ತದೆ.
ಪರಭಾಷಿಕರು ’ಕರವೇ’ ಇಂದ ಪಾಠ ಕಲಿತಿದ್ದಾರೆ. ಆದರೆ ನಿರಭಿಮಾನಿಗಳಾದ ಕನ್ನಡಿಗರಲ್ಲಿ ಕನ್ನಡಾಭಿಮಾನದ ಕಿಡಿ ಹೊತ್ತಿಸುವುದು ಹೇಗೆ? ಅದಕ್ಕೆ ನನ್ನದೊಂದು ಸಲಹೆ ಇದೆ. ಕಿರುವಯಸ್ಸಿನ ಮಕ್ಕಳಲ್ಲಿ ಕನ್ನಡದ ಬಗೆಗೆ ಪ್ರೀತಿ ಮೂಡದಿದ್ದರೆ ಅವರು ದೊಡ್ಡವರಾದ ಮೇಲೆ ಕನ್ನಡ ನಾಡು ನುಡಿ ಪರಂಪರೆಯನ್ನು ಪ್ರೀತಿಸುವುದೆಂತು? ಇಂದು ಕನ್ನಡ ಮಾತೃಭಾಷೆಯಾಗುಳ್ಳ ಮನೆಯ ಅನೇಕ ಯುವಕ-ಯುವತಿಯರು I ಆoಟಿಣ ಏಟಿoತಿ ಏಚಿಟಿಟಿಚಿಜಚಿ ಎನ್ನುವ ಸ್ಥಿತಿಗೆ ತಲುಪಿದ್ದಾರೆ. ಕನ್ನಡಿಗರೇ ಆದ ಅವರಿಂದ ನಾಡು ನುಡಿಯ ಬಗೆಗೆ ಪುರಸ್ಕಾರಕ್ಕಿಂತ ತಿರಸ್ಕಾರವೇ ಹೆಚ್ಚಾಗಿದೆ. ಇಂಥ ಭಾವನೆ ಅಳಿಯಬೇಕಾದರೆ ಶಾಲೆಯಲ್ಲಿ ಪ್ರಾಥಮಿಕ ಹಂತದಿಂದ ಕನ್ನಡವನ್ನು ಮಕ್ಕಳಿಗೆ ಕಲಿಸಬೇಕು. ಕನ್ನಡ ಕಲಿಸದ ಶಾಲೆಯ ಮುಂದೆ ’ಕರವೇ’ ಧರಣಿ ಮಾಡಬೇಕು. ಶಾಲೆಯ ಆಡಳಿತ ಮಂಡಳಿಯ ಮನ ಒಲಿಸಿ ಕನ್ನಡ ಭಾಷೆಯನ್ನು ಒಂದು ಭಾಷೆಯಾಗಿ ಪ್ರೀತಿಯಿಂದ ಕಲಿಸುವಂತೆ ವಿನಂತಿಸಬೇಕು.
ಆ ಶಾಲೆ ಇಂಗ್ಲೀಷ್ ಮಾಧ್ಯಮದ ಶಾಲೆಯಾಗಿರಬಹುದು. ಇಲ್ಲೆಲ್ಲಾ ಪಠ್ಯಕ್ರಮವನ್ನು ಹೊರತುಪಡಿಸಿ ನರ್ಸರಿ, ಪ್ರಿ-ನರ್ಸರಿ, ಎಲ್.ಕೆ.ಜಿ., ಯು.ಕೆ.ಜಿಯಿಂದಲೇ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ವ್ಯವಸ್ಥೆಯನ್ನು ಮಾಡಬೇಕು. ಸಾವಿರಾರು ರೂ.ಗಳ ವಂತಿಕೆಯನ್ನು ವಿದ್ಯಾರ್ಥಿಗಳಿಂದ ಪಡೆಯುವ ಅಂಥ ಶಾಲೆಗಳಿಗೆ ಕನ್ನಡವನ್ನು ಕಲಿಸುವ ನಾಲ್ಕು ಜನ ಶಿಕ್ಷಕರನ್ನು ನೇಮಿಸಿಕೊಳ್ಳುವುದು ಕಷ್ಟವಾಗಲಾರದು. ಎಷ್ಟೋ ಜನ ತಂದೆ-ತಾಯಿಗಳಿಗೆ ಮಕ್ಕಳು ಇಂಗ್ಲೀಷ್ ಜತೆಗೆ ಕನ್ನಡ ಕಲಿಯಲಿ ಎನ್ನುವ ಅಪೇಕ್ಷೆ ಇದೆ. ಶಾಲೆಗಳು ಇದನ್ನು ಪ್ರೀತಿಯಿಂದ ಮಾಡಬೇಕು. ಕನ್ನಡ ಕಲಿಸುವ ಮೂಲಕ ಆ ಶಾಲೆಯು ಕೀರ್ತಿ ಗಳಿಸುತ್ತದೆ.
ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಆಡಳಿತ ಮಂಡಳಿಗೆ ಮನವರಿಕೆ ಮಾಡಿಕೊಡಬೇಕು.
ಶ್ರೀ ನಾರಾಯಣಗೌಡರ ನೇತೃತ್ವದಲ್ಲಿ ಕರವೇ, ಇಂಗ್ಲೀಷ್ ಮಾಧ್ಯಮದ ಶಾಲೆಗಳು ಮುಂದೆ ಬರುವ ಶೈಕ್ಷಣಿಕ ವರ್ಷದಿಂದಲೇ ಕಾರ್ಯಕ್ರಮ ರೂಪಿಸಿಕೊಳ್ಳಬೇಕೆಂದು ಹಾರೈಸುತ್ತೇನೆ.
ಅವರ ನಿರಂತರ ಶ್ರಮದಿಂದ ’ಕರವೇ’ ಇನ್ನೂ ಶಕ್ತಿಯುತವಾಗಿ ಬೆಳೆಯಲಿ, ಕನ್ನಡ ಪರವಾದ ಹೊಸ ಹೊಸ ದಿಕ್ಕುಗಳನ್ನು ಗುರುತಿಸಿ ವಿಭಿನ್ನ ಆಯಾಮಗಳಲ್ಲಿ ಕೆಲಸ ಮಾಡಲಿ, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಕಲಿಯುವ ವ್ಯವಸ್ಥೆಗೆ ’ಕರವೇ’ ಕ್ರಿಯಾಶೀಲವಾಗಲಿ ಎಂದು ಇನ್ನೊಮ್ಮೆ ಹಾರೈಸುವೆ.

ನಾಡೋಜ ಡಾ.ಕಮಲಾಹಂಪನಾ
ನಂ.೧೦೭೯, ಸ್ವನಿಮಾ, ೧೮ ’ಎ’ ಮುಖ್ಯರಸ್ತೆ,
೫ನೇ ಬ್ಲಾಕ್, ರಾಜಾಜಿನಗರ,
ಬೆಂಗಳೂರು-೫೬೦ ೦೧೦

No comments:

Post a Comment

ಹಿಂದಿನ ಬರೆಹಗಳು