Friday, June 17, 2011

ಪ್ರಜಾಪ್ರಭುತ್ವದ ನೆಲಗಟ್ಟೇ ಹಳ್ಳಿಗಳು: ಗೊ.ರು.ಚನ್ನಬಸಪ್ಪ

ಸಂದರ್ಶನ: ಭಾನುಮತಿ


ಕನ್ನಡ ಸಾಹಿತ್ಯ, ಸಂಸ್ಕೃತಿ, ಸಮಾಜ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಹಲವಾರು ದಶಕಗಳಿಂದ ಅವಿರತವಾಗಿ ದುಡಿದಿದ್ದೀರಿ. ಹಿಂದಿರುಗಿ ನೋಡಿದಾಗ ಸದ್ಯದ ಸನ್ನಿವೇಶದಲ್ಲಿ ನಿಮಗೆ ಏನನ್ನಿಸುತ್ತದೆ?

ಹಿಂದಿರುಗಿ ನೋಡಿದ್ದು ಕಡಿಮೆ, ಮುಂದಿನದರ ಬಗೆಗೆ ಚಿಂತಿಸಿದ್ದೂ ಕಡಿಮೆ. ಅಂದಂದು ನಿರ್ವಹಿಸಬೇಕಾದ ಹೊಣೆಗಾರಿಕೆಯೊಂದರ ಬಗೆಗೆ ನಾನು ಗಮನ ಕೊಡುತ್ತಾ ಬಂದಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಹಿಂದಿರುಗಿ ನೋಡಿದಾಗ ಕಹಿ-ಸಿಹಿಗಳೆರಡೂ ನೆನಪಾಗುತ್ತವೆ. ತಂದೆ-ತಾಯಿಗಳಿಗೆ ನನ್ನನ್ನು ಹೆಚ್ಚಿನ ಶಿಕ್ಷಣಕ್ಕೆ ಕಳುಹಿಸಬೇಕೆಂದಿದ್ದರೂ ಬಡತನದ ಬವಣೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಅವರ ಸಂಕಟದ ನೆನಪು ಈಗಲೂ ನನಗೆ ದುಃಖವುಂಟು ಮಾಡುತ್ತದೆ. ನನ್ನ ತಂದೆ ತಿಂಗಳಿಗೆ ಏಳು ರೂ. ಸಂಬಳದಲ್ಲಿ ಅನುದಾನಿತ ಶಾಲೆಯೊಂದರಲ್ಲಿ ಉಪಾಧ್ಯಾಯರಾಗಿದ್ದರು. ನನ್ನನ್ನೂ ಅಂತಹ ಶಾಲಾ ಉಪಾಧ್ಯಾಯನನ್ನಾಗಿ ಮಾಡಲು ಮಾತ್ರ ಅವರಿಗೆ ಸಾಧ್ಯವಾಯಿತು ಅಷ್ಟೇ.
ನನ್ನ ಜೀವನದ ಆರಂಭದ ಆ ಕಾಲ ದುರ್ಭರ ದಾರಿದ್ರ್ಯ ಅನುಭವದ ಕಾಲವಾದರೂ ಒಂದು ರೀತಿಯ ಸಂತೃಪ್ತಿ-ಸಮಾಧಾನಗಳೇ ಇದ್ದವು. ನನ್ನ ತಾಯಿ ಕಂಡವರ ಹೊಲಕ್ಕೆ ದಿನಕ್ಕೆ ಮೂರು ಆಣೆ ಕೂಲಿಗೆ ಹೋಗುತ್ತಿದ್ದರು. ರಜದ ದಿನಗಳಲ್ಲಿ ನಾನೂ ಕೂಲಿಗೆ ಹೋಗುತ್ತಿದ್ದೆ. ನನಗೆ ದಿನಕ್ಕೆ ಒಂದೂವರೆ ಆಣೆ ಕೂಲಿ. ನಮಗೆ ಆ ಹಣಕ್ಕಿಂತ ಮುಖ್ಯವಾಗುತ್ತಿದ್ದುದು ನಾವು ಕೂಲಿ ಹೋಗುತ್ತಿದ್ದ ಹೊಲದವರು ಕೊಡುತ್ತಿದ್ದ ಒಂದು ಹೊತ್ತಿನ ಊಟ!
ನಮ್ಮೂರು ಚಿಕ್ಕಮಗಳೂರು ಜಿಲ್ಲಾ ತರೀಕೆರೆ ತಾಲೂಕಿನ ಒಂದು ಚಿಕ್ಕ ಹಳ್ಳಿ-ಗೊಂಡೇದಹಳ್ಳಿ. ಗ್ರಾಮೀಣ ಪರಿಸರದಲ್ಲೇ ಬೆಳೆದ ನನಗೆ ಸಾಹಿತ್ಯ, ಸಂಸ್ಕೃತಿ ಸಾಮಾಜಿಕ ಚಟುವಟಿಕೆಗಳಲ್ಲಿ ಹೇಗೆ ಆಸಕ್ತಿ ಉಂಟಾಯಿತೆಂದು ಸ್ಪಷ್ಟವಾಗಿ ಹೇಳಲಾರೆ. ನಾನು ಮಾಧ್ಯಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗ ಸ್ವಾತಂತ್ರ್ಯ ಚಳವಳಿಯ ಕಾಲ. ನಾನು ಚಳವಳಿಯಲ್ಲಿ ಪಾಲುಗೊಂಡೆ. ಆ ಸಂದರ್ಭದಲ್ಲಿ ಸಿದ್ಧವನಹಳ್ಳಿ ನಿಜಲಿಂಗಪ್ಪನವರು, ಗುದ್ಲೆಪ್ಪ ಹಳ್ಳಿಕೇರಿ, ಮೊದಲಾದ ನಾಡ ಅಭಿಮಾನಿಗಳನ್ನು ನಿಕಟವಾಗಿ ನೋಡಲು ಅವಕಾಶವಾಯಿತು. ಅವರ ನಡೆ-ನುಡಿಗಳು ನನ್ನ ಮೇಲೆ ಪ್ರಭಾವ ಬೀರಿದವು.
ನಾನು ಪ್ರೌಢಶಾಲೆ ಕಲಿತದ್ದು ಬೀರೂರಿನಲ್ಲಿ. ಸ್ವಾತಂತ್ರ್ಯ ಚಳವಳಿ ಭಾಗವಾಗಿ ಪ್ರತಿದಿನ ಬೆಳಗ್ಗೆ ನಡೆಯುತ್ತಿದ್ದ ಪ್ರಭಾತ್‌ಭೇರಿಯಲ್ಲಿ ಸ್ವಾತಂತ್ರ್ಯ ಗೀತೆಗಳನ್ನು ನಾನೇ ಹಾಡುತ್ತಿದ್ದೆ. ಅವುಗಳಲ್ಲಿ ಒಂದು ಗೀತೆಯ ಒಂದೆರಡು ಸಾಲುಗಳು ಇನ್ನೂ ನೆನಪಿನಲ್ಲಿವೆ: "ಓ ತಮ್ಮ, ಓ ತಂಗಿ, ಓ ಏನಂತಿ? ಹಾಕಬೇಕು ಇನ್ನು ಖಾದಿ, ಹಿಡಿಬೇಕು ಹಳ್ಳಿ ಹಾದಿ, ಓ ಏನಂತಿ?" ಆ ಸಾಲುಗಳೇ ನನ್ನ ಬದುಕಿನ ಸೂತ್ರಗಳಾದವು. ಅಂದಿನಿಂದ ಹುಟ್ಟಿದ ಹಳ್ಳಿಯ ಸೇವೆ ನನ್ನ ಕರ್ತವ್ಯಗಳಲ್ಲಿ ಒಂದಾಯಿತು. ಖಾದಿ ಧರಿಸುವುದು ನನ್ನ ರೂಢಿಯಾಯಿತು. ಈ ಎರಡನ್ನು ಇಂದಿಗೂ ಪರಿಪಾಲಿಸಿಕೊಂಡು ಬಂದಿದ್ದೇನೆ.
ಅಂದು ಗಾಂಧೀಜಿ ಕೊಟ್ಟ ಗ್ರಾಮೋದ್ಧಾರದ ಕರೆಯಲ್ಲಿ ಗ್ರಾಮ ಭಾರತದಲ್ಲಿ ನೈತಿಕ ಬಲ ಮತ್ತು ಆತ್ಮವಿಶ್ವಾಸವನ್ನು ಹುಟ್ಟಿಸುವ ಒಂದು ಆಶಯವಿತ್ತು. ಸ್ವಾತಂತ್ರ್ಯಾನಂತರ ಗ್ರಾಮೀಣಾಭಿವೃದ್ಧಿಯ ಕೆಲಸಗಳೇನೋ ಆಗುತ್ತಿವೆ. ಆದರೆ ಗ್ರಾಮೀಣರ ನೈತಿಕ ಬಲ ಮತ್ತು ಆತ್ಮವಿಶ್ವಾಸಗಳು ನೆಲಕಚ್ಚಿ ಹೋಗಿವೆ. ಇದು ನಿಜಕ್ಕೂ ಒಂದು ನಿರಾಸೆಯ ಬೆಳವಣಿಗೆ. ನಮ್ಮ ಪ್ರಜಾಪ್ರಭುತ್ವದ ನೆಲಗಟ್ಟೇ ಹಳ್ಳಿಗಳು. ಆದರೆ ಆ ನೆಲಗಟ್ಟನ್ನು ಭದ್ರಪಡಿಸುವ ಪ್ರಾಮಾಣಿಕ ಪ್ರಯತ್ನ ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ರಾಜಕೀಯ ವ್ಯವಸ್ಥೆಗಳಿಂದ ನಡೆಯಲಿಲ್ಲವೆಂದೇ ನನಗನಿಸುತ್ತದೆ. ನಮ್ಮ ಹಳ್ಳಿಗಳ ಕ್ರಿಯಾಶೀಲ ಬದುಕನ್ನು ಹಾಳುಮಾಡಿರುವ, ಅಲ್ಲಿನ ಜನರ ಪರಂಪರೆಯ ಜೀವನ ಸಂಸ್ಕೃತಿಯನ್ನು ವಿಕೃತಗೊಳಿಸಿರುವ ಒಂದು ದೊಡ್ಡ ಅನಿಷ್ಟವೆಂದರೆ ಅಲ್ಲಿ ಪ್ರವೇಶಿಸುವ ಅಪಕ್ವ ರಾಜಕೀಯ. ಈ ಕಳವಳಕಾರಿ ಬೆಳವಣಿಗೆಯ ಬಗೆಗೆ ಪ್ರಜ್ಞಾವಂತರೆಲ್ಲ ಗಂಭೀರವಾಗಿ ಆಲೋಚಿಸಬೇಕು.

ಶಿಕ್ಷಣ ಇಲಾಖೆಯಿಂದಲೇ ನಿಮ್ಮ ವೃತ್ತಿ ಬದುಕು ಆರಂಭವಾಯಿತು. ಪ್ರಾಥಮಿಕ ಶಾಲೆ ಉಪಾಧ್ಯಾಯರಾಗಿ ತಮ್ಮ ಸೇವೆಯನ್ನು ಆರಂಭಿಸಿದಿರಿ. ಶಿಕ್ಷಣ ಕ್ಷೇತ್ರ ಅದರಲ್ಲೂ ಪ್ರಾಥಮಿಕ ಶಿಕ್ಷಣ ಕ್ಷೇತ್ರದ ಇಂದಿನ ಆಗುಹೋಗುಗಳ ಕುರಿತು ನಿಮ್ಮ ಅಭಿಪ್ರಾಯವೇನು? ಇಲ್ಲಿ ನಡೆಸಬೇಕಿರುವ ಸುಧಾರಣೆಗಳೇನು?
ನನ್ನ ವೃತ್ತಿ ಜೀವನ ಆರಂಭವಾದದ್ದು ಪ್ರಾಥಮಿಕ ಶಾಲಾ ಶಿಕ್ಷಕನಾಗಿ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ನಾನು ಸರ್ಕಾರಿ ಸೇವೆಗೆ ಸೇರಿದೆ. ಅಂದಿಗಿಂತ ಇಂದು ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಪ್ರಯೋಗಗಳಾಗಿವೆ. ಸುಧಾರಣೆಗಳೂ ಆಗಿವೆ. ಆದರೆ ಈ ಎಲ್ಲವೂ ಕೇವಲ ಜೀವನೋಪಾಯಕ್ಕೆ ಒತ್ತು ಕೊಡುತ್ತಿವೆಯೇ ವಿನಃ ವ್ಯಕ್ತಿ ನಿರ್ಮಾಣದ ಕಡೆ ಗಮನ ಕೊಟ್ಟಿಲ್ಲವೆಂದೇ ನನಗನಿಸುತ್ತದೆ. ವಾಸ್ತವವಾಗಿ ಶಿಕ್ಷಣದ ಮೂಲ ಉದ್ದೇಶವೇ ವ್ಯಕ್ತಿ ನಿರ್ಮಾಣ. ವಿದ್ಯಾರ್ಥಿಗಳಲ್ಲಿ ಅಧ್ಯಯನ ಶ್ರದ್ಧೆ, ರಾಷ್ಟ್ರನಿಷ್ಠೆ, ಸಾಮಾಜಿಕ ಬದ್ಧತೆ, ವೈಯಕ್ತಿಕ ಚಾರಿತ್ರ್ಯ, ಸಮಷ್ಟಿ ಪ್ರಜ್ಞೆ, ಅರ್ಪಣಾಭಾವದ ಸೇವಾಸಕ್ತಿ, ಇತ್ಯಾದಿ ನೈತಿಕ ಗುಣಗಳನ್ನು ಮೈಗೂಡಿಸದಿದ್ದರೆ ಶಿಕ್ಷಣಕ್ಕೆ ಏನು ಅರ್ಥವಿರುತ್ತದೆ? "ಪ್ರತಿಯೊಂದು ಮಗುವೂ ಹುಟ್ಟುವಾಗ ಪ್ರತಿಭಾನ್ವಿತವಾಗೇ ಇರುತ್ತದೆ. ಶಾಲೆ-ಕಾಲೇಜುಗಳು ಆ ಪ್ರತಿಭೆಯನ್ನು ಹಾಳುಗೆಡವುತ್ತವೆ" ಎಂಬ ಒಂದು ಮಾತಿದೆ. ಈ ಮಾತನ್ನು ನಮ್ಮ ಶಿಕ್ಷಣ ನೀತಿ ನಿರೂಪಕರು, ಶಿಕ್ಷಣ ಮೇಲ್ವಿಚಾರಕರು, ಮಕ್ಕಳ ಪೋಷಕರು, ವಿಶೇಷವಾಗಿ ಶಿಕ್ಷಕರು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು.
ಶಿಕ್ಷಣ ಕ್ಷೇತ್ರವೆಂದರೆ ಶಿಕ್ಷಕನ ಪಾತ್ರವೇ ಮುಖ್ಯವಾಗುತ್ತದೆ. ಸ್ವಾತಂತ್ರ್ಯಪೂರ್ವದ ಮತ್ತು ಸ್ವಾತಂತ್ರ್ಯ ಬಂದ ಆರಂಭದ ಒಂದೆರಡು ದಶಕಗಳಲ್ಲಿ ಇದ್ದ ಶಿಕ್ಷಕರ ಸಮರ್ಪಣ ಭಾವದ ಸೇವೆಯನ್ನು ಇಂದು ಕಾಣಲಾಗುತ್ತಿಲ್ಲ ಎನ್ನುವುದು ಅತ್ಯಂತ ದುಃಖದ ಸಂಗತಿ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರು ಕೇವಲ ಯಾಂತ್ರಿಕ ಸೇವೆ ಸಲ್ಲಿಸುವಂತಾದರೆ ಅದು ಹಳ್ಳಿಯ ಮಕ್ಕಳಿಗೆ ಬಗೆದ ದ್ರೋಹವಾಗುತ್ತದೆ.
ನಾನು ಸುಮಾರು ೧೫ ವರ್ಷಗಳ ಕಾಲ ಪ್ರಾಥಮಿಕ ಶಾಲೆ ಉಪಾಧ್ಯಾಯನಾಗಿದ್ದೆ. ನಾನು ಕೆಲಸ ಮಾಡಿದ ೩-೪ ಹಳ್ಳಿಗಳಲ್ಲಿ ಅಲ್ಲಿನ ಶಾಲೆಗಳಿಗೆ ಅಗತ್ಯವಾದ ಪಾಠ-ಪೀಠೋಪಕರಣಗಳು, ಅಕ್ಕ-ಪಕ್ಕದ ಹಳ್ಳಿಗಳಿಂದ ಶಾಲೆಗೆ ಬರುತ್ತಿದ್ದ ಮಕ್ಕಳಿಗೆ ಮಧ್ಯಾಹ್ನದ ಉಪಾಹಾರ-ಮೊದಲಾದ ಸೌಲಭ್ಯಗಳನ್ನು ಆಯಾ ಹಳ್ಳಿಗಳ ಜನರ ಸಹಾಯ-ಸಹಕಾರಗಳಿಂದಲೇ ಕಲ್ಪಿಸಿದ ತೃಪ್ತಿ ನನ್ನದು. ಒಂದು ಹಳ್ಳಿಯಲ್ಲಿ ಮಕ್ಕಳಿಗೆ ಕೂರಲು ಸ್ಥಳಾವಕಾಶವಿರಲಿಲ್ಲ. ಆಗ ಪೋಷಕರೊಡನೆ ಸಮಾಲೋಚಿಸಿ, ಅಗತ್ಯ ಸಾಮಾಗ್ರಿಗಳನ್ನು ಸಂಗ್ರಹಿಸಿ, ಮಕ್ಕಳ ಶ್ರಮದಾನದಿಂದಲೇ ಒಂದು ಮಣ್ಣಿನ ಗೋಡೆಯ ಕೊಠಡಿ ನಿರ್ಮಿಸಿ, ಅದರಲ್ಲಿ ತರಗತಿ ನಡೆಸಿದ್ದನ್ನು ನಾನು ಮರೆಯಲಾರೆ.

ಶಿಕ್ಷಣದಲ್ಲಿ ಕನ್ನಡವೇ ಮಾಧ್ಯಮವಾಗಬೇಕು ಎಂಬುದು ಮೊದಲಿನಿಂದಲೂ ಕೇಳಿ ಬರುತ್ತಿರುವ ಕೂಗು. ಅದಕ್ಕೆ ನಾನಾ ರೀತಿಯ ಅಡ್ಡಿ, ಆತಂಕ, ತಕರಾರುಗಳು. ಈ ಕುರಿತು ನಿಮ್ಮ ಸ್ಪಷ್ಟ ನಿಲುವೇನು? ಮತ್ತು ಅದಕ್ಕೆ ಕಾರಣಗಳೇನು?
ಶಿಕ್ಷಣದಲ್ಲಿ ಕನ್ನಡವೇ ಮಾಧ್ಯಮವಾಗಬೇಕು ಎನ್ನುವುದು, ’ಪ್ರಾಥಮಿಕ ಶಿಕ್ಷಣಕ್ಕೆ ಮಕ್ಕಳ ಮಾತೃಭಾಷೆಯೇ ಮಾಧ್ಯಮವಾಗಬೇಕು’ ಎಂಬ ವಿಶ್ವದಾದ್ಯಂತ ಶಿಕ್ಷಣತಜ್ಞರು ಅಭಿಪ್ರಾಯಕ್ಕೆ ಅನುಗುಣವಾಗೇ ಇದೆ. ಇದಕ್ಕೆ ನ್ಯಾಯಾಲಯಗಳೂ ವಿರೋಧವಾಗಿಲ್ಲ. ಇದು ಕರ್ನಾಟಕಕ್ಕಷ್ಟೇ ಅನ್ವಯಿಸುವಂತಹ ಸಂಗತಿಯಲ್ಲ. ಯಾವುದೇ ಪ್ರದೇಶದ ಭಾಷೆಗೆ ಅನ್ವಯಿಸುವಂತಹ ನಿಲುವು.
ಕರ್ನಾಟಕದಲ್ಲಿ ಕನ್ನಡ ಅಧಿಕೃತವಾಗಿ ರಾಜ್ಯಭಾಷೆ ಎಂದು ಘೋಷಿಸಲ್ಪಟ್ಟಿರುವ ಭಾಷೆ. ನಮ್ಮ ಸಂವಿಧಾನದಲ್ಲೇ ರಾಷ್ಟ್ರೀಯ ಭಾಷೆಯ ಮನ್ನಣೆ ಪಡೆದಿದೆ. ಇಲ್ಲಿನ ಮಕ್ಕಳು ತಮ್ಮ ತಾಯಿ ನುಡಿಯಲ್ಲಿ ಕಲಿಯಲು ಅವಕಾಶವಿಲ್ಲವೆಂದರೆ ಹೇಗೆ? ಮುಂದಿನ ಹಂತಗಳಲ್ಲಿ ಮಕ್ಕಳು ಇಚ್ಛಿಸುವ ಯಾವ ಭಾಷೆಯನ್ನಾದರೂ ಕಲಿಯಲಿ. ಕಲಿಕೆಗೆ ವಿಷಯಗಳನ್ನು ಆರಿಸಿಕೊಳ್ಳುವಂತೆ ಭಾಷೆಯನ್ನೂ ಆರಿಸಿಕೊಳ್ಳಲಿ. ಆದರೆ ಮೂಲಭೂತವಾದ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕನ್ನಡವೇ ಮಾಧ್ಯಮವಾಗಬೇಕೆಂಬ ಸಾಮಾನ್ಯ ಪ್ರಜ್ಞೆಯೂ ನಮ್ಮ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುವವರಿಗೆ ಇಲ್ಲದಿದ್ದರೆ ಹೇಗೆ?
ಇಂದು ವಿಶ್ವವ್ಯಾಪಿ ಎನಿಸಿರುವ ಇಂಗ್ಲೀಷ್ ಭಾಷೆಯ ಬ್ರಿಟೀಷರು ನಮ್ಮನ್ನಾಳುತ್ತಿದ್ದಾಗ, ೧೮೩೦ರಲ್ಲಿ ಧಾರವಾಡದಲ್ಲಿ ಮರಾಠಿ ಶಾಲೆ ಆರಂಭದ ಪ್ರಯತ್ನ ನಡೆದಾಗ ತಾನೇ ’ಇದು ತಪ್ಪು, ಇದು ಕನ್ನಡದ ನೆಲ’ ಎಂದು ವಾದಿಸಿ ಕನ್ನಡ ಶಾಲೆ ತೆರೆದು ತನ್ನ ಹಣದಿಂದಲೇ ಅದನ್ನು ಕೆಲಕಾಲ ನಡೆಸಿದ ಈಲಿಯೆಟ್‌ಗಿದ್ದಂತಹ ಭಾಷಾಭಿಮಾನ ನಮಗಿಲ್ಲದಿದ್ದರೆ ಹೇಗೆ? ಆಡಳಿತ ನಡೆಸುವವರು ಕಾನೂನು ತೊಡಕು ಹೇಳುತ್ತಾರೆ. ಆ ತೊಡಕನ್ನು ಬಿಡಿಸಬೇಕಾದವರೂ ಅವರೇ. ಅವರು ರಾಜಕೀಯ ಕಾರಣಗಳಿಂದಾಗಿ ಶಿಕ್ಷಣ ಮಾಧ್ಯಮ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಿಂದೆ ಮುಂದೆ ನೋಡುತ್ತಿರುವುದು ಹಗಲಿನಷ್ಟೇ ಸತ್ಯ.
ಇಂಗ್ಲೀಷ್ ಕಲಿಸುವ ಬಗೆಗೆ ಯಾರದೇ ವಿರೋಧವಿಲ್ಲ. ಶಿಕ್ಷಕನಾಗಬೇಕೆನ್ನುವವರಿಗೆ ಬೋಧನ ತರಬೇತಿ ಕೊಡುವಂತೆ, ಶೂಶ್ರೂಷಕರಾಗಬೇಕೆನ್ನುವವರಿಗೆ ಶುಶ್ರೂಷಣ ತರಬೇತಿ ಕೊಡುವಂತೆ, ಉದ್ಯೋಗದ ಸಲುವಾಗಿ ಇಂಗ್ಲಿಷ್ ಬೇಕೆನ್ನುವವರಿಗೆ ಇಂಗ್ಲಿಷ್ ತರಬೇತಿ ಕೊಡಲಿ. ಆದರೆ ಎಳೆ ಮಕ್ಕಳ ಮೇಲೆ ತಾಯ್ನುಡಿಯಲ್ಲದ ಭಾಷೆಯ ಬರೆ ಎಳೆಯಬಾರದು.
ಈ ದಿಸೆಯಲ್ಲಿ ಸರ್ಕಾರ ಉದಾಸೀನ ಅಥವಾ ನಿರ್ಲಕ್ಷ್ಯ ತಾಳಿದರೆ, ಮಾತೃಭಾಷಾ ಶಿಕ್ಷಣ ಮಾಧ್ಯಮವಾದಿಗಳು ಸಂಘಟಿತ ಪ್ರಯತ್ನ ನಡೆಸಬೇಕು. ಪೋಷಕರೂ ಇಂಗ್ಲಿಷಿನ ಹುಚ್ಚು ಬಿಟ್ಟು ಮಕ್ಕಳ ಆರಂಭಿಕ ಜ್ಞಾನವಿಕಾಸಕ್ಕೆ ಮನಮಾಡಬೇಕು. ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಪಡೆದಿರುವ ಯಾರೂ ಇಂದು ಆ ಕಾರಣಕ್ಕಾಗಿ ಹಿಂದುಳಿದಿಲ್ಲ.
ಇಲ್ಲಿ ಬೇಕಾಗಿರುವುದು ಜನಜಾಗೃತಿ ಮತ್ತು ಆಡಳಿತ ನಡೆಸುವವರಿಗೆ ವಸ್ತುನಿಷ್ಠ ಪ್ರಜ್ಞೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಅದಕ್ಕೆ ಹೊಸ ರೂಪವನ್ನು ಕೊಟ್ಟವರು ನೀವು. ಅಮೃತನಿಧಿ ಸ್ಥಾಪನೆ ನಿಮ್ಮ ಕಾಲದಲ್ಲೇ ಆಗಿದ್ದು. ಕನ್ನಡ ಸಾಹಿತ್ಯ ಪರಿಷತ್ತು ಹೊಸ ಕಾಲಘಟ್ಟದಲ್ಲಿ ಅನುಸರಿಸಬೇಕಾದ ಮಾರ್ಗವೇನು? ಪರಿಷತ್ತನ್ನು ಇನ್ನಷ್ಟು ಜನಮುಖಿಗೊಳಿಸಲು ಅಗತ್ಯವಾಗಿರುವ ಕಾರ್ಯಕ್ರಮಗಳೇನು?
ಕನ್ನಡ ಸಾಹಿತ್ಯ ಪರಿಷತ್ತಿಗೆ ನಾನು ಅಧ್ಯಕ್ಷನಾಗುವ ಮುನ್ನ ಅದರ ಕಾರ್ಯದರ್ಶಿಯೂ ಆಗಿದ್ದೆ. ಆ ಕಾಲದ ಕಷ್ಟವನ್ನು ಈಗ ಹೇಳಿಕೊಂಡು ಫಲವಿಲ್ಲ. ಹಿಂದೊಂದು ಸಮ್ಮೇಳನ ಸಂದರ್ಭದಲ್ಲಿ ದಿ.ಹಾ.ಮಾ.ನಾಯಕ ಅವರು ’ಒಬ್ಬ ಕನ್ನಡಿಗ ಒಂದು ರೂ. ಕೊಟ್ಟರೂ ಸಾಕು ಮುನ್ನಿಲ್ಲದಂತೆ ಕನ್ನಡದ ಕೆಲಸ ಮಾಡಬಹುದು ಎಂದಿದ್ದರು. ಆ ಮಾತಿನ ಎಳೆ ಹಿಡಿದೇ ನಾನು ’ಒಬ್ಬ ಕನ್ನಡಿಗ-ಒಂದು ರೂಪಾಯಿ’ ಯೋಜನೆ ಆರಂಭಿಸಿದೆ. ಯಾವುದೇ ಹೊಸ ವಿಚಾರಕ್ಕೆ ಬಂದಂತೆ ಅದಕ್ಕೂ ನಾನಾ ರೂಪದ ಪ್ರತಿಕ್ರಿಯೆಗಳು ಬಂದವು. ಹಲವು ರೀತಿಯ ಅನುಮಾನಗಳು ವ್ಯಕ್ತವಾದುವು. ಆದರೆ ನನಗೆ ವಿಶ್ವಾಸವಿತ್ತು. ಕೈಗೊಂಡ ಯೋಜನೆ ಆಶಾದಾಯಕವಾಗೇ ಆರಂಭವಾಯಿತು. ಅದು ಇಲ್ಲಿಗೆ ೧೭ ವರ್ಷಗಳ ಹಿಂದಿನ ಮಾತು. ಆಗ ಸುಮಾರು ೨೦-೦೦ ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಯಿತು. ಬಹುಶಃ ಅದನ್ನು ಹಾಗೆಯೇ ಮುಂದುವರಿಸಿದ್ದರೆ ಇಷ್ಟು ಹೊತ್ತಿಗೆ ಐದಾರು ಕೋಟಿ ರೂ.ಗಳೇ ಸಂಗ್ರಹವಾಗುತ್ತಿತ್ತು.
ಆದರೆ, ಈಗ ಸರ್ಕಾರವೇ ವರ್ಷಕ್ಕೆ ಕೋಟ್ಯಂತರ ರೂ.ಗಳ ನೆರವು ಕೊಡಲು ಆರಂಭಿಸಿದೆ. ಈ ನೆರವು ಬರುವುದೇನೋ ಸಂತೋಷವೇ. ಇಂತಹ ಪ್ರಾತಿನಿಧಿಕ ಸಂಘಟನೆಗಳಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯವೂ ಹೌದು. ಆದರೆ, ಅದರಲ್ಲಿ ಜನರ ಪಾಲುಗಾರಿಕೆ ಇದ್ದಂತಾಗುವುದಿಲ್ಲ. ಸುಲಭವಾಗಿ ದೊರೆಯುವ ನೆರವು ಯಾವಾಗಲೂ ನಮ್ಮ ಕ್ರಿಯಾಶೀಲತೆಯನ್ನು ಹಾಳು ಮಾಡುತ್ತದೆ. ಸಾಹಿತ್ಯ ಪರಿಷತ್ತು ಕೇವಲ ಸರ್ಕಾರದ ಅನುದಾನದ ಒಂದು ಮನೆಯಾಗಬಾರದು ಅದಕ್ಕೆ ಸಾಹಿತಿಗಳ ಶ್ರಮದ ಸಂಭವವೂ ಸೇರಬೇಕು. ಕನ್ನಡಿಗರ ಕೊಡುಗೆಯೂ ಕೂಡಬೇಕು.
ಇನ್ನು ಸರ್ಕಾರ ಅನುದಾನ ಕೊಟ್ಟ ಮಾತ್ರಕ್ಕೆ ಪರಿಷತ್ತು ಸರ್ಕಾರದ ಹಂಗಿನಲ್ಲಿರುಬೇಕೆಂದೇನೂ ಇಲ್ಲ. ಪರಿಷತ್ತಿನಂತಹ ಪ್ರಾತಿನಿಧಿಕ ಸಾಂಸ್ಕೃತಿಕ ಸಂಘಟನೆ ಸರ್ಕಾರದ ಅನುದಾನ ಪಡೆಯುವುದು ಅದರ ಹಕ್ಕು. ಅನುದಾನ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಆ ಅನುದಾನವನ್ನೇ ಅವಲಂಬಿಸುವುದಕ್ಕಿಂತ ತನ್ನ ಸಂಪನ್ಮೂಲಗಳನ್ನು ರೂಢಿಸಿಕೊಳ್ಳುವುದು ಹೆಚ್ಚು ಆರೋಗ್ಯಕರ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನೀವು ನಿರ್ವಹಿಸಿದ, ನಿಮಗೆ ತೃಪ್ತಿ ತಂದ ಕೆಲಸಗಳೇನು?
ನಾನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದಾಗ ಹಣದ ಕೊರತೆ ಅಗಾಧವಾಗಿತ್ತಾದರೂ, ನನಗಿದ್ದ ಜನಸಂಪರ್ಕವನ್ನು ಬಳಸಿಕೊಂಡು, ಪರಿಷತ್ತಿನ ಘನತೆ-ಗೌರವಗಳಿಗೆ ತಕ್ಕಂತೆ ಅದನ್ನು ನಿರ್ವಹಿಸಿದ ತೃಪ್ತಿ ನನಗಿದೆ.
ಆಗ ನಾನು ಸರ್ಕಾರದ ಒಂದು ಬಿಡಿಕಾಸಿನ ನೆರವೂ ಇಲ್ಲದೆ ಕೇವಲ ಕನ್ನಡ ಬಂಧುಗಳ ಸಹಕಾರದಿಂದ ನಡೆಸಿದ ವಿಶಿಷ್ಟ ಕಾರ್ಯಕ್ರಮಗಳೆಂದರೆ, ಸಾಹಿತ್ಯದ ವಿವಿಧ ಪ್ರಕಾರ ಮತ್ತು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಾಜ್ಯದ ಬೇರೆ ಬೇರೆ ಕಡೆ ಕಾವ್ಯ ಸಾಹಿತ್ಯ, ನಾಟಕ ಸಾಹಿತ್ಯ, ಮಕ್ಕಳ ಸಾಹಿತ್ಯ, ಮಹಿಳಾ ಸಾಹಿತ್ಯ, ಚಲನಚಿತ್ರ ಸಾಹಿತ್ಯ, ಚಾರಣ ಸಾಹಿತ್ಯ, ಮಾಧ್ಯಮ ಸಾಹಿತ್ಯ, ಜನಪದ ಸಾಹಿತ್ಯ ಮುಂತಾದ ಸಮಾವೇಶಗಳು. ಈ ಸಮಾವೇಶಗಳಿಂದಾಗಿ ಆಯಾ ಕ್ಷೇತ್ರದ ಲೇಖಕರು, ಚಿಂತಕರು ಮತ್ತು ಆಸಕ್ತರು ಒಂದು ಕಡೆ ಕೂಡಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶವಾಯಿತು.
ನನ್ನ ಅವಧಿಯ ಮತ್ತೊಂದು ಮಹತ್ವದ ಕಾರ್ಯವೆಂದರೆ ಪರಿಷತ್ತಿನ ದತ್ತಿನಿಧಿ ಯೋಜನೆಗೆ ಹೊಸ ಚಾಲನೆ ಕೊಟ್ಟಿದ್ದು. ಅದಕ್ಕೆ ದೊರೆತ ಪ್ರತಿಕ್ರಿಯೆ ನಿಜಕ್ಕೂ ಹೃದಯ ತುಂಬಿ ಬರುವಂತಹುದು. ನೂರು-ಸಾವಿರ ರೂ.ಗಳ ದತ್ತಿ ಕೊಡುಗೆಗಳ ಮೊತ್ತ ಲಕ್ಷ-ಲಕ್ಷ ರೂ ಗಳಿಗೆ ಹೆಚ್ಚಿತು. ಬಹುಶಃ ಆ ದತ್ತಿಗಳ ಸಂಖ್ಯೆ ಈಗ ಸಾವಿರಗಟ್ಟಲೆ ಆಗಿರಬಹುದು. ಅಂತಹ ಕೊಡುಗೆಗಳ ಮೊತ್ತವೂ ಕೋಟಿಗಟ್ಟಲೆ ಆಗಿರಬಹುದು. ಕನ್ನಡ ಸಂಬಂಧದ ಒಂದಲ್ಲ ಒಂದು ಚಟುವಟಿಕೆ ರಾಜ್ಯದ ಒಂದಲ್ಲ ಒಂದು ಕಡೆ ಇಡೀ ವರ್ಷ ನಡೆಯಲು ಈ ದತ್ತಿ ನಿಧಿ ಯೋಜನೆ ನೆರವಾಗಿದೆ. ಇದೊಂದು ಶಾಶ್ವತ ವ್ಯವಸ್ಥೆ.
ನನ್ನ ಅವಧಿಯಲ್ಲಿ ಪರಿಷತ್ತಿನಲ್ಲಿ ನಡೆಸಿದ ಎಲ್ಲ ಸಾಹಿತ್ಯ-ಸಂಸ್ಕೃತಿ ಚಟುವಟಿಕೆಗಳೂ ನನ್ನ ನೆನಪಿನಲ್ಲಿ ಉಳಿದಿಲ್ಲ. ಆದರೆ, ಸಂಶೋಧನ ವಿಭಾಗದ ವಿಶೇಷ ಉಪನ್ಯಾಸಗಳು, ಪಶ್ಚಿಮಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ನಡೆಸಿದ ಸಾಹಿತ್ಯ ವಿನಿಮಯ ಕಾರ್ಯಕ್ರಮಗಳು, ಕನ್ನಡ ನಾಡಗೀತೆಗಳ ಧ್ವನಿಸುರುಳಿ ನಿರ್ಮಾಣ, ಸಮ್ಮೇಳನ ಸಂದರ್ಭದಲ್ಲಿ ಗೀತ-ಸಂಗೀತ ಕಾರ್ಯಕ್ರಮ, ನಿಘಂಟು ಯೋಜನೆ ಪೂರ್ಣಗೊಳಿಸಿದ್ದು, ಪರಿಷತ್ತಿನ ಸಿಬ್ಬಂದಿಯನ್ನು ಸರ್ಕಾರದ ಅನುದಾನ ಸಂಹಿತೆಗೆ ಒಳಪಡಿಸಿದ್ದು, ಪ್ರಪ್ರಥಮವಾಗಿ ಪರಿಷತ್ತಿನ ವೇದಿಕೆಯಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಸಿದ್ದು, ವಿದೇಶ ನಿವಾಸಿ ಕನ್ನಡಿಗರಿಂದ ಪರಿಷತ್ತಿಗೆ ಕೊಡುಗೆ ಸಂಗ್ರಹಿಸಿದ್ದು, ಕನ್ನಡ ಪರ ಚಳವಳಿಗಳಲ್ಲಿ ಕ್ರಿಯಾತ್ಮಕವಾಗಿ ಪಾಲುಗೊಂಡಿದ್ದು, ಪರಿಷತ್ತಿನ ಕಾರ್ಯಕ್ರಮಗಳ ವ್ಯವಸ್ಥೆಯಲ್ಲಿ ಕನ್ನಡ ಕಾರ್ಯಕರ್ತರನ್ನು ಸ್ವಯಂ ಸೇವಕರನ್ನಾಗಿ ಪಡೆದದ್ದು-ಹೀಗೆ ಕೆಲವು ಕಾರ್ಯಚಟುವಟಿಕೆಗಳನ್ನು ಮಾತ್ರ ನೆನಪು ಮಾಡಿಕೊಳ್ಳಬಹುದು. ಏನೇ ಇದ್ದರೂ ಪರಿಷತ್ತಿನಲ್ಲಿ ನನ್ನ ಸೇವಾವಧಿ ನನಗೆ ತೃಪ್ತಿ ತಂದಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರಗಳು ಕನ್ನಡಿಗರ ಆಶೋತ್ತರಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ ಎಂದು ನಿಮಗೆ ಅನ್ನಿಸುತ್ತಿದೆಯೇ? ಈ ಸಂಸ್ಥೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲವೇ?
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಪದನಿಮಿತ್ತ ಸದಸ್ಯನಾಗಿರುವ ಅವಕಾಶ ಇದ್ದದ್ದು ನಿಜ. ಆ ಅವಧಿಯಲ್ಲಿ ಆ ಪ್ರಾಧಿಕಾರಗಳಿಗೆ ನನ್ನಿಂದ ಹೇಳಿಕೊಳ್ಳುವಂತಹ ಸಲಹೆಗಳೇನಾದರೂ ದೊರೆತಿವೆ ಎಂದು ಭಾವಿಸುವುದಿಲ್ಲ. ಆದರೂ ಆ ಎರಡೂ ಪ್ರಾಧಿಕಾರಗಳ ಪ್ರಾಮುಖ್ಯತೆಯನ್ನು ಅರಿತಿದ್ದೇನೆ.
ಈ ಪ್ರಾಧಿಕಾರಗಳು ಕನ್ನಡಿಗರ ಆಶೋತ್ತರಗಳ ಈಡೇರಿಕೆಗಾಗಿಯೇ ಸ್ಥಾಪನೆಗೊಂಡಂಥವು. ಆಯಾ ವ್ಯವಸ್ಥೆಗಳ ಮಿತಿಯಲ್ಲಿ ಅವು ಕಾರ್ಯ ನಿರ್ವಹಿಸಿಕೊಂಡು ಬರುತ್ತಿವೆ. ಯಾವುದೇ ಒಂದು ವ್ಯವಸ್ಥೆಯಿರಲಿ. ಅದರ ಮುಖ್ಯಸ್ಥರ ಸ್ಥಾನದಲ್ಲಿರುವ ವ್ಯಕ್ತಿಯ ಮೇಲೆ ಆ ವ್ಯವಸ್ಥೆಯ ಪ್ರಭಾವ-ಪರಿಣಾಮಗಳು ಅವಲಂಭಿಸಿರುತ್ತವೆ.
ಪ್ರಭಾವ ಬೀರಿ ಸ್ಥಾನ ಗಳಿಸುವವರಿಂದ ಮತ್ತು ಮತಗಳಿಕೆಯ ದೃಷ್ಟಿಯಿಂದ ನೇಮಕಗೊಂಡವರಿಂದ ನಾವು ಹೆಚ್ಚಿನದನ್ನು ನಿರೀಕ್ಷಿಸುವುದು ಕಷ್ಟವೇ. ಆದರೆ ಸಮರ್ಥರಾದವರು ಅಂತಹ ಸ್ಥಾನಗಳಿಗೆ ಬಂದಾಗ ಸಹಜವಾಗಿಯೇ ಗಮನಾರ್ಹ ಕೆಲಸ ಮಾಡುತ್ತಾರೆ. ಪ್ರಸ್ತುತ ಈ ಎರಡು ಪ್ರಾಧಿಕಾರಗಳು ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಿವೆಯೆಂದು ನಾನು ತಿಳಿದಿದ್ದೇನೆ. ಈ ಸಂಸ್ಥೆಗಳು ಮಾಡಬೇಕಾದ ಕೆಲಸ ಇನ್ನೂ ಇದೆ. ಆದರೆ ಅವು ನಡೆಸುವ ಪ್ರಯತ್ನಗಳು ಮತ್ತು ಕಾರ್ಯಕ್ರಮಗಳಲ್ಲಿ ಕನ್ನಡಿಗರು ಹೆಚ್ಚು ಕ್ರಿಯಾಶೀಲ ಪಾತ್ರ ವಹಿಸಬೇಕು.
ಇಂದಿನ ಸನ್ನಿವೇಶದಲ್ಲಿ ನಮ್ಮ ನಾಡಿನಲ್ಲಿ ಹೊಸ ಹೊಸ ವಿಧಾನಗಳನ್ನು ರೂಪಿಸಿ ಅವನ್ನು ಅನುಷ್ಠಾನಗೊಳಿಸಬೇಕು. ಆಡಳಿತದಲ್ಲಿ ಕನ್ನಡ ಬಳಕೆ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ, ಇವುಗಳ ಜೊತೆಗೆ ಉದ್ಯೋಗದಲ್ಲಿ ಕನ್ನಡಿಗರಿಗೆ ಭರವಸೆ ದೊರಕಿಸುವಂತಹ ವಿಶೇಷ ನೀತಿಯೊಂದನ್ನು ಸರ್ಕಾರ ರೂಪಿಸಬೇಕಾಗುತ್ತದೆ. ಹಾಗೆಯೇ ಅಂತಾರಾಜ್ಯ ವಲಸೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿಯೊಂದರ ಅಗತ್ಯವೂ ಇದೆ. ಪ್ರಾದೇಶಿಕ ಹಿತ ರಕ್ಷಣೆಯಾಗದಿದ್ದರೆ ಹೊರಗಿನಿಂದ ಬಂದವರೊಡನೆ ಅನಗತ್ಯ ಘರ್ಷಣೆಗಳುಂಟಾಗುವ ಸಂಭವವಿರುತ್ತದೆ.
ನಮ್ಮ ಭಾಷೆ, ಸಂಸ್ಕೃತಿ, ಜೀವನ ಪದ್ಧತಿ ಮತ್ತು ಗೌರವಯುತ ಬದುಕು ಆಘಾತಕ್ಕೆ ಈಡಾಗುತ್ತಿದ್ದುದನ್ನು ಕಂಡೇ ಭಾರತ ಸ್ವಾತಂತ್ರ್ಯದ ಕಿಚ್ಚು ಹುಟ್ಟಿದ್ದು. ಹಾಗೆಯೇ ಪ್ರಾದೇಶಿಕ ಭಾಷೆ-ಸಂಸ್ಕೃತಿಗಳು ಆಳುವವರ ಅಲಕ್ಷ್ಯಕ್ಕೆ ಒಳಗಾದರೆ ಸಹಜವಾಗಿಯೇ ಪ್ರತಿಭಟನೆ, ಪ್ರತಿರೋಧಗಳು ಅನಿವಾರ್ಯವಾಗುತ್ತವೆ. ಪ್ರಸ್ತಾಪಿತ ಪ್ರಾಧಿಕಾರಗಳು ತಮ್ಮ ನಿಗದಿತ ಚೌಕಟ್ಟಿನಲ್ಲಿ ಕೆಲಸ ಮಾಡುವುದರ ಜೊತೆಗೆ ಜನ ಜಾಗೃತಿಯ ಕಾರ್ಯದಲ್ಲೂ ಪರಿಣಾಮಕಾರಿ ಪಾತ್ರವಹಿಸಬೇಕಾಗುತ್ತದೆ. ಜಾಗೃತ ಸಮುದಾಯದಿಂದ ಮಾತ್ರ ನಾಡಿನ ಆಶೋತ್ತರಗಳು ಈಡೇರಲು ಸಾಧ್ಯ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಿಮ್ಮ ನೇತೃತ್ವದ ಸಂಸ್ಥೆ. ಇದರ ಗೊತ್ತು ಗುರಿಗಳೇನು? ಸಂಸ್ಥೆಯ ಮಹತ್ವವೇನು?
ಸಂಸ್ಥೆಯ ಮೂಲಕ ತಾವು ಮಾಡಲು ಸಾಧ್ಯವಾಗಿರುವ ಕೆಲಸ ಕಾರ್ಯಗಳೇನು?
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದವರು ಸುತ್ತೂರು ಕ್ಷೇತ್ರದ ಪೂಜ್ಯ ಲಿಂ.ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು. ನಮ್ಮ ನಾಡಿನ ಹಿರಿಯ ವಿದ್ವಾಂಸರಾಗಿದ್ದ ಡಾ.ಎಚ್.ತಿಪ್ಪೇರುದ್ರಸ್ವಾಮಿ ಅವರು ಪ್ರಥಮ ಅಧ್ಯಕ್ಷರು. ಅವರ ನಿಧನ ನಂತರ ೧೯೯೫ರಲ್ಲಿ ಪರಿಷತ್ತಿನ ಗೌರವಾಧ್ಯಕ್ಷರಾದ ಪೂಜ್ಯ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಅಪೇಕ್ಷೆಯಂತೆ ನಾನು ಆ ಸ್ಥಾನವನ್ನು ವಹಿಸಿಕೊಂಡೆ.
ಹನ್ನೆರೆಡನೆಯ ಶತಮಾನದಲ್ಲಿ ಕನ್ನಡ ನಾಡು ಕಂಡ ಅಪೂರ್ವವಾದ ಸಮಾಜೋ-ಧಾರ್ಮಿಕ ಆಂದೋಲನದ ಕಾರಣಕರ್ತರಾದ ಬಸವಾದಿ ಶರಣರ ಸಂದೇಶವನ್ನು ಪ್ರಸ್ತುತ ಜನಸಮುದಾಯಕ್ಕೆ ಮುಟ್ಟಿಸಬೇಕೆಂಬುದು ಶರಣ ಸಾಹಿತ್ಯ ಪರಿಷತ್ತಿನ ಮುಖ್ಯ ಧ್ಯೇಯೋದ್ದೇಶ. ಜಾತಿ, ಲಿಂಗ, ವರ್ಣ, ವರ್ಗ, ಭೇದಗಳಿಲ್ಲದ ಮಾನವ ಘನತೆಯ ಒಂದು ಆದರ್ಶ ಸಮಾಜ ನಿರ್ಮಾಣದ ಆಶಯದಿಂದ ಶರಣರು ನಡೆಸಿದ ಆಂದೋಲನದ ಒಂದು ಫಲರೂಪವೇ ವಚನಸಾಹಿತ್ಯ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ನಾನು ಪಡೆದಿದ್ದ ಅನುಭವವನ್ನು ಶರಣ ಸಾಹಿತ್ಯ ಪರಿಷತ್ತಿನ ಸಂಘಟನೆಗೆ ಬಳಸಿದ್ದೇನೆ. ಕಳೆದ ೧೬ ವರ್ಷಗಳಿಂದ ನನ್ನ ಕೈಲಾದ ಸೇವೆ ಸಲ್ಲಿಸಿದ್ದೇನೆ. ಈಗ ಶರಣ ಸಾಹಿತ್ಯ ಪರಿಷತ್ತು ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲದೇ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ ತಮಿಳುನಾಡು ಮತ್ತು ಗೋವಾ ರಾಜ್ಯಗಳಲ್ಲೂ ತನ್ನ ಕ್ಷೇತ್ರ ಘಟಕಗಳನ್ನು ಹೊಂದಿದೆ.
ಶರಣ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ಪರ್ಯಾಯ ಸಂಘಟನೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಅದು ವಾಸ್ತವವಾಗಿ ಪರ್ಯಾಯ ಸಂಘಟನೆಯಲ್ಲ; ಪೂರಕ ಸಂಘಟನೆ.
ಶರಣರ ವಿಚಾರ ಧಾರೆ ೧೨ನೆಯ ಶತಮಾನಕ್ಕಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ ಎಂಬುದನ್ನು ಧರ್ಮಗುರುಗಳಾದಿಯಾಗಿ ಎಲ್ಲ ವಿಚಾರವಾದಿಗಳು, ಸಮಾಜಕಾರ್ಯತಜ್ಞರು ಒಪ್ಪಿಕೊಂಡಿದ್ದಾರೆ. ನೈತಿಕವಾಗಿ ನೆಲಕಚ್ಚುತ್ತಿರುವ, ಹಿಂದೆಂದಿಗಿಂತಲೂ ಜಾತಿ ವ್ಯವಸ್ಥೆ ಬಲಗೊಳ್ಳುತ್ತಿರುವ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳೆಲ್ಲ ನಡೆ-ನುಡಿಗಳಲ್ಲಿ ಭ್ರಷ್ಟಗೊಳ್ಳುತ್ತಿರುವ ಇಂದಿನ ವಿವೇಕಹೀನ ಸನ್ನಿವೇಶದಲ್ಲಿ ಬಸವಣ್ಣನವರ ಮತ್ತು ಅವರ ಸಮಕಾಲೀನ ಶರಣರ ಜೀವನ ಮತ್ತು ವಿಚಾರಧಾರೆ ನಮಗೆ ಮಾರ್ಗದರ್ಶನ ಮಾಡಬೇಕಾಗಿದೆ. ಈ ದೃಷ್ಟಿಯಿಂದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪ್ರಕಟಣೆಗಳು, ಉಪನ್ಯಾಸಗಳು, ಚಿಂತನ ಗೋಷ್ಠಿಗಳು, ಸಮ್ಮೇಳನಗಳು, ಸಂವಾದಗಳು-ಹೀಗೆ ನಾನಾ ರೂಪದ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ.
ಶರಣ ಸಾಹಿತ್ಯ ಪರಿಷತ್ತು ಯಾವುದೇ ಜಾತಿ-ಮತ ಭೇದವಿಲ್ಲದ ಮುಕ್ತ ಸಂಘಟನೆ. ಈಗಾಗಲೇ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ರಾಷ್ಟ್ರಮಟ್ಟದ ಶರಣ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿರುವ ಪರಿಷತ್ತು ಇತ್ತೀಚೆಗಷ್ಟೆ ಒಂದು ಮಹತ್ವದ ಸಾಧನೆ ನಡೆಸಿದೆ. ಅದೆಂದರೆ ೧೨ನೆಯ ಶತಮಾನದ ಶರಣರ ಕ್ಷೇತ್ರಗಳ ದಾಖಲೀಕರಣ. ಗ್ರಂಥ ಮತ್ತು ಡಿ.ವಿ.ಡಿ.ಗಳ ರೂಪದಲ್ಲಿ ಆ ದಾಖಲೀಕರಣ ಆಸಕ್ತರಿಗೆ ದೊರೆಯುವಂತೆ ವ್ಯವಸ್ಥೆ ಮಾಡಿದೆ. ಹಾಗೆಯೇ ಮಹಿಳೆಯರಿಗೆ ಒಂದು ವೇದಿಕೆ ಒದಗಿಸಲು ’ಕದಳಿ’ ಮಹಿಳಾ ವೇದಿಕೆ, ಮಕ್ಕಳಿಗಾಗಿ ’ಎಳೆಯರ ಲೋಕ’, ಯುವಜನಕ್ಕಾಗಿ ’ಯುವಸಂಗಮ’ ಎಂಬ ಸಂಘಟನೆಗಳನ್ನು ಪರಿಷತ್ತಿನ ಆಶ್ರಯದಲ್ಲಿ ಬೆಳೆಸಲಾಗಿದೆ.
ರಜತ ಮಹೋತ್ಸವವನ್ನು ಆಚರಿಸುತ್ತಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ’ಮನೆಯಲ್ಲಿ ಮಹಾಮನೆ’ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮನೆ ಮನೆಗೆ ಶರಣ ಸಂದೇಶ ಮುಟ್ಟಿಸುತ್ತಿದೆ. ಜನಸಮುದಾಯದಲ್ಲಿ ಕಾಯಕ ನಿಷ್ಠೆ, ದಾಸೋಹ ಪ್ರಜ್ಞೆ ಮತ್ತು ಅನುಭವ ಚಿಂತನೆಗಳ ಬಗೆಗೆ ಜಾಗೃತಿ ಮೂಡಿಸುವ ಮಣಿಹದಲ್ಲಿ ತೊಡಗಿದೆ. ಸಮಾಜ ಶಿಕ್ಷಣ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಆಶಯ.

ಜಾನಪದ ನಿಮ್ಮ ಇಷ್ಟದ ಕ್ಷೇತ್ರ. ಸಾಕಷ್ಟು ಜಾನಪದ ಸಾಹಿತ್ಯವನ್ನು ಸಂಗ್ರಹಿಸುತ್ತ ಬಂದಿದ್ದೀರಿ. ಜಾನಪದ ಕ್ಷೇತ್ರದಲ್ಲಿ ಇನ್ನೂ ಆಗಬೇಕಿರುವ ಕೆಲಸಗಳೇನು?
ನಾನು ಹುಟ್ಟಿದ್ದು ಹಳ್ಳಿಯ ಅಂಗಳದಲ್ಲಿ. ಆದ್ದರಿಂದ ಸಹಜವಾಗಿ ಜಾನಪದದಲ್ಲಿ ನನಗೆ ಆಸಕ್ತಿ. ಇದಕ್ಕೆ ಮುಖ್ಯ ಪ್ರೇರಣೆಯಾದವರು ನನ್ನ ಹಿರಿಯ ಸ್ನೇಹಿತರಾಗಿದ್ದ ದಿ.ಕೆ.ಆರ್.ಲಿಂಗಪ್ಪನವರು. ಇಂಪಾದ ಕಂಠದಿಂದ ಅವರು ಹಾಡುತ್ತಿದ್ದ ಜನಪದ ಗೀತೆಗಳ ಸ್ವಾರಸ್ಯ ನನ್ನ ಆಸಕ್ತಿಯನ್ನು ಅರಳಿಸಿತು. ನನ್ನ ತಾಯಿ ಹಾಡುತ್ತಿದ್ದ ಬೀಸುವ ಪದಗಳು. ಸುತ್ತಮುತ್ತಣ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಹಾಡುತ್ತಿದ್ದ ಗೀತೆಗಳನ್ನು ಸಂಗ್ರಹಿಸಿ ನಮ್ಮ ಊರಿನ ತರುಣರ ಸಂಘದಿಂದ ಅದನ್ನು ಪ್ರಕಟಿಸಿದೆ. ಮೂರ‍್ನಾಲ್ಕು ಸಂಗ್ರಹಗಳ ಹೊರತಾಗಿ ಹೆಚ್ಚೇನು ಪ್ರಕಟಣೆಗಳನ್ನು ಹೊರತರಲಾಗಲಿಲ್ಲ. ಆದರೂ ಜನಪದ ಗೀತೆಗಳ ಪ್ರಸಾರ ಕಾರ್ಯ ಮಾಡುತ್ತಲೇ ಇದ್ದೆ.
೧೯೬೭ರಲ್ಲಿ ತರೀಕೆರೆಯಲ್ಲಿ ಪ್ರಥಮ ಬಾರಿಗೆ ಅಖಿಲ ಕರ್ನಾಟಕ ಜನಪದ ಸಾಹಿತ್ಯ ಸಮ್ಮೇಳನ ಸಂಘಟಿಸುವ ಭಾರ ಹೊತ್ತೆ. ಆಗ ನಾವು ಪ್ರಕಟಿಸಿದ ’ಹೊನ್ನ ಬಿತ್ತೇವು ಹೊಲಕೆಲ್ಲ ಸ್ಮರಣ ಗ್ರಂಥ ಜಾನಪದ ಕ್ಷೇತ್ರಕ್ಕೆ ಒಂದು ಮೌಲಿಕ ಕೊಡುಗೆ ಎಂದು ಹೇಳಬಹುದು. ಅಲ್ಲಿಂದ ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ, ಜಿ.ನಾರಾಯಣ ಅವರು ಅಧ್ಯಕ್ಷರಾಗಿದ್ದಾಗ ನಡೆದ ಜಿಲ್ಲಾ ಹಾಗೂ ರಾಜ್ಯಮಟ್ಟದ ಜನಪದ ಕಲಾಮೇಳಗಳ ಸಂಚಾಲಕರಾಗಿ ನಾನು ಆ ಕ್ಷೇತ್ರದಲ್ಲಿ ಹೆಚ್ಚು ಗುರುತಿಸಿಕೊಳ್ಳಲು ಅವಕಾಶವಾಯಿತು.
ಜಾನಪದ ಪರಂಪರೆ, ಅಂತಃಸತ್ವ ಮತ್ತು ಜೀವನ ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಹೆಚ್.ಎಲ್.ನಾಗೇಗೌಡ, ಡಾ.ದೇ.ಜವರೇಗೌಡ, ಡಾ.ಜೀ.ಶಂ.ಪರಮಶಿವಯ್ಯ ಕೆ.ಆರ್.ಲಿಂಗಪ್ಪ, ಡಾ.ಹಾ.ಮಾ.ನಾಯಕ ಮೊದಲಾದವರು ಜೊತೆಯಾಗಿ ಜಾನಪದ ಪರಿಷತ್ತನ್ನು ಸ್ಥಾಪಿಸಿದೆವು. ನಂತರ ಅದು ಜಾನಪದ ಅಕಾಡೆಮಿ ಸ್ಥಾಪನೆಗೆ ಕಾರಣವಾಯಿತು. ಆರಂಭದ ಅವಧಿಯಲ್ಲಿ ನಾನು ಅಕಾಡೆಮಿ ಸದಸ್ಯನಾಗಿದ್ದೆ. ಈಗ ಅದರ ಅಧ್ಯಕ್ಷ ಸ್ಥಾನದಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿದೆ.
ನನಗೀಗ ವಯಸ್ಸಾಗಿದೆ. ಇಂತಹ ಸಾರ್ವಜನಿಕ ಸಂಸ್ಥೆಗಳ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಯಾವ ಆಸಕ್ತಿಯೂ ಉಳಿದಿಲ್ಲ. ಆದರೂ ನನ್ನನ್ನು ಬಹುದಿನಗಳಿಂದ ಕಾಡುತ್ತಿದ್ದ ಕೆಲವು ಕೆಲಸಗಳ ದೃಷ್ಟಿಯಿಂದ ಈ ಅಕಾಡೆಮಿ ಅಧ್ಯಕ್ಷ ಸ್ಥಾನ ಒಪ್ಪಿಕೊಂಡೆ. ಕಳೆದ ಎರಡೂವರೆ ವರ್ಷಗಳಲ್ಲಿ ನನ್ನ ಆಸೆ ಈಡೇರಿದೆ. ನನಗಿದ್ದ ಆಸೆಗಳೆಂದರೆ, ರಾಜ್ಯದಲ್ಲಿ ಜಾನಪದಕ್ಕೆ ಮೀಸಲಾದ ಒಂದು ವಿಶ್ವವಿದ್ಯಾನಿಲಯ ಸ್ಥಾಪನೆ. ಕಷ್ಟದಲ್ಲಿರುವ ಜನಪದ ಕಲಾವಿದರಾಗಿ ಒಂದು ಕ್ಷೇಮನಿಧಿ ಸ್ಥಾಪನೆ, ರಾಷ್ಟ್ರಮಟ್ಟದ ಒಂದು ಜಾನಪದ ಸಮ್ಮೇಳನ ಮತ್ತು ದೇಸಿ ಶಬ್ದಗಳ ಒಂದು ನಿಘಂಟು ರಚನೆ. ಈ ಕನಸುಗಳೆಲ್ಲ ನನಸಾಗಿವೆ. ಓರ್ವ ಹಳ್ಳಿಗನಾಗಿ ಜಾನಪದಕ್ಕೆ ನನ್ನ ಭಾಗದ ಸೇವೆ ಸಲ್ಲಿಸಿದ ಸಮಾಧಾನ ನನಗಿದೆ.
ಜಾನಪದ ಒಂದು ಮಹಾ ಸಾಗರ. ಅದರ ಗರ್ಭದಲ್ಲಿರುವ ಇನ್ನೂ ಎಷ್ಟೋ ಮೌಲಿಕ ವಸ್ತುಗಳನ್ನು ಹೊರತರಬೇಕಾಗಿದೆ. ಮೊದಲು ಬೃಹತ್ ಪ್ರಮಾಣದಲ್ಲಿ ಕ್ರಮಬದ್ಧವಾದ ಕ್ಷೇತ್ರಕಾರ್ಯ ನಡೆಯಬೇಕಾಗಿದೆ. ಈಗ ಕಾರ್ಯಾರಂಭ ಮಾಡುತ್ತಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಯೋಜನೆಯಲ್ಲಿ ಜಾನಪದ ಕ್ಷೇತ್ರದಲ್ಲಿ ಆಗಬೇಕಾಗಿರುವ ಕಾರ್ಯಗಳ ವಿಸ್ತೃತ ಪಟ್ಟಿಯನ್ನೇ ಕೊಡಲಾಗಿದೆ. ನೂತನ ವಿಶ್ವವಿದ್ಯಾನಿಲಯ ಸ್ಥಾಪನೆಯ ಪ್ರಕ್ರಿಯೆಯ ಆರಂಭದ ಕೆಲಸಗಳನ್ನೆಲ್ಲ ಅದಕ್ಕಾಗಿ ನೇಮಕಗೊಂಡಿರುವ ವಿಶೇಷಾಧಿಕಾರಿ ಜಾನಪದ ತಜ್ಞರಾದ ಡಾ.ಅಂಬಳಿಕೆ ಹಿರಿಯಣ್ಣನವರು ಮಾಡಿದ್ದಾರೆ.
ಬಹುಶಃ ವಿಶ್ವದಲ್ಲೇ ಮೊದಲೆನಿಸುವ ಜಾನಪದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಕೀರ್ತಿ ಕರ್ನಾಟಕಕ್ಕೆ ಸಂದಂತಾಗಿದೆ. ಈ ವಿಶ್ವವಿದ್ಯಾನಿಲಯ ಉಳಿದ ವಿಶ್ವವಿದ್ಯಾನಿಲಯಗಳ ಸ್ವರೂಪಕ್ಕಿಂತ ಭಿನ್ನವಾಗಿರುತ್ತದೆ. ಜಾನಪದಕ್ಕೆ ಸಂಬಂಧಿಸಿದ ಕ್ಷೇತ್ರಕಾರ್ಯ, ದಾಖಲೀಕರಣ, ಸಂಶೋಧನೆ, ಪ್ರಕಟಣೆ, ಪ್ರಸಾರ ಇತ್ಯಾದಿಗಳೇ ಅಲ್ಲದೆ ನಶಿಸಿಹೋಗುತ್ತಿರುವ ಜಾನಪದ ಜೀವನಸಂಸ್ಕೃತಿಯ ಸಂರಕ್ಷಣೆಗೆ ಅಗತ್ಯವಾದ ಕಾರ್ಯಚಟುವಟಿಕೆಗಳಿಗೆ ಈ ವಿಶ್ವವಿದ್ಯಾನಿಲಯದಲ್ಲಿ ಹೆಚ್ಚು ಒತ್ತು ಕೊಡಲಾಗುತ್ತದೆ. ಇದು ವಾಸ್ತವ ಅರ್ಥದಲ್ಲಿ ಜನರದ್ದೇ ವಿಶ್ವವಿದ್ಯಾನಿಲಯವಾಗಬೇಕೆಂಬುದು ನನ್ನ ಹಂಬಲ.
ತಲೆಮಾರುಗಳ ಬದುಕಿನ ಅನುಭವವಾಗಿರುವ ಜಾನಪದದ ಮೌಲ್ಯಗಳನ್ನು ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಸರಿಹೊಂದಿಸುವ ಕೆಲಸ ಈಗ ನಡೆಯಬೇಕಾಗಿದೆ. ನಮ್ಮ ಹಳ್ಳಿಗರು ಮತ್ತು ಗುಡ್ಡಗಾಡಿನ ಜನರಲ್ಲಿ ಜೀವನ ವಿಶ್ವಾಸ ಮೂಡಿಸಿ, ಪರಂಪರೆಯಿಂದ ಬಂದ, ಎಂದೆಂದಿಗೂ ಸಲ್ಲುವಂತಹ ಅಂಶಗಳನ್ನು ಉಳಿಸಿಕೊಂಡು ಹೋಗುವಂತೆ ಮಾಡಬೇಕಾಗಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡ ನಾಡು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ತಮಗೆ ಸಾಕಷ್ಟು ಅರಿವಿದೆ. ಈ ಸಂದರ್ಭದಲ್ಲಿ ನಮ್ಮ ಎದುರು ಇರುವ ಪ್ರಮುಖ ಸವಾಲುಗಳು ಯಾವುವು? ಅವುಗಳನ್ನು ಎದುರಿಸುವ ಬಗೆ ಹೇಗೆ?
ಕರ್ನಾಟಕ ಭಾರತ ಒಕ್ಕೂಟದ ವ್ಯವಸ್ಥೆಯ ಒಂದು ಭಾಗ. ನಮ್ಮ ಸಂವಿಧಾನದಲ್ಲಿ ರಾಜ್ಯಗಳಿಗೆ ತಮ್ಮವೇ ಆದ ಸ್ಥಾನ-ಮಾನಗಳಿವೆ. ರಾಷ್ಟ್ರದ ಸಮಗ್ರತೆ ಮತ್ತು ಅಖಂಡತೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಒಂದು ಅಂಗೀಕೃತ ವ್ಯವಸ್ಥೆ. ಆದರೆ ಈ ವ್ಯವಸ್ಥೆ ಪ್ರಾದೇಶಿಕ ಪ್ರಗತಿ ನೋಡಿಕೊಳ್ಳಬೇಕಾದ ರಾಜ್ಯ ಸರ್ಕಾರ ವ್ಯವಸ್ಥೆಗೆ ಆತಂಕವಾಗಬಾರದು.
ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯ ಪ್ರದೇಶದ ಜನರ ಹಿತ ರಕ್ಷಣೆಗಾಗಿ ತಮ್ಮದೇ ಆದ ನೀತಿಯನ್ನು ರೂಪಿಸಿಕೊಂಡು ಅದನ್ನು ಅನುಷ್ಠಾನಗೊಳಿಸಲು ಮುಕ್ತ ಅವಕಾಶವಿರಬೇಕು. ಹೆಜ್ಜೆ ಹೆಜ್ಜೆಗೆ ರಾಜ್ಯಗಳು ಕೇಂದ್ರ ಸರ್ಕಾರವನ್ನು ಅವಲಂಬಿಸುವಂತಾಗಬಾರದು. ಕೇಂದ್ರದ್ದೇನಾದರೂ ಒಟ್ಟು ರಾಷ್ಟ್ರದ ಗಡಿ ರಕ್ಷಣೆ, ಅಂತಾರಾಷ್ಟ್ರೀಯ ಸಂಬಂಧ, ರಾಷ್ಟ್ರೀಯ ಸಂಪನ್ಮೂಲಗಳ ಅಭಿವೃದ್ಧಿ, ಆಂತರಿಕ ಶಾಂತಿಪಾಲನೆ, ರಾಜ್ಯ ರಾಜ್ಯಗಳ ನಡುವಿನ ಸಂಬಂಧ-ಇಂತಹ ಕ್ಷೇತ್ರಗಳ ಕಾರ್ಯ ನಿರ್ವಹಣೆ ಮಾಡಿದರೆ, ರಾಜ್ಯಗಳು ತಮ್ಮ ತಮ್ಮ ಪ್ರದೇಶಗಳ ಅಭಿವೃದ್ಧಿಯನ್ನು ನೋಡಿಕೊಳ್ಳಲು ಪೂರ್ಣ ಸ್ವಾತಂತ್ರವಿರಬೇಕು.
ಭಾರತಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ದೇಶದ ಬಹುತೇಕ ರಾಜ್ಯಗಳ ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲ. ನಮ್ಮ ಕರ್ನಾಟಕವನ್ನೇ ತೆಗೆದುಕೊಂಡರೆ, ಗಡಿ ಸಮಸ್ಯೆ, ಶಿಕ್ಷಣ ಮಾಧ್ಯಮದ ಸಮಸ್ಯೆ, ನದಿನೀರಿನ ಸಮಸ್ಯೆ, ವಲಸೆ ಸಮಸ್ಯೆ, ಇತ್ಯಾದಿ ಸಮಸ್ಯೆಗಳು ಜೀವಂತವಾಗಿರುವುದಷ್ಟೇ ಅಲ್ಲದೆ ಜನಜೀವನದ ನೆಮ್ಮದಿಯನ್ನೇ ಹಾಳುಮಾಡುತ್ತಿವೆ. ಇಂತಹ ರಾಷ್ಟ್ರೀಯ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಮೂಲಕ ಕ್ಷಿಪ್ರ ಕ್ರಮ ಕೈಗೊಳ್ಳಬೇಕು.
ನಮ್ಮ ರಾಜ್ಯದಲ್ಲೂ ಅಷ್ಟೇ. ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ನಡೆಸಬೇಕು. ಶಿಕ್ಷಣ ಮಾಧ್ಯಮ, ಸ್ಥಳೀಯ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ, ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಜೀವನ ಸೌಲಭ್ಯಗಳ ಪೂರೈಕೆ, ಪರಿಸರ ಸಂರಕ್ಷಣೆ-ಇಂತಹ ವಿಷಯಗಳಲ್ಲಿ ರಾಜ್ಯ ಸರ್ಕಾರ ಬದ್ಧತೆಯಿಂದ ಕೆಲಸ ಮಾಡಬೇಕು. ನಾಡಿನ ಹಿತಕ್ಕಾಗಿ ಪ್ರಾಮಾಣಿಕ ಹೋರಾಟ ನಡೆಸುವ ಸಂಘಟನೆಗಳನ್ನು ರಾಜ್ಯದ ಸಮಗ್ರ ಕ್ಷೇಮಕ್ಕಾಗಿ ಒಂದು ಶಕ್ತಿಯಾಗಿ ಬಳಸಿಕೊಳ್ಳಬೇಕು.
ಇದೆಲ್ಲದಕ್ಕೂ ಮುಖ್ಯವಾಗಿ ನಮ್ಮ ನಾಡಿಗೆ ಈಗ ಬೇಕಾಗಿರುವುದು ಅರ್ಪಣಾಭಾವದ, ಶುದ್ಧಚಾರಿತ್ರ್ಯದ, ಸಮಷ್ಟಿದೃಷ್ಟಿಯ, ಪ್ರಾಮಾಣಿಕ ದುಡಿಮೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು; ನಾಡು-ನುಡಿಗಳ ಹಿತರಕ್ಷಣೆಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವ ಜನಸಮುದಾಯ.

ಕನ್ನಡ ಸಾಹಿತ್ಯ ಲೋಕ ವರ್ತಮಾನದ ತವಕ, ತಲ್ಲಣಗಳಿಗೆ ಕ್ರಿಯಾಶೀಲವಾಗಿ ಸ್ಪಂದಿಸುತ್ತಿಲ್ಲ ಎಂಬ ಮಾತಿದೆ. ಹಿಂದೆ ಸಾಹಿತಿಗಳು ಚಳವಳಿಗೆ ಇಳಿದು ಜನಪರ ಚಳವಳಿಗಳನ್ನು ಮುನ್ನಡೆಸಿದ್ದರು. ಈಗ ಕೆಲವರನ್ನು ಬಿಟ್ಟರೆ ಇತರರಿಗೆ ಆ ಕುರಿತು ಆಸಕ್ತಿ ಇಲ್ಲ. ಹೀಗಾಗಿದ್ದಕ್ಕೆ ಕಾರಣವೇನು?
ಕನ್ನಡ ಸಾಹಿತ್ಯ ತನ್ನ ಸಮಕಾಲೀನ ಸಂದರ್ಭಗಳಿಗೆ ಸದಾ ಸ್ಪಂದಿಸುತ್ತಲೇ ಬಂದಿದೆ ಎಂದು ನನಗನಿಸುತ್ತದೆ. ಅದು ಇಂದೂ ಸ್ಪಂದಿಸುತ್ತಿದೆ. ಸ್ವಾತಂತ್ರ್ಯಪೂರ್ವದಿಂದ ಇಂದಿನವರೆಗೂ ಆಯಾ ಸಂದರ್ಭ-ಸನ್ನಿವೇಶಗಳ ತವಕ-ತಲ್ಲಣಗಳನ್ನು ತಮ್ಮ ಲೇಖಕರು ಅಭಿವ್ಯಕ್ತಿಸುತ್ತಲೇ ಇದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಇರುವಂತೆ ಸಾಹಿತ್ಯ ಕ್ಷೇತ್ರದಲ್ಲೂ ನಾನಾ ಪಂಥಗಳಿವೆ. ಅಂತಹ ಪಂಥಗಳಿರುವುದು ಸಹಜ. ಕೆಲವು ಸಂದರ್ಭಗಳಲ್ಲಿ ಆಯಾ ಪಂಥದೊಡನೆ ಗುರುತಿಸಿಕೊಂಡ ಕೆಲವರು ವೈಯಕ್ತಿಕ ಪ್ರತಿಷ್ಠೆಗಾಗಿ ತಮ್ಮ ಬರಹಗಳನ್ನು, ಹೇಳಿಕೆಗಳನ್ನು ಬಳಸಿಕೊಳ್ಳುವುದುಂಟು. ವೈಯಕ್ತಿಕ ಪ್ರತಿಷ್ಠೆ ಇತ್ತೆಂದರೆ ಸಮಷ್ಠಿ ಹಿತದ ಬಗೆಗೆ ಅಂಥವರು ಅಂಧರಾಗಿಬಿಡುತ್ತಾರೆ.
ಹಿಂದೆ ಸಾಹಿತಿಗಳು ಯಾವುದೇ ಪ್ರತಿಷ್ಠೆಯ ಪ್ರಸಿದ್ಧಿಗೆ ಒಳಗಾಗದೆ ಒಟ್ಟು ನಾಡ ಹಿತವನ್ನೇ ಗಮನದಲ್ಲಿಟ್ಟುಕೊಂಡು ಒಂದು ದನಿಯಾಗಿ ಜನಪರ ಚಳವಳಿ ನಡೆಸಿದ್ದುಂಟು. ಅಂತಹ ಸಹಜ ಸ್ಪಂದನ ಈಗ ಕಂಡುಬರುತ್ತಿಲ್ಲವೆನ್ನುವುದೂ ನಿಜ. ಈಗ ಮಾಧ್ಯಮಕ್ಕೆ ಮೆಚ್ಚುಗೆಯಾಗುವ ಮಾತುಗಳೇ ಹೆಚ್ಚಾಗಿವೆ. ಹಣ ಮತ್ತು ಹೆಸರುಗಳು ಅನೇಕ ವೇಳೆ ವ್ಯಕ್ತಿಯ ಸಮಷ್ಟಿಪ್ರಜ್ಞೆಯನ್ನು ಕೆಡಿಸಿಬಿಡುತ್ತವೆ. ಬೀದಿಗೆ ಇಳಿದರೆ ತಮ್ಮ ಸ್ಥಾನದ ಘನತೆ-ಪ್ರತಿಷ್ಠೆಗೆ ಎಲ್ಲಿ ಭಂಗ ಬರುವುದೋ ಎಂಬ ಭಯವೂ ಅಂಥವರನ್ನು ಕಾಡುತ್ತಿರಬಹುದು.
ಒಂದೊಮ್ಮೆ ಚಳವಳಿಗಾರರು ಹೋಗಿ ಕರೆದರೂ, ಅದರಲ್ಲಿ ತಮ್ಮ ಸ್ಥಾನಮಾನವೇನೆಂದು ಕೇಳುವವರೂ ಇಲ್ಲದಿಲ್ಲ. ಹತ್ತರಲ್ಲಿ ಮತ್ತೊಬ್ಬರಾಗಲು ಅವರು ಇಚ್ಛಿಸುವುದಿಲ್ಲ. ಅವರು ಪ್ರತ್ಯೇಕವಾಗೇ ಇದ್ದು ’ಪ್ರತಿಷ್ಠಿತ’ ರಾಗ ಬಯಸುತ್ತಾರೆ. ಹಾಗಾಗಿ ಕೆಲವು ಸಾಹಿತಿಗಳು ಕನ್ನಡ ಚಳವಳಿಗಳನ್ನು ಕಡೆಗಣ್ಣಿನಿಂದಲೇ ನೋಡುತ್ತಾರೆ. ಇದು ಒಳ್ಳೆಯ ಲಕ್ಷಣವಲ್ಲ. ಬರಹಗಾರರು ಜನಪರವಾದ ಯಾವುದೇ ಚಳವಳಿಗಳಲ್ಲಿ ಕ್ರಿಯಾಶೀಲವಾಗಿ ಸ್ಪಂದಿಸಬೇಕು ಮತ್ತು ನೇರವಾಗಿ ಪಾಲುಗೊಳ್ಳಬೇಕು. ಸಾಹಿತಿಗಳು ಹಾಗೆ ಪಾಲುಗೊಳ್ಳುವುದರಿಂದ ಚಳವಳಿಗಾರರಿಗೆ ಸಹಜವಾಗಿಯೇ ಸ್ಪೂರ್ತಿ ದೊರೆಯುತ್ತದೆ. ಆತ್ಮವಿಶ್ವಾಸ ಮೂಡುತ್ತದೆ. ಚಳವಳಿ ಹಾದಿ ತಪ್ಪದಂತೆ ನೋಡಿಕೊಳ್ಳುವುದೂ ಸಾಹಿತಿಗಳ ಕರ್ತವ್ಯ.
ವಾಸ್ತವ ಸಂಗತಿಯೆಂದರೆ, ಇಂದಿನ ಜಾಗತೀಕರಣ ದಾಳಿಯಲ್ಲಿ ಕನ್ನಡದ ಸದ್ದು ಅಷ್ಟಿಷ್ಟಾದರೂ ಕೇಳಿಬರುತ್ತಿದ್ದರೆ, ಅದು ನಮ್ಮ ಚಳವಳಿಗಾರರ ಹೋರಾಟದಿಂದಲೇ ಎನ್ನುವುದನ್ನು ನಾವು ಮರೆಯುವಂತಿಲ್ಲ. ಪ್ರಜಾಪ್ರಭುತ್ವದಲ್ಲಿ ಜನಹಿತಕ್ಕಾಗಿ ದನಿ ಮಾಡಲು ಮುಕ್ತ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ನಾಡು-ನುಡಿಗಳ ಹಿತದ ಪ್ರಶ್ನೆ ಬಂದಾಗ ಸಾಹಿತಿಗಳು ಕಾಯಾ-ವಾಚಾ-ಮನಸಾ ಚಳವಳಿಗಳಲ್ಲಿ ನೇರವಾಗಿ ಪಾಲುಗೊಳ್ಳಬೇಕೆಂದು ನನಗನಿಸುತ್ತದೆ. ಹಾಗೆಯೇ ಅತ್ಯಂತ ಭ್ರಷ್ಟಗೊಂಡಿರುವ ವ್ಯವಸ್ಥೆಯ ವಿರುದ್ಧವೂ ಸಾಹಿತಿಗಳು ಸಂಘಟಿತ ದನಿಮಾಡಬೇಕು. ಅಷ್ಟೇ ಅಲ್ಲ, ಬೀದಿಗಿಳಿದು ಜನಜಾಗೃತಿಗೊಳಿಸುವ ಕೆಲಸವನ್ನೂ ಮಾಡಬೇಕು.

ಈ ಸಂದರ್ಭದಲ್ಲಿ ’ನಲ್ನುಡಿ’ಯ ಓದುಗರೊಂದಿಗೆ ಹಂಚಿಕೊಳ್ಳಬಯಸುವ ನಿಮ್ಮ ಮಾತುಗಳೇನು?
ಭೂಕಂಪ ಎಲ್ಲೋ ಒಂದೊಂದು ಕಡೆ ಆಗಬಹುದು. ಆದರೆ ವಾಸ್ತವವಾಗಿ ಭೂಮಿ ಎಲ್ಲ ಕಡೆ ನಡುಗುತ್ತಿದೆ. ಭಯೋತ್ಪಾದಕರ ಭೀಕರ ಕೃತ್ಯಗಳಿಂದ ನಡುಗುತ್ತಿದೆ. ರಾಜಕೀಯ ಭೀಬತ್ಸ ಭ್ರಷ್ಟಾಚಾರದಿಂದ ನಡುಗುತ್ತಿದೆ. ಕೆಲವು ಧರ್ಮಗುರುಗಳ ಭೋಗ ಜೀವನದಿಂದ ನಡುಗುತ್ತಿದೆ. ಮತಾಂಧರ ಮತಿಹೀನತೆಯಿಂದ ನಡುಗುತ್ತಿದೆ. ಶಿಕ್ಷಣ ವ್ಯವಸ್ಥೆಯ ಅವನತಿಯನ್ನು ಕಂಡು ನಡುಗುತ್ತಿದೆ. ಅಹಂಕಾರದ ಅಮಲಿನಲ್ಲಿರುವ ಅಧಿಕಾರಿಗಳಿಂದ ನಡುಗುತ್ತಿದೆ. ಕರ್ತವ್ಯಹೀನ ಕಚೇರಿ ಸಿಬ್ಬಂದಿಯಿಂದ ನಡುಗುತ್ತಿದೆ. ಕೆಲವು ಸಾಹಿತಿ-ಕಲಾವಿದರ ಸೋಗಲಾಡಿತನದಿಂದ ನಡುಗುತ್ತಿದೆ. ಶ್ರಮಜೀವಿ ರೈತರ ಆತ್ಮಹತ್ಯೆ ಕಂಡು ನಡುಗುತ್ತಿದೆ. ’ಪ್ರತಿಷ್ಠಿತ’ರೆನ್ನುವವರ ಶೀಲ-ಚಾರಿತ್ರ್ಯಗಳ ದಾರಿದ್ರ್ಯದಿಂದ ನಡುಗುತ್ತಿದೆ. ತೋರಿಕೆಯ ಸಭ್ಯರಿಂದ, ಹಾರಿಕೆಯ ಹೊಣೆಗಾರರಿಂದ ನಮ್ಮ ಭೂಮಿ ತತ್ತರಿಸಿ ನಡುಗುತ್ತಿದೆ. ಈ ನಡುಕವನ್ನು ನಿಲ್ಲಿಸಿ ನೆಲದ ಮೇಲೆ ನೆಮ್ಮದಿ ಮೂಡಿಸುವ ಕೆಲಸ ಆಗಬೇಕಾಗಿದೆ. ವೃದ್ಧಾಪ್ಯದಲ್ಲಿರುವ ನನ್ನಂಥವರು ಸುಮ್ಮನೆ ಮರುಗುವುದಷ್ಟೆ.

No comments:

Post a Comment

ಹಿಂದಿನ ಬರೆಹಗಳು