Friday, June 17, 2011

ನೆಲದ ಒಡಲ ಹಾಡೇ ಜಾನಪದ

ಟಿ.ಎ.ನಾರಾಯಣಗೌಡ



ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ
ಕೂಸು ಕಂದಮ್ಮ ಒಳ-ಹೊರಗ
ಕೂಸು ಕಂದಮ್ಮ ಒಳ-ಹೊರಗ ಆಡಿದರ
ಬೀಸಣಿಕೆ ಗಾಳಿ ಸುಳಿದಾವ

ಬೆಳಗಾಗಿ ನೆನೆದ್ದು ಯಾರ್ ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳಿಯೋ ಭೂಮಿತಾಯಿ
ಎದ್ದೊಂದು ಗಳಿಗೆ ನೆನೆದೇನು

ತೊಟ್ಟಿಲ ಹೊತ್ಕೊಂಡು ತವರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡ್ಕೊಂಡು! ತೌರೂರ
ತಿಟ್ಟಹತ್ತಿ ತಿರುಗಿ ನೋಡ್ಯಾಳೋ

ಹೆಣ್ಣುಮಕ್ಕಳ ಕಳುಹಿ ಹೆಂಗಿದಿ ನನ ಹಡೆದವ್ವಾ
ಹನ್ನೆರಡಂಕನ ಪಡೆಸಾಲಿ
ಹನ್ನೆರಡು ಅಂಕನ ಪಡಸಾಲಿ ಒಳ ಹೊರಗ
ಹೆಣ್ಣು ಮಕ್ಕಳ ಉಲವಿಲ್ಲ

ಆಡಿ ಬಾ ನನ ಕಂದ
ಅಂಗಾಲ ತೊಳದೇನ
ತೆಂಗಿನ ಕಾಯಿ ತಿಳಿ ನೀರು
ತೆಂಗಿನ ಕಾಯಿ ತಿಳಿ ನೀರ ತಕ್ಕೊಂಡು
ಕಂದಮ್ನ ಪಾದ ತೊಳದೇನ...

ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳಿಯೋ ಭೂಮಿತಾಯಿ
ಎದ್ದೊಂದು ಗಳಿಗೆ ನೆನೆದೇನು

ಮಣ್ಣಲ್ಲಿ ಹುಟ್ಟೋಳೆ ಮಣ್ಣಾಲಿ ಬೆಳೆವೋಳೆ
ಎಣ್ಣೇಲಿ ಕಣ್ಣಾ ಬಿಡುವೋಳೆ, ಜಗಜ್ಯೋತಿ
ಸತ್ಯಾದಿಂದುರಿಯೆ ನಮಗಾಗಿ


ಇಂಥ ಅದ್ಭುತ ಗೀತೆಗಳನ್ನು ಬರೆದವರ‍್ಯಾರು? ಇವರ‍್ಯಾರೂ ನಮ್ಮ ನಾಡಿನ ಗಣ್ಯಾತಿಗಣ್ಯ ಸಾಹಿತಿಗಳಲ್ಲ. ಯಾವ ರಾಜರ ಆಸ್ಥಾನದ ಕವಿಗಳೂ ಅಲ್ಲ. ಪ್ರಶಸ್ತಿ, ಪುರಸ್ಕಾರ, ಸಮ್ಮಾನ, ಖ್ಯಾತಿ ಇತ್ಯಾದಿಗಳ ಗೊಡವೆಗೆ ಹೋದವರಲ್ಲ. ಆದರೂ ಇವರು ಕನ್ನಡದ ಶ್ರೇಷ್ಠ ಸಾಹಿತಿಗಳು. ಮತ್ತೆ ಮತ್ತೆ ಓದುವಂತೆ, ಕೇಳುವಂತೆ, ಹಾಡುವಂತೆ ಮಾಡಿದ ಈ ಅಜ್ಞಾತ ಕವಿಗಳಿಗೆ ಕೋಟಿ ವಂದನೆ. ಜನರ ಬಾಯಿಂದ ಬಾಯಿಗೆ ತಲುಪುತ್ತಲೇ ಲಕ್ಷಾಂತರ ಜನರನ್ನು ಸೆಳೆದ ಈ ಗೀತೆಗಳು ಜನಸಂಸ್ಕೃತಿಯನ್ನು ಬಿಂಬಿಸುವ ರೂಪಕಗಳು.
ಜಾನಪದ ಎಂದರೆ ಕೇವಲ ಅಜ್ಞಾತ ಕವಿಗಳ ಹಾಡು-ಪಾಡು ಮಾತ್ರವಲ್ಲ. ಅದು ಬದುಕಿನ ಎಲ್ಲ ಜ್ಞಾನಶಾಖೆಗಳಿಗೂ ಅನ್ವಯಿಸುವಂಥದ್ದು. ಒಟ್ಟಾಗಿ ಇದನ್ನು ಜಾನಪದ ಸಂಸ್ಕೃತಿ ಎಂದು ನಾವು ಕರೆಯಬಹುದು. ಜಾನಪದ ಸಾಹಿತ್ಯ, ಜಾನಪದ ಕಲೆ, ಜಾನಪದ ತಂತ್ರಜ್ಞಾನ, ಜಾನಪದ ವೈದ್ಯ, ಜಾನಪದ ಕ್ರೀಡೆ, ಜಾನಪದ ನಾಟಕ, ಜಾನಪದ ಹಬ್ಬ-ಸಂಪ್ರದಾಯಗಳು, ಜಾನಪದ ಪುರಾಣ-ಒಗಟು ಇತ್ಯಾದಿ ಎಲ್ಲವೂ ಸೇರಿಯೇ ಜಾನಪದ. ಜಾನಪದ ಎಂದರೆ ಜನರ ಪದ. ಈ ಜನಪದರು ಈ ನೆಲದ ಜತೆಯಲ್ಲಿ ಅವಿನಾಭಾವ ಸಂಬಂಧವಿಟ್ಟುಕೊಂಡವರು. ಹುಟ್ಟಿದ ಮಣ್ಣನ್ನು ಪ್ರೀತಿಸುವವರು, ಸುತ್ತಲ ನಿಸರ್ಗವನ್ನು ಆರಾಧಿಸುವವರು.
ಜಾನಪದ ಸಾಹಿತ್ಯವೂ ವಿಸ್ತಾರವಾಗಿದೆ. ಜಾನಪದ ಗೀತೆಗಳು ಅತ್ಯಂತ ಜನಪ್ರಿಯ. ಅದೇ ರೀತಿ ಜನಪದ ಕಥನಗಳು, ಕಾವ್ಯಗಳು, ನಾಟಕಗಳು, ಒಗಟುಗಳು, ಗಾದೆಗಳು ಜನಜೀವನದ ಭಾಗವಾಗೇ ಉಳಿದುಕೊಂಡಿವೆ. ಇದನ್ನೆಲ್ಲ ಕಟ್ಟಿದ ಜನರ ಹೆಸರು ಗೊತ್ತಿಲ್ಲ. ಆದರೆ ಈ ಮೌಖಿಕ ಪರಂಪರೆ ಕರ್ನಾಟಕದ ಸಂಸ್ಕೃತಿಯ ಹಿರಿಮೆ. ಅದು ನಮ್ಮ ದೇಸೀ ಪರಂಪರೆಯ ತೋರುಗನ್ನಡಿ.
ಮನುಷ್ಯ ವಿಕಾಸಗೊಳ್ಳುತ್ತಿದ್ದಂತೆ ಸಂವಹನಕ್ಕೆ ಭಾಷೆ ಒಂದು ಮಾಧ್ಯಮವಾಯಿತು. ಭಾಷೆಗೊಂದು ಲಿಪಿ ಸೃಷ್ಟಿಯಾಯಿತು. ನಂತರ ಸಾಹಿತ್ಯವೂ ದಾಖಲಾಯಿತು. ಆದರೆ ಇದೆಲ್ಲವೂ ಆಗುವ ಮುನ್ನವೇ ಜಾನಪದವಿತ್ತು. ಜಾನಪದ ಕಲೆ-ಸಾಹಿತ್ಯ-ಸಂಸ್ಕೃತಿ ಜನರ ನಡುವೆ ಇತ್ತು. ಅಕ್ಷರವೇ ಗೊತ್ತಿಲ್ಲದವರು ಹಾಡು ಕಟ್ಟಿದರು. ಸುಶ್ರಾವ್ಯವಾಗಿ ಹಾಡಿದರು. ಜನರು ತಮ್ಮ ಮನರಂಜನೆಗಾಗಿ, ಬೌದ್ಧಿಕ ಬೆಳವಣಿಗೆಗಾಗಿ ಈ ಸಂಸ್ಕೃತಿಯನ್ನೇ ಬಳಸಿದರು.
ಜಾನಪದ ಹಾಡು, ಕಾವ್ಯ, ಕಥನಗಳಲ್ಲಿ ನಮ್ಮ ಜನಪದ ಮಾನವೀಯ ಸಂಬಂಧಗಳು, ಕಾಯಕ ಶ್ರದ್ಧೆ, ಜೀವಪರತೆಗಳನ್ನೇ ಕಾಣುತ್ತೇವೆ. ಅಷ್ಟೇ ಅಲ್ಲ ಜನಪದರ ಜ್ಞಾನ, ತಿಳಿವಳಿಕೆಯೂ ಅಸಾಧಾರಣವಾದದ್ದು. ವಿಜ್ಞಾನ ಬೆಳೆಯುವ ಮುನ್ನವೇ ಜನಪದರು ವೈಜ್ಞಾನಿಕವಾಗಿ ಯೋಚಿಸಬಲ್ಲವರಾಗಿದ್ದರು.
ಹಳ್ಳಿ ಬದುಕಿನ ಸೌಂದರ್ಯವಿರುವುದೇ ಅಲ್ಲಿಯ ಸಂಬಂಧಗಳ ಮಧುರ ಅನುಭೂತಿಯಲ್ಲಿ. ಅಜ್ಜಿ, ಅಜ್ಜ, ತಾಯಿ, ತಂದೆ, ಮಗಳು, ಮಗ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಮಾವ, ಅತ್ತೆ, ಸೋದರ ಮಾವ, ಸೋದರತ್ತೆ, ಸೊಸೆ, ಅಳಿಯ, ನಾದಿನಿ, ಬಾವ, ಬಾಮೈದ, ಅತ್ತಿಗೆ, ವಾರಗಿತ್ತಿ, ಮೊಮ್ಮಕ್ಕಳು ಇತರ ಎಲ್ಲ ಸಂಬಂಧಗಳ ಜತೆಜತೆಯೇ ಹಳ್ಳಿಯ ಬದುಕು ಸಾಗುತ್ತದೆ. ಒಂದೊಂದು ಸಂಬಂಧಕ್ಕೂ ಒಂದೊಂದು ಗುಣವಿದೆ, ಅದರದ್ದೇ ಆದ ಸೆಳೆತವಿದೆ. ಈ ಎಲ್ಲ ಸಂಬಂಧಗಳ ಸೊಗಸನ್ನು ಜಾನಪದ ಸಾಹಿತ್ಯ ನವಿರಾಗಿ ಬಿಡಿಸಿಡುತ್ತದೆ.
ಜನಪದರಿಗೆ ಹಾಡು-ಕಲೆ ಬದುಕಿನ ಭಾಗ. ತಮ್ಮ ಎಲ್ಲ ದಿನನಿತ್ಯದ ಕೆಲಸಗಳ ಜತೆಗೂ ಅವರು ತಮ್ಮ ಪಾಡಿಗೆ ತಾವು ಹಾಡಿಕೊಂಡು ಇದ್ದವರು. ಹೊಲ ಉಳುವಾಗ, ಕೂರಿಗೆ ಹೊಡೆಯುವಾಗ, ಕಳೆ ಕೀಳುವಾಗ, ನಾಟಿ ಹಾಕುವಾಗ, ಪೈರು ಕೀಳುವಾಗ, ಕಾಳು ಒಕ್ಕುವಾಗ, ಮೊಸರು ಕಡೆಯುವಾಗ, ಅಡಿಕೆ ಸುಲಿಯುವಾಗ, ಮಗು ಮಲಗಿಸುವಾಗ, ಹಚ್ಚೆ ಹೊಯ್ಯುವಾಗ, ಬೀಸುವಾಗ, ಕುಟ್ಟುವಾಗ, ನೇಯುವಾಗ ಇತರ ಎಲ್ಲ ಕೆಲಸಗಳನ್ನು ಮಾಡುವಾಗ ಅವರಿಗೆ ಹಾಡೇ ಸಂಗಾತಿ. ಆ ಹಾಡುಗಳಾದರೂ ಎಂಥದ್ದು. ಇನ್ನು ಮದುವೆ, ಮುಂಜಿ, ನಾಮಕರಣ, ಹಸೆ ಇತ್ಯಾದಿ ಯಾವುದೇ ಶುಭಕಾರ್ಯವಿದ್ದರೂ ಅಲ್ಲಿ ಹಾಡು ಇದ್ದೇ ಇರಬೇಕು. ಕಡೆಗೆ ಸಾವಿನ ಸಂದರ್ಭದಲ್ಲೂ ಕೌಡಿ ಹೇಳುವ (ಸತ್ತವರ ಗುಣಗಾನ ಮಾಡುವುದು) ಹಾಡುಗಾರಿಕೆ ಇದ್ದೇ ಇರುತ್ತದೆ.
ನಮ್ಮ ಜನಪದರು ದೈವಭಕ್ತರು. ಅವರ ಕಣ್ಣಲ್ಲಿ ನಿಸರ್ಗವೇ ದೈವ. ಭೂಮಿತಾಯಿಯೇ ಅವರ ಮೊದಲ ದೈವ. ಬೆಳಗಾಗಿ ಎದ್ದು ಅವರು ಎಳ್ಳು ಜೀರಿಗೆ ಬೆಳೆಯೋ ಭೂಮಿ ತಾಯಿಯನ್ನೇ ನೆನೆಯುತ್ತಾರೆ. ಹೆಚ್ಚಿನ ಹಾಡುಗಳನ್ನು ರಚಿಸಿದವರು ಮಹಿಳೆಯರು. ಅವರಿಗೆ ತಮ್ಮ ಜವಾಬ್ದಾರಿಗಳ ಅರಿವುಂಟು. ತವರಿನ ಸುಖ, ಸೇರಿದ ಮನೆಯ ತಾಪತ್ರಯಗಳು ಎಲ್ಲದರ ಅರಿವುಂಟು. ಪುರುಷ ಪ್ರಧಾನ ಸಂಸ್ಕೃತಿಯಲ್ಲಿ ಮಹಿಳೆ ಸಿಕ್ಕಿಕೊಂಡ ಕಟ್ಟುಪಾಡುಗಳಿಂದ ಹೊರಗೆ ಬರುವುದು ಕಷ್ಟ. ಹೀಗಾಗಿ ತಮ್ಮ ನೋವು, ಸಂಕಟಗಳನ್ನೆಲ್ಲ ಜಾನಪದ ಹೆಣ್ಣುಮಕ್ಕಳು ಹಾಡುಗಳಲ್ಲೇ ಹೇಳಿ ಹಗುರಾಗುತ್ತಿದ್ದರು.
ನಮ್ಮ ಜನಪದರು ಎಷ್ಟು ಸೃಜನಶೀಲರಾಗಿದ್ದರು, ಕಲೆಯ ಉಪಾಸಕರಾಗಿದ್ದರು ಎಂಬುದಕ್ಕೆ ಈ ಹಾಡುಗಳೇ ಸಾಕ್ಷಿ. ಅವರ ಇಡೀ ಬದುಕೇ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿತ್ತು. ಅವರು ನಿಜವಾದ ಮಣ್ಣಿನ ಮಕ್ಕಳು, ಪ್ರಕೃತಿಯ ಮಕ್ಕಳು.
ಆದರೆ ಇವತ್ತು ಏನಾಗಿದೆ?
ದೊಡ್ಡ ದೊಡ್ಡ ನಗರಗಳಲ್ಲಿ ಮಾಲ್ ಸಂಸ್ಕೃತಿ, ಎಲ್ಲೆಲ್ಲೂ ಕೊಳ್ಳುಬಾಕರ ಜನಜಂಗುಳಿ. ಪಿಡ್ಜಾ ಹಟ್‌ಗಳು, ಮ್ಯಾಕ್ ಡೊನಾಲ್ಡ್‌ಗಳು, ಕಾಫಿ ಡೇಗಳು, ಬರಿಸ್ತಾಗಳು, ಮಲ್ಟಿಪ್ಲೆಕ್ಸ್ ಥೇಟರುಗಳು ಗಲ್ಲಿಗಲ್ಲಿಗಳಲ್ಲಿ ತುಂಬಿಕೊಂಡಿವೆ. ಬೆಂಗಳೂರಿನಂಥ ಹೈಟೆಕ್ ನಗರಗಳಲ್ಲಿ ಎಗ್ಗಿಲ್ಲದಂತೆ ಲೈವ್ ಬ್ಯಾಂಡ್‌ಗಳು, ಡಿಸ್ಕೋಥೆಕ್‌ಗಳು, ಡಾನ್ಸ್ ಬಾರ್‌ಗಳು ನಮ್ಮ ಯುವ ಸಮುದಾಯವನ್ನು ಮನರಂಜಿಸುವ ಕೆಲಸದಲ್ಲಿ ತೊಡಗಿವೆ. ಎಲ್ಲ ವಿದೇಶಿ ಸಂಗೀತದ-ಕುಣಿತದ ಅಮಲು. ತೊಟ್ಟಿಲು, ತವರುಬಣ್ಣ, ಮಣ್ಣು, ಭೂಮಿತಾಯಿ, ಬೀಸಣಿಕೆ, ಮಲ್ಲಿಗೆ, ಹೊಳೆ, ಕೆರೆ, ಎಮ್ಮೆ, ಹಸು, ಗದ್ದೆ, ಪೈರು, ಪಚ್ಚೆ ಇದ್ಯಾವುದೂ ನಮ್ಮ ಆಸಕ್ತಿಯ ವಿಷಯಗಳಾಗಿಲ್ಲ. ಮನೆಗಳಲ್ಲಿ ಅಪ್ಪ-ಅಮ್ಮ ಮಕ್ಕಳು ಇಷ್ಟೇ ಜನರ ಕುಟುಂಬ. ಆ ಮಕ್ಕಳಿಗೆ ಅಜ್ಜ-ಅಜ್ಜಿಯೂ ಗೊತ್ತಿಲ್ಲ, ಅತ್ತಿಗೆ-ನಾದಿನಿ ಇತ್ಯಾದಿಗಳ ಅರ್ಥವೂ ಗೊತ್ತಿಲ್ಲ. ಅಪ್ಪ, ಅಮ್ಮ ಹೊರತಾಗಿ ನಮ್ಮ ಮಕ್ಕಳಿಗೆ ಜಗತ್ತಲ್ಲಿ ಉಳಿದವರೆಲ್ಲ ಆಂಟಿ-ಅಂಕಲ್ಲುಗಳೇ.

ಯಾಕಳುವಿ ನನ ಕಂದ
ಬೇಕಾದ್ದು ನಿನಗೇನು
ಬಾಕೆಮ್ಮೆ ಕರೆದ ನೊರೆ ಹಾಲು
ನೊರೆ ಹಾಲು ಕುಡಿಸಿದರ
ಗಪ್ಪು-ಚಿಪ್ಪಾಗಿ ಮಲಗ್ಯಾನ..


ಅತ್ತರೆ ಅಳಲವ್ವ
ಈ ಕೂಸು ನಮಗಿರಲಿ
ಕೆಟ್ಟರ ಕೆಡಲಿ ಮನಿಗೆಲಸ
ಮಕ್ಕಳಿರಲವ್ವ ಮನೆತುಂಬ..

ಇದು ತಾಯಿ-ಮಕ್ಕಳ ಅನುಬಂಧ. ಆದರೆ ಇವತ್ತು ನಗರಗಳ ಮಕ್ಕಳು ಕ್ರೀಚುಗಳಲ್ಲಿ ಬೆಳೆಯುತ್ತಿವೆ. ಕನ್ನಡದ ಕಂದಮ್ಮಗಳಿಗೆ ಕನ್ನಡವನ್ನೇ ಕಲಿಸುತ್ತಿಲ್ಲ. ಅಳುವ ಮಕ್ಕಳಿಗೆ ನೊರೆಹಾಲಲ್ಲ ದಕ್ಕುತ್ತಿರುವುದು; ನಿದ್ದೆ ಮಾತ್ರೆಗಳು!
ಕೆಟ್ಟಿರುವುದು ತಾಯಿ-ಮಗುವಿನ ಸಂಬಂಧ ಮಾತ್ರವಲ್ಲ. ಎಲ್ಲ ಸಂಬಂಧಗಳೂ ಹದಗೆಟ್ಟಿವೆ. ವಯಸ್ಸಾದ ಅಪ್ಪ-ಅಮ್ಮ ಮನೆಯಲ್ಲಿ ಇಟ್ಟುಕೊಳ್ಳಲಾಗದ ಮಕ್ಕಳ ಸಂಖ್ಯೆ ಹೆಚ್ಚುತ್ತಿವೆ. ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿವೆ. ಅಲ್ಲಿ ವಾಸಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮನೆಗಳಲ್ಲಿ ಇರುವವರ ನಡುವೆಯೂ ನಿತ್ಯ ಕದನ. ಕೂಡಿ ಬಾಳುವ ಮನಸ್ಸನ್ನು ಎಲ್ಲರೂ ಕಳೆದುಕೊಂಡಿದ್ದೇವೆ. ಯಾವ ಬಾಂಧವ್ಯಕ್ಕೂ ಅರ್ಥ ಉಳಿಯುತ್ತಿಲ್ಲ.
ಜನಪದ ಸಂಸ್ಕೃತಿ ಉಳಿಯಬೇಕು ಎಂದು ಚೀರುವುದೂ ಈಗ ವ್ಯರ್ಥ ಪ್ರಯತ್ನ. ಯಾಕೆಂದರೆ ಹಳ್ಳಿಗಳಲ್ಲಿ ಜನರು ಉಳಿಯುತ್ತಿಲ್ಲ. ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆತ್ಮಹತ್ಯೆಯ ಹಾದಿ ಹಿಡಿದಿದ್ದಾನೆ. ರೈತ ಸಂಕಷ್ಟಕ್ಕೆ ಸಿಲುಕಿದನೆಂದರೆ ಆತನ ಬದುಕನ್ನೇ ಅವಲಂಬಿಸುವ ಕೂಲಿ ಕಾರ್ಮಿಕರು, ಕುಶಲಕರ್ಮಿಗಳು ಇನ್ನಷ್ಟು ಸಂಕಟಕ್ಕೆ ಸಿಲುಕುತ್ತಾರೆ. ಬೆಳೆಯಿಲ್ಲ, ಬೆಳೆದ ಬೆಳೆಗೆ ಬೆಲೆಯಿಲ್ಲ. ಜಾಗತೀಕರಣದ ಸುಂಟರಗಾಳಿಗೆ ಸಿಕ್ಕು ಹಳ್ಳಿಗಳೇ ನಾಶವಾಗುತ್ತಿವೆ. ನಗರದ ಸುತ್ತಮುತ್ತಲ ಹಳ್ಳಿಗಳು ಆಧುನಿಕತೆಯ ಬಿರುಗಾಳಿಗೆ ಸಿಕ್ಕಿವೆ. ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳಿಗೆ, ಸರ್ಕಾರದ ಬೃಹತ್ ಯೋಜನೆಗಳಿಗೆ, ನುಣುಪಾದ ಅಗಲಗಲ ರಸ್ತೆಗಳಿಗಾಗಿ ರೈತರ ಜಮೀನುಗಳನ್ನು ನಾಶಪಡಿಸಲಾಗಿದೆ.
ಹಳ್ಳಿಗಳು ನಾಶವಾದಂತೆ ಆ ಹಳ್ಳಿಯ ಅನನ್ಯ ಸಂಸ್ಕೃತಿ, ಪರಂಪರೆ, ದೇವರು, ಜಾತ್ರೆ, ತೇರು, ಕುಣಿತ, ಹಾಡು, ಸಂಪ್ರದಾಯ ಎಲ್ಲವೂ ನಾಶವಾಗುತ್ತವೆ. ಹಳ್ಳಿ ತೊರೆದು ಪಟ್ಟಣ ಸೇರಿದವರಿಗೆ ಆ ಪಟ್ಟಣದ ಬದುಕಿನ ಜತೆ ಹೊಂದಿಕೊಳ್ಳುವ ಅನಿವಾರ್ಯತೆ. ಹೀಗಾಗಿ ಜಾನಪದ ಸಂಸ್ಕೃತಿಯೇ ನಾಶವಾಗುವ ಸ್ಥಿತಿ ತಲುಪಿದೆ.
ಜಾನಪದ ನಮ್ಮ ತಾಯಿಬೇರು. ನಾವು ಅದನ್ನೇ ಕಳೆದುಕೊಳ್ಳುತ್ತಿದ್ದೇವೆ, ತಬ್ಬಲಿಗಳಾಗುತ್ತಿದ್ದೇವೆ. ತಾಯಿಯಿಲ್ಲದ ಮಕ್ಕಳ ನೋವು ಏನೆಂಬುದನ್ನೂ ನಮ್ಮ ಜನಪದರು ಹೇಳಿದ್ದಾರೆ.
ತಾಯಿಲ್ದ ಮಕ್ಕಳಿಗೆ ಬಾಯಿಲ್ಲ ಸಿರಿಯಿಲ್ಲ
ಬಾ ಎಂದು ಕರಿವಾರು ಯಾರಿಲ್ಲದಾಯ್ತೆ ಅಬ್ಬಯ್ಯ
ಹಾಲ ಕುಡಿಸುವರ‍್ಯಾರು ಅನ್ನ ಉಣಿಸುವರ‍್ಯಾರು
ಓಡಿ ನಾವು ಬೀಳಾಲು ಎತ್ತುವರ‍್ಯಾರು ಅಬ್ಬಯ್ಯ
ನಮ್ಮ ನೆಲದ ಸಂಸ್ಕೃತಿಯನ್ನು ಕಳೆದುಕೊಂಡ ನಮಗೆ, ನಮ್ಮ ಮುಂದಿನ ಪೀಳಿಗೆಗೆ ಬಾಯಿಯೂ ಇರದು, ಸಿರಿಯೂ ಇರದು. ನಮಗೆ ಹಾಲು ಕುಡಿಸುವರೂ ಇಲ್ಲ, ಅನ್ನ ಉಣಿಸುವರೂ ಇಲ್ಲ, ಬಾ ಎಂದು ಕರೆಯುವವರು ಮೊದಲೇ ಇಲ್ಲ. ಓಡಿ ಬಿದ್ದರೆ ನಮ್ಮ ಎತ್ತುವವರೂ ಇಲ್ಲ.
ಇದು ನಮಗೆ ಒದಗಿ ಬಂದಿರುವ ದುರ್ಗತಿ.

No comments:

Post a Comment

ಹಿಂದಿನ ಬರೆಹಗಳು