ಸಾಹಿತಿ, ಸಂಶೋಧಕ ಡಾ.ಡಿ.ಲಿಂಗಯ್ಯ ಅವರು ನಾಡಪ್ರಭು ಕೆಂಪೇಗೌಡರ ಕುರಿತು ಬರೆದಿರುವ ಲೇಖನ ಮಾಲಿಕೆ ಆರಂಭಿಸುತ್ತಿದ್ದೇವೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಮತ್ತು ಅವರ ವಂಶಸ್ಥರ ಇತಿಹಾಸ ರೋಚಕ. ನಾಡಪ್ರಭುಗಳ ಜನಪರ ಕಾಳಜಿ, ತ್ಯಾಗ ಮನೋಭಾವ ಸರ್ವ ಕಾಲಕ್ಕೂ ಆದರ್ಶವಾಗಿ ಉಳಿಯುವಂಥದ್ದು. ಈ ಲೇಖನ ಮಾಲಿಕೆ ಕೆಂಪೇಗೌಡರೂ ಸೇರಿದಂತೆ ಅವರ ವಂಶಸ್ಥರ ಬದುಕನ್ನು ಕಟ್ಟಿ ಕೊಡುವುದರಲ್ಲಿ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ನಮ್ಮದು.
-ಸಂ
ಡಾ.ಡಿ.ಲಿಂಗಯ್ಯ
ಕರ್ನಾಟಕದ ಸಂದರ್ಭದಲ್ಲಿ ಯಲಹಂಕ ನಾಡು ಪ್ರದೇಶದ ಆಡಳಿತವೆಂದರೆ ಗೌಡ ಪ್ರಭುಗಳ ಆಡಳಿತವೆಂದೇ ಅರ್ಥ. ಗೌಡ ಪ್ರಭುಗಳು ಎಂದರೆ ಒಕ್ಕಲಿಗಗೌಡ ಪ್ರಭುಗಳು ಎಂಬುದು ವಾಸ್ತವ ಸತ್ಯ. ಯಲಹಂಕ ನಾಡು ಸಣ್ಣಪುಟ್ಟ ಪಾಳೇಯಪಟ್ಟಲ್ಲ, ಮಹಾನಾಡು, ವಿಶಾಲ ರಾಜ್ಯ. ಯಲಹಂಕ ನಾಡನ್ನು ಐದುನೂರು ವರ್ಷಗಳಿಗೂ ಮೀರಿದ ದೀರ್ಘ ಕಾಲ ಆಳಿದ ಗೌಡ ದೊರೆಗಳು ಚಿಕ್ಕಪುಟ್ಟ ಪಾಳೇಗಾರರಲ್ಲ; ನಾಡಪ್ರಭುಗಳು, ಸಾಮಂತರಾಜರು. ಅವರ ಬದುಕು ಬವಣೆ ಸಾಧನೆ ಸಂವೇದನೆ ರೋಚಕವಾಗಿದೆ. ಸಾಮ್ರಾಜ್ಯ ಚಕ್ರವರ್ತಿಗಳ ಉಜ್ವಲ ವ್ಯಕ್ತಿತ್ವದಂತೆಯೇ ನಾಡಪ್ರಭುಗಳ ಉದಾತ್ತ ವ್ಯಕ್ತಿತ್ವವೂ ಇತಿಹಾಸ ಪುಟಗಳಲ್ಲಿ ರಾರಾಜಿಸಿದೆ. ಯಲಹಂಕ ನಾಡಪ್ರಭುಗಳನ್ನು ಕುರಿತು ಬರೆದಿರುವವರೆಲ್ಲರೂ ಪ್ರಶಂಸೆಯ ನುಡಿಗಳನ್ನಾಡಿರುವುದು ಎದ್ದುಕಾಣುತ್ತದೆ.
ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತ ಕಾಲ (೧೮.೦೪.೧೩೩೬-೧೬೬೪) ಸುವರ್ಣ ಅಧ್ಯಾಯ. ಆ ಅರಸರು ಸಾಮ್ರಾಜ್ಯದ ಸಾಮ್ರಾಟರು ಎಂಬ ಅಭಿದಾನಕ್ಕೆ ಪಾತ್ರರಾದವರು. ಶ್ರೀಕೃಷ್ಣ ದೇವರಾಯ ವಿಜಯನಗರ ಅರಸರ ಮೇರುಪುರುಷ. ಅವನ ಆಡಳಿತ ಹಲವು ಅನನ್ಯ ಸಾಧನೆಗಳ ಕೋಶ. ವಿಜಯನಗರ ಸಾಮ್ರಾಜ್ಯದ ಉಚ್ಛ್ರಾಯದ ಕಾಲವೆಂದರೆ ಶ್ರೀ ಕೃಷ್ಣದೇವರಾಯನ ಆಡಳಿತ ಕಾಲವೆಂದೇ ಹೇಳಬೇಕು. ಅವನ ಆಡಳಿತವನ್ನು ಇತಿಹಾಸಕಾರರೆಲ್ಲ ಮುಕ್ತಕಂಠದಿಂದ ಪ್ರಶಂಸಿದ್ದಾರೆ. ಅವನ ಜನೋಪಕಾರಿ ಕಾರ್ಯಗಳು ಇಂದಿಗೂ ಮನೆಮಾತಾಗಿವೆ. ಶ್ರೀ ಕೃಷ್ಣದೇವರಾಯನ ಆಡಳಿತದಲ್ಲಿ ದಕ್ಷತೆ, ಸಮೃದ್ಧಿ ತುಂಬಿತ್ತು. ಜನಸಾಮಾನ್ಯರು ನಿಶ್ಚಿಂತೆಯಿಂದ ಜೀವನ ಸಾಗಿಸುತ್ತಿದ್ದರು. ವಿಜಯನಗರದ ಅರಸರ ಆದರ್ಶ, ಆಡಳಿತ ವಿಧಾನ, ಜನೋಪಕಾರಿ ಕೆಲಸ ಕಾರ್ಯಗಳ ಹಿನ್ನೆಲೆಯಲ್ಲಿ ಅವರ ಸಾಮಂತರು, ಮಾಂಡಲಿಕರು, ನಾಡಪ್ರಭುಗಳು ಬೇರೆ ಬೇರೆ ಕಡೆಗಳಲ್ಲಿ ರಾಜ್ಯಭಾರ ಮಾಡುತ್ತಿದ್ದರು. ವಿಜಯನಗರ ಸಾಮ್ರಾಜ್ಯಕ್ಕೆ ನಿಷ್ಠರಾಗಿದ್ದರು. ದಕ್ಷರಾದ ಅಧೀನ ಮಾಂಡಲಿಕರು, ನಾಡಪ್ರಭುಗಳಿಂದ ವಿಜಯನಗರ ಸಾಮ್ರಾಜ್ಯ ಭೂಪರು ನಿರಾಳವಾಗಿ ರಾಜ್ಯಾಡಳಿತ ನಡೆಸುತ್ತಿದ್ದರು.
ವಿಜಯನಗರ ಅರಸರ ನಾಡಪ್ರಭುಗಳಲ್ಲಿ ಯಲಹಂಕ ನಾಡಪ್ರಭುಗಳದು ಗಮನಾರ್ಹ ಉಲ್ಲೇಖ. ಅವರು ವಿಜಯನಗರದ ಅರಸರಷ್ಟೇ ಪ್ರಸಿದ್ಧರಾಗಿದ್ದರು; ಜನಮಾನಸದಲ್ಲಿ ನೆಲೆಸಿದ್ದರು. ನಾಡಪ್ರಭುಗಳಾಗಿದ್ದರೂ ಸಾಮಂತರಾಗಿದ್ದರೂ ರಾಜರ ಸ್ಥಾನ ಮಾನ ಗಳಿಸಿದ್ದರು. ಕರ್ನಾಟಕದ ಹಲವು ಸಾಮಂತರ ಮನೆತನಗಳಲ್ಲಿ ಯಲಹಂಕನಾಡು ನಾಡಪ್ರಭುಗಳ ಇತಿಹಾಸ ರೋಚಕವಾದದ್ದು. ಅವರು ಕೇವಲ ಅಧೀನ ಆಡಳಿತಗಾರರಲ್ಲ ನಾಡಪ್ರಭುಗಳು, ಸಾಮಂತರಾಜರು ಎಂದೇ ಖ್ಯಾತರಾಗಿದ್ದರು.
ಕರ್ನಾಟಕವನ್ನು ಆಳಿದ ಗಂಗರು, ಹೊಯ್ಸಳರ ಕಾಲದಲ್ಲೇ ಯಲಹಂಕನಾಡು ಅಸ್ತಿತ್ವದಲ್ಲಿದ್ದಂತೆ ಕಾಣುತ್ತದೆ. ಆ ಕಾಲದಲ್ಲಿ ಯಲಹಂಕ ನಾಡನ್ನು ಆಯಾ ರಾಜರೇ ಆಳುತ್ತಿದ್ದರೋ ಅಥವಾ ಅವರ ಅಧೀನದ ಸಾಮಂತರು ಆಳುತ್ತಿದ್ದರೋ ಸ್ಪಷ್ಟವಿಲ್ಲ. ಬಹುಶಃ ಆಯಾ ರಾಜರೇ ಆಳುತ್ತಿದ್ದಿರಬೇಕು. ಹೊಯ್ಸಳರ ಕಾಲದಲ್ಲಿ ’ಮಹಾಯಲಹಂಕನಾಡು’ ಪ್ರಸಿದ್ಧವಾಗಿತ್ತು. ಅಷ್ಟು ಹೊತ್ತಿಗೆ ನಾಡಪ್ರಭುಗಳು ರಾಜರ ಪರವಾಗಿ ಆಡಳಿತ ನಡೆಸಿರುವಂತೆ ಕಾಣುತ್ತದೆ. ಕರ್ನಾಟಕದ ದಕ್ಷಿಣ ಭಾಗದ ಯಲಹಂಕನಾಡು ಪ್ರದೇಶವನ್ನು ಆಳಿದ ನಾಡಪ್ರಭುಗಳೆಲ್ಲ ಒಕ್ಕಲಿಗ ಜನಾಂಗದವರೆಂಬುದು ನಿಜ. ಆದರೆ ಅವರೆಲ್ಲ ಒಂದೇ ಮನೆತನಕ್ಕೆ ಸೇರಿದವರಲ್ಲ. ಹೊಯ್ಸಳರ ಕಾಲದಲ್ಲಿ ಒಕ್ಕಲಿಗರ ಒಂದು ಮನೆತನದವರು ಆಳಿದ್ದರೆ, ಅನಂತರ ಇನ್ನೊಂದು ಮನೆತನದವರು ಆಳಿರುವಂತೆ ಕಾಣುತ್ತದೆ. ದೇಚೀದೇವ, ಯಚಣಗೌಡ, ಬಯಿರೇಗೌಡರನ್ನು ಹೊಯ್ಸಳರ ಕಾಲದ ಯಲಹಂಕನಾಡಿನ ಪ್ರಧಾನ ನಾಡಪ್ರಭುಗಳೆನ್ನಬಹುದು. ಅವರ ಹಿಂದೆಯೂ ನಾಡಪ್ರಭುಗಳು ಆಳಿರಬಹುದು. ಆದರೆ ಅವರ ವಿವರ ಲಭ್ಯವಿಲ್ಲ.
ವಿಜಯನಗರದ ಅರಸರ ಕಾಲದಲ್ಲಿ ಯಲಹಂಕ ನಾಡಪ್ರಭುಗಳ ಕೀರ್ತಿ ಅಧಿಕವಾಯಿತು. ರಣಭೈರೇಗೌಡನಿಂದ ವಿಜಯನಗರ ಪ್ರಭುಗಳ ಕಾಲದ ನಾಡಪ್ರಭುಗಳ ವಂಶ ಪ್ರಾರಂಭವಾಗಿದೆ. ರಣಭೈರೇಗೌಡ, ಜಯಗೌಡ, ಗಿಡ್ಡಪ್ಪಗೌಡ, ನಾಚಪ್ಪಗೌಡ, ಕೆಂಪನಾಚಪ್ಪಗೌಡ ಮೊದಲಾದವರ ಮೂಲಕ ಈ ವಂಶ ಆಡಳಿತ ನಡೆಸಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಪುತ್ತೂರು, ಆವತಿ, ಯಲಹಂಕ, ಬೆಂಗಳೂರು ಪ್ರದೇಶಗಳನ್ನು ಕೇಂದ್ರವಾಗಿಟ್ಟುಕೊಂಡು ಈ ನಾಡಪ್ರಭುಗಳು ಆಡಳಿತ ನಡೆಸಿದರು. ಯಲಹಂಕ ನಾಡಪ್ರಭುಗಳು ಸನಾತನ ಅಥವಾ ಹಿಂದೂ ಧರ್ಮೀಯರು, ಒಕ್ಕಲಿಗ ಜಾತಿಯವರು, ಭೈರವನ ಆರಾಧಕರು, ವಿಜಯನಗರ ಸಾಮ್ರಾಜ್ಯದ ದಕ್ಷಿಣ ಭದ್ರಕೋಟೆಯಂತೆ ರಕ್ಷಕರಾಗಿದ್ದವರು. ಅವರು ಧರ್ಮಶ್ರದ್ಧೆ, ದೈವಭಕ್ತಿಗೆ, ಜನೋಪಕಾರಕ್ಕೆ ಹೆಸರಾಗಿದ್ದರು. ಕೆರೆಕುಂಟೆ, ಗುಡಿಗೋಪುರ, ಕೋಟೆ ಪೇಟೆ, ಹಜಾರ ಚಾವಡಿ ನಿರ್ಮಾಣದಲ್ಲಿ ಆಸಕ್ತರಾಗಿದ್ದರು. ರಣಭೈರೇಗೌಡ ಆವತಿ ನಾಡಪ್ರಭು ಎಂದೂ ಅವನ ಮಗ ಜಯಗೌಡ ಯಲಹಂಕ ಭೂಪಾಲ ಎಂದೂ ಕೆಂಪೆನಂಜೇಗೌಡ ವಿಜಯನಗರ ಸಾಮ್ರಾಟ ಶ್ರೀ ಕೃಷ್ಣದೇವರಾಯನ ಅಚ್ಚುಮೆಚ್ಚಿನ ನಾಡಪ್ರಭುವೆಂದೂ ಹೆಸರಾಗಿದ್ದರು. ಆ ವಂಶದ ಅನಂತರದವರೂ ಇತಿಹಾಸ ಪುರುಷರಾದರು.
ಇತಿಹಾಸ ಪುರುಷನ ಜನನ, ಕಾಲ, ಜನ್ಮಸ್ಥಳ
ರಣಭೈರೇಗೌಡನ ಮರಿಮಗ ಕೆಂಪನಾಚಪ್ಪಗೌಡ ಅಥವಾ ಕೆಂಪನಂಜೇಗೌಡ. ಅವನ ಹೆಂಡತಿ ಲಿಂಗಮ್ಮ (ಲಿಂಗಾಂಬೆ). ಆಕೆ ಹಳೆಯ ಬೆಂಗಳೂರು (ಕೊಡಿಗೆಹಳ್ಳಿ ಸಮೀಪದ ಊರು) ಗ್ರಾಮದವಳು. ಆ ನಾಡಪ್ರಭು ದಂಪತಿಗಳಿಗೆ ಮೂವರು ಗಂಡುಮಕ್ಕಳು: ಕೆಂಪೇಗೌಡ, ಬಸವೇಗೌಡ ಮತ್ತು ಕೆಂಪಸೋಮೇಗೌಡ. ಅವರ ಮೊದಲನೆಯ ಮಗ ಕೆಂಪೇಗೌಡ ಹುಟ್ಟಿದಾಗ ಶುಭಶಕುನಗಳಾದವು. ಆತನಲ್ಲಿ ರಾಜಲಕ್ಷಣಗಳಿವೆಯೆಂದೂ ಯಲಹಂಕ ನಾಡಪ್ರಭುಗಳಲ್ಲೇ ಅಧಿಕ ಕೀರ್ತಿಶಾಲಿಯಾಗುವನೆಂದೂ ಅಪೂರ್ವ ಸಾಧನೆಗಳಿಂದ ಇತಿಹಾಸ ಪುರುಷನಾಗುವನೆಂದೂ ಮಗುವಿನ ಜನ್ಮಕುಂಡಲಿಯನ್ನು ಪರಿಶೀಲಿಸಿದ ಪುರೋಹಿತರೂ ಜ್ಯೋತಿಷಿಗಳೂ ಕಣಿ ಹೇಳಿದರು. ಕೆಂಪನಂಜೇಗೌಡ ದಂಪತಿಗಳಿಗೆ ಅತ್ಯಾನಂದವಾಯಿತು. ಮಗುವನ್ನು ಮುಚ್ಚಟೆಯಿಂದ ಸಾಕಿಸಲಹಿದರು. ಆ ಮಗುವೇ ಮುಂದೆ ಬೆಂಗಳೂರು ಕೆಂಪೇಗೌಡ ಎಂದು ಸುಪ್ರಸಿದ್ಧನಾದ ಸಾಮಂತರಾಜ.
ಹಿರಿಯ ಕೆಂಪೇಗೌಡ ಅಥವಾ ಒಂದನೇ ಕೆಂಪೇಗೌಡ ಸುಮಾರು ೧೫೧೦ರಲ್ಲಿ ರಾಜಧಾನಿ ಯಲಹಂಕದಲ್ಲಿ ಜನಿಸಿದನು. ಶುಭಶಕುನದ ಮಗುವಿನ ಜನನ ಯಲಹಂಕ ನಾಡಿಗೇ ಸಂತೋಷವನ್ನು ಉಂಟುಮಾಡಿತು. ಮಗುವಿನ ಆಯಸ್ಸು ಯಶಸ್ಸು ವೃದ್ಧಿಸುವ ಸಲುವಾಗಿ ಮಹಾಜನತೆಯ ಹಾಗೂ ದೇವಾನುದೇವತೆಗಳ ಆಶೀರ್ವಾದ ಹಾಗೂ ಅನುಗ್ರಹ ಪಡೆಯಲು ದಾನ ಧರ್ಮಗಳನ್ನೂ ಪೂಜೆ ಪುರಸ್ಕಾರಗಳನ್ನೂ ಮಾಡಲಾಯಿತು. ಕುಲದೇವತೆ ಕೆಂಪಮ್ಮ ಮತ್ತು ಭೈರವನ ಅನುಗ್ರಹದಿಂದ ಜನಿಸಿದ ಮಗು, ಶಿವ ಶಿವೆಯರ ಕಳೆ ಬೆಳಗುವಂತೆ, ತಾಯಿ ತಂದೆಯರ ಅಕ್ಷನಿಧಿಯಂತೆ ಬೆಳೆಯಿತು. ತಾಯಿ ತಂದೆಯರು, ಬಂಧುಬಳಗದವರು ಮಗುವನ್ನು ಕೆಂಪ, ಕೆಂಪಯ್ಯ, ಕೆಂಪಣ್ಣ ಎಂದು ಮುದ್ದಿನಿಂದ ಕರೆದು ಮುದಗೊಂಡರು. ಪ್ರಜೆಗಳು ಚಿಕ್ಕರಾಯ,. ಕೆಂಪರಾಯ ಎಂದು ಕರೆದು ಗೌರವಿಸಿದರು. ತಾಯಿ ತಂದೆಯರು ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟು ಪೋಷಿಸಿದರು; ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡರು. ಮಗುವಿನ ಮನಸ್ಸಿನಲ್ಲಿ ದೈವಭಕ್ತಿಯನ್ನು ನಾಟಿಮಾಡಿದರು; ತಮ್ಮ ವಂಶಸ್ಥರ ಪುಣ್ಯಕಾರ್ಯಗಳನ್ನು ಬಿತ್ತಿದರು; ರಾಮಾಯಣ ಮಹಾಭಾರತಾದಿ ಕಥೆಗಳನ್ನು ನೆಲೆಗೊಳಿಸಿದರು. ಕುಲವೆತ್ತಿ ಕೊಂಡಾಡುವ ಹೆಳವರು ಹೇಳುವ ಪೂರ್ವಜರ ಸಾಹಸ ಕಥೆಗಳನ್ನೂ ಮಹಾಸಾಧನೆಗಳನ್ನೂ ಬಾಲಕ ಕೆಂಪೇಗೌಡ ಕುತೂಹಲದಿಂದ ಕೇಳಿದನು. ಅರಮನೆಯಲ್ಲಿ ಓರಗೆಯ ಹುಡುಗರೊಡನೆ ಆಟಪಾಟ ವಿನೋದಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದನು. ಬೆಂಗಾವಲಿನವರೊಡನೆ ಅರಮನೆಯ ಹೊರಗೂ ಹೋಗಿ ಬರುತ್ತಿದ್ದನು.
ಹಿರಿಯ ಕೆಂಪೇಗೌಡ ಹುಟ್ಟಿದ ಕಾಲದ ಬಗೆಗೆ ಸ್ಪಷ್ಟ ಅಭಿಮತವಿಲ್ಲ. ಸಾಮಾನ್ಯವಾಗಿ ಇತಿಹಾಸಕಾರರು ಚಾರಿತ್ರಿಕ ವ್ಯಕ್ತಿಯ ಆಡಳಿತಾವಧಿಯನ್ನು ಗಮನಿಸುತ್ತಾರೆಯೇ ಹೊರತು ಅವನ ಜೀವಿತ ಕಾಲವನ್ನು ಪರಿಗಣಿಸುವುದಿಲ್ಲ. ಕೆಂಪೇಗೌಡನ ವಿಷಯದಲ್ಲೂ ಹಾಗೇ ಆಗಿದೆ. ಆಡಳಿತಾವಧಿಯಲ್ಲೂ ಏಕಾಭಿಪ್ರಾಯವಿಲ್ಲ. ಅವನ ಆಡಳಿತ ಪ್ರಾರಂಭದ ಹಾಗೂ ಜೀವಿತಾವಧಿಯ ಕೊನೆಯ ಶಾಸನಗಳನ್ನು ಗಂಭೀರವಾಗಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಹಾಗಾಗಿ ಚಾರಿತ್ರಿಕ ಘಟನೆಗಳ ಪ್ರಸ್ತಾಪದಲ್ಲಿ ಏರುಪೇರಾಗಿದೆ. ಅದನ್ನು ಆದಷ್ಟು ಸುಧಾರಿಸಲು ಸಾಧ್ಯವಿದೆ.
ಕೆಂಪನಂಜೇಗೌಡನ ಮಗ ಕೆಂಪೇಗೌಡ ಹುಟ್ಟಿದ್ದು ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯ ಪಟ್ಟಾಭಿಷೇಕಕ್ಕೆ ಬಂದ ಮಾರನೆಯ ವರ್ಷ (೧೫೧೦). ಹಂಪೆಯಲ್ಲಿ ಪ್ರಥಮ ಬಾರಿಗೆ ವಿಜಯದಶಮಿ ಉತ್ಸವ ಪ್ರಾರಂಭವಾದದ್ದು ೧೫೧೫ರಲ್ಲಿ. ತಂದೆಯ ಜೊತೆಯಲ್ಲಿ ಮೊದಲ ವಿಜಯದಶಮಿ ಉತ್ಸವಕ್ಕೆ ಹೋದಾಗ ಬಾಲಕ ಕೆಂಪೇಗೌಡನಿಗೆ ಐದು ವರ್ಷ. ಬಹುತೇಕ ಸಾಹಿತ್ಯ ಚರಿತ್ರೆಕಾರರು ಈ ಅವಧಿಯನ್ನು ನಮೂದಿಸಿದ್ದಾರೆ. ಹಾಗಾಗಿ ಒಂದನೆಯ ಕೆಂಪೇಗೌಡ ಹುಟ್ಟಿದ್ದು ಸುಮಾರು ೧೫೧೦ರಲ್ಲಿ ಎಂದು ನಿರ್ಧರಿಸಲಾಗಿದೆ. ಕರ್ಲಮಂಗಲಂ ಶ್ರೀಕಂಠಯ್ಯ ಅವರ ಊಹೆಯೂ ಹೆಚ್ಚು ಕಡಿಮೆ ಈ ಅವಧಿಗೆ ಹೊಂದಿಕೊಳ್ಳುತ್ತದೆ. ಈ ಇಸವಿಯನ್ನೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಂಪೇಗೌಡನ ಜಯಂತಿ ಉತ್ಸವಕ್ಕೆ ಬಳಸುತ್ತಾ ಬಂದಿದೆ. ಆಯಾ ವರ್ಷದ ಬೆಂಗಳೂರು ಕರಗೋತ್ಸವದಂದು ಕೆಂಪೇಗೌಡ ಜಯಂತ್ಯುತ್ಸವ ಆಚರಣೆಯಾಗುತ್ತಿದೆ.
ಇತಿಹಾಸ ಪುರುಷ ಹಿರಿಮೆ ಕೆಂಪೆಗೌಡ ಹುಟ್ಟಿದ್ದು ಅಂದಿನ ರಾಜಧಾನಿ ಯಲಹಂಕದಲ್ಲಿ ಎಂಬುದು ನಿರ್ವಿವಾದ ಕಟುಸತ್ಯ. ಆದರೂ ಕೆಂಪೇಗೌಡ ಹುಟ್ಟಿದ್ದು ತಾಯಿಯ ತೌರುಮನೆಯಲ್ಲಿ ಎಂದು ಒಬ್ಬಿಬ್ಬರು ಹುಡುಕಾಟ ನಡೆಸಿರುವುದೂ ಉಂಟು. ಒಕ್ಕಲಿಗರಲ್ಲಿ ಚೊಚ್ಚಲ ಹೆರಿಗೆ ಹೆಣ್ಣಿನ ತೌರು ಮನೆಯಲ್ಲಿ ನಡೆಯುವ ಪದ್ಧತಿ ಇತ್ತು. ಈಗಲೂ ಅಲ್ಲಲ್ಲಿ ಇದೆ. ಸಾಮಾನ್ಯ ಸಂಸಾರಿಗರ ವಿಷಯದಲ್ಲಿ ಇದು ಸರಿಯಿರಬಹುದು. ಆದರೆ ರಾಜನ ಮಗನ ಹೆರಿಗೆಯಲ್ಲಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು, ಸಂರಕ್ಷಣೆಯ ಅಂಶಗಳನ್ನು ಗಮನಿಸಬೇಕಾಗುತ್ತದೆ. ರಾಜನ ಗಂಡು ಸಂತಾನದ ಬಗೆಗೆ ಶತೃಗಳ ದುಷ್ಟ ದೃಷ್ಟಿ ಸದಾ ಹಿಂಬಾಲಿಸುತ್ತಿತ್ತು. ಅಂಥ ಕಾಲ ಅದು. ಅಂಥ ಸಂದರ್ಭದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗಿತ್ತು. ಸಕಲ ಸೌಭಾಗ್ಯಗಳಿರುವ, ಸಕಲ ರಕ್ಷಣೆಯ ಭರವಸೆಯಿರುವ ಸ್ಥಳದಲ್ಲಿ ಹೆರಿಗೆ ಮಾಡಿಸಿ ರಾಜ್ಯಕ್ಕೆ ಉತ್ತರಾಧಿಕಾರಿಯಾಗುವ ಗಂಡು ಮಗುವನ್ನು ಪೋಷಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ರಾಜಧಾನಿ ಯಲಹಂಕ ಸುರಕ್ಷಿತ ಸ್ಥಳವಾಗಿತ್ತು.
ಕೆಂಪನಂಜೇಗೌಡನ ಹೆಂಡತಿ, ಕೆಂಪೇಗೌಡನ ತಾಯಿ ಲಿಂಗಾಂಬೆ ಹಳೆ ಬೆಂಗಳೂರಿನವಳು. ಅದು ಹೆರಿಗೆಗೆ ಸುರಕ್ಷಿತ ಹಾಗೂ ಸೂಕ್ತ ಸ್ಥಳವೆಂದು ನಂಬುವಂತಿಲ್ಲ. ಅಷ್ಟಕ್ಕೂ ಅದು ಸಕಲ ಸೌಲಭ್ಯಗಳ ದೊಡ್ಡ ನಗರವಾಗಿರಲಿಲ್ಲ. ಹೇಳಿಕೇಳಿ ಅದು ಹಳ್ಳಿಯಾಗಿತ್ತು. ಅಲ್ಲಿ ಹೆರಿಗೆಯಾಗಿರುವ ಸಂಭವವಿಲ್ಲ.
ಹಳೆ ಬೆಂಗಳೂರು ಈಗಿನ ಕೊಡಿಗೇನಹಳ್ಳಿಯ ಪ್ರದೇಶ ಎಂದು ಹೇಳುತ್ತಾರೆ. ಈಗ ಅಲ್ಲಿ ಹಳೆಯ ಬೆಂಗಳೂರಿನ ಯಾವ ಅವಶೇಷಗಳೂ ಇಲ್ಲ. ಹೆಸರೇ ಹೇಳುವಂತೆ ಕೊಡುಗೆಹಳ್ಳಿ. ಸುಮಾರು ನೂರು ವರ್ಷಗಳ ಹಿಂದೆ ಬಚ್ಚೇಗೌಡ, ಭೈರೇಗೌಡ ಎಂಬ ಸೋದರರು ಮೈಸೂರು ಮಹಾರಾಜರಿಗೆ ಯಾವುದೋ ಸಹಾಯ ಮಾಡಿ, ಅವರಿಂದ ಪಡೆದ ಭೂಮಿಯಲ್ಲಿ ವಸತಿ ನೆಲೆ ಸ್ಥಾಪಿಸಿದ ಊರು. ಆ ಗೌಡರು ನೇರವಾಗಿ ರಾಜ ಕೆಂಪೇಗೌಡನ ವಂಶಸ್ಥರಲ್ಲ. ಲಿಂಗಾಂಬೆ ಆ ಗೌಡ ಸೋದರರ ಮನೆಗೆ ಸೇರಿದವಳಲ್ಲ. ಹಳೆ ಬೆಂಗಳೂರು ದಂಡು ಪ್ರದೇಶದ ಹತ್ತಿರದ ಊರಾದುದರಿಂದ ದಂಡು ಕೋಡಿಗೆ ಹಳ್ಳಿ ಎನ್ನುತ್ತಾರೆ. ಆ ಹಳ್ಳಿಯೇ ಕ್ರಮೇಣ ’ಹಳೆಕೋಟೆಯ ಕೋಡಿಗೆ ಹಳ್ಳಿ, ’ಕೊಡಿಗೆ ಹಳ್ಳಿ-ವಿರೂಪಾಕ್ಷಪುರ’ವೆಂದು ಎರಡು ಭಾಗವಾಗಿದೆ. ಅಲ್ಲೆಲ್ಲೂ ’ಹಳೆಯ ಬೆಂಗಳೂರು’ ಎಂಬ ನಾಮಫಲಕವಿಲ್ಲ.
ಅಲ್ಲಿ ಹಳೆಕೋಟೆ ಕೊಡಿಗೆಹಳ್ಳಿ, ಹಳೆಕೋಟೆ ಕೊಡಿಗೆಹಳ್ಳಿ ಅಶ್ವತ್ಥಕಟ್ಟೆ, ಹಳೆಕೋಟೆ ಪ್ರಸನ್ನ ಶ್ರೀ ವೀರ ಆಂಜನೇಯಸ್ವಾಮಿ ದೇವಸ್ಥಾನ ಎಂಬ ಹೆಸರುಗಳಿವೆ. ಅಲ್ಲಿ ’ಕೋಟೆ’ ಎಂದರೆ ಹಳೆ ಬೆಂಗಳೂರಿನ ಕೋಟೆಯಲ್ಲ. ಶ್ರೀಮಂತರ ಮನೆ ದೊಡ್ಡದಾಗಿದ್ದು, ಎತ್ತರವಾದ ಬಾಗಿಲಿದ್ದರೆ ಅದಕ್ಕೆ ’ಕೋಟೆ’ ಎಂದು ಕರೆಯುವುದು ರೂಢಿಯಲ್ಲಿರುವಂತೆ ಕಾಣುತ್ತದೆ. ಉತ್ತರ ಕರ್ನಾಟಕದಲ್ಲಿ ದೇಸಾಯರ ’ವಾಡೆ’ ಇದೆಯಲ್ಲ ಹಾಗೆ. ಕೋಟೆಕೊತ್ತಲ ನಗರ ಏನೂ ಇಲ್ಲ. ಬೆಂಗಳೂರು ಜಿಲ್ಲೆಯ ಅನೇಕ ಕಡೆ ದೊಡ್ಡ ಮನೆಗಳಿಗೆ ಕೋಟೆಯೆಂಬ ಹೆಸರಿದೆ. ಉದಾಹರಣೆಗೆ ಸಾಹಿತಿ ಸಮೇತನಹಳ್ಳಿ ರಾಮರಾಯರ ಮನೆಯ ಹೆಸರು ’ಕೋಟೆ ಮನೆ’. ಹಾಗಾಗಿ ಸುಮಾರು ಒಂದು ನೂರು ವರ್ಷ ಇತಿಹಾಸವಿರುವ ಕೊಡಿಗೆಹಳ್ಳಿಯಲ್ಲಿ ಐದು ನೂರು ವರ್ಷ ಹಿಂದಿನ ಹಳೆಯ ಬೆಂಗಳೂರಿನ ಕುರುಹು ಹುಡುಕುವುದು ವ್ಯರ್ಥ. ಅಷ್ಟಕ್ಕೂ ಕೊಡಿಗೆಹಳ್ಳಿಯ ಸಮೀಪದಲ್ಲಿ ಹಳೆಯ ಬೆಂಗಳೂರು ಇತ್ತೆಂದು ಹೇಳುತ್ತಾರೆಯೇ ಹೊರತು ಈಗಿನ ಕೊಡಿಗೆಹಳ್ಳಿಯೇ ಹಳೆಯ ಬೆಂಗಳೂರಲ್ಲ.
ಈಗಿನ ಕೊಡಿಗೆ ಹಳ್ಳಿಯ ಹಳೆಯ ಬಾವಿಯೊಂದರ ಬಳಿಯಲ್ಲಿ ತರಕಾರಿ ಬಳ್ಳಿಯನ್ನು ಹಬ್ಬಿಸುವುದಕ್ಕೆ ಚಪ್ಪರ ಹಾಕಲು ನೆಟ್ಟಿರುವ ಉದ್ದನೆಯ ಕಲ್ಲು ಕಂಬಗಳನ್ನು ನೋಡಿ, ಅದು ಕೆಂಪೇಗೌಡ ಹುಟ್ಟಿದ ಸ್ಥಳದ ಅವಶೇಷ ಎನ್ನುವುದು ಸರಿಯಲ್ಲ. ಅದೇ ಬಾವಿಯ ಹತ್ತಿರವಿರುವ ಐವತ್ತು ಅರವತ್ತು ವರ್ಷದ ಸಿಮೆಂಟ್ ಸಮಾಧಿಗಳನ್ನು ನೋಡಿ, ಅವುಗಳಲ್ಲಿ ಒಂದು ಕೆಂಪೇಗೌಡನ ಸಮಾಧಿಯೆಂದೂ ಅದರಲ್ಲಿ ಕೆಂಪೇಗೌಡನ ಬಾಲ್ಯದ ಆಟದ ಸಾಮಾನುಗಳು, ಅವನ ಖಡ್ಗ, ವೇಷಭೂಷಣಗಳಿವೆ ಎಂದು ಊಹಿಸುವುದೂ ಸಂಶೋಧನಾ ದೃಷ್ಟಿಯಾಗುವುದಿಲ್ಲ.
ಹಿರಿಯ ಕೆಂಪೇಗೌಡನ ಜನ್ಮಸ್ಥಳವನ್ನು ಹಳೆಯ ಬೆಂಗಳೂರಿನಲ್ಲಿ ಅಥವಾ ಕೊಡಿಗೇನಹಳ್ಳಿಯಲ್ಲಿ ಹುಡುಕುವುದಕ್ಕಿಂತ ರಾಜಧಾನಿಯಾಗಿದ್ದ ಯಲಹಂಕದಲ್ಲಿ ಹುಡುಕಿದರೆ ಅಷ್ಟೋ ಇಷ್ಟೋ ಅವಶೇಷ ಸಿಕ್ಕಿದರೂ ಸಿಕ್ಕಬಹುದು. ಏಕೆಂದರೆ, ಶ್ರೀರಾಮಚಂದ್ರ ಹುಟ್ಟಿದ್ದು ಅಯೋಧ್ಯೆಯಲ್ಲಿ, ಕೌಸಲ್ಯೆಯ ತೌರುಮನೆಯಲ್ಲಲ್ಲ. ಹಾಗೆಯೇ ಕೆಂಪೇಗೌಡ ಹುಟ್ಟಿದ್ದು ರಾಜಧಾನಿ ಯಲಹಂಕದಲ್ಲಿ, ಲಿಂಗಾಂಬೆಯ ತೌರುಮನೆಯಲ್ಲಲ್ಲ.
ಕೆಂಪೇಗೌಡನ ಬಾಲ್ಯ, ವಿದ್ಯಾಭ್ಯಾಸ
ಚಿಕ್ಕರಾಯ ಬಾಲ್ಯದಲ್ಲಿ ಚುರುಕಾಗಿದ್ದನು. ಅರಮನೆಯ ಉದ್ಯಾನದಲ್ಲಿ ಲವಲವಿಕೆಯಿಂದ ಸುತ್ತಾಡುತ್ತಿದ್ದನು, ಆಟವಾಡುತ್ತಿದ್ದನು. ಪಶುಪಕ್ಷಿ ಗಿಡ ಮರಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದನು. ಅವನ ಜೊತೆಯಲ್ಲಿ ಆಟವಾಡುವುದಕ್ಕೆ ಆರಿಸಿದ ಮಕ್ಕಳನ್ನು ನೇಮಿಸಿದ್ದರು. ಆಟಪಾಠ ಕುಣಿತ ನೆಗೆತಗಳಲ್ಲಿ ಕಾಲಕಳೆಯುತ್ತಿತ್ತು. ಒಮ್ಮೊಮ್ಮೆ ಓರಗೆಯವರೊಡನೆ ಅರಮನೆಯ ಹೊರಗಿನ ತೋಪಿಗೂ ಹೋಗುತ್ತಿದ್ದನು. ಅಲ್ಲಿಗೆ ಇತರ ಬಾಲಕರೂ ಸೇರಿಕೊಳ್ಳುತ್ತಿದ್ದರು. ಮರಕೋತಿಯಾಟ, ಕಣ್ಣುಮುಚ್ಚಾಲೆಯಾಟ, ಗೋಲಿಯಾಟ, ಕುದುರೆಯಾಟ, ಚೆಂಡಾಟ ಮೊದಲಾದ ಆಟಗಳನ್ನು ಆಡುತ್ತಿದ್ದರು. ಆಟದ ನಡುವೆ ಮಕ್ಕಳಲ್ಲಿ ಭಿನ್ನಾಭಿಪ್ರಾಯ ಬಂದು ಜಗಳವಾದರೆ, ಮುಖಂಡತ್ವ ವಹಿಸಿ ಜಗಳ ಬಿಡಿಸುವುದು ಚಿಕ್ಕರಾಯನಿಗೆ ಖುಷಿ ಎನಿಸುತ್ತಿತ್ತು. ಅವನ ನ್ಯಾಯ ತೀರ್ಮಾನಕ್ಕೆ ಉಳಿದವರು ಒಪ್ಪಿಕೊಳ್ಳುತ್ತಿದ್ದರು. ಬಾಲ್ಯದಲ್ಲೇ ಮುಖಂಡನ ಲಕ್ಷಣಗಳು ಕಾಣಿಸುತ್ತಿದ್ದವು.
ಕೆಂಪರಾಯ ರೋಗಿಗಳನ್ನು ಕಂಡರೆ ಅನುಕಂಪ ತೋರಿಸುತ್ತಿದ್ದನು. ವೃದ್ಧರಿಗೆ ಗೌರವ ನೀಡುತ್ತಿದ್ದನು. ಕಾಲಕಳೆದಂತೆ ಕುದುರೆ ಸವಾರಿ, ಗರಡಿ ಮನೆಯ ಕಸರತ್ತಿನಲ್ಲಿ ಆಸಕ್ತಿ ತಾಳಿದನು. ಹೊರಗಡೆ ಹೋದಾಗ ಹೊಲಗದ್ದೆ ತೋಟಗಳಲ್ಲಿ ಕೃಷಿಕರು ಬೇಸಾಯ ಮಾಡುವುದನ್ನು ಕುತೂಹಲದಿಂದ ನೋಡುತ್ತಿದ್ದನು. ಅನುಮಾನಗಳೆದ್ದಾಗ ಜೊತೆಯಲ್ಲಿರುವ ಹಿರಿಯರನ್ನು ಪ್ರಶ್ನಿಸಿ ಪರಿಹಾರ ಕಂಡುಕೊಳ್ಳುತ್ತಿದ್ದನು. ಚಿಕ್ಕರಾಯ ತಾಯಿ ತಂದೆಯರಿಗೆ, ಅರಮನೆಯವರಿಗೆ, ಅಚ್ಚುಮೆಚ್ಚಿನ ಮುದ್ದು ಬಾಲಕನಾಗಿ ಬೆಳೆದನು. ಚಿಕ್ಕರಾಯನ ತಾಯಿ ಲಿಂಗಾಂಬೆ ಸ್ವಾರಸ್ಯವಾಗಿ ನಿರೂಪಿಸುತ್ತಿದ್ದ ವೀರ ಶೂರ ಸಾಹಸ ತ್ಯಾಗಶೀಲ, ದೈವಭಕ್ತಿ, ವೀರ ಹನುಮಂತ, ವೀರ ಅಭಿಮನ್ಯು, ಭಕ್ತಧ್ರುವ, ಲವಕುಶ ಮೊದಲಾದ ಕಥೆಗಳು ಅವನಿಗೆ ಪ್ರಿಯವಾಗುತ್ತಿದ್ದವು. ಸತ್ಯ, ನ್ಯಾಯ, ಧರ್ಮದ ಹೋರಾಟದ ಕಥೆಗಳೆಂದರೆ ಉತ್ಸಾಹ ತೋರುತ್ತಿದ್ದನು.
ಕೆಂಪರಾಯನಿಗೆ ಐದು ವರ್ಷ ತುಂಬುತ್ತಿದ್ದಂತೆ ಐಗಂಡಪುರದ ಮಾಧವಭಟ್ಟರ ಗುರುಕುಲಾಶ್ರಮಕ್ಕೆ ಸೇರಿಸಿದರು. ಮಾಧವ ಭಟ್ಟರು ಅರಮನೆಯ ಪುರೋಹಿತರೂ ಹಿತಚಿಂತಕರೂ ಆಗಿದ್ದರು. ಗುರುಕುಲಾಶ್ರಮದಲ್ಲಿ ಬಾಲಕ ಚಿಕ್ಕರಾಯ ಸಾಮಾನ್ಯ ವಿದ್ಯಾರ್ಥಿಗಳ ಜೊತೆ ಕುಳಿತು ವಿದ್ಯಾಭ್ಯಾಸ ಮಾಡಿದನು. ಎಲ್ಲರಂತೆ ಗುರುಸೇವೆ, ಆಶ್ರಮ ಸೇವೆ ಮಾಡಿದನು. ಅವನಿಗೆ ರಾಜೋಚಿತವಾದ ಶಿಕ್ಷಣ ದೊರೆಯಿತು. ಸಾಮಾನ್ಯ ಶಿಕ್ಷಣದ ಜೊತೆಗೆ ಕ್ಷತ್ರಿಯರಿಗೆ, ನಾಡಪ್ರಭುಗಳಿಗೆ ಅಗತ್ಯವಾದ ದೊಣ್ಣೆ ವರಸೆ, ಕತ್ತಿವರಸೆ, ಮಲ್ಲಯುದ್ಧ, ಕುಸ್ತಿ ಕಸರತ್ತು, ಯುದ್ಧತಂತ್ರ, ಆಡಳಿತ, ರಾಜನೀತಿ, ಆರ್ಥಿಕ ತಿಳಿವಳಿಕೆ ಮೊದಲಾದ ವಿಷಯಗಳ ಬಗೆಗೆ ಅರಿವು ಮೂಡಿಸಲಾಯಿತು. ಅಲ್ಲಿ ಕಾಡುಮೇಡು, ಕೆರೆಕುಂಟೆ, ಪ್ರಾಣಿಪಕ್ಷಿ ಮೊದಲಾದವುಗಳ ಪರಿಚಯವಾಯಿತು. ಗುರುಕುಲಾಶ್ರಮದಲ್ಲಿ ವೀರಣ್ಣಗೌಡನೆಂಬ ಆಪ್ತ ಸ್ನೇಹಿತ ಲಭ್ಯವಾದನು. ಅವನೊಬ್ಬ ರೈತನ ಮಗ. ವೀರಣ್ಣಗೌಡನಿಗೆ ಕೆಂಪೇಗೌಡನೆಂದರೆ ಅಚ್ಚುಮೆಚ್ಚು. ಇಬ್ಬರೂ ಆಪ್ತಸ್ನೇಹಿತರಾದರು. ಕಷ್ಟ ಸುಖಗಳಲ್ಲಿ ಪರಸ್ಪರ ಭಾಗಿಯಾಗುತ್ತಿದ್ದರು.
ಗುರುಕುಲಾಶ್ರಮದಲ್ಲಿ ಶಿಕ್ಷಣಾರ್ಥಿಗಳ ನಡುವೆ ಆಗಾಗ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅವುಗಳಲ್ಲಿ ಚಿಕ್ಕರಾಯ ಮತ್ತು ವೀರಣ್ಣಗೌಡ ಸಾಮಾನ್ಯವಾಗಿ ಜಯಗಳಿಸುತ್ತಿದ್ದರು. ಮಲ್ಲಕಾಳಗ, ಕತ್ತಿವರಸೆ, ಕುದುರೆ ಸವಾರಿಯಲ್ಲಿ ಕೆಂಪರಾಯ ಸದಾ ಮುಂದಾಗಿರುತ್ತಿದ್ದನು. ಗುರುಕುಲಾಶ್ರಮದಲ್ಲಿ ಶಿಕ್ಷಣ ಮುಗಿಯುವ ಹೊತ್ತಿಗೆ ಚಿಕ್ಕರಾಯನಲ್ಲಿ ಸಹಜವಾದ ಹುಡುಗಾಟ ಕಡಿಮೆಯಾಗಿ ಜವಾಬ್ದಾರಿ ಗಾಂಭೀರ್ಯ ಕಾಣಿಸಿಕೊಂಡಿತು.
ಕೆಂಪೇಗೌಡ ವಿದ್ಯಾಭ್ಯಾಸದ ಕಾಲದಲ್ಲಿ ಸಾಹಸ ಪ್ರವೃತ್ತಿ, ಲೋಕೋಪಕಾರಿ ಗುಣಗಳನ್ನು ಪ್ರದರ್ಶಿಸಿದನು. ಒಮ್ಮೆ ಆತನ ವಿದ್ಯಾಗುರುಗಳ ಮನೆಯಲ್ಲಿದ್ದ ಹಸುಗಳನ್ನು ಕಳ್ಳರು ಕದ್ದೊಯ್ದರು. ವಿಷಯ ತಿಳಿದ ಕೆಂಪೇಗೌಡ ಸ್ನೇಹಿತರೊಡನೆ, ವೀರಣ್ಣ ಮತ್ತಿತರ ಸಹಪಾಠಿಗಳೊಡನೆ ಕಳ್ಳರನ್ನು ಬೆನ್ನುಹತ್ತಿ ಹಿಡಿದು ಅವರೊಡನೆ ವೀರಾವೇಶದಿಂದ ಹೋರಾಡಿ ಕಳ್ಳರನ್ನು ಸೋಲಿಸಿ ಪಲಾಯನಗೊಳಿಸಿ ಹಸುಗಳನ್ನು ಸುರಕ್ಷಿತವಾಗಿ ಹಿಡಿದುಕೊಂಡು ಬಂದು ಗುರುಮನೆಗೆ ಸೇರಿಸಿದ. ಯುವಕ ಶಿಷ್ಯನ ಸಾಹಸ ಪ್ರವೃತ್ತಿಗೆ ಗುರು ಮನಸಾರೆ ಮೆಚ್ಚುಗೆ ಸೂಚಿಸಿದನು.
ಕೆಂಪೇಗೌಡ ವಿದ್ಯಾಭ್ಯಾಸ ಮುಗಿದ ಮೇಲೆ ಗುರುವಿನ ಅಣತಿಯಂತೆ ದೇಶಸಂಚಾರ ಮಾಡಿ ಅಪಾರವಾದ ಲೋಕಾನುಭವವನ್ನು ಪಡೆದ. ಜನರ ಜೀವನಸ್ಥಿತಿಯನ್ನು ಸ್ವತಃ ಕಣ್ಣಾರೆ ಕಂಡ. ಅದರಿಂದ ಜೀವವೈವಿಧ್ಯವನ್ನು ಗುರುತಿಸಿದ.
ವಿಜಯನಗರದ ದರ್ಶನ
ಪ್ರ.ವ.೧೫೧೫ರಲ್ಲಿ ಶ್ರೀ ಕೃಷ್ಣದೇವರಾಯ ಪ್ರಥಮ ಬಾರಿಗೆ ವಿಜಯದಶಮಿ ಉತ್ಸವವನ್ನು ಏರ್ಪಡಿಸಿದ್ದ. ಆಗ ತಂದೆ ಕೆಂಪನಂಜೇಗೌಡನ ಜೊತೆಯಲ್ಲಿ ಕೆಂಪೇಗೌಡನೂ ಹೋಗಿದ್ದ. ಆಗ ಅವನಿಗೆ ಐದು ವರ್ಷ ವಯಸ್ಸು. ಚಿಕ್ಕ ವಯಸ್ಸಿಗೆ ವಿಜಯದಶಮಿ ಉತ್ಸವವನ್ನು ಕಣ್ಣಾರೆ ಕಂಡ. ಅನೇಕ ಕನಸುಗಳನ್ನು ತುಂಬಿಕೊಂಡ. ಆಳಿದರೆ ಸಾಮ್ರಾಜ್ಯ ಚಕ್ರವರ್ತಿ ಶ್ರೀಕೃಷ್ಣದೇವರಾಯನ ಹಾಗೆ ಆಳಬೇಕು; ರಾಜ್ಯ ಕಟ್ಟಿದರೆ ವಿಜಯನಗರ ಸಾಮ್ರಾಜ್ಯದಂತೆ ರಾಜ್ಯ ಕಟ್ಟಬೇಕೆಂದು ನಿರ್ಧರಿಸಿಕೊಂಡ. ನಾಡಪ್ರಭುವಂಶದ ಹುಟ್ಟುಗುಣ ಪುಟಿಯತೊಡಗಿತು. ಅನಂತರವೂ ಕೆಂಪೇಗೌಡ ಎರಡೂ ಮೂರು ಸಾರಿ ತಂದೆಯೊಡನೆ ವಿಜಯನಗರದ ವಿಜಯದಶಮಿ ಉತ್ಸವಕ್ಕೆ ಹೋಗಿದ್ದ.
ವಿಜಯನಗರದ ಮಹಾನವಮಿ ದಿಬ್ಬದಲ್ಲಿ ವಿಜಯದಶಮಿ ಪ್ರಯುಕ್ತ ನಾನಾ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕತ್ತಿವರಸೆ, ದೊಣ್ಣೆವರಸೆ, ಕುದುರೆ ಸವಾರಿ ಮೊದಲಾದವು ಅವುಗಳಲ್ಲಿ ಸೇರಿದ್ದವು. ಯುವಕ ಕೆಂಪೇಗೌಡ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯಶಾಲಿಯಾಗಿ ನೆರೆದಿದ್ದ ಜನಸ್ತೋಮದ ಹೊಗಳಿಕೆಗೆ ಪಾತ್ರನಾದ.
ಇನ್ನೊಮ್ಮೆ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಶ್ರೀಕೃಷ್ಣದೇವರಾಯನ ಒಡ್ಡೋಲಗದಲ್ಲಿ ಮಲ್ಲಯುದ್ಧಕ್ಕೆ ಅಣಿಗೊಳಿಸಲಾಗಿತ್ತು. ಸಾಕ್ಷಾತ್ ಶ್ರೀ ಕೃಷ್ಣದೇವರಾಯನ ಅಳಿಯ ತಿರುಮಲರಾಯ ಮತ್ತು ಕೆಂಪೇಗೌಡ ಸ್ಪರ್ಧಾಳುಗಳು, ಚಕ್ರವರ್ತಿ, ಪ್ರಧಾನಿ ಮೊದಲಾದ ಪ್ರಮುಖರ ಸಮಕ್ಷಮದಲ್ಲಿ ನಡೆದ ಮಲ್ಲಯುದ್ಧದಲ್ಲಿ ಕೆಂಪೇಗೌಡ ದಿಟ್ಟತನದಿಂದ ಹೋರಾಡಿ, ನಾನಾ ಪಟ್ಟುಗಳನ್ನು ಪ್ರದರ್ಶಿಸಿ, ತಿರುಮಲರಾಯನನ್ನು ಸೋಲಿಸಿದ. ಶ್ರೀಕೃಷ್ಣದೇವರಾಯ ಸಂತೋಷಗೊಂಡು, ಯುವಸಾಹಸಿ ಕೆಂಪೇಗೌಡನನ್ನು ಪ್ರಶಂಸಿಸಿ ಸನ್ಮಾನಿಸಿದ. ಅದು ಕೆಂಪೇಗೌಡನ ಜೀವನದಲ್ಲಿ ಮರೆಯಾದ ಕ್ಷಣವಾಯಿತು.
ಯುವರಾಜ ಪಟ್ಟಾಭಿಷೇಕ, ಮದುವೆ
ಯೌವನಕ್ಕೆ ಕಾಲಿಟ್ಟ ಸ್ಫುರದ್ರೂಪಿ ಕೆಂಪೇಗೌಡನಿಗೆ ಯುವರಾಜ ಪಟ್ಟಾಭಿಷೇಕವಾಯಿತು (ಸು.೧೫೨೮). ಜೊತೆಯಲ್ಲಿ ಮದುವೆ. ಹೆಂಡತಿ ಚೆನ್ನಮ್ಮ (ಚೆನ್ನಾಂಬೆ). ಆಕೆ ತಾಯಿ ಲಿಂಗಾಂಬೆಯ ಸಹೋದರನ ಮಗಳು. ಹಳೆಯ ಬೆಂಗಳೂರಿನವಳು. ಆ ಶುಭಸಮಾರಂಭಗಳಿಗೆ ವಿಜಯನಗರ ಸಾಮ್ರಾಜ್ಯ ಚಕ್ರವರ್ತಿ ಶ್ರೀ ಕೃಷ್ಣದೇವರಾಯನ ಪ್ರತಿನಿಧಿಯೂ ಚನ್ನಪಟ್ಟಣ, ಶಿರಾ, ಹೊಳವನಹಳ್ಳಿ, ಸೋಲೂರು, ಕೆಳದಿ, ಬೆಳಗುತ್ತಿ, ಚಿತ್ರದುರ್ಗ ಮೊದಲಾದ ಸಂಸ್ಥಾನದ ಪಾಳೆಯಗಾರರೂ ಉಡುಗೊರೆಯೊಡನೆ ಬಂದು ಪಾಲ್ಗೊಂಡರು.
ಹಿರಿಯ ಕೆಂಪೇಗೌಡನಿಗೆ ಇಬ್ಬರು ಗಂಡು ಮಕ್ಕಳು. ಗಿಡ್ಡೇಗೌಡ (ಜನನ ಸು.೧೫೩೦) ಮತ್ತು ಇಮ್ಮಡಿ ಕೆಂಪೇಗೌಡ (ಜನನ ಸು.೧೫೬೦). ದೊರೆ ಕೆಂಪೇಗೌಡನಿಗೆ ಒಬ್ಬ ಮಗಳು ಇದ್ದಳೆಂದು ಹೇಳುತ್ತಾರೆ. ಆದರೆ ಅವಳ ಬಗೆಗೆ ವಿವರಗಳು ಲಭ್ಯವಿಲ್ಲ.
ಯುವ ರಾಜ್ಯಾಭಿಷೇಕವಾದ ಮೇಲೆ ಕೆಂಪೇಗೌಡ ತಂದೆಯ ಆಡಳಿತದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡ. ರಾಜನೀತಿಯನ್ನು ರಕ್ತಗತಮಾಡಿಕೊಂಡ. ತಮ್ಮ ನಾಡಿನ ಅಕ್ಕಪಕ್ಕದ ಪಾಳೆಯಗಾರರ, ದಾಯಾದಿ ಪಾಳೆಯಗಾರರ ಚಹರೆಗಳನ್ನು ಗಮನಿಸಿ ಶತ್ರುಗಳಾರು? ಮಿತ್ರರಾರು? ಎಂಬುದನ್ನು ಮನದಟ್ಟು ಮಾಡಿಕೊಂಡ. ಗಡಿಭಾಗದಲ್ಲಿ ರಕ್ಷಣೆಗೆ ಹೆಚ್ಚು ಗಮನ ಹರಿಸಿದ. ತಂದೆಗೆ ಮೆಚ್ಚುಗೆಯಾಗುವಂತೆ ರಾಜ್ಯಾಡಳಿತದಲ್ಲಿ ಪಳಗಿದ.
ನಾಡಪ್ರಭು
ಮುಪ್ಪಿನ ತಂದೆ ಮಗನಿಗೆ ನಾಡಪ್ರಭು ಅಧಿಕಾರವನ್ನು ವಹಿಸಿಕೊಟ್ಟ (ಸು.೧೫೩೧). ಆ ಹೊತ್ತಿಗೆ ಕೆಂಪೇಗೌಡ ಸರ್ವರೀತಿಯಲ್ಲೂ ನಾಡಪ್ರಭು ಸ್ಥಾನಕ್ಕೆ ಅರ್ಹನಾಗಿ ಬೆಳೆದಿದ್ದ. ಆಡಳಿತದ ಎಲ್ಲಾ ಮರ್ಮಗಳನ್ನೂ ಕರಗತಮಾಡಿಕೊಂಡಿದ್ದ; ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ಪ್ರದರ್ಶಿಸುತ್ತಿದ್ದ.
ಕೆಂಪೇಗೌಡ ಅಧಿಕಾರ ವಹಿಸಿಕೊಂಡಾಗ ಯಲಹಂಕ ರಾಜ್ಯದಲ್ಲಿ ಗಂಭೀರವಾದ ಪರಿಸ್ಥಿತಿಯಿತ್ತು. ನೆರೆಯ ಪಾಳೆಯಗಾರರು ಅಸೂಯೆಯಿಂದ ಕುದಿಯುತ್ತಿದ್ದರು. ರಾಜ್ಯವನ್ನು ಆಕ್ರಮಿಸಲು ಹೊಂಚುಹಾಕುತ್ತಿದ್ದರು. ದಾಯಾದಿ ಪಾಳೆಯಗಾರರೂ ಹೊಟ್ಟೆಕಿಚ್ಚಿನಿಂದ ಉರಿಯುತ್ತಿದ್ದರು. ವಿಜಯನಗರದ ಗಡಿಯಲ್ಲಿ ಬಹಮನಿ ಸುಲ್ತಾನರ ಕೋಟಲೆಯಿತ್ತು. ಚಕ್ರವರ್ತಿಗಳ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ಆಡಳಿತ ನಡೆಸಬೇಕಾಗಿತ್ತು. ಕೆಂಪೇಗೌಡ ಎಲ್ಲವನ್ನೂ ದಕ್ಷತೆಯಿಂದ ನಿಭಾಯಿಸಿದನು. ರಾಜ್ಯ ರಕ್ಷಣೆಗಾಗಿ ಮದ್ದುಗುಂಡು ಅಸ್ತ್ರಗಳ ತಯಾರಿಕೆ, ಸೈನ್ಯ ಜಮಾವಣೆ, ಮೇಲ್ವಿಚಾರಕರ ನೇಮಕ, ಗೂಢಚಾರರ ವ್ಯವಸ್ಥೆ ಮೊದಲಾದವುಗಳಿಗೆ ಗಮನಕೊಟ್ಟನು. ಅದಕ್ಕಾಗಿ ದಕ್ಷರೂ ನಂಬಿಕಸ್ಥರೂ ಆದ ನಿಷ್ಠರನ್ನು ನೇಮಿಸಿದನು.
೧೫೨೯ರಲ್ಲಿ ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯ ನಿಧನ ಹೊಂದಿದನು. ಆಗ ಅನೇಕ ಪಾಳೆಯಗಾರರು, ನಾಡಪ್ರಭುಗಳು ಸ್ವತಂತ್ರರೆಂದು ಘೋಷಿಸಿಕೊಂಡರು. ಆದರೆ ರಾಜನಿಷ್ಠ ಕೆಂಪೇಗೌಡ ಹಾಗೇ ಮಾಡಲಿಲ್ಲ. ಸಾಮಂತರಾಜ ನಿಷ್ಠೆಯನ್ನೇ ಮುಂದುವರಿಸಿದ.
ವಿಜನಯಗರ ಸಾಮ್ರಾಜ್ಯ ಚಕ್ರವರ್ತಿ, ಕರ್ನಾಟಕ ರಮಾರಮಣ ಶ್ರೀಕೃಷ್ಣದೇವರಾಯ ಸ್ವರ್ಗಸ್ಥನಾದ ಮೇಲೆ ಅವನ ಸಹೋದರ ಅಚ್ಚುತರಾಯ ಅಧಿಕಾರಕ್ಕೆ ಬಂದ. ಅವನ ಪಟ್ಟಾಭಿಷೇಕದ ಸಂದರ್ಭದಲ್ಲಿ ಬೆಂಗಳೂರು ಕೆಂಪೇಗೌಡ ಅತಿಥಿಯಾಗಿ ಹೋಗಿದ್ದ. ಆ ನಂತರವೂ ಚಕ್ರವರ್ತಿಯೊಡನೆ ಆಪ್ತನಾಗಿದ್ದ. ವಿಜಯದಶಮಿ ಸಂದರ್ಭದಲ್ಲಿ ಅಚ್ಚುತರಾಯ ರಾಜನಿಷ್ಠ ಯಲಹಂಕ ನಾಡಪ್ರಭು ಕೆಂಪೇಗೌಡನಿಗೆ ರಾಜಮರ್ಯಾದೆ ನೀಡಿ ಉಡುಗೊರೆಯಿತ್ತು ರಾಜಸಭೆಯಲ್ಲಿ ಪ್ರಶಂಸಿಸಿದ. ಗೌಡಕುಲ ವಿಭೂಷಣ, ಅರಿರಾಯರಗಂಡ, ಬಂಡಿಕುಲ ತಿಲಕ ಎಂದು ಬಿರುದಿತ್ತು ಗೌರವಿಸಿದ. ಕೆಂಪೇಗೌಡ ವಿಜಯನಗರದ ಅರಸರಿಗೆ ಆಪ್ತನಾಗಿ ನಡೆದುಕೊಂಡ. ಜೀವನ ಪರ್ಯಂತ ತನ್ನ ರಾಜನಿಷ್ಠೆಯನ್ನು ಬದಲಿಸಲಿಲ್ಲ.
ಕೆಂಪೇಗೌಡನಿಗೆ ಆಳರಸರಿಂದಲೂ ಪ್ರಜೆಗಳಿಂದಲೂ ಧರ್ಮವೀರ, ಶಾಂತಿವೀರ, ಶತ್ರುನಿಗ್ರಹಿ ಮೊದಲಾದ ಬಿರುದುಗಳು ದೊರಕಿದ್ದವು. ಕೆಂಪೇಗೌಡ ಅತ್ಯಂತ ಹೆಸರುವಾಸಿಯಾದ ನಾಡಪ್ರಭುಗಳಲ್ಲಿ ಅಗ್ರಪಂಕ್ತಿಯಲ್ಲಿದ್ದನು.
ಒಂದನೇ ಕೆಂಪೇಗೌಡ ಸುಮಾರು ೧೫೩೧ರಲ್ಲಿ ನಾಡಪ್ರಭುವಾದನು. ಅದ್ಧೂರಿಯಾಗಿ ನಡೆದ ಕೆಂಪೇಗೌಡನ ಪಟ್ಟಾಭಿಷೇಕಕ್ಕೆ ಅನೇಕ ರಾಜವಂಶೀಯರು ಬಂದಿದ್ದರು. ಪ್ರಾರಂಭದಲ್ಲಿ ಕೆಂಪೇಗೌಡನ ವಾರ್ಷಿಕ ಆದಾಯ ೩೦,೦೦೦ ವರಹಗಳದಾಗಿತ್ತು. ಅನಂತರ ಅದು ವೃದ್ಧಿಸಿತು. ಅವನ ಏಳಿಗೆಯನ್ನು, ಆರ್ಥಿಕ ಸಂಪತ್ತನ್ನು ಸಹಿಸದೆ ಚನ್ನಪಟ್ಟಣ, ಶಿರ್ಯ, ಸೋಲೂರು, ಕುಣಿಗಲ್ಲು ಪಾಳೆಯಗಾರರು ಕರಬುತ್ತಿದ್ದರು. ಕೆಂಪೇಗೌಡನ ಆಡಳಿತಾವಧಿ ಸುಭಿಕ್ಷವಾಗಿತ್ತು. ಪ್ರಜೆಗಳ ಸಾಮಾನ್ಯ ಅಗತ್ಯಗಳು ಸಲೀಸಾಗಿ ಪೂರೈಕೆಯಾಗುತ್ತಿದ್ದವು. ಪ್ರಜೆಗಳ ನೆಮ್ಮದಿಗೆ ಕೊರತೆಯಿರಲಿಲ್ಲ. ಕೆಂಪೇಗೌಡ ಯಲಹಂಕನಾಡಿನ ಸಿಂಹದಂತಿದ್ದನು. ಅವನನ್ನು ಕೆಣಕಲು, ಸೋಲಿಸಲು ಎಂಥವರೂ ಹೆದರುತ್ತಿದ್ದರು. ಕೆಂಪೇಗೌಡ ಆಡಳಿತದಲ್ಲಿ ಪರಿಣತನಾಗಿದ್ದ. ಆತ ಯುದ್ಧಚತುರ, ಮಹಾಯೋಧ, ಮಹಾಸೇನಾನಾಯಕ, ರಣಪ್ರಿಯ, ತೀಕ್ಷ್ಣಮತಿಯಾಗಿದ್ದನು. ಅತ್ಯುತ್ತಮ ಮಟ್ಟದ ಸೈನ್ಯವಿದ್ದು ಅದನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದನು.
ಕೆಂಪೇಗೌಡ ನಾಡಪ್ರಭುವಾದ ಒಂದೆರಡು ವರ್ಷಗಳಲ್ಲೇ ಸಾಮಂತ ಅರಸನ ಸ್ಥಾನಕ್ಕೆ ಪಾತ್ರನಾದ. ವಿಜಯನಗರ ಸಾಮ್ರಾಜ್ಯ ಚಕ್ರವರ್ತಿ ಅಚ್ಚುತರಾಯ (೧೫೩೨-೧೫೪೨)ನು ಕೆಂಪೇಗೌಡನಿಗೆ ಯಲಹಂಕ ರಾಜ್ಯವನ್ನು ಅಮರನಾಯಕತನಕ್ಕೆ ಕೊಟ್ಟ (೧೮-೧೦-೧೫೩೨). ಆ ಕಾಲಕ್ಕೆ ಕೆಂಪೇಗೌಡನು ’ಕೆಂಪದೇವರಸಗೌಡ’ ಎಂಬ ಮನ್ನಣೆ ಪಡೆದ. ಶಿವನಸಮುದ್ರ ಸೀಮೆಯ ಚೊಕ್ಕನಹಳ್ಳಿ ಗ್ರಾಮವನ್ನು ಅಚ್ಚುತರಾಯನಿಗೆ ಧರ್ಮವಾಗಲಿ ಎಂದು ಭೈರವನ ಗುಡಿಗೆ (ಚೌಡೇಶ್ವರ ದೇವಾಲಯ) ಅಂಗಭೋಗ, ರಂಗಭೋಗಕ್ಕಾಗಿ ದಾನವಾಗಿ ನೀಡಿದ. ಇದು ಕೆಂಪರಾಯನು ಅಚ್ಚುತರಾಯನಿಗೆ ತೋರಿದ ಗೌರವ. (ದಾಸರಹಳ್ಳಿ ಶಿಲಾಶಾಸನದಲ್ಲಿ ಈ ಐತಿಹಾಸಿಕ ಅಂಶ ದಾಖಲಾಗಿದೆ).
ಮಹಾಸಾಧನೆಯ ಕನಸುಗಾರ
ವಿಜಯನಗರ ಮಾನವಮಿ ದಿಬ್ಬದ ಉತ್ಸವ, ಶ್ರೀ ಕೃಷ್ಣದೇವರಾಯನ ಒಡ್ಡೋಲಗ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಿರಿಯ ಕೆಂಪೇಗೌಡನ ಮೇಲೆ ಗಾಢವಾದ ಪರಿಣಾಮ ಬೀರಿದವು. ಹೊಸ ರಾಜಧಾನಿಯನ್ನು ನಿರ್ಮಿಸಿ ಶ್ರೀ ಕೃಷ್ಣದೇವರಾಯನ ಹಾಗೆ ರಾಜ್ಯಾಡಳಿತ ನಡೆಸಲು ಉದ್ದೇಶಿಸಿದ. ಕೆಂಪೇಗೌಡ ರಾಜ್ಯಭಾರ ಮಾಡುತ್ತಿದ್ದುದು ಯಲಹಂಕದಿಂದ. ಅದಕ್ಕಿಂತ ಭಿನ್ನವಾದ ಉತ್ತಮವಾದ ಆಯಕಟ್ಟಿನ ಸ್ಥಳಕ್ಕಾಗಿ ಶೋಧ ನಡೆಸಿದ. ಸ್ನೇಹಿತ ವೀರಣ್ಣಗೌಡ, ಸಹೋದರರು ಮತ್ತು ಆಪ್ತರೊಡನೆ ಸ್ಥಳ ವೀಕ್ಷಣೆ ಮಾಡಿದ. ಯಲಹಂಕದಿಂದ ದಕ್ಷಿಣದ ಶಿವನಸಮುದ್ರ ಹಳ್ಳಿ, ಅದರ ವಾಯುವ್ಯಕ್ಕೆ ಹೆಬ್ಬಾಳದ ಒಳಗೆರೆಯ ದಕ್ಷಿಣಕ್ಕೆ ಹಳೆಯ ಬೆಂಗಳೂರು, ಅದರ ಮುಂದಕ್ಕೆ ಹುಲ್ಲುಗಾವಲ್ (ಕಾವಲ್) ದಿಣ್ಣೆ. ಅದರಿಂದ ಮುಂದೆ ಕೊಡಿಗೆಹಳ್ಳಿ ಬಯಲು. ಸುತ್ತಮುತ್ತ ಹಸುರು ಕಾಡು. ಅಲ್ಲಲ್ಲಿ ನೀರಿನ ಹೊಂಡಗಳು. ಆ ಪ್ರದೇಶ ಮನಸ್ಸಿಗೆ ಹಿಡಿಸಿತು.
ಸ್ಥಳ ಪರಿವೀಕ್ಷಣೆಗೆ ಬಂದಾಗ ಬಿಸಿಲಿನ ದಣಿವು ಇಂಗಿಸಲು ಮರದ ನೆರಳಿನಲ್ಲಿ ಕುಳಿತ. ಜೋಂಪು ಹತ್ತಿತು. ಕನಸಿನಲ್ಲಿ ಕುಲದೇವತೆ ಕೆಂಪಮ್ಮ, ಕಾಣಿಸಿಕೊಂಡು ’ಈ ಸ್ಥಳದಲ್ಲಿ ರಾಜಧಾನಿ ನಿರ್ಮಿಸಿದರೆ ನಿನ್ನ ಏಳಿಗೆಯಾಗುತ್ತದೆ’ ಎಂದಳು. (ಕುಲದೇವತೆ ಮುದುಕಿಯ ವೇಷದಲ್ಲಿ ಬಂದು ಹೀಗೆ ಹೇಳಿದಳು ಎಂಬ ಜನಪದ ಐತಿಹ್ಯವೂ ಉಂಟು). ಕಣ್ಣುಬಿಟ್ಟಾಗ ಕಾಕತಾಳೀಯವಾಗಿ ಮೊಲವೊಂದು ಬೇಟೆನಾಯಿಯೊಂದರ ಮೇಲೆ ದಾಳಿ ಮಾಡಿದುದನ್ನು ನೋಡಿದ. ಇದು ’ಗಂಡುಭೂಮಿ’ ಎಂದು ಅರಿವಾಯಿತು. ಅಲ್ಲೆ ಹೊಸರಾಜಧಾನಿ ನಿರ್ಮಿಸಲು ನಿರ್ಧರಿಸಿದನು. ಅದು ಬಹಳ ಹಿಂದೆ ಜನವಸತಿಯಿಂದ ಕೂಡಿದ್ದು, ಕಾರಣಾಂತರಗಳಿಂದ ನಾಶವಾಗಿ, ಕಾಡುಮಯವಾಗಿತ್ತು.
ಸ್ಥಳದ ಬಗೆಗೆ, ಭೂಗರ್ಭ ತಜ್ಞರೊಡನೆ, ನೀರಾವರಿ ತಜ್ಞರೊಡನೆ, ಸಾಂಪ್ರದಾಯಿಕ ವಾಸ್ತುಶಿಲ್ಪಿಗಳೊಡನೆ, ಸನಾತನ ಜ್ಯೋತಿಷಿಗಳೊಡನೆ, ಆಪ್ತರೊಡನೆ ಸಮಾಲೋಚಿಸಿದ. ನೆಲದ ಸಂಪೂರ್ಣ ಪರಿಚಯ ಮಾಡಿಕೊಂಡ. ಪ್ರತಿಯೊಂದು ನೈಸರ್ಗಿಕ ಸಂಪತ್ತನ್ನು ಸದುಪಯೋಗಪಡಿಸಕೊಳ್ಳಲು ಯೋಚಿಸಿದ. ತಾನು ನಿರ್ಮಿಸಲಿರುವ ನೂತನ ರಾಜಧಾನಿ ತನ್ನ ಪೂರ್ವಿಕರು ಕಟ್ಟಿದ ಆವತಿ, ಯಲಹಂಕಗಳಿಗಿಂತ ಉನ್ನತವಾಗಿರಬೇಕೆಂದೂ ಅಲ್ಲಿ ನಿರ್ಮಿಸುವ ಪ್ರತಿಯೊಂದೂ ರಾಜ್ಯಕ್ಕೂ ಪ್ರಜೆಗಳಿಗೂ ಉಪಯೋಗವಾಗುವಂತಿರಬೇಕೆಂದೂ ದೂರಾಲೋಚನೆಯನ್ನು ಮಾಡಿದನು. ಈ ಪ್ರದೇಶದಲ್ಲಿ ಮಳೆಯ ಕೊರತೆಯಿರುವುದಿಲ್ಲ, ಬರಗಾಲ ಕಾಲಿಡುವುದಿಲ್ಲ ಎಂದು ಭವಿಷ್ಯವಾಣಿ ಕೇಳಿ ಸಂತೋಷಿಸಿದನು.
ಹಿರಿಯ ಕೆಂಪೇಗೌಡ ವಿಜಯನಗರದ ಅರಸ ಅಚ್ಚುತರಾಯನ ಒಪ್ಪಿಗೆ ಪಡೆದು ರಾಜಧಾನಿ ಹಾಗೂ ಕೋಟೆಯ ನಿರ್ಮಾಣಕ್ಕೆ ತೊಡಗಿದನು. ವಿಜಯನಗರದ ಸಾಮ್ರಾಜ್ಯದ ದಕ್ಷಿಣಕೋಟೆ ಭದ್ರವಾಗಿರಬೇಕೆಂಬ ಸದುದ್ದೇಶದಿಂದ, ಕೆಂಪೇಗೌಡ ರಾಜನಿಷ್ಠೆಯ ನಂಬಿಕಸ್ಥನೆಂಬ ಖಾತ್ರಿಯಿಂದ ರಾಜಧಾನಿ ನಿರ್ಮಾಣಕ್ಕೆ ಚಕ್ರವರ್ತಿಯ ಒಪ್ಪಿಗೆ ದೊರೆಯಿತು. ಕೆಂಪೇಗೌಡ ಮಹದಾಸೆಯ ಕನಸುಗಾರ, ಹಿಡಿದ ಕೆಲಸ ಸಾಧಿಸುವ ಛಲಗಾರ.
ವಿನೂತನ ರಾಜಧಾನಿ ಬೆಂಗಳೂರಿನ ನಿರ್ಮಾಣ
೧೫೩೭ರ ಒಂದು ಶುಭ ದಿನದ ಸುಮುಹೂರ್ತದಂದು ಹೊಸ ರಾಜಧಾನಿಗೆ ಗುದ್ದಲಿ ಪೂಜೆ ನಡೆಯಿತು. ಕೃಷಿಕ ಮೂಲ ಕೆಂಪೇಗೌಡ ಹೊನ್ನಾರು ಕಟ್ಟುವ ಆಚರಣೆಯಿಂದ ರಾಜಧಾನಿ ನಿರ್ಮಾಣ ಕಾರ್ಯವನ್ನು ಆರಂಭಿಸಿದ. ನಾಲ್ವರು ನೇಗಿಲಿಗೆ ಆರು ಕಟ್ಟಿ ಗುರುತುಮಾಡಿದರು. ನಾಡಪ್ರಭು ಕೆಂಪೇಗೌಡನೂ
ನೇಗಿಲು ಹಿಡಿದು ನಾಲ್ಕು ಹೆಜ್ಜೆ ನಡೆದ. ಅದು ಹಲವು ಕಥೆಗಳಿಗೆ ನಾಂದಿಯಾಯಿತು.
ಕೆಂಪೇಗೌಡ ತಜ್ಞರೊಡನೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಂಡಂತೆ ವೇಗವಾಗಿ ನಿರ್ಮಾಣಕಾರ್ಯ ನಡೆದವು. ಹೊಸರಾಜಧಾನಿಗೆ ’ದೇವರಾಯ ಪಟ್ಟಣ’ ಎಂದು ನಾಮಕರಣ ಮಾಡಲಾಯಿತೆಂದು ಪ್ರತೀತಿಯಿದೆ. ಅದು ವಿಜಯನಗರ ಅರಸರ ಹೆಸರಿನ ಸ್ಮರಣೆಗೆ ಎನ್ನುವುದುಂಟು. ಆದರೆ ಆ ಹೆಸರು ನಿಲ್ಲದೆ ’ಬೆಂಗಳೂರು’ ಎಂಬ ಹೆಸರೇ ಊರ್ಜಿತವಾಯಿತು. ಪ್ರ.ವ.೧೫೯೭ ಏಪ್ರಿಲ್ ೨೧ರ ಪೌರೋಹಿತ್ಯ ದಾನಶಾಸನದಲ್ಲಿ ಇಮ್ಮಡಿ ಕೆಂಪೇಗೌಡ ಬೆಂಗಳೂರು ನಗರವನ್ನು ನಿರ್ಮಿಸಿದ ಎಂದಿದೆ. ಅದು ಕೂಟಶಾಸನ. ಅದನ್ನು ನಂಬುವಂತಿಲ್ಲ. ಹಿರಿಯ ಕೆಂಪೇಗೌಡ
ಬೆಂಗಳೂರು ಸ್ಥಾಪಿಸಿದಾಗ ಅವನ ಮಗ ಇಮ್ಮಡಿ ಕೆಂಪೇಗೌಡ ಇನ್ನೂ ಹುಟ್ಟಿರಲಿಲ್ಲ.
ಹೊಸ ರಾಜಧಾನಿಗೆ ’ಬೆಂಗಳೂರು’ ಎಂಬ ಹೆಸರೇ ಸ್ಥಿರವಾಯಿತು. ಅದು ಹಳೆಯ ಬೆಂಗಳೂರಿನ ಸಮೀಪದಲ್ಲಿದ್ದುದರಿಂದ, ಅದೇ ಹೆಸರಿನ ಊರೊಂದು ಹಿಂದೆ ಇದ್ದು ಬೇಚರಾಕ್ ಆಗಿದ್ದುದರಿಂದ, ಹಿಂದಿನ ಹೆಸರು ಜನಮಾನಸದಿಂದ ಅಳಿಸಿರಲಿಲ್ಲವಾದ್ದರಿಂದ ’ಬೆಂಗಳೂರು’ ಎಂಬ ಹೆಸರು ಪ್ರಸಿದ್ಧವಾಗಲು ತಡವಾಗಲಿಲ್ಲ. ಅಷ್ಟಕ್ಕೂ ಕೆಂಪೇಗೌಡನಿಗೂ ಬೆಂಗಳೂರು ಶಬ್ದಕ್ಕೂ ಅವಿನಾಸಂಬಂಧವಿದೆ. ಹಿರಿಯ ಕೆಂಪೇಗೌಡ ಹುಟ್ಟಿದ್ದು, ಬೆಳೆದದ್ದು, ಆಡಳಿತ ಪ್ರಾರಂಭಿಸಿದ್ದು ಯಲಹಂಕದಲ್ಲಿ. ಅವನ ತಾಯಿ ಮತ್ತು ಹೆಂಡತಿ ಹಳೆಯ ಬೆಂಗಳೂರಿನವರು. ಹಾಗಾಗಿ ಬೆಂಗಳೂರು ಶಬ್ದದ ಬಗೆಗೆ, ಬೆಂಗಳೂರು ಊರಿನ ಬಗೆಗೆ ಅವನಿಗೆ ಇನ್ನಿಲ್ಲದ ಅಭಿಮಾನ. ಬೆಂಗಳೂರನ್ನು ಸರ್ವಾಂಗ ಸುಂದರ ಮಾಡಲು ಅವನು ಕಂಡ ಕನಸು ಅಷ್ಟಿಷ್ಟಲ್ಲ.
ಬೆಂಗಳೂರು ಕೆಂಪೇಗೌಡನ ಊರು. ಬೆಂಗಳೂರೆಂದರೆ ಕೆಂಪೇಗೌಡ, ಕೆಂಪೇಗೌಡ ಎಂದರೆ ಬೆಂಗಳೂರು. ಹದಿನಾರನೇ ಶತಮಾನದಿಂದ ಕೆಂಪೇಗೌಡನ ಹೆಸರಿನೊಂದಿಗೆ ಬೆಂಗಳೂರು ಸೇರಿಕೊಂಡಿದೆ. ಪ್ರಧಾನ ಬೆಂಗಳೂರಿನ ನಾಲ್ಕು ಕಡೆ ಕಾವಲು ಸ್ಥಳಗಳಿಗಾಗಿ ಗುರುತು ಮಾಡಿಸಿದ. ಅವು ಪೂರ್ವಕ್ಕೆ ಹಲಸೂರು ಕೆರೆ ಏರಿಯ ಮೇಲೆ, ಪಶ್ಚಿಮಕ್ಕೆ ಕೆಂಪಾಂಬುದಿ ಕೆರೆ ಏರಿಯ ಮೇಲೆ, ಉತ್ತರಕ್ಕೆ ಹೆಬ್ಬಾಳದ ರಸ್ತೆಯ ಕಡೆ, ದಕ್ಷಿಣಕ್ಕೆ ಲಾಲಬಾಗಿನ ತೋಟದ ಬಂಡೆಯ ಮೇಲೆ ಗುರುತಾದವು. ಮುಂದೆ ಮಾಗಡಿ ಕೆಂಪೇಗೌಡ ಇವುಗಳ ಸ್ಥಳದಲ್ಲಿ ಆಳೆತ್ತರದ ಆಕರ್ಷಕ ಗೋಪುರಗಳನ್ನು ನಿರ್ಮಿಸಿದ. ಇವು ರಾಯಗೋಪುರಗಳೆಂದು ಹೆಸರಾದವು. ಶ್ರೀಕೃಷ್ಣದೇವರಾಯನ ಹೆಸರಿಗೆ ಹೀಗೆ ಕರೆಯಲಾಯಿತೆಂದು ಹೇಳುತ್ತಾರೆ. ವಿದೇಶಿಯರು ಇವುಗಳನ್ನು ಕೆಂಪೇಗೌಡ ಗೋಪುರಗಳೆಂದು ಕರೆದಿದ್ದಾರೆ. ಅತ್ಯಾಕರ್ಷಕ ಗೋಪುರಗಳನ್ನು ನಿರ್ಮಿಸುವುದು ಕೆಂಪೇಗೌಡಾದಿಗಳಿಗೆ ಪ್ರಿಯವಾದ ಹವ್ಯಾಸವಾಗಿತ್ತು. ಈಗಿನ ಬಿನ್ನಿ ಮಿಲ್ಲಿನ ಹತ್ತಿರ ಬೆಂಗಳೂರು ಅರಮನೆಗೆ ಸಂಬಂಧಿಸಿದ ಗೋಪುರವೊಂದು ಇತ್ತು. ಈಚೆಗೆ ಅದನ್ನು ನಗರ ಪಾಲಿಕೆಯವರು ಕೆಡವಿಹಾಕಿದರು. ಕೆಂಪೇಗೌಡಾದಿಗಳು ಕಟ್ಟಿದ ಕೆರೆಗಳ ಹತ್ತಿರವೂ ಆಕರ್ಷಕ ಗೋಪುರಗಳಿವೆ.
ಹಿರಿಯ ಕೆಂಪೇಗೌಡನಿಗೆ ರಾಜಧಾನಿ ಬೆಂಗಳೂರು ನಿರ್ಮಿಸುವಾಗ ಹೇರಳವಾಗಿ ಗುಪ್ತನಿಧಿ ದೊರೆಯಿತಂತೆ. ಅದನ್ನು ರಾಜಧಾನಿ ನಿರ್ಮಾಣಕ್ಕೆ ಬಳಸಿದ ಎಂದು ಹೇಳುವರು. ಕೆಂಪೇಗೌಡ ವಂಶಸ್ಥರಿಗೆ ನಿಧಿ ದೊರಕಿದ ಪ್ರಸಂಗಗಳು ಮತ್ತೆ ಮತ್ತೆ ಉಲ್ಲೇಖಗೊಂಡಿವೆ. ಅವು ಜನಪದ ಕವಿ ಸಮಯ ಇರಬಹುದು. ನಿಜವೂ ಆಗಿರಬಹುದು. ಅವುಗಳಿಗೆ ಇದೂ ಒಂದು ಸೇರ್ಪಡೆಯಾಗಿದೆ. ಕೆಂಪೇಗೌಡ ಅಪ್ಪಟ ದೈವಭಕ್ತ, ಅದೃಷ್ಟವಂತ; ಆರ್ಥಿಕಾಭಿವೃದ್ಧಿಗಾಗಿ ಹಲವು ಪೇಟೆಗಳನ್ನು ನಿರ್ಮಿಸಿದ. ವಿವಿಧ ವೃತ್ತಿಯ ಜನರನ್ನು ಆಹ್ವಾನಿಸಿ, ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ. ರಾಜಧಾನಿ ನಿರ್ಮಾಣವಾದ ಮೇಲೆ, ಯಲಹಂಕದಿಂದ ಬೆಂಗಳೂರಿಗೆ ರಾಜಧಾನಿಯನ್ನು ಸ್ಥಳಾಂತರಿಸಿದ (೧೫೩೭).
(ಮುಂದುವರೆಯುವುದು)
Tuesday, June 14, 2011
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2011
(92)
-
▼
June
(23)
- ನೆಲದ ಒಡಲ ಹಾಡೇ ಜಾನಪದ
- ಜನಪದ ಮಹಿಳೆ
- ಡಬ್ಬಿಂಗ್ ಮತ್ತು ಕನ್ನಡ ಚಿತ್ರಪ್ರೇಕ್ಷಕ
- ಪ್ರಜಾಪ್ರಭುತ್ವದ ನೆಲಗಟ್ಟೇ ಹಳ್ಳಿಗಳು: ಗೊ.ರು.ಚನ್ನಬಸಪ್ಪ
- ಬಸವ ಬೆಳಕು (ರೂಪಕ)
- ಬಹುಭಾಷಿಕತೆ ಮತ್ತು ಕನ್ನಡ
- ಬೆಂಗಳೂರು ಕೆಂಪೇಗೌಡ
- ರಂಗಭೂಮಿಯಲ್ಲಿ ನಿರ್ದೇಶಕನ ಪಾತ್ರ
- ಕನ್ನಡದ ಪ್ರಾದೇಶಿಕ ಉಪಭಾಷೆಗಳು
- ಮಹಾರತ್ನಮೆನಿಸಿದಂ ಕವಿರತ್ನಂ
- ಬಸವ ತತ್ವದ ದಂಡನಾಯಕ
- ಪುರಾಣಗಳ ಪುನರ್ರೂಪಿಕೆಯಾಗಿ ಶೂದ್ರತಪಸ್ವಿ
- ಪೂಜೆ ಮತ್ತು ಪ್ರತಿಭಟನೆ
- ಕರ್ನಾಟಕದ ವಚನಗುಮ್ಮಟ ಡಾ|| ಫ.ಗು.ಹಳಕಟ್ಟಿ
- ಕನ್ನಡಿಗರೆಡೆಗೆ ತೂರಿದ ಚಪ್ಪಲಿಯೇ ಇವರಿಗೆ ಆಭರಣ!
- ಬಸವಣ್ಣ, ಪೈಗಂಬರ್ ಮತ್ತು ಕಾರ್ಮಿಕರು
- ಸ್ವಾಭಿಮಾನಿ ಕನ್ನಡಿಗ ನಾರಾಯಣಗೌಡರು
- ಸ್ನೇಹಕ್ಕ್ಕೂ ಬದ್ಧ ಸಮರಕ್ಕೂ ಸಿದ್ಧ
- ಹೊಸ ದಿಕ್ಕಿನೆಡೆ ನಡೆಯಲಿ
- ಕನ್ನಡವೇ ಜಾತಿ ಕನ್ನಡವೇ ಧರ್ಮ ಕನ್ನಡವೇ ದೇವರು
- ಗುಡುಗಿನ ಶ್ರೀ ನಾರಾಯಣಗೌಡರು
- ಭಾಷಾ ಬದ್ಧತೆಯ ನಾರಾಯಣಗೌಡರು
- ಅದ್ಭುತ ಸಂಘಟನಾ ಶಕ್ತಿ
-
▼
June
(23)
No comments:
Post a Comment