ಡಬ್ಬಿಂಗ್ ಸಿನಿಮಾಗಳಿಗೆ ಕರ್ನಾಟಕದಲ್ಲಿ ನಿಷೇಧ ಜಾರಿಯಲ್ಲಿದೆ. ಡಬ್ಬಿಂಗ್ ವಿರೋಧವಾಗಿ ರಾಜ್ಯದಲ್ಲಿ ವರನಟ ಡಾ.ರಾಜಕುಮಾರ್ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಚಳವಳಿ ನಡೆದದ್ದು ಈಗ ಇತಿಹಾಸ. ಆಗಿನ್ನೂ ಕನ್ನಡ ಚಿತ್ರರಂಗ ಪೂರ್ಣ ಪ್ರಮಾಣದಲ್ಲಿ ನೆಲೆ ನಿಂತಿರಲಿಲ್ಲ. ಈಗ ಚಿತ್ರರಂಗ ಸಮೃದ್ಧವಾಗಿ ಬೆಳೆದಿದೆ. ಬದಲಾದ ಕಾಲದಲ್ಲಿ ಡಬ್ಬಿಂಗ್ ಚಿತ್ರಗಳಿಗೂ ಅವಕಾಶ ನೀಡಬೇಕು ಎಂಬ ವಾದ ಎಲ್ಲೆಡೆ ಕೇಳಿಬರುತ್ತಿದೆ. ಡಬ್ಬಿಂಗ್ ಸಿನಿಮಾಗಳು ಬಂದರೆ ಕರ್ನಾಟಕದ ಸಿನಿಮಾರಂಗದ ಕಲಾವಿದರು, ತಂತ್ರಜ್ಞರು ಸಮಸ್ಯೆಗೆ ಸಿಕ್ಕಿಕೊಳ್ಳುತ್ತಾರೆ. ಡಬ್ಬಿಂಗ್ ನಿಂದಾಗಿ ಕನ್ನಡ ಭಾಷೆ, ಸಂಸ್ಕೃತಿಯ ಮೇಲೆ ಹೊಡೆತ ಬೀಳುತ್ತದೆ ಎಂಬ ವಾದ ಡಬ್ಬಿಂಗ್ ವಿರೋಧಿಗಳದ್ದು. ಡಬ್ಬಿಂಗ್‌ನಿಂದಾಗಿ ಜಗತ್ತಿನ ಎಲ್ಲ ಭಾಷೆಯ ಉತ್ತಮ ಸಿನಿಮಾಗಳನ್ನು ನಾವು ಕನ್ನಡದಲ್ಲೇ ನೋಡಲು ಸಾಧ್ಯವಾಗುತ್ತದೆ. ರೀಮೇಕ್ ಚಿತ್ರಗಳ ಹಾವಳಿ ತಪ್ಪುತ್ತದೆ. ಪೈಪೋಟಿಯಿಂದಾಗಿ ಉತ್ತಮ ಗುಣಮಟ್ಟದ ಕನ್ನಡ ಚಿತ್ರಗಳೂ ತಯಾರಾಗುತ್ತವೆ. ಪರಭಾಷಾ ಚಿತ್ರಗಳ ಹಾವಳಿ ಕಡಿಮೆಯಾಗುತ್ತದೆ ಎಂಬ ವಾದ ಡಬ್ಬಿಂಗ್ ಪರವಾಗಿರುವವರದು.
ಇಂಥ ವಿಷಯಗಳ ಕುರಿತು ವಾದವಿವಾದಗಳು, ಚರ್ಚೆಗಳು ನಡೆಯಬೇಕು. ಈ ಚರ್ಚೆಯಲ್ಲಿ ಚಿತ್ರರಂಗ ಮಾತ್ರವಲ್ಲ ಚಿತ್ರ ವೀಕ್ಷಕರನ್ನು ಒಳಗೊಂಡಂತೆ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು. ಈ ಹಿನ್ನೆಲೆಯಲ್ಲಿ ಕರವೇ ನಲ್ನುಡಿ ಈ ವಿಷಯ ಕುರಿತ ಚರ್ಚೆಯನ್ನು ಆರಂಭಿಸುತ್ತಿದೆ. ಆರಂಭದಲ್ಲಿ ಬನವಾಸಿ ಬಳಗದ ಮುಖ್ಯಸ್ಥರಾದ ಆನಂದ್ ಅವರು ಬರೆದಿರುವ ಪ್ರಾಸ್ತಾವಿಕ ಲೇಖನ ಇಲ್ಲಿದೆ. ನಮ್ಮ ಎಲ್ಲ ಓದುಗರು ತಮ್ಮ ಅಭಿಪ್ರಾಯಗಳನ್ನು ಬರೆದು ಕಳುಹಿಸಬೇಕಾಗಿ ವಿನಂತಿ. ಓದುಗರ ಅಭಿಪ್ರಾಯಗಳ ಜತೆಗೆ ಚಿತ್ರರಂಗದ ಗಣ್ಯರು, ಸಮಾಜ ಚಿಂತಕರು, ವಿವಿಧ ಕ್ಷೇತ್ರಗಳ ಪ್ರಮುಖರ ಅಭಿಪ್ರಾಯಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. -ಸಂ
ಬಹುಶಃ ಇಂದು ಇಡೀ ಪ್ರಪಂಚದಲ್ಲಿ ತಮ್ಮ ಮನರಂಜನೆಯನ್ನು ತಮ್ಮದೇ ನುಡಿಯಲ್ಲಿ ಪಡೆದುಕೊಳ್ಳುವ ಹಕ್ಕನ್ನು ಕಳೆದುಕೊಂಡಿರುವ ಏಕೈಕ ಜನರೆಂದರೆ ಕನ್ನಡಿಗರು. ಹೌದು. ಕನ್ನಡಿಗರು ತಮಿಳು, ತೆಲುಗು, ಹಿಂದಿ, ಇಂಗ್ಲೀಷ್, ಜಪಾನೀಸ್, ಫ್ರೆಂಚ್ ಸೇರಿದಂತೆ ಯಾವುದೇ ಭಾಷೆಯ ಒಂದೊಳ್ಳೆ ಚಿತ್ರ ನೋಡಬೇಕೆಂದರೆ ಅರ್ಥವಾಗದಿದ್ದರೂ ಅದೇ ಭಾಷೆಯಲ್ಲಿ ನೋಡಬೇಕಾಗಿದೆ. ನಮ್ಮ ಮಕ್ಕಳು ತಮಗೆ ಬೇಕಾದ ಕಾರ್ಟೂನ್, ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್, ಅವತಾರ್ ಮೊದಲಾದ ಚಿತ್ರಗಳನ್ನು ಕನ್ನಡದಲ್ಲೇ ನೋಡುವ ಭಾಗ್ಯ ಪಡೆದಿಲ್ಲ. ಇದು ಯಾವುದೋ ತಾಂತ್ರಿಕ ತೊಂದರೆಯಿಂದಾಗಿದ್ದರೆ ಬೇರೆ ಮಾತು. ಇಂಥಾ ನಿರಾಕರಣೆಗೆ ಒಳಗಾಗಿರುವುದು ಚಿತ್ರರಂಗದ ಕಟ್ಟುಪಾಡಿನಿಂದಾಗಿ. ಕನ್ನಡದಲ್ಲಿ ನಾನು ಪರಭಾಷೆಯ ಚಿತ್ರ ನೋಡಬೇಕು ಎಂದರೆ ನಮ್ಮ ಚಿತ್ರರಂಗಕ್ಕೆ ಎಲ್ಲಿಲ್ಲದ ಆಕ್ರೋಶ ಉಕ್ಕಿ ಬರುತ್ತದೆ. ಈ ನಾಡಿನ ಜನರು ಏನನ್ನು ನೋಡಬೇಕು, ಕೇಳಬೇಕು ಎಂಬುದನ್ನೆಲ್ಲಾ ತೀರ್ಮಾನಿಸಲು ತಮಗೆ ಜನ್ಮಸಿದ್ಧ ಹಕ್ಕಿರುವಂತೆ ಚಿತ್ರರಂಗದ ಕೆಲ ಪಟ್ಟಭದ್ರರು ನಡೆದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆಸಗುವ ಅಪಚಾರವಾಗಿದೆ.
ಡಬ್ಬಿಂಗ್ ಪರವಾದ ನಿಲುವಿಗೆ ಕಾರಣ
ಉಳಿದೆಲ್ಲಾ ಕಾರಣಗಳಿಗಿಂತಲೂ ಪ್ರಮುಖವಾದದ್ದು “ಕನ್ನಡಿಗರ ಮನರಂಜನೆ ಕನ್ನಡದಲ್ಲಿ ಪಡೆದುಕೊಳ್ಳುವ ಹಕ್ಕು ಕನ್ನಡಿಗರಿಗಿದೆ” ಎನ್ನುವುದು. ಡಬ್ಬಿಂಗ್ ಎನ್ನುವ ಸೌಕರ್ಯ ಇರುವಾಗ ಅದನ್ನು ಬಳಸಿಕೊಳ್ಳಲು ನಮಗೆ ಸಂಪೂರ್ಣ ಸ್ವಾತಂತ್ರವಿರಬೇಕು. ಡಬ್ಬಿಂಗ್ ಎನ್ನುವುದು ಕಾನೂನು ಬಾಹಿರ ದಂಧೆಯಲ್ಲದ್ದರಿಂದ ಮತ್ತು ಅದು ನಮ್ಮ ಮೂಲಭೂತ ಹಕ್ಕೊಂದನ್ನು ಪೂರೈಸುವುದರಿಂದ ಡಬ್ಬಿಂಗ್ ಬೇಕು. ಕನ್ನಡ ನಾಡಿನ ಮಕ್ಕಳು ತಾವು ಕನ್ನಡಿಗರಾಗಿ ಹುಟ್ಟಿದ ಕಾರಣದಿಂದಲೇ ಕಾರ್ಟೂನುಗಳನ್ನೂ ಸೇರಿಸಿ ಅವತಾರ್, ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ಮೊದಲಾದ ಹೊರದೇಶದ ಚಿತ್ರಗಳನ್ನೂ, ತಾರೆ ಜಮೀನ್ ಪರ್, ಕುಟ್ಟಿ ಚಾತನ್ ಮೊದಲಾದ ಭಾರತೀಯ ಚಿತ್ರಗಳನ್ನೂ ಅರ್ಥ ಮಾಡಿಕೊಂಡು ತಮ್ಮದೇ ಭಾಷೆಯಲ್ಲಿ ನೋಡುವ ಸೌಕರ್ಯದಿಂದ ವಂಚಿಸಲ್ಪಡಬಾರದೆನ್ನುವ ಕಾರಣಕ್ಕೆ ಡಬ್ಬಿಂಗ್ ಬೇಕು. ಡಬ್ಬಿಂಗ್ ಬರುವುದರಿಂದ ಕನ್ನಡಕ್ಕೆ ಒಳಿತಾಗುವ ಸಾಧ್ಯತೆಗಳು ಕೂಡಾ ಹೆಚ್ಚಾಗಿದೆ. ಪರಭಾಷಾ ಚಿತ್ರಗಳನ್ನು ನೋಡನೋಡುತ್ತಲೇ ಕನ್ನಡಿಗರು ಕನ್ನಡದಿಂದ ದೂರಾಗುತ್ತಿರುವುದನ್ನೂ, ಪರಭಾಷಿಕರು ನಮ್ಮೂರುಗಳಲ್ಲಿ ಅವರವರ ಭಾಷೆಯ ಮನರಂಜನೆಯನ್ನು ಪಡೆಯುತ್ತಾ ನಾಡಿನ ಮುಖ್ಯವಾಹಿನಿಗೆ ಸೇರುವ ಅಗತ್ಯವಿಲ್ಲದಂತಿರುವುದನ್ನೂ ನಾವು ಕಾಣಬಹುದು. ಕನ್ನಡದಲ್ಲಿ ಡಬ್ಬಿಂಗ್ ಎನ್ನುವ ಉದ್ಯಮದಿಂದಾಗಿ ಹೆಚ್ಚು ಹೆಚ್ಚು ಜನಕ್ಕೆ ದುಡಿಮೆಯ ಅವಕಾಶ ದೊರೆಯುತ್ತದೆ. ಡಬ್ಬಿಂಗ್ ಮೂಲಕ ಶಿವಾಜಿ, ಕುಸೇಲನ್, ತಾರೆ ಜಮೀನ್ ಪರ್, ಘಜನಿ... ಮೊದಲಾದವು ನೂರಾರು ಕೇಂದ್ರದಲ್ಲಿ ಆಯಾ ಭಾಷೇಲೇ ಬಿಡುಗಡೆಯಾಗಿ, ಕನ್ನಡದವರೆಲ್ಲಾ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲೇ ಮನರಂಜನೆ ಪದೆದುಕೊಳ್ಳಲು ಮುಂದಾಗುವುದನ್ನು ತಪ್ಪಿಸಬಹುದಾಗಿದೆ. ಈ ಕಾರಣಗಳಿಂದಾಗಿ ಡಬ್ಬಿಂಗ್ ಬರಬೇಕು. ಎಲ್ಲಕ್ಕೂ ಮಿಗಿಲಾಗಿ ಮೇಲೆ ಹೇಳಿದ್ದೆಲ್ಲಾ ಆದರೂ ಆಗದಿದ್ದರೂ ಕೂಡಾ ಕನ್ನಡಿಗರಿಗೆ ಕನ್ನಡದಲ್ಲಿ ಮನರಂಜನೆ ಪಡೆಯುವ ಮೂಲಭೂತ ಹಕ್ಕಿಗೆ ಮಾನ್ಯತೆ ಸಿಗಲಾದರೂ ಡಬ್ಬಿಂಗ್ ಬೇಕು. ದುರಂತವೆಂದರೆ ಚಿತ್ರರಂಗದ ಕೆಲವು ಮಂದಿ ಡಬ್ಬಿಂಗ್ ಬರುವುದರಿಂದ ಸ್ಪರ್ಧೆ ಎದುರಿಸಬೇಕಾದೀತು ಎಂಬ ಕಾರಣಕ್ಕೋ ಏನೋ ಹತ್ತಾರು ಕಾರಣಗಳನ್ನು ಕೊಡುತ್ತಾ ಡಬ್ಬಿಂಗ್ ಬರದಂತೆ ತಡೆಯುತ್ತಿದ್ದಾರೆ.
ಡಬ್ಬಿಂಗ್ ಬೇಕೆನ್ನುವವರ ಮೇಲಿನ ಕೆಸರೆರಚಾಟ!
ಕರ್ನಾಟಕ ಚಲನಚಿತ್ರ ಆಕಾಡಮಿ ದಕ್ಷಿಣ ಭಾರತ ಚಲನಚಿತ್ರ ಮಂಡಳಿ ಹೊರತಂದಿದ್ದ, ಕನ್ನಡ ಚಿತ್ರರಂಗವನ್ನು ಕಡೆಗಣಿಸಿದ್ದ ವರದಿಯೊಂದರ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಒಂದು ಸಮೀಕ್ಷಾ ವರದಿಯನ್ನು ಬನವಾಸಿ ಬಳಗದ ಸಹಯೋಗದಲ್ಲಿ ಹೊರತಂದಿತ್ತು. ಅದರಲ್ಲಿ ಉದ್ಯಮದ ಅನೇಕರು ಡಬ್ಬಿಂಗ್ ಬೇಕು ಎಂದದ್ದನ್ನು ಪ್ರಸ್ತಾಪಿಸಿ ಇದರ ಬಗ್ಗೆ ಚರ್ಚೆಯಾಗಬೇಕು ಎಂದು ಬರೆಯಲಾಗಿತ್ತು. ಆಕ್ರೋಶದಿಂದ ಮೈಮೇಲೆ ದೇವರು ಬಂದಂತೆ ಕನ್ನಡ ಚಿತ್ರೋದ್ಯಮದ ಕೆಲ ಮಂದಿ ಡಬ್ಬಿಂಗ್ ಬಗ್ಗೆ ಚರ್ಚೆಯಾಗಬೇಕೆಂದು ಬರೆದಿದ್ದ ಕಾರಣದಿಂದಲೇ ವರದಿಯನ್ನು ಹಿಂಪಡೆಯುವಂತೆ ಮಾಡಲು ಯಶಸ್ವಿಯಾದರು. ಇದರಿಂದ ತಿಳಿಯುವುದಾದರೂ ಏನು? ಇವತ್ತಿನ ದಿನ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಕೆನ್ನುವ ಹೇಳಿಕೆಯನ್ನು ಚಿತ್ರರಂಗದ ಒಳಗಿನ ಯಾರೊಬ್ಬರೂ ಹೇಳುವ ಸ್ಥಿತಿ ಇದ್ದಂತಿಲ್ಲ. ಹಾಗೂ ಯಾರಾದರೂ ಹೇಳಬೇಕೆಂದರೆ ಶ್ರೀಮತಿ ಬಿ.ಸರೋಜಾದೇವಿಯವರಂತೆ ನಿವೃತ್ತರಾದವರು ಹೇಳಬೇಕಾಗಿದೆ. ಕನ್ನಡ ಚಿತ್ರರಂಗದಲ್ಲಿದ್ದೇ ಡಬ್ಬಿಂಗ್ ಬೇಕು ಎಂದವರಿಗೆ ಮುಂದೇನಾದೀತು ಎಂಬುದು ಊಹೆಗೆ ನಿಲುಕುವಂತಹುದೇ ಆಗಿದೆ. ಅವರ ಸಿನಿಮಾ ಚಟುವಟಿಕೆಗಳಿಗೆ ಅಸಹಕಾರ, ಚಿತ್ರರಂಗದಿಂದ ಬಹಿಷ್ಕಾರ ಮುಂತಾದ ತಂತ್ರಗಳಿಗೆ ಬಲಿಯಾಗಬೇಕಾಗುತ್ತದೆ ಎಂಬ ಭಯ ಅನೇಕರ ಬಾಯಿ ಕಟ್ಟಿಹಾಕಿದೆ ಮತ್ತು ಸಾರ್ವಜನಿಕವಾಗಿ ಡಬ್ಬಿಂಗ್ ಬೇಡವೆಂಬ ಹೇಳಿಕೆ ನೀಡುವಂತೆ ಮಾಡುತ್ತಿದೆ ಎಂಬುದು ಉದ್ಯಮದ ಒಳಗಿನ ಮಾತು. ಯಾರೇ ಡಬ್ಬಿಂಗ್ ಬೇಕೂ ಅಂದರೂ ಇವರು ವೈಯುಕ್ತಿಕ ಲಾಭಕ್ಕಾಗಿ ಈ ನಿಲುವು ತಳೆದಿದ್ದಾರೆ ಎನ್ನುವ ಸುಲಭದ ಆರೋಪ ಇಂಥವರ ಮೇಲೆ. ಇತ್ತೀಚಿಗೆ ಶ್ರೀಮತಿ ಸರೋಜದೇವಿಯವರು ಡಬ್ಬಿಂಗ್ ಬೇಕು ಅಂದ ಕೂಡಲೇ ಕೇಳಿಬಂದ ಪ್ರತಿಕ್ರಿಯೆ ‘ಅವರು ಚತುರ್ಭಾಷಾ ತಾರೆ, ನ್ಯಾಷನಲ್ ಲೆವೆಲ್ಲಲ್ಲೇ ಮಾತಾಡ್ತಾರೆ’ ಎಂಬ ವ್ಯಂಗ್ಯ. ಹಾಗೇ ಡಬ್ಬಿಂಗ್ ಪರವಾದವರನ್ನೆಲ್ಲಾ ಚಲನಚಿತ್ರ ಕಾರ್ಮಿಕ ವಿರೋಧಿ ಅಂತಾ ಬ್ರಾಂಡ್ ಮಾಡಿ ಬಾಯಿ ಮುಚ್ಚಿಸೋ, ಜನರ ಕಣ್ಣಲ್ಲಿ ಖಳರಾಗಿಸೋ ಪ್ರಯತ್ನಗಳು ನಡೀತಾನೆ ಇವೆ. ಕನ್ನಡಿಗರು ರಾಮಾಯಣ ಮಹಾಭಾರತ ಕನ್ನಡದಲ್ಲೇ ನೋಡಬಾರದಾ? ಎಂದರೆ ನಮ್ಮ ಹಳ್ಳಿ ಜನಕ್ಕೆ ಈ ಕಥೆಗಳು ಗೊತ್ತು, ಅವರಿಗೆ ಇವೆಲ್ಲಾ ಬೇಕಾಗಿಲ್ಲ ಅನ್ನೋ ಫರ್ಮಾನು ಹೊರಡಿಸುತ್ತಾರೆ. ಹಾಗಾದ್ರೆ ನಿಮ್ಮ ಸಿನಿಮಾ ಕಥೆಗಳೂ ನಮ್ಮ ಜನಕ್ಕೆ ಗೊತ್ತಿರೋದೆ ಅಲ್ವಾ ಅಂತಂದ್ರೆ ಏನುತ್ತರ ಕೊಟ್ಟಾರೋ? ಅವತಾರ್, ಸ್ಯಾಂಕ್ಟಮ್ ಥರದ ಚಿತ್ರಗಳನ್ನು ನಮ್ಮ ಜನ ತಮಗೆ ಅರ್ಥವಾಗುವ ಭಾಷೇಲಿ ನೋಡಬೇಕು ಅಂದ್ರೆ ನಮ್ಮ ಹಳ್ಳಿಜನಕ್ಕೆ ಆ ಸಿನಿಮಾಗಳಿಂದ ಏನಾಗಬೇಕಿಲ್ಲಾ ಅಂತಾರೆ. ಹಾಗಾದ್ರೆ ಇವರ ಚಿತ್ರಗಳಿಂದ ಜನಕ್ಕೆ ಏನಾಗಬೇಕಿದೆ? ಯಾರಿಗೆ ಏನು ಬೇಕು, ಏನು ಬೇಡ ಅಂತಾ ನಿರ್ಧರಿಸಕ್ಕೆ ಇವರಿಗೆ ಹಕ್ಕು ಕೊಟ್ಟವರು ಯಾರು?
ಡಬ್ಬಿಂಗ್ ಬರಲಿ! ಕನ್ನಡಿಗರ ಮನರಂಜನೆ ಕನ್ನಡದಲ್ಲಿರಲಿ!
ಹೌದು, ನೋಡುಗರಿಗೆ ತಮಗೆ ಬೇಕಾದ್ದನ್ನು ತಮ್ಮ ನುಡಿಯಲ್ಲಿ ಪಡೆದುಕೊಳ್ಳುವ ಹಕ್ಕು ಇದ್ದೇ ಇದೆ. ಕನ್ನಡಕ್ಕೆ ಡಬ್ಬಿಂಗ್ ಬರಬೇಕಾದ್ದು ಈ ಕಾರಣಕ್ಕಾಗಿಯೇ. ಇನ್ನು ಇದರಿಂದ ಪರಭಾಷಿಕರು ಕನ್ನಡದ ಮುಖ್ಯವಾಹಿನಿಗೆ ಬರ್ತಾರೆ, ಭಾಷೆ ಉಳಿಯುತ್ತೆ ಅನ್ನೋ ನಾಡಪರ ಕಾಳಜಿಯ ಮಾತುಗಳನ್ನೆಲ್ಲಾ ಬದಿಗಿಟ್ಟೇ ನೋಡಿದರೆ ಡಬ್ಬಿಂಗ್ ಸಿನಿಮಾಗಳು ಕನ್ನಡಿಗರಿಗೆ ತಮ್ಮ ಮನರಂಜನೆಯನ್ನು ತಮ್ಮ ತಾಯ್ನುಡಿಯಲ್ಲಿ ಪಡೆದುಕೊಳ್ಳುವ ಮೂಲಭೂತ ಹಕ್ಕನ್ನು ಎತ್ತಿಹಿಡಿಯುತ್ತದೆ. ಹಾಗೆ ಬರೋ ಸಿನಿಮಾಗಳನ್ನು ಚೆನ್ನಾಗಿದ್ದಲ್ಲಿ ಹಿಟ್ ಮಾಡೋದೂ, ಚೆನ್ನಾಗಿಲ್ಲದಿದ್ದರೆ ಹಿಟ್ಟು ಮಾಡೋದೂ ಜನಗಳ ಕೈಲೇ ಇದೆ.
ಚಿತ್ರರಂಗಕ್ಕೊಂದು ಕಿವಿಮಾತು
ಇಂದು ಪರಭಾಷೆಯ ಸಿನಿಮಾಗಳು ನಾಡಿನ ಮೂಲೆಮೂಲೆಗಳಲ್ಲಿ ಬಿಡುಗಡೆಯ ಸೌಭಾಗ್ಯ ಕಾಣಲು ಕನ್ನಡ ಚಿತ್ರರಂಗದ ತಪ್ಪುನೀತಿಗಳೆ ಕಾರಣವಾಗಿದೆ. ಡಬ್ಬಿಂಗ್ ವಿರೋಧಿ ನಿಲುವು, ರಿಮೇಕು, ಹಾಡುಗಳ ಸಂಗೀತದ ನಕಲಿಸುವಿಕೆ, ಕಡಿಮೆಯಿರುವ ಹೊಸ ಪ್ರತಿಭೆಗಳ ಹರಿವು? ಇಂತಹವುಗಳಿಂದಾಗಿ ಕನ್ನಡಿಗ ಪ್ರೇಕ್ಷಕ ಬೇರೆ ಭಾಷೆಯ ಚಿತ್ರಗಳತ್ತ ಮನಸೋಲುತ್ತಿದ್ದಾನೆ. ಗ್ರಾಹಕನಾಗಿ ಆತನಿಗಿರುವ ಅತ್ಯುತ್ತಮವಾದದ್ದನ್ನು ಪಡೆದುಕೊಳ್ಳುವ ಹಕ್ಕನ್ನು ಕನ್ನಡ ಚಿತ್ರರಂಗ ಗೌರವಿಸದೆ ಬ್ಯಾನ್, ನಿಗದಿತ ಪ್ರತಿಯಂತಹ ನಕಾರಾತ್ಮಕ ಕ್ರಮಗಳನ್ನು ಹೇರಲು ಮುಂದಾಗಿ ಈ ಚಿತ್ರಗಳಿಗೆ ಸಲ್ಲದ ಪ್ರಚಾರವನ್ನು ತಾನಾಗೆ ಕಟ್ಟಿಕೊಡುತ್ತಿದೆ ಮತ್ತು ಕಾನೂನಿನ ಮುಂದೆ ಅಪರಾಧಿಯಾಗಿ ನಿಂತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಬರೀ ಕನ್ನಡ ಚಿತ್ರ ವಾಣಿಜ್ಯ ಮಂಡಳಿ ಆಗಿಲ್ಲದಿರುವುದರಿಂದ ಅದು ತುರ್ತಾಗಿ ಮಾಡಬೇಕಾಗಿರೋ ಕೆಲಸವೆಂದರೆ ತುಳು, ಕೊಡವ ಮೊದಲಾದ ಈ ನೆಲದ ಮಣ್ಣಿನ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿಸಿ ಅಂತಹ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಡಬೇಕಾಗಿದೆ. ಕನ್ನಡದ ಪುನೀತ್, ಉಪೇಂದ್ರ ಸೇರಿದಂತೆ ಕನ್ನಡ ಚಿತ್ರಗಳನ್ನು ನೆರೆಯ ಭಾಷೆಗಳಿಗೆ ಡಬ್ಬಿಂಗ್ ಮಾಡಿಸಿ ಅಲ್ಲೂ ಕನ್ನಡಿಗರ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಡಲು ಮುಂದಾಗಬೇಕಾಗಿದೆ. ಒಟ್ಟಿನಲ್ಲಿ ಬದಲಾದ ಕಾಲಕ್ಕೆ ತಕ್ಕಂತೆ ಕನ್ನಡ ಚಿತ್ರರಂಗ ಹೆಜ್ಜೆ ಹಾಕಲು ಸಹಾಯ ಮಾಡಬೇಕಾಗಿದೆ. ಕನ್ನಡ ಚಿತ್ರರಂಗವು ತಾನೊಂದೇ ನಾಡು ನುಡಿಯ ರಕ್ಷಣೆಯ ಹೊಣೆ ಹೊರುವ/ ಹೊರುತ್ತಿರುವ ಮಾತಾಡುವ ಬದಲು, ಆ ಹೊಣೆಯನ್ನು ನಾಡಪರ ಚಿಂತಕರಿಗೆ, ಸಾಮಾಜಿಕ ಸಂಘಟನೆಗಳಿಗೆ, ರಾಜಕಾರಣಿಗಳಿಗೆ, ಜನತೆಗೆ ಬಿಟ್ಟು - ನಾಡ ರಕ್ಷಣೆಯಲ್ಲಿ ತನ್ನ ಸೀಮಿತ ಪಾತ್ರವನ್ನು ನಿರ್ವಹಿಸುತ್ತಾ ಕನ್ನಡ ಚಿತ್ರರಂಗವನ್ನು ಉದ್ಯಮವಾಗಿ ಹೇಗೆ ಯಶ ಗಳಿಸುವಂತೆ ಮಾಡುವುದು ಎಂದು ಚಿಂತಿಸಿದರೆ ಒಳಿತು.
ಆನಂದ್, ಬನವಾಸಿ ಬಳಗ
Friday, June 17, 2011
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2011
(92)
-
▼
June
(23)
- ನೆಲದ ಒಡಲ ಹಾಡೇ ಜಾನಪದ
- ಜನಪದ ಮಹಿಳೆ
- ಡಬ್ಬಿಂಗ್ ಮತ್ತು ಕನ್ನಡ ಚಿತ್ರಪ್ರೇಕ್ಷಕ
- ಪ್ರಜಾಪ್ರಭುತ್ವದ ನೆಲಗಟ್ಟೇ ಹಳ್ಳಿಗಳು: ಗೊ.ರು.ಚನ್ನಬಸಪ್ಪ
- ಬಸವ ಬೆಳಕು (ರೂಪಕ)
- ಬಹುಭಾಷಿಕತೆ ಮತ್ತು ಕನ್ನಡ
- ಬೆಂಗಳೂರು ಕೆಂಪೇಗೌಡ
- ರಂಗಭೂಮಿಯಲ್ಲಿ ನಿರ್ದೇಶಕನ ಪಾತ್ರ
- ಕನ್ನಡದ ಪ್ರಾದೇಶಿಕ ಉಪಭಾಷೆಗಳು
- ಮಹಾರತ್ನಮೆನಿಸಿದಂ ಕವಿರತ್ನಂ
- ಬಸವ ತತ್ವದ ದಂಡನಾಯಕ
- ಪುರಾಣಗಳ ಪುನರ್ರೂಪಿಕೆಯಾಗಿ ಶೂದ್ರತಪಸ್ವಿ
- ಪೂಜೆ ಮತ್ತು ಪ್ರತಿಭಟನೆ
- ಕರ್ನಾಟಕದ ವಚನಗುಮ್ಮಟ ಡಾ|| ಫ.ಗು.ಹಳಕಟ್ಟಿ
- ಕನ್ನಡಿಗರೆಡೆಗೆ ತೂರಿದ ಚಪ್ಪಲಿಯೇ ಇವರಿಗೆ ಆಭರಣ!
- ಬಸವಣ್ಣ, ಪೈಗಂಬರ್ ಮತ್ತು ಕಾರ್ಮಿಕರು
- ಸ್ವಾಭಿಮಾನಿ ಕನ್ನಡಿಗ ನಾರಾಯಣಗೌಡರು
- ಸ್ನೇಹಕ್ಕ್ಕೂ ಬದ್ಧ ಸಮರಕ್ಕೂ ಸಿದ್ಧ
- ಹೊಸ ದಿಕ್ಕಿನೆಡೆ ನಡೆಯಲಿ
- ಕನ್ನಡವೇ ಜಾತಿ ಕನ್ನಡವೇ ಧರ್ಮ ಕನ್ನಡವೇ ದೇವರು
- ಗುಡುಗಿನ ಶ್ರೀ ನಾರಾಯಣಗೌಡರು
- ಭಾಷಾ ಬದ್ಧತೆಯ ನಾರಾಯಣಗೌಡರು
- ಅದ್ಭುತ ಸಂಘಟನಾ ಶಕ್ತಿ
-
▼
June
(23)
ನನ್ನ ಹೆಸರು ಪ್ರಶಾಂತ್, ನಾನು ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸಮಾಡುತ್ತಿದ್ದೇನೆ , ಡಬ್ಬಿಂಗ್ ಚಿತ್ರಗಳಿಗೆ ನನ್ನ ಸಂಪೂರ್ಣ ಸಹಮತವಿದೆ ಯಾಕೆಂದರೆ ತಮಿಳು, ತೆಲುಗು , ಹಾಗು ಮಲಯಾಳಂ ನವರು ಎಲ್ಲ ಬಾಷೆಯ ಚಿತ್ರಗಳನ್ನು ಅವರ ಬಾಷೆಯಲ್ಲೇ ನೋಡುವಂತಾಗಿದೆ , ನಾವು ಕನ್ನಡಿಗರು ಮಾತ್ರ ಎಲ್ಲ ಬಾಷೆಯಾ ಚಿತ್ರಗಳನ್ನು ಆಯಾ ಬಾಷೆಯಲ್ಲೇ ನೋಡುವಂತ ಹಣೆಬರಹ, ಡಬ್ಬಿಂಗ್ ಗೆ ನಮ್ಮ ಚಿತ್ರರಂಗದಲ್ಲಿ ಏಕೆ ಅವಕಾಶ ಕೊಡಿತ್ತಿಲ್ಲವೆಂದರೆ , ರಿಮೇಕ್ ಮಾಡುವ ಒಂದು ದೊಡ್ಡ ನಿರ್ದೇಶಕ ಹಾಗು ನಿರ್ಮಾಪಕರ ಸಮೂಹ ಇದರ ಹಿಂದೆ ಕುತಂತ್ರ ನಡೆಸುತ್ತಿದೆ. ಡಬ್ಬಿಂಗ್ ಚಿತ್ರಗಳು ಶುರುವಾದರೆ ಈ ರಿಮೇಕ್ ಮಾಡುವ ಮಹಾನುಬಾವರಿಗೆ ಕೆಲಸವಿಲ್ಲವಾಗುತ್ತದೆ. ಹಾಗೂ ಕ್ರಿಯಾಶೀಲ ನಿರ್ದೇಶಕರಿಗೆ ಕೈತುಂಬಾ ಕೆಲಸ ಸಿಗುತ್ತದೆ. ನಮ್ಮ ಚಿತ್ರರಂಗ ಅಂತರಾಷ್ಟ್ರೀಯ ಮಟ್ಟದ ಚಿತ್ರಗಳನ್ನು ಕೊಡಲು ಸಾದ್ಯವಾಗುತ್ತದೆ. ಡಬ್ಬಿಂಗ್ ವಿವಾದಕ್ಕೆ ಸಂಬಂದ ಚರ್ಚೆಗಳನ್ನು ಏರ್ಪಡಿಸಿದರೆ ಈ ರಿಮೇಕ್ ರಾಜರು ಬರುವುದಿಲ್ಲ , ಅದಕ್ಕೆ ಬದಲಾಗಿ ತಲೆ ಮಾಸಿದ ಬುದ್ದಿಜೀವಿಗಳನ್ನು ಕಳುಹಿಸುತ್ತಾರೆ, ಆ ಬುದ್ದಿಜೀವಿಗಳು ಐದು ವರ್ಷಕ್ಕೊಂದು ಸಿನಿಮಾ ತೆಗಿಯುತ್ತಾರೆ. ಅದ್ದರಿಂದ ಕರವೇ ಯಲ್ಲಿ ನನ್ನದೊಂದು ವಿನಂತಿ ದಯವಿಟ್ಟು ಡಬ್ಬಿಂಗ್ ಕಾಯಿದೆ ಜಾರಿಗೆ ತರಲು ಆಗ್ರಹಿಸಬೇಕಾಗಿ ವಿನಂತಿ........
ReplyDelete