Friday, June 17, 2011

ಬಹುಭಾಷಿಕತೆ ಮತ್ತು ಕನ್ನಡ


ಹಲವು ಭಾಷೆಗಳು ಒಂದು ಪ್ರದೇಶ ಅಥವಾ ಪರಿಸರದಲ್ಲಿ ಬಳಕೆಯಾಗುತ್ತಿದ್ದರೆ ಅದನ್ನು ಬಹು ಭಾಷಿಕ ಪರಿಸರ, ಒಬ್ಬ ವ್ಯಕ್ತಿ ಏಕಕಾಲಕ್ಕೆ ಹಲವು ಭಾಷೆಗಳನ್ನು ಬಳಸಲು ಸಮರ್ಥನಾಗಿದ್ದರೆ ಆತ ಬಹು ಭಾಷಿಕ ವ್ಯಕ್ತಿ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಯಾವುದೇ ಊರು, ನಗರ, ಒಂದಿಡೀ ನಾಡು, ಅಥವಾ ಜನ ಸಮುದಾಯ ಸಾವಿರಾರು ವರ್ಷಗಳ ಹಿನ್ನೆಲೆಯಿರುವ ತನ್ನ ಭಾಷೆ, ಸಾಹಿತ್ಯ, ಇತಿಹಾಸ, ಕಲಾಪರಂಪರೆಗಳ ಜೊತೆ ಆಳವಾದ, ಗಾಢವಾದ ಕರುಳಬಳ್ಳಿ ಸಂಬಂಧವನ್ನು ಹೊಂದಿರುತ್ತದೆ ಮತ್ತು ಇವೆಲ್ಲವುಗಳ ಮೂಲಕ ರೂಪುಗೊಳ್ಳುವ ವಿಶಿಷ್ಟ ಸಾಂಸ್ಕೃತಿಕ ಚಹರೆಗಳನ್ನು ಹೊಂದಿರುತ್ತದೆ ಎನ್ನುವುದು ಒಂದು ಒಪ್ಪಿತ ತಿಳಿವಳಿಕೆ. ಹಾಗೆಯೇ ಜನಸಮುದಾಯವೊಂದು ಬೇರೆ ಬೇರೆ ಸಾಂಸ್ಕೃತಿಕ ಒಳರಚನೆಗಳನ್ನು ಹೊಂದಿರುವಂತೆ ಭಾಷಿಕವಾಗಿಯೂ ಬಹುರೂಪಿಯಾಗುತ್ತದೆ. ಅಲ್ಲಿ ಹಲವು ಸ್ಥರದ, ಭಿನ್ನ ಸಾಮರ್ಥ್ಯದ ಭಾಷಿಕ ಸಂಸಾರಗಳೂ ಇರುತ್ತವೆ. ಪ್ರತಿ ಸಂಸಾರಕ್ಕೆ ವಿಶಿಷ್ಟ ಘನತೆಯ ಅಸ್ತಿತ್ವ ಇರುತ್ತದೆ. ಆದ್ದರಿಂದಲೇ ಒಂದು ಪರಿಸರದ ಹಲವು ಭಾಷಿಕ ಸಂಸಾರಗಳ ಮಧ್ಯೆ ಸಾಮರಸ್ಯದ, ಈರ್ಷ್ಯೆಯ, ಸಂದೇಹಗಳ, ಪೈಪೋಟಿಯ ಸಂಬಂಧವೂ ಇರುತ್ತದೆ ಎನ್ನುವುದು ನಿರಾಕರಿಸಲಾಗದ ಸತ್ಯ. ಹಲವು ಭಾಷೆಗಳು ಒಗ್ಗೂಡಿದ ವಾಸ್ತವ್ಯದ ಬಹುಭಾಷಿಕ ಪರಿಸರದಲ್ಲಿ ಈ ಬಗೆಯ ಸಂಬಂಧಗಳ ಸ್ಥಿತಿ ಸಹಜ ಹಾಗೂ ನಿರಂತರವಾಗಿರುತ್ತವೆ. ಏಕೆಂದರೆ ಈ ಭಾಷಿಕ ಸಂಬಂಧಗಳು ಒಂದೆರಡು ದಿನಗಳಲ್ಲಿ ಪ್ರಭುತ್ವಗಳ ಆಜ್ಞೆಗಳ ಮೂಲಕವೋ, ವಿದ್ವಾಂಸರ ಪ್ರಮಾಣ ವಚನ ಬೋಧನೆಯ ಮೂಲಕವೋ ರೂಪುಗೊಳ್ಳದೆ ಸಹಜ ರಾಗದ್ವೇಷಗಳಿಂದ ಕೂಡಿದ ಒಡನಾಟಗಳ ಮೂಲಕ ರೂಪುಗೊಂಡಿರುವಂತದ್ದು.
ಆದರೆ ಬಹು ಭಾಷಿಕ ಪರಿಸರ ಇತ್ತೀಚಿನ ದಶಕಗಳಲ್ಲಿ ಕೆಲವು ಅನಪೇಕ್ಷಿತ ಒತ್ತಡಗಳಿಗೆ ಸಿಲುಕಿ ನಲುಗುತ್ತಿದೆ. ಇಲ್ಲಿ ಬಲಿಷ್ಟ ಭಾಷೆಗಳ ಪರವಾದ ವಾತಾವರಣ ರೂಪುಗೊಳ್ಳುತ್ತಿದೆ. ಹಲವು ಬೇರೆ ಬೇರೆ ಕಾಲಘಟ್ಟಗಳಲ್ಲಿ ವಲಸೆ ಬಂದ ಅಥವಾ ಅಲ್ಲಿಯ ಜನರೇ ಆಡಳಿತಶಾಹಿ ಒತ್ತಡಕ್ಕೆ ಸಿಲುಕಿ ಒಪ್ಪಿಕೊಂಡ ಅಥವಾ ಸಹಜವಾಗಿಯೇ ಬರಮಾಡಿಕೊಂಡಿರಬಹುದಾದ, ಕೆಲವೊಮ್ಮೆ ಹೇರಿರಬಹುದಾದ, ಆಕ್ರಮಿಸಿಯೂ ಇರಬಹುದಾದ ಭಾಷೆಗಳನ್ನು ಪ್ರಧಾನ ಭೂಮಿಕೆಗೆ ತಂದು, ಸ್ಥಳೀಯ ಮೂಲಭಾಷೆಗಳನ್ನು ಅನ್ಯಗಳ ನೆರಳಲ್ಲಿ ನಿಲ್ಲಿಸಲಾಗುತ್ತಿದೆ. ಮೂಲಭಾಷೆಗಳ ಸಾಂಸ್ಕೃತಿಕ ಅಸ್ಮಿತೆಗಳನ್ನು ನಿರಾಕರಿಸಲಾಗುತ್ತಿದೆ. ಹಾಗೆಯೇ ಸ್ಥಳೀಯ ಪ್ರಬಲ ಭಾಷೆಗಳನ್ನು ’ಯಜಮಾನ’ ಸ್ಥಾನದಲ್ಲಿ ಪ್ರತಿಷ್ಟಾಪಿಸುವ ಮತ್ತು ಸ್ಥಳೀಯ ಅಲ್ಪಸಂಖ್ಯಾತ ಭಾಷೆಗಳನ್ನು ಮಂಡಿಯೂರುವಂತೆ ಮಾಡುವ ಪ್ರಯತ್ನಗಳನ್ನು ಬಹಳಷ್ಟು ನಿಷ್ಕರುಣೆಯಿಂದಲೇ ಮಾಡಲಾಗುತ್ತಿದೆ ಎನ್ನುವ ಆರೋಪವಿದೆ.
ಸ್ಥಳೀಯರ ಮಾತೃಭಾಷೆಗಳು ಎಷ್ಟರ ಮಟ್ಟಿಗೆ ಪ್ರಧಾನ ಭೂಮಿಕೆಗೆ ಎತ್ತಿ ತರಲ್ಪಟ್ಟ ಪ್ರಬಲ ಮತ್ತು ಅನ್ಯಗಳ ನೆರಳಲ್ಲಿ ನಿಕೃಷ್ಟಗೊಳ್ಳುತ್ತಿವೆ, ಕೀಳರಿಮೆಯಿಂದ ನರಳುತ್ತಿವೆಯೆಂದರೆ ಭಾಷೆಗಳ ಅವನತಿಯ ಆತಂಕವನ್ನು ಸಾರಾಸಗಟಾಗಿ ತಳ್ಳಿ ಹಾಕುವ ಭಾಷಾ ವಿದ್ವಾಂಸರೂ ತಮ್ಮ ಅಭಿಪ್ರಾಯಗಳನ್ನು ಮರುರೂಪಿಸಬೇಕಾದ ಅನಿವಾರ‍್ಯ ಎದುರಾಗುತ್ತಿದೆ. ಅನ್ಯ ಅಥವಾ ಪ್ರಬಲ ಭಾಷೆ, ಭಾಷಿಕ ಹಾಗೂ ಸಾಂಸ್ಕೃತಿಕ ಪರಿಕರಗಳು ಉದಾರವಾಗಿದ್ದರೆ, ಸ್ಥಳೀಯ ಮತ್ತು ಸಣ್ಣ ಸಮುದಾಯಗಳ ಸಾಂಸ್ಕೃತಿಕ, ಭಾಷಿಕ ಚಹರೆಗಳು ಮತ್ತು ಸ್ಮೃತಿಗಳನ್ನು ಗೌರವಿಸುವ ಮನಸ್ಥಿತಿ ಹೊಂದಿದ್ದರೆ ಯಾವ ಆತಂಕಗಳಿಗೂ ಎಡೆಯಿಲ್ಲ. ಆಕ್ರಮಣಕಾರಿಯಾಗಿದ್ದರೆ, ಗುಡಿಸಿಹಾಕುವ ಮನೋಧರ್ಮ ಹೊಂದಿದ್ದರೆ ಎದುರಿಸುವುದಾದರೂ ಹೇಗೆ? ಒಂದೋ ಪ್ರತಿ ದಾಳಿ ನಡೆಸಬೇಕು ಇಲ್ಲವೇ ಅಸಹಾಯಕವಾಗಿ ಶರಣಾಗಬೇಕು ಅಥವಾ ಮುಖ ಮುಚ್ಚಿಕೊಂಡು ಸ್ವತ: ಜಾಗ ತೆರವು ಮಾಡಬೇಕು. ಸಮಸ್ಯೆಯೆಂದರೆ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೂ ಗೌರವವಿಲ್ಲದಂತಹ ದಯನೀಯ ಸ್ಥಿತಿ. ಇದು ಸ್ಥಳೀಯ ಪ್ರಧಾನ ಭಾಷೆಗಳಿಗೆ ಪ್ರಬಲ ಅನ್ಯಗಳು ಮತ್ತು ಸಾಂಸ್ಕೃತಿಕವಾಗಿ ಬಲಾಢ್ಯವಾದ ಭಾಷೆಗಳ ಎದುರು ಹೇಗೆ ಉಳಿವಿನ ಹೋರಾಟವೋ ಹಾಗೆಯೇ ಅಲ್ಪಸಂಖ್ಯಾತ ಸ್ಥಳೀಯ ಭಾಷೆಗಳಿಗೆ ಸ್ಥಳೀಯ ಪ್ರಧಾನ ಭಾಷೆಗಳ ಎದುರು ಉಳಿವಿನ ಹೋರಾಟವೂ ಆಗಿರುವುದು ವಾಸ್ತವ ಸತ್ಯ. ಅದರೊಂದಿಗೆ ಒಂದು ಭಾಷೆಯೊಳಗಿನ ಹಲವು ಭಾಷಿಕ ರೂಪಗಳಿಗೆ ಪ್ರಮಾಣಿತ ಅಥವಾ ಶಿಷ್ಟ ರೂಪದ ಎದುರು ತನ್ನ ಚಹರೆಗಳನ್ನು ಕಾಪಾಡಿಕೊಳ್ಳುವ ಹವಣಿಕೆಯೂ ಇರುತ್ತದೆ. ಆದರೆ ಅಂತಹ ಪ್ರತಿರೋಧಗಳಿಗೆ ಬೇಕಾದ ಸ್ಥೈರ‍್ಯ ಸಾಕಾಗದ ಸಂದರ್ಭದಲ್ಲಿ ಸಾಂಸ್ಕೃತಿಕ ಯಜಮಾನಿಕೆಯ ಗುಣಗಳನ್ನು ರೂಢಿಸಿಕೊಂಡಿರುವ ಭಾಷೆಗಳು ಮತ್ತು ಸಾಮ್ರಾಜ್ಯಶಾಹಿ ಭಾಷೆಗಳ ಎದುರು ಸ್ಥಳೀಯ ಪ್ರಧಾನ ಭಾಷೆಗಳು ಮತ್ತು ಈ ಮೂರೂ ವರ್ಗದ ಭಾಷೆಗಳ ಎದುರು ಸ್ಥಳೀಯ ಅಲ್ಪಸಂಖ್ಯಾತ ಭಾಷೆಗಳು ಹಾಗೂ ಅಲ್ಲಿನ ಪ್ರತಿಯೊಂದು ಭಾಷೆಯ ಪ್ರಮಾಣಿತ ರೂಪದೆದುರು ಅದರ ಒಳ ರೂಪ ರಚನೆಗಳು ಅನುಸಂಧಾನ, ಸಾಮರಸ್ಯ, ಕೊಡುಕೊಳ್ಳುವಿಕೆ ಮುಂತಾದ ಜಾಣ ವ್ಯವಹಾರಗಳ ಮೂಲಕ ನಿರಂತರವಾಗಿ ತಮ್ಮ ಅಸ್ತಿತ್ವದ ಉಳಿವಿನ ಅವಕಾಶಗಳನ್ನು ಹುಡುಕುತ್ತಿರುತ್ತವೆ.
ಕನ್ನಡದ ಸಂದರ್ಭದಲ್ಲಿ ಸಂಸ್ಕೃತವನ್ನು ಸಾಂಸ್ಕೃತಿಕ ಯಜಮಾನ್ಯ ಭಾಷೆಯನ್ನಾಗಿಯೂ, ಇಂಗ್ಲೀಷನ್ನು ಸಾಮ್ರಾಜ್ಯಶಾಹಿ ಭಾಷೆಯನ್ನಾಗಿಯೂ, ಪರಿಭಾವಿಸಲಾಗುತ್ತಿದೆ. ಸಂಸ್ಕೃತ ಮತ್ತು ಕನ್ನಡಗಳ ನಡುವಿನ ಯಜಮಾನ್ಯ - ಅಧೀನ ಸಂಬಂಧ ೧೫೦೦ ಸಾವಿರ ವರ್ಷಗಳಷ್ಟು ಸುದೀರ್ಘ ಕಾಲದ್ದಾದರೆ, ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳ ನಡುವಿನ ಆಳುವ ಮತ್ತು ಆಳಿಸಿಕೊಳ್ಳುವ ಸ್ವರೂಪದ ಸಂಬಂಧ ಕೆಲವು ನೂರು ವರ್ಷಗಳ ಕಾಲದ್ದು. ಸಂಸ್ಕೃತ ಆಳ್ವಿಕೆಯ ಭಾಷೆಯಾಗಿದ್ದ ನಿದರ್ಶನಗಳು ತೀರಾ ಕಡಿಮೆಯಾದರೂ ಆಳುವವರ ತಾತ್ವಿಕತೆಯನ್ನು ರೂಪಿಸುವ ಸ್ಥಾನದಲ್ಲಿ ಇಂದಿಗೂ ವಿರಾಜಮಾನವಾಗಿರುವುದು ಅದರ ಯಜಮಾನಿಕೆಯ ಗತ್ತಿನ ಅಗಾಧತೆಯನ್ನು ಅಥವಾ ಅವೈದಿಕ ಸಮುಯಗಳು ದಾಸ್ಯಪ್ರಿಯ ಸ್ವಭಾವವನ್ನು ಸೂಚಿಸುತ್ತಿರಬಹುದಾದಂತೆ, ಇಂಗ್ಲೀಷ್ ಕಲಿಕೆ ಮತ್ತು ಇಂಗ್ಲೀಷ್ ಮಾಧ್ಯಮದ ಶಿಕ್ಷಣದ ಕುರಿತು ಒಂದಿಡೀ ಜನಸಮುದಾಯದ ತೀವ್ರ ತುಡಿತವು ಇಂಗ್ಲೀಷ್ ಭಾಷೆಯ ಕ್ಷಿಪ್ರವ್ಯಾಪಿ ಗುಣವನ್ನೂ, ವಸಾಹತುಶಾಹಿಯ ಅಗಾಧ ಸಾರ್ವಕಾಲಿಕತೆಯನ್ನೂ ಸೂಚಿಸುತ್ತಿರಬಹುದು.
ಭಾಷೆಗಳ ನಡುವೆ ಅನುಮಾನ ಮತ್ತು ಸಂಘರ್ಷಗಳು ತಾರಕಕ್ಕೇರುವುದು ಶಿಕ್ಷಣಕ್ಕೆ ಸಂಬಂಧಿಸಿದ ವಿದ್ಯಮಾನಗಳಲ್ಲಿ. ಉದಾಹರಣೆಗೆ, ಸಂಸ್ಕೃತ ಎಲ್ಲರಿಗೂ ತಲುಪುವ ಔದಾರ‍್ಯವನ್ನು ಮೊದಲಿನಿಂದ ತೋರದೆ ಇದ್ದುದರಿಂದ ಆಧುನಿಕ ಪೂರ್ವ ಮತ್ತು ನಂತರದ ದಿನಗಳಲ್ಲಿ ಜನಸಾಮಾನ್ಯರ ಶಿಕ್ಷಣದ ವಾಹಕವಾಗಲಿಲ್ಲ. ಆದರೆ ಅದಕ್ಕೆ ಆರೋಪಿಸಲಾಗಿದ್ದ ದೈವಿಕ ಪ್ರಭಾವಳಿ ಮತ್ತು ಅದಕ್ಕಿದ್ದ ಆಳುವ ಶಕ್ತಿಗಳ ಜೊತೆಗಿನ ಒಡನಾಟವು ಪರೋಕ್ಷವಾಗಿ ಸಾಮಾನ್ಯರ ಮತ್ತು ಶೂದ್ರಾತಿಶೂದ್ರರ ಮನೋಲೋಕವನ್ನು ಹಿಡಿತದಲ್ಲಿ ಇರಿಸಿಕೊಳ್ಳಲು ನೆರವಾಗಿತ್ತು. ೧೯ ನೇ ಶತಮಾನದ ಕೊನೆಯ ಹೊತ್ತಿಗಾಗಲೇ ಶಿಕ್ಷಣವು ಮಠ ಮತ್ತು ಅಗ್ರಹಾರಗಳ ವ್ಯಾಪ್ತಿಯನ್ನು ದಾಟಿ ಸಮಾಜಮುಖಿ ಆಗತೊಡಗಿತು. ಅದರಲ್ಲೂ ಕಲಿಕೆಯ ಪರಿಕರಗಳ ಮತ್ತು ಮಾನದಂಡಗಳ ಸ್ವರೂಪವೇ ಬದಲಾಗತೊಡಗಿದ ಕೂಡಲೇ ಸಂಸ್ಕೃತವು ತನ್ನ ಪ್ರಭಾವ ವಲಯದಿಂದ ಬಹು ದೊಡ್ಡ ಸಮಾಜವೊಂದು ನಿಧಾನವಾಗಿ ಹೊರ ಸರಿಯತೊಡಗುತ್ತಿರುವುದರ ಬಗ್ಗೆ ಆತಂಕ ಪಡತೊಡಗಿತು. ಬ್ರಿಟಿಷ್ ಆಳ್ವಿಕೆಯ ಕಾಲದ ಶಿಕ್ಷಣ ವ್ಯವಸ್ಥೆಯಲ್ಲಿ ಇಂಗ್ಲೀಷ್‌ಗೆ ನೇರ ಪರ‍್ಯಾಯವೆನ್ನುವ ನೆಲೆಯಲ್ಲಿ ನಿಲ್ಲಬಯಸಿದ ಅದರ ಪ್ರಯತ್ನಕ್ಕೆ ನಿರೀಕ್ಷಿತ ಪ್ರಮಾಣದ ಫಲ ಸಿಗಲಿಲ್ಲವಾದ್ದರಿಂದ ಅದು ಬೇರೆ ರೂಪದಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳಲೆತ್ನಿಸಿತು.
ಆಧುನಿಕ ಎನ್ನಬಹುದಾದ ಸಾಮುದಾಯಿಕ ಶಿಕ್ಷಣ ವ್ಯವಸ್ಥೆಯಲ್ಲಿ ದೇಶ ಭಾಷೆಗಳ ಮೂಲಕ ಕಲಿಕೆಗೆ ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ಅವಕಾಶ ಸಿಕ್ಕಿದ್ದರಿಂದ ಕೆಳಸ್ತರದ ಬಹುಸಂಖ್ಯಾತ ಕನ್ನಡ ಜನ ಸಂಸ್ಕೃತದ ಹಂಗಿನಿಂದ ಪಾರಾಗುವ ಅವಕಾಶ ಇತ್ತು. ಆದರೆ ಆಗಲೂ ಸಂಸ್ಕೃತ ಪಾಂಡಿತ್ಯ ಪಡೆದವರ ನೆರವಿನ ಮೂಲಕವೇ ಆ ಸಂದರ್ಭದ ಶಿಕ್ಷಣದ ರೂಪುರೇಷೆ ನಿರ್ಧರಿಸಬೇಕಾದ ಅನಿವಾರ‍್ಯ ಎದುರಾಯಿತು. ಹಾಗಾಗಿ ಸಂಸ್ಕೃತ ಮತ್ತು ಸಂಸ್ಕೃತ ಪಂಡಿತ ಪರಂಪರೆಯು ಪಠ್ಯಪುಸ್ತಕಗಳ ಮೂಲಕ ತನ್ನ ಯಜಮಾನ ಸ್ಥಾನಕ್ಕಾಗಿ ಇನ್ನಿಲ್ಲದ ಪ್ರಯತ್ನ ನಡೆಸಿ ದೊಡ್ಡ ಯಶಸ್ಸನ್ನೇ ಪಡೆದಿದ್ದನ್ನು, ಹಲವು ದಶಕಗಳ ಕಾಲ ಕನ್ನಡದ ಮನಸ್ಸನ್ನು ಹಾದಿ ತಪ್ಪಿಸಿದ್ದನ್ನು ಕೆಲವರು ಸತಾರ್ಕಿಕವಾಗಿ ಪ್ರತಿಪಾದಿಸುತ್ತಾರೆ.
ಭಾರತದಲ್ಲಿ ಇಂಗ್ಲೀಷ್ ಭಾಷೆಯ ಮೂಲಕ ಶಿಕ್ಷಣ ಕ್ರಮವನ್ನು ಅಧಿಕೃತಗೊಳಸುವ ನಿಟ್ಟಿನಲ್ಲಿ ಲಾರ್ಡ್ ವಿಲಿಯಂ ಬೆಂಟಿಂಕ್‌ನ ಆದೇಶದ ಮೇರೆಗೆ ೧೮೩೫ ರ ಫೆಬ್ರವರಿ ೨ ರಂದು ಥಾಮಸ್ ಮೆಕಾಲೆ ತಯಾರಿಸಿ ಸಲ್ಲಿಸಿದ ಪ್ರಸಿದ್ಧ ವರದಿಯು ಬ್ರಿಟಿಷ್ ಸರ್ಕಾರ ಶಿಕ್ಷಣಕ್ಕೆಂದು ಮೀಸಲಿರಿಸಿದ ಎಲ್ಲ ಹಣವನ್ನು ಇಂಗ್ಲೀಷ್ ಮಾಧ್ಯಮದಲ್ಲಿ ನೀಡಲಾಗುವ ಶಿಕ್ಷಣಕ್ಕೆ ಮಾತ್ರ ಬಳಸುವ ಸ್ಥಿತಿಯನ್ನು ಸೃಷ್ಟಿಸಿತು. ಆನಂತರ ಹಲವು ಸಂದರ್ಭಗಳಲ್ಲಿ ಬ್ರಿಟಿಷ್ ಸರ್ಕಾರವೇ ತನ್ನ ತಪ್ಪನ್ನು ತಿದ್ದಿಕೊಳ್ಳುವ ಸಲುವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ನೀಡುವ ನೀತಿಗಳನ್ನು ಜಾರಿಗೊಳಿಸಲೆತ್ನಿಸಿತು. ೧೯೧೭ ರಲ್ಲಿ ಸರ್ ಮೈಕೆಲ್ ಸ್ಯಾಡ್ಲರ್ ಸಲ್ಲಿಸಿದ ವರದಿಯ ಫಲವಾಗಿ ೧೯೨೦ ರ ನಂತರ ಭಾರತದಾದ್ಯಂತ ಕಾಲೇಜುಗಳಿಗೆ ಮತ್ತು ವಿಶ್ವ ವಿದ್ಯಾಲಯಗಳಿಗೆ ಮಾತ್ರ ಇಂಗ್ಲೀಷ್ ಮಾಧ್ಯಮದ ಶಿಕ್ಷಣವು ಸೀಮಿತವಾಯಿತು. ಬಹುಪಾಲು ಅದು ಸೂಕ್ತ ಕ್ರಮವೇ ಆಗಿತ್ತು.
ಆದರೆ ಈ ಹೊತ್ತಿನ ತನಕ ಕರ್ನಾಟಕದ ಶಿಕ್ಷಣದಲ್ಲಿ ಸ್ಥಳೀಯ ಭಾಷೆ ಮುಖ್ಯವಾಗಿ ಅದರಲ್ಲೂ ಶಿಕ್ಷಣದಲ್ಲಿ ಕಲಿಕೆಯ ಮಾಧ್ಯಮದ ಭಾಷೆ ಯಾವುದಾಗಿರಬೇಕು? ಇಂಗ್ಲಿಷ್ ಭಾಷೆಯೇ? ದೇಶೀಯವಾಗಿ ಹೆಚ್ಚು ಬಳಕೆಯ ವ್ಯಾಪ್ತಿ ಪಡೆದಿರುವ ಭಾಷೆಯೇ? ಅಥವಾ ಯಾವುದೇ ಸ್ಥಳೀಯ ಭಾಷೆಯೇ? ಸ್ಥಳೀಯ ಭಾಷೆಯೇ ಕಲಿಕೆಯ ಮಾಧ್ಯಮವಾಗಿದ್ದಾಗ ಆ ಭಾಷೆಯ ಯಾವ ಕಾಲಘಟ್ಟದ, ಯಾವ ಪ್ರದೇಶದ, ಯಾವ ರೂಪದ ಭಾಷೆಗೆ ಪಠ್ಯದಲ್ಲಿ ಆದ್ಯತೆ ಸಿಗಬೇಕು? ಹಾಗೆಯೇ ಕಲಿಕೆಯ ಮಾಧ್ಯಮವಾಗಬಹುದಾದ ಆ ಸ್ಥಳೀಯ ಭಾಷೆ ಯಾವುದು? ಆ ಪ್ರದೇಶದ ಬಹುಸಂಖ್ಯಾತರ ಭಾಷೆಯೇ ಅಥವಾ ಅಲ್ಲಿ ಬಳಕೆಯಲ್ಲಿರುವ ಭಾಷೆಗಳೆಲ್ಲವೂ ಕಲಿಕೆಯ ಮಾಧ್ಯಮದ ಅರ್ಹತೆಯನ್ನು ಹೊಂದಿರುವ ಭಾಷೆಗಳೆನಿಸಿಕೊಳ್ಳುತ್ತವೆಯೇ? ಇಂತಹ ಚರ್ಚೆ ಮುನ್ನೆಲೆಗೆ ಬಂದರೆ ಪ್ರತಿಯೊಂದು ಸ್ಥಳೀಯ ಭಾಷೆಯು ನಿಲ್ಲಬೇಕಾದ ಸ್ಥಾನ ಯಾವುದು ಮತ್ತು ಆ ಬಗೆಯ ಸ್ಥಾನಸೂಚಿಗೆ ಅನುಸರಿಸಲಾಗುವ ಮಾನದಂಡಗಳು ಯಾವುವು? ಇಂಗ್ಲಿಷ್ ಭಾಷೆಯು ಕಲಿಕೆಯ ಮಾಧ್ಯಮವಾಗಿರುವ, ಆಗುವ ಸಂದರ್ಭಗಳಲ್ಲಿ ದೇಶವ್ಯಾಪಿಯ ಭಾಷೆ ಮತ್ತು ಸ್ಥಳೀಯರ ಭಾಷೆಗಳ ಸ್ಥಾನಮಾನ ಯಾವುದು? ಆ ಎಲ್ಲ ಪ್ರಶ್ನೆಗಳು ಸತತವಾಗಿ ಚರ್ಚೆಗೆ ಒಳಪಡುತ್ತಿದ್ದರೂ ಉತ್ತರ ಮಾತ್ರ ಅಸ್ಪಷ್ಟ.
ಹಾಗಾಗಿಯೇ ಕನ್ನಡದ ಕಲಿಕೆ, ಬಳಕೆ, ಅಧ್ಯಯನ ಮತ್ತು ಬೋಧನೆಗಳಿಗೆ ಸಂಬಂಧಿಸಿದಂತೆ ವಿಪರೀತ ಗೋಜಲಿನ ಸ್ಥಿತಿಯಿದೆ. ಕರ್ನಾಟಕದ ಭಾಷಾ ವಿದ್ವಾಂಸರು, ಶಿಕ್ಷಣ ತಜ್ಞರು, ಬೋಧಕರು, ಆಸಕ್ತ ಸಾಮಾಜಿಕರು, ಶಿಕ್ಷಣ ಕ್ಷೇತ್ರದ ನೀತಿ ನಿರೂಪಕರ ಸ್ಥಾನದಲ್ಲಿರುವ ಅಧಿಕಾರ ವರ್ಗ ಮತ್ತು ರಾಜಕಾರಣಿಗಳು, ಕನ್ನಡದ ಅಸ್ಮಿತೆಯ ಉಳಿವಿಗಾಗಿ ಶ್ರಮಿಸುವವರು, ಭಾಷೆ ಮತ್ತು ಕಲಿಕೆಯ ಕ್ರಮಗಳನ್ನು ಸಾಂಸ್ಕೃತಿಕ ಆಧಿಪತ್ಯದ ಸ್ಥಾಪನೆ ಅಥವಾ ಮುಂದುವರಿಕೆಯ ಉದ್ದೇಶದ ಅಸ್ತ್ರವಾಗಿಸಿಕೊಂಡಿರುವವರು ಇಲ್ಲವೇ ವರ್ಗಶ್ರೇಣೀಕರಣವನ್ನು ಇನ್ನಷ್ಟು ಬಲವತ್ತರಗೊಳಿಸಲು ಯತ್ನಿಸುವವರು, ಕಲಿಕೆಯ ಮಾಧ್ಯಮ ಭಾಷೆಯ ಬಗೆಗೆ ಸಮುದಾಯದಲ್ಲಿ ಸೃಷ್ಟಿಯಾಗಿರುವ ಭಾವೋನ್ಮಾದವನ್ನು ಉದ್ಧೀಪಿಸಲೆತ್ನಿಸುತ್ತ ಲಾಭ ದೋಚಲೆತ್ನಿಸುವ ಶಿಕ್ಷಣ ವ್ಯಾಪಾರಿಗಳು, ಶಿಕ್ಷಣವನ್ನು ಒದಗಿಸುವುದು ಒಂದು ಸಾಮಾಜಿಕ ಮತ್ತು ನೈತಿಕ ಹೊಣೆಗಾರಿಕೆ ಎಂದು ಯೋಚಿಸುವವರು, ಇಂಗ್ಲಿಷ್ ಕಲಿಕೆಯು ಶತಮಾನಗಳ ಕಾಲದ ಅವಮಾನಗಳಿಂದ, ದೈನೇಸಿ ಬದುಕಿನಿಂದ ಬಿಡುಗಡೆ ಹೊಂದಲು ಸಿಗುತ್ತಿರುವ ಅಸಾಮಾನ್ಯ ಅವಕಾಶ ಎಂದು ನಂಬುತ್ತಿರುವ ದಲಿತ ಹಾಗೂ ಹಿಂದುಳಿದ ಸಮುದಾಯಗಳು, ಇಂಗ್ಲಿಷನ್ನು ತಮ್ಮ ಸೊಫಿಸ್ಟಿಕೇಟೆಡ್ ಬದುಕಿನ ಅವಿಭಾಜ್ಯ ಭಾಗ ಎಂದು ಭಾವಿಸಿರುವ ಪ್ರತಿಷ್ಟಿತ ವರ್ಗಗಳು _ ಇವೆಲ್ಲದರಿಂದ ಸ್ಥಳೀಯ ಅಥವಾ ಪ್ರಾದೇಶಿಕ ಭಾಷೆಗಳ ಕುರಿತ ಚರ್ಚೆ ಬಲು ಸಂಕೀರ್ಣವಾದ ಹಂತಕ್ಕೆ ತಲುಪಿರುವುದರಿಂದ ಸರ್ಕಾರಗಳೂ ದಿಟ್ಟ ಇಲ್ಲವೇ ಸರ್ವ ಸ್ವೀಕೃತವಾಗಬಹುದಾದ ನಿಲುವು ತಳೆಯಲು ಸಾಧ್ಯವಾಗದೇ ಸುದೀರ್ಘ ಕಾಲದಿಂದ ತಿಣುಕುತ್ತಿವೆ. ಕಲಿಯುವ ಭಾಷೆಯಾಗಿ ಮತ್ತು ಕಲಿಕೆಯ ಮಾಧ್ಯಮದ ಭಾಷೆಯಾಗಿ ಸ್ಥಳೀಯ ಭಾಷೆಯ ಸ್ಥಾನ ನಿರ್ಣಯ, ಅದರ ಕಲಿಕೆಯ ಪರಿಕರವಾದ ಪಠ್ಯದ ಸ್ವರೂಪ, ಕಲಿಕೆಯ ಪರಿಸರ, ಪಠ್ಯದ ಅಧ್ಯಯನ ಕ್ರಮ, ಬೋಧನಾ ವಿಧಾನ ಇವೆಲ್ಲವೂ ಬೇರೆ ಬೇರೆ ಸಂದರ್ಭಗಳ ತತ್ಕಾಲೀನ ತೀರ್ಮಾನಗಳಾಗುತ್ತಿರುವುದನ್ನು ಗಮನಿಸಬಹುದಾಗಿದೆ. ಆದ್ದರಿಂದಲೇ ಕಲಿಯಬೇಕಾದ ಭಾಷೆ ಮತ್ತು ಕೈಯಲ್ಲಿ ಹಿಡಿಯಬೇಕಾದ ಪಠ್ಯಪುಸ್ತಕ ಯಾವುದೆನ್ನುವ ಗೊಂದಲ ದಶಕಗಳಿಂದ ಮುಂದುವರಿಯುತ್ತಲೇ ಇದೆ.
ಈ ಗೊಂದಲಗಳ ಪರಿಣಾಮವೆಂದರೆ, ಇವೊತ್ತು ಇಂಡಿಯಾದ ಅದರಲ್ಲೂ ಕರ್ನಾಟಕದ ಜನರ ಅಗಾಧ ಪ್ರಮಾಣದ ಸಂಪತ್ತು ಇಂಗ್ಲೀಷ್ ಮಾಧ್ಯಮದ ಪ್ರಾಥಮಿಕ ಶಿಕ್ಷಣಕ್ಕಾಗಿಯೇ ವಿನಿಯೋಗವಾಗುತ್ತಿದೆ. ಸಮಾಜದ ಕೆಳವರ್ಗಗಳ ಜನ ಸಮುದಾಯ ತಮ್ಮ ದುಡಿಮೆಯನ್ನೆಲ್ಲ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಸುರಿಯುತ್ತಿರುವುದರಿಂದ ಆ ಸಮುದಾಯಗಳು ಆರ್ಥಿಕವಾಗಿ ಅತ್ಯಂತ ದಯನೀಯ ಸ್ಥಿತಿಗೆ ತಲುಪುತ್ತಿವೆ. ಸಾಲದೆನ್ನುವಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಾಯಿಕೊಡೆಗಳಂತೆ ತಲೆಯೆತ್ತಿರುವ ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ವಿಷಯ ಜ್ಞಾನ, ಭಾಷಿಕ ಕೌಶಲ್ಯಗಳ ತಿಳಿವಳಿಕೆ, ಅಗತ್ಯ ತರಬೇತಿ ಇವೇನೂ ಇಲ್ಲದ ಶಿಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿರುವುದರಿಂದ ಇಂಥ ಶಾಲೆಗಳಿಂದ ಕಲಿತು ಬರುವ ಎಳೆಯ ಮನಸ್ಸುಗಳು ಗೋಜಲುಗಳ ಮೂಟೆಗಳಾಗಿರುತ್ತವೆ. ಈ ಮಕ್ಕಳಿಗೆ ಮಾತೃಭಾಷೆಯನ್ನು ಶೈಕ್ಷಣಿಕ ಪರಿಸರದಲ್ಲಿ ಬಳಸುವ ಮತ್ತು ಬಳಕೆಯ ಸಾಧ್ಯತೆಗಳನ್ನು ದಕ್ಕಿಸಿಕೊಳ್ಳುವ ಅವಕಾಶಗಳು ತೀರಾ ಕಡಿಮೆ ಇರುತ್ತದೆ. ತಾಯಿನುಡಿಯನ್ನು ಕಳೆದುಕೊಂಡ ಈ ಮಕ್ಕಳಿಗೆ ಹೆತ್ತವರ ಅಪಾರ ತ್ಯಾಗ ಮತ್ತು ಶ್ರಮದ ಮೂಲಕ ಗಳಿಸಲೆತ್ನಿಸಿದ ಇಂಗ್ಲೀಷ್ ಜ್ಞಾನವೂ ಸರಿಯಾದ ಕ್ರಮದಲ್ಲಿ ಸಿಗದೆ ತಮ್ಮ ಸುತ್ತಲ ಬದುಕಿನ ಜೊತೆಗಿನ ಇವರ ಸಂಬಂಧ ವಿಕಲಗೊಂಡಿದೆ. ಹೀಗಾಗಿ ಸಾಂಸ್ಕೃತಿಕವಾಗಿ ದಿಕ್ಕುಗೆಟ್ಟ ಸ್ಥಿತಿ ಈ ಮಕ್ಕಳದು. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯದ, ಇಂಗ್ಲೀಷನ್ನು ಮಾತನಾಡದಿರುವ ಜನಾಂಗಗಳು ಮನುಷ್ಯರೇ ಅಲ್ಲ, ಸ್ಪರ್ಧೆ ಮತ್ತು ಯಶಸ್ಸಿನ ಕಲ್ಪನೆಯನ್ನು ಆಧರಿಸಿದ ಬಂಡವಾಳಶಾಹಿ ಸಮಾಜದ ಮೌಲ್ಯಗಳಿಗೆ ಅನುಸಾರವಾಗಿ ವರ್ತಿಸದಿದ್ದರೆ, ಬದುಕದಿದ್ದರೆ ಅದು ಬದುಕೇ ಅಲ್ಲ ಎಂಬಂತಹ ಧೋರಣೆಗಳು ಸಾಮೂಹಿಕ ಸನ್ನಿಯಂತೆ ಹಬ್ಬಿಕೊಂಡಿರುವ ಸ್ಥಿತಿಯಲ್ಲಿ ಇಂತಹ ಅತಾರ್ಕಿಕ ಶಿಕ್ಷಣ ವ್ಯವಸ್ಥೆಗಳು ರೂಪುಗೊಳ್ಳುವುದು ಒಂದು ಸಹಜ ವಿದ್ಯಮಾನ. ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಅನೇಕ ಸ್ಥಳೀಯ ಭಾಷೆಗಳ ಬಳಕೆಯನ್ನು ಹಿಂದುಳಿದಿರುವಿಕೆಯ ಮತ್ತು ದೈನ್ಯದ ಸಂಕೇತವೆಂದು ಭಾವಿಸುವ ಸ್ಥಿತಿಯಿದೆ. ಮುಖ್ಯವಾಗಿ ಖಾಸಗಿ ಶಿಕ್ಷಣ ಮತ್ತು ಔದ್ಯೋಗಿಕ ವಲಯಗಳಲ್ಲಿ ಕನ್ನಡದಂತಹ ಸ್ಥಳೀಯ ಭಾಷೆಯನ್ನು ನಿರ್ಬಂಧಿಸುವ ಇಲ್ಲವೇ ಮೂಲೆಗುಂಪಾಗಿಸುವ ಪ್ರಯತ್ನವನ್ನು ತುಂಬ ಆತಂಕದಿಂದ ಗಮನಿಸಲಾಗುತ್ತಿದೆ. ನೂರಾರು ವರ್ಷಗಳ ಕೆಲವೊಮ್ಮೆ ಸಾವಿರಾರು ವರ್ಷಗಳ ಚರಿತ್ರೆಯುದ್ದಕ್ಕೂ ಜನಸಮುದಾಯಗಳು ಶ್ರಮವಹಿಸಿ ರೂಪಿಸಿಕೊಂಡಿರುವ ಸಂವಹನದ ಪರಿಕರಗಳು ಮತ್ತು ಅವುಗಳ ಮೂಲಕ ರೂಪುಗೊಳ್ಳುವ ಜೀವನ ಕ್ರಮಗಳ ಕುರಿತ ಇಂತಹ ದೃಷ್ಟಿಕೋನ ತುಂಬಾ ಅಪಾಯಕಾರಿಯಾದುದು. ಆದ್ದರಿಂದ ಸ್ಥಳೀಯ ಭಾಷೆಗಳ ಸಬಲೀಕರಣಕ್ಕಾಗಿ ಪ್ರಭುತ್ವ ಮತ್ತು ಇನ್ನಿತರ ಸಾಂಸ್ಥಿಕ ಶಕ್ತಿಗಳು ಕಾರ‍್ಯೋನ್ಮುಖವಾಗಬೇಕಾದ ಅವಶ್ಯಕತೆ ಇದೆ ಎಂದು ಒಂದು ಜನ ವರ್ಗ ಭಾವಿಸುತ್ತಿದೆ.
ಈ ವಿದ್ಯಮಾನವನ್ನು ಕೆಲವು ಭಾಷೆಗಳ ಮೂಲೆಗುಂಪಾಗುವಿಕೆ ಎಂದು ಭಾವಿಸುವುದಕ್ಕಿಂತ ಆ ಪರಿಸರದಲ್ಲಿನ ಇತರ ಭಾಷೆಗಳಿಗೆ ಜನ ಸಮುದಾಯ ತನ್ನ ಅಗತ್ಯಗಳ ಅನುಸಾರ ನೀಡಿದ ಆದ್ಯತೆ ಎಂದು ಭಾವಿಸುವುದು ಉಚಿತ. ಹಾಗೂ ಇಂತಹ ಆದ್ಯತೆಗಳ ಅನುಕ್ರಮಣಿಕೆ, ಅವಗಣನೆ, ಪರಿಗಣನೆಯ ಆವರ್ತನ ಕ್ರಿಯೆಯೆನ್ನುವುದು ಬಹು ಭಾಷಿಕ ಪರಿಸರದ ಸಹಜ ನಡಾವಳಿಯಾಗಿರುವುದರಿಂದ ಯಾವುದೇ ಭಾಷೆ ಮತ್ತು ಭಾಷಿಕ ಸಮುದಾಯ ಇದನ್ನು ತನ್ನ ಅಳಿವು ಉಳಿವಿನ ಪ್ರಶ್ನೆಯನ್ನಾಗಿ ಭಾವಿಸಿ ಆತಂಕ ಪಡಬೇಕಾಗಿಲ್ಲ. ಆದರೆ ತನ್ನ ಸ್ಥಾನ ಪಲ್ಲಟಕ್ಕೆ ಕಾರಣಗಳನ್ನು ಶೋಧಿಸುವುದರಲ್ಲಿ ಅದರ ಸ್ಥಾನದ ಮರು ಗಳಿಕೆಯ ಸಾಧ್ಯತೆಗಳಿರುತ್ತವೆ ಎನ್ನುವುದು ಭಾಷಾ ತಜ್ಞರ ಒಂದು ವಲಯದ ಅಭಿಮತ. ಆರ್ಥಿಕ ಮೂಲದ ಶಕ್ತಿಗಳು ಮತ್ತು ಅದು ರೂಪಿಸುವ ಶೋಷಣೆಯ ವ್ಯವಸ್ಥೆ ಮಾತ್ರವಲ್ಲ, ಸಮಾಜವೊಂದು ಅವಲಂಬಿಸಿರುವ ಶಿಕ್ಷಣ ಕ್ರಮವೂ ಆ ಸಮಾಜದ ಜನರ ವಿಶಿಷ್ಟ ಭಾಷಿಕ ಮತ್ತು ಸಾಂಸ್ಕೃತಿಕ ಚಹರೆಗಳನ್ನು ನಾಶಮಾಡುತ್ತದೆ ಎನ್ನುವ ಅಭಿಪ್ರಾಯಗಳು ಸಾರ್ವತ್ರಿಕವಾಗಿ ವ್ಯಕ್ತಗೊಳ್ಳುತ್ತಿರುವುದು ಈಗಿನ ವಾಸ್ತವ. ಭಾಷೆಯೊಂದರ ಅಳಿವು ಉಳಿವಿನ ಕಾಳಜಿಯ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಮೂರು ರೀತಿಯ ಧೋರಣೆಗಳನ್ನು ಕಾಣಲು ಸಾಧ್ಯವಿದೆ. ಶಿಕ್ಷಣದಲ್ಲಿ ಮಾರ್ಪಾಡುಗಳು ಆಗುವ ಮುಂಚೆ ಆ ಸಮುದಾಯದ ಯೋಚನಾಕ್ರಮದಲ್ಲಿ, ಪ್ರಭುತ್ವಗಳ ನೀತಿಗಳಲ್ಲಿ ಬದಲಾವಣೆ ಆಗಬೇಕು. ಶಿಕ್ಷಣ ಕ್ರಮವು ಸ್ಥಳೀಯ ಭಾಷೆಯ ಉಳಿವಿನ ವಿಚಾರದಲ್ಲಿ ವಿಫಲವಾದರೆ ಸಮಾಜ ಮತ್ತು ಶಾಲಾ ವ್ಯವಸ್ಥೆಗಳೆರಡೂ ಆ ಭಾಷೆಯನ್ನು ಅದರ ಎಲ್ಲಾ ಸಾಧ್ಯತೆಗಳ ಸಹಿತ ಕಲಿಯುವ ಹಾಗೂ ಕಲಿಸುವ ಜವಾಬ್ದಾರಿ ತೋರಬೇಕು. ಜೊತೆಗೆ ಪ್ರಭುತ್ವಗಳೂ ತನ್ನ ಕಾನೂನುಗಳ ಮೂಲಕ ಇಂತಹ ಪ್ರಯತ್ನಗಳನ್ನು ಬೆಂಬಲಿಸಬೇಕು ಎಂದು ಪ್ರತಿಪಾದಿಸಲಾಗುತ್ತಿದೆ. ಸಮಾಜವನ್ನು ಸಂರಚಿಸುವ ಸ್ವಯಂತಂತ್ರ ಶಕ್ತಿಗಳಲ್ಲಿ ಶಿಕ್ಷಣ ವ್ಯವಸ್ಥೆಯೂ ಒಂದು ಎನ್ನುವ ಅಭಿಪ್ರಾಯ ಮೊದಲನೆಯದು. ಸಮಾಜವು ಎಲ್ಲ ಪರಿವರ್ತನೆಗಳ ಮೂಲ, ಶಿಕ್ಷಣ ಕ್ರಮದಲ್ಲಿನ ಬದಲಾವಣೆಗಳು ಸಮಾಜದ ಬದಲಾವಣೆಗಳನ್ನು ಆಧರಿಸಿರುತ್ತದೆ ಎನ್ನುವುದು ಮತ್ತೊಂದು ರೀತಿಯ ಅಭಿಪ್ರಾಯ. ಪ್ರಭುತ್ವಗಳು ಭಾಷೆಯೊಂದರ ಉಳಿವಿನ ವಿಚಾರದಲ್ಲಿ ಹೊಣೆಗಾರಿಕೆಯಿಂದ ದೂರ ಉಳಿಯುವುದು ಅಸಾಧ್ಯ ಹಾಗೂ ಅದು ಸರಿಯಾದ ಕ್ರಮವೂ ಅಲ್ಲ ಎನ್ನುವುದು ಮೂರನೇ ಅಭಿಪ್ರಾಯ. ಇವೆಲ್ಲವೂ ಕೆಳಸ್ತರದ ಭಾಷೆಗಳ ಪರವಾದ ಚಿಂತನೆಗಳೆನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಈ ಬಗೆಯ ಚಿಂತನೆಗಳೂ ಒಂದು ಹಂತದ ಭಾಷೆಗಳವರೆಗೆ ಬಂದು ಸುಮ್ಮನಾಗಿಬಿಡುತ್ತವೆ. ಏಕೆಂದರೆ, ಈ ಹಂತದಲ್ಲಿ ಸ್ಥಳೀಯ ಭಾಷೆಗಳ ಸಂಖ್ಯಾಪ್ರಮಾಣ ಹೆಚ್ಚಿರುತ್ತದೆ. ಮೊದಲೇ ಪ್ರಸ್ತಾಪಿಸಿದಂತೆ ಇವುಗಳ ನಡುವಿನ ಸಂಬಂಧ ಸಂಕೀರ್ಣ ಸ್ವರೂಪದ್ದಾಗಿರುತ್ತದೆ. ಅದರೊಂದಿಗೆ ಇಲ್ಲಿ ಸ್ಥಳೀಯ ಎನ್ನುವ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ ಎನ್ನುವ, ಸ್ಥಳೀಯವಾಗಿ ಯಾವುದು ಪ್ರಧಾನ ಯಾವುದು ಪ್ರಧಾನವಲ್ಲದ್ದು ಎನ್ನುವ ಹಲವು ತರದ ಸಮಸ್ಯೆಗಳಿವೆ. ಭಾಷಿಕ ಪರಿಸರದಲ್ಲಿರುವ ಹಲವು ಸ್ಥಳೀಯ ಭಾಷೆಗಳ ಪೈಕಿ ಹಳೆಯದಾದ, ಹೆಚ್ಚು ಸಂಖ್ಯಾ ಬಾಹುಳ್ಯವಿರುವ, ಸಾಂಸ್ಕೃತಿಕ ನೆಲೆಯಲ್ಲಿ ಸ್ಥಳೀಯವಾಗಿ ಆಳ ಬೇರು ಹೊಂದಿದ, ಪ್ರಭುತ್ವದ ಸಹಾನುಭೂತಿ ಪಡೆದ ಭಾಷೆಯೇ ಸಹಜವಾಗಿ ಪ್ರಧಾನ ಸ್ಥಳೀಯ ಭಾಷೆಯ ಸ್ಥಾನ ಗೌರವ ಗಳಿಸುವುದರಿಂದ ಮತ್ತು ಅದರ ಉಳಿವಿಗೆ ಪೂರಕವಾದ ಭಾಷಾ ನೀತಿಗಳ ಕಡೆಗೇ ಪ್ರಭುತ್ವಗಳ ಒಲವೂ ಹರಿಯುವುದರಿಂದ ನೂರಾರು ವರ್ಷಗಳಿಂದ ಅಲ್ಲಿಯೇ ಇದ್ದು ಆ ನಾಡಿನ ಎಲ್ಲಾ ಆಗು ಹೋಗುಗಳಲ್ಲಿ ಭಾಗಿಯಾದ ಉಳಿದ ಭಾಷೆಗಳು ನಗಣ್ಯಗೊಳ್ಳುವುದರಿಂದ ಆ ಭಾಷೆಗಳನ್ನು ಆಡುವ ಸಮುದಾಯಗಳಲ್ಲಿ ಅಸಹನೆ ಬೆಳೆಯುತ್ತದೆ. ಹಾಗಾಗಿ ಇಂತಹ ಸ್ಥಿತಿಯಲ್ಲಿ ಭಾಷೆಗಳ ನಡುವೆ ತಿಕ್ಕಾಟವೂ ಇರುತ್ತದೆ. ಇದನ್ನು ಕರ್ನಾಟಕದಲ್ಲಿ ಕನ್ನಡ ಮತ್ತು ಇತರ ಭಾಷೆಗಳ ನಡುವಿನ ಸಂಬಂಧದ ನೆಲೆಯಲ್ಲಿಯೂ ಭಾವಿಸಲು ಸಾಧ್ಯವಿದೆ. ಇಂತಹ ತಿಕ್ಕಾಟಕ್ಕೆ ಇರಬಹುದಾದ ಕೆಲವು ಕಾರಣಗಳೆಂದರೆ,
ಸ್ಥಳೀಯ ಪ್ರಧಾನ ಭಾಷೆಯ ಭಾಷಿಕರಾದ ಕನ್ನಡಿಗರಿಗೆ ಇತರ ಭಾಷಿಕ ಮತ್ತು ಭಾಷೆಗಳಿಂದ ತಮ್ಮ ಅಸ್ತಿತ್ವಕ್ಕೆ ಅಪಾಯ ಸೃಷ್ಟಿಯಾಗುತ್ತಿದೆ ಎನ್ನುವ ಕಳವಳ.
ಕನ್ನಡೇತರರಿಗೆ ಇರುವ ಪರಸ್ಥಳ ಪ್ರಜ್ಞೆ ಈ ಕಾರಣದಿಂದ ತಮ್ಮ ಮೂಲ ಭಾಷೆ ಮತ್ತು ಸಾಂಸ್ಕೃತಿಕ ಚಹರೆಗಳಿಗೆ ಅಂಟಿಕೊಳ್ಳುವ ತವಕ. ಅದೇ ಸಂದರ್ಭದಲ್ಲಿ ಕನ್ನಡಿಗರ ಅಳಿವು ಉಳಿವಿನ ಆತಂಕಗಳನ್ನು ತಮ್ಮ ವಿರುದ್ದದ ಸಂಘರ್ಷದ ಪ್ರಯತ್ನ ಎಂದು ಭಾವಿಸುವುದು.
ಆ ಇತರ ಭಾಷೆಗಳಲ್ಲಿ ಕೆಲವು ಭಾಷೆಗಳ ಮೂಲ ನೆಲೆಯ ರಾಜ್ಯಗಳ ಜೊತೆಗೆ ಕರ್ನಾಟಕ ಹೊಂದಿರುವ ನೆಲ ಜಲ ವ್ಯಾಜ್ಯಗಳೂ ಸಹ ಬಹು ಭಾಷಿಕ ಪರಿಸರದ ಸಾಮರಸ್ಯದ ಸಾಧ್ಯತೆಗಳು ಕ್ಷೀಣಿಸುವಂತೆ ಮಾಡುತ್ತಿವೆ. ಆದ್ದರಿಂದಲೇ ಕರ್ನಾಟಕದಲ್ಲಿ ಕನ್ನಡದ ಪರವಾಗಿ ಪ್ರಕಟಿಸಲಾಗುವ ಯಾವುದೇ ನೀತಿಗಳ ಕುರಿತಂತೆ ಇತರ ಭಾಷಿಕ ಸಮುದಾಯಗಳ ಕಡೆಯಿಂದ ಅಂತಹ ಉತ್ಸಾಹದ ಪ್ರತಿಕ್ರಿಯೆಯೇನೂ ವ್ಯಕ್ತವಾಗುವುದಿಲ್ಲ.
ಬಹು ಭಾಷಿಕ ವ್ಯವಸ್ಥೆಯಲ್ಲಿನ ಈ ಬಗೆಯ ಅಸಮಾನ ಆದ್ಯತೆಗಳು ಮತ್ತು ಪರಸ್ಪರ ಅಸಹನೆಗಳು ಇಂಗ್ಲೀಷಿನಂತಹ ಭಾಷೆಯ ಪ್ರಾಬಲ್ಯಕ್ಕೆ ಸಹಜವಾಗಿಯೇ ದಾರಿ ಮಾಡಿಕೊಡುತ್ತವೆ. ಕ್ರಮ ಕ್ರಮೇಣ ಸ್ಥಳೀಯ ಭಾಷೆಗಳು ಬದುಕಿನ ಎಲ್ಲ ಸಂದರ್ಭಗಳಲ್ಲಿಯೂ ಅಪ್ರಸ್ತುತಗೊಳ್ಳುತ್ತವೆ. ಬಹು ಭಾಷಿಕತೆಯ ಬಹುರೂಪಿಯಾದ ಬದುಕಿನ ವ್ಯವಸ್ಥೆ ಇಲ್ಲವಾಗಿ ಏಕಭಾಷಿಕತೆಯ ಏಕರೂಪಿ ಬದುಕು ನೆಲೆಯೂರುವ ಅವಕಾಶಗಳು ಹೆಚ್ಚಾಗುತ್ತವೆ ಎನ್ನುವ ಆತಂಕಗಳೂ ಭಾಷಾ ತಜ್ಞರ ಇನ್ನೊಂದು ವಲಯದಲ್ಲಿ ವ್ಯಕ್ತವಾಗುತ್ತಿವೆ.


ಆರ್. ಅಮರೇಂದ್ರಶೆಟ್ಟಿ ಹೊಲ್ಲಂಬಳ್ಳಿ,
ಸಹಾಯಕ ಕನ್ನಡ ಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಹೆಬ್ರಿ -೫೭೬೧೧೨.
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.

No comments:

Post a Comment

ಹಿಂದಿನ ಬರೆಹಗಳು