Tuesday, June 14, 2011
ಕನ್ನಡದ ಪ್ರಾದೇಶಿಕ ಉಪಭಾಷೆಗಳು
ಡಾ.ವ್ಹಿ.ಜಿ.ಪೂಜಾರ
ಬಾಯ್ಮಾತಿನ ಭಾಷೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ-ಭಿನ್ನವಾಗಿರುತ್ತದೆ. ಹೀಗೆ ಭಿನ್ನ-ಭಿನ್ನವಾಗಿರುವುದೇ ಅದು ಜೀವಂತವಾಗಿರುವುದಕ್ಕೆ, ಕಾಲ ಕಾಲಕ್ಕೆ ಬೆಳೆಯುತ್ತಿರುವುದಕ್ಕೆ ನಿದರ್ಶನವಾಗಿದೆ. ಭಾಷೆ ಭಿನ್ನ ಭಿನ್ನವಾಗಿರದಿದ್ದರೆ ಅದರ ಬೆಳವಣಿಗೆ ನಿಂತಿದೆಯೆಂದೇ ಅರ್ಥ. ಪ್ರಪಂಚದ ಯಾವೊಂದು ಜೀವಂತ ಭಾಷೆಯಲ್ಲಿ ಪ್ರಾದೇಶಿಕ ಉಪಭಾಷೆಗಳು ಇದ್ದೇ ಇರುತ್ತವೆ. ಇವು ಪ್ರಾಚೀನ ಕಾಲದಲ್ಲಿ ಹೆಚ್ಚಾಗಿದ್ದುವು. ಒಂದು ಭಾಷೆಯನ್ನಾಡುವ ಭೂಪ್ರದೇಶದಲ್ಲಿ ಬೆಟ್ಟ, ಕೊಳ್ಳ, ನದಿಗಳು ಇರುವುದರಿಂದ ಜನ ಇವನ್ನು ದಾಟಿಕೊಂಡು ಆ ಕಡೆ ಈ ಕಡೆ ಹೋಗುವುದಕ್ಕೆ, ಬರುವುದಕ್ಕೆ ಆಗದೆ ಅಲ್ಲಲ್ಲೇ ನೆಲೆ ನಿಲ್ಲುತ್ತಿದ್ದರು. ಹೀಗೆ ನೆಲೆ ನಿಂತಾಗ ಪರಸ್ಪರರಲ್ಲಿ ಸಂಪರ್ಕ ಕಡಿದು ಹೋಗುವುದು. ಇದರಿಂದಾಗಿ ಆ ಪ್ರದೇಶಗಳಲ್ಲಿ ವಾಸಮಾಡಿರುವ ಜನರ ಭಾಷೆ ಸಹಜವಾಗಿಯೇ ಭಿನ್ನ ಭಿನ್ನವಾಗಿರುತ್ತಿತ್ತು. ಇದರಿಂದ ಪ್ರಾದೇಶಿಕ ಉಪಭಾಷೆಗಳು ಹೆಚ್ಚಾಗಿ ಏರ್ಪಡುತ್ತಿದ್ದುವು. ಆದರೆ ಈಗ ನಾಗರಿಕತೆಯ ಪ್ರಭಾವ ಹೆಚ್ಚಾದಂತೆ ಜನರ ಓಡಾಟ-ಪ್ರಯಾಣ ಹೆಚ್ಚಾಗಿದೆ. ನದಿಗಳಿಗೆ ಅಡ್ಡಲಾಗಿ ಸೇತುವೆಗಳನ್ನು ನಿರ್ಮಿಸಿದ್ದಾರೆ. ಬೆಟ್ಟ ಗುಡ್ಡಗಳನ್ನು ಕೊರೆದು ಸುರಂಗ ಮಾರ್ಗಗಳನ್ನು ನಿರ್ಮಿಸಿದ್ದಾರೆ. ಇದರಿಂದ ಒಂದು ಪ್ರದೇಶದ ಜನ ಇನ್ನೊಂದು ಪ್ರದೇಶಕ್ಕೆ ಹೋಗಿಬರುವುದು ಹೆಚ್ಚಾಗಿ ನಡೆದಿದೆ. ಇದರ ಫಲವಾಗಿ ಉಪಭಾಷೆಗಳ ಸಂಖ್ಯೆ ಕಡಿಮೆಯಾಗಿದೆ.
’ಉಪಭಾಷೆ’ಯೆಂಬುದು ಭಾಷೆಯ ಒಳಗೆ ಕಂಡುಬರುವ ವೈವಿಧ್ಯತೆ. ಇಡಿಯಾಗಿ ನೋಡಿದಾಗ ಭಾಷೆ ಎಲ್ಲರಿಗೂ ಅರ್ಥವಾದರೂ ಭಾಷೆಯ ರಚನೆ ಮತ್ತು ಉಚ್ಚಾರಣೆಯ ದೃಷ್ಟಿಯಿಂದ ಭಾಷೆಯ ಒಳಗೇ ವೈವಿಧ್ಯತೆ ಕಂಡುಬರುತ್ತದೆ. ಈ ವೈವಿಧ್ಯತೆ ಭೌಗೋಳಿಕ ಹಾಗೂ ಸಾಮಾಜಿಕವಾಗಿ ಕಂಡುಬರುತ್ತದೆ. ಭೌಗೋಳಿಕವಾಗಿ ಕಂಡುಬರುವ ವೈವಿಧ್ಯತೆಯನ್ನು ಭೌಗೋಳಿಕ ಉಪಭಾಷೆಯೆಂದೂ ಸಾಮಾಜಿಕವಾಗಿ ಕಂಡುಬರುವ ವೈವಿಧ್ಯತೆಯನ್ನು ಸಾಮಾಜಿಕ ಉಪಭಾಷೆಯೆಂದೂ ಕರೆಯುತ್ತಾರೆ. ಕನ್ನಡನಾಡಿನಲ್ಲಿ ನಾಲ್ಕು ಭೌಗೋಳಿಕ ಉಪಭಾಷೆಗಳಿರುವುದನ್ನು ಪ್ರಾಜ್ಞರು ಗುರುತಿಸಿದ್ದಾರೆ. ಇವನ್ನು ಆ ಪ್ರದೇಶದ ಜನ ನಿತ್ಯ ಮಾತಾಡುವ ಮಾತುಗಳ ಆಧಾರದಿಂದ ಗುರುತಿಸಿದ್ದಾರೆ. ಇವು ಗ್ರಂಥಗಳಲ್ಲಿನ ಭಾಷೆಯನ್ನು ಹೋಲವು. ಅವುಗಳಲ್ಲಿನ ಏಕರೂಪತೆ ಇವುಗಳಲ್ಲಿ ಕಾಣಿಸದು. ’ಒಂದು ನಾಡಿನ ಮೂಡ, ಪಡುವ, ತೆಂಕ, ಬಡಗ ದಿಕ್ಕುಗಳಲ್ಲಿನ ಜನ ತಮ್ಮ ತಮ್ಮ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಸಹಜವಾಗಿ ರೂಪಿಸಿಕೊಂಡು ನುಡಿಯುತ್ತಿರುತ್ತಾರೆ. ಕನ್ನಡ ಭಾಷೆಯ ಸಂದರ್ಭ ಕುರಿತು ಹೇಳುವುದಾದರೆ ಕನ್ನಡಿಗರು ಆಡುವುದೇ ಕನ್ನಡವೇ ಆಗಿದ್ದರೂ ಧಾಟಿ-ಧೋರಣೆಗಳಲ್ಲಿ ನುಡಿಭೇದ ಇದ್ದೇ ಇರುತ್ತದೆ. ಇಂಥ ವಿಶಿಷ್ಟಾಭಿವ್ಯಕ್ತಿಯನ್ನು ’ಪ್ರಾದೇಶಿಕ ಉಪಭಾಷೆ’ಯೆಂದೂ ಕರೆಯುತ್ತಾರೆ.
ಪ್ರಾದೇಶಿಕ ಉಪಭಾಷೆಗಳು ಹುಟ್ಟಿಕೊಳ್ಳಲು ಪ್ರಾಚೀನ ಕಾಲದಲ್ಲಿ ಅನೇಕ ಕಾರಣಗಳಿದ್ದುವು. ಆದರೆ ಈಗ ಅಷ್ಟೊಂದು ಇಲ್ಲ. ಕೆಲವು ಕಾರಣಗಳಿರುವುದನ್ನು ನಾವು ಗುರುತಿಸುವೆವು. ಅವನ್ನಿಲ್ಲಿ ನೋಡಬಹುದು.
ಕರ್ನಾಟಕದ ಭೂ ಪ್ರದೇಶ ತುಂಬ ವಿಸ್ತಾರವಾದುದಾಗಿದೆ. ಒಂದು ಪ್ರದೇಶದ ಮೂಲೆಯಲ್ಲಿ ಇರುವ ಹಳ್ಳಿಯ ವ್ಯಕ್ತಿಯೊಬ್ಬ ಇನ್ನೊಂದು ತುದಿಯಲ್ಲಿರುವ ಹಳ್ಳಿಯ ವ್ಯಕ್ತಿಯೊಡನೆ ಸಂಪರ್ಕ ಸಾಧಿಸುವುದು, ಮಾತನಾಡುವುದು ಅಲ್ಲಿಗೆ ಹೋಗಿಬರುವುದು ಕಷ್ಟ. ಏಕೆಂದರೆ ಅವರ ದೈನಂದಿನ ಕೆಲಸ ಕಾರ್ಯಗಳು ಆ ಪ್ರದೇಶದಲ್ಲೇ ಜರುಗುವವು. ಅವರಿಗೆ ಬೇರೆ ಪ್ರದೇಶಕ್ಕೆ ಹೋಗುವ, ಬೇರೆ ಪ್ರದೇಶದವರೊಡನೆ ಮಾತಾಡುವ ಅಗತ್ಯವಿರುವುದಿಲ್ಲ. ಇದರಿಂದಾಗಿ ಆ ಪ್ರದೇಶಗಳಲ್ಲಿಯೇ ಇವರು ನೆಲೆ ನಿಲ್ಲುವುದರಿಂದ ಇವರ ಭಾಷೆ ಸಹಜವಾಗಿಯೇ ಇನ್ನೊಂದು ಪ್ರದೇಶದ ಭಾಷೆಗಿಂತ ಭಿನ್ನವಾಗಿರುವುದು. ಹೀಗೆ ಭಾಷೆ ಭಿನ್ನ ಭಿನ್ನವಾಗಿರುವುದರಿಂದ ಉಪಭಾಷೆಗಳು ಹುಟ್ಟಿಕೊಳ್ಳುವವು.
ಕೋರ್ಟಿನ ಕೆಲಸ, ವ್ಯವಹಾರ, ದಿನ ನಿತ್ಯದ ಬಳಕೆಗೆ ಬೇಕಾಗುವ ವಸ್ತುಗಳ ಖರೀದಿ, ವೈದ್ಯಕೀಯ ಸೌಲಭ್ಯ ಹಾಗೂ ಇನ್ನಿತರ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಿ ಎಂದು ಕರ್ನಾಟಕದಲ್ಲಿ ಕೆಲ ಜಿಲ್ಲೆಗಳನ್ನು ಒಳಗೊಂಡ ನಾಲ್ಕು ವಿಭಾಗಗಳನ್ನು ಮಾಡಲಾಗಿದೆ. ಜನ ತಮ್ಮ ದೈನಂದಿನ ಕೆಲಸ ಹಾಗೂ ಇನ್ನಿತರ ಕಛೇರಿ ಕೆಲಸಗಳಿಗಾಗಿ ಆ ವಿಭಾಗಗಳ ಕೇಂದ್ರ ಸ್ಥಳಗಳಿಗೆ ಹೋಗುವರೇ ವಿನಾ ಇನ್ನೊಂದು ವಿಭಾಗೀಯ ಸ್ಥಳಕ್ಕೆ ಹೋಗರು. ಇದರಿಂದ ಕರ್ನಾಟಕದ ಸಮಸ್ತ ಜನತೆಯೊಡನೆ ಸಂಪರ್ಕ ಸಾಧ್ಯಮಾಡಿಕೊಳ್ಳಲು ಮಾತಾಡಲು ಎಲ್ಲರಿಗೂ ಅವಕಾಶವಾಗದು. ಹೀಗಾಗಿ ಅವರವರು ಇರುವೆಡೆ ಭಾಷೆ ಭಿನ್ನವಾಗುವುದುಂಟು. ಭಾಷೆಯ ಈ ಬಗೆಯ ಭಿನ್ನತೆ ಉಪಭಾಷೆಗಳ ಹುಟ್ಟಿಗೆ ಕಾರಣವಾಗುವುದು.
ಕರ್ನಾಟಕದ ಆಯಾ ಜಿಲ್ಲೆಗಳಿಗೆ ಹತ್ತಿಕೊಂಡ ಅನ್ಯಪ್ರಾಂತಗಳ ಜನರು ತಮ್ಮ ದೈನಂದಿನ ಕೆಲಸ-ಕಾರ್ಯಗಳಿಗಾಗಿ, ವ್ಯವಹಾರಕ್ಕಾಗಿ ಇಲ್ಲಿಗೆ ಬರುವುದು. ಇಲ್ಲಿನ ಜನ ಕಾರ್ಯನಿಮಿತ್ತ ಅಲ್ಲಿಗೆ ಹೋಗುವುದು ನಿರಂತರವಾಗಿ ನಡೆದೇ ಇರುತ್ತವೆ. ಹೀಗಾಗಿ ಇಂಥ ಪ್ರದೇಶಗಳಲ್ಲಿ ದ್ವಿಭಾಷಿಕತೆ (ಃiಟiಟಿguiಚಿಟism) ಉಂಟಾಗುವುದು. ಇಲ್ಲಿನ ಜನ ಎರಡು ಮೂರು ಭಾಷೆಗಳ ಶಬ್ದಗಳನ್ನು ಮಿಶ್ರಣಗೊಳಿಸಿ ಮಾತಾಡುವುದರಿಂದ ಇವರ ಭಾಷೆ ವಿಶಿಷ್ಟ ರೂಪ ಪಡೆಯುವುದು. ಮತ್ತೊಂದು ಪ್ರದೇಶದ ಭಾಷೆಗಿಂತ ಇದು ಭಿನ್ನವಾಗಿ ತೋರುವುದು. ಈ ರೀತಿಯ ಭಾಷೆಯ ಭಿನ್ನತೆ ಉಪಭಾಷೆಗಳ ಹುಟ್ಟಿಗೆ ಎಡೆಮಾಡಿಕೊಡುವುದು. ಈ ಮುಂತಾದ ಕಾರಣಗಳಿಂದಾಗಿ ಕನ್ನಡದಲ್ಲಿ ನಾಲ್ಕು ಪ್ರಾದೇಶಿಕ ಉಪಭಾಷೆಗಳು ನಿರ್ಮಾಣಗೊಂಡಿರುವುದನ್ನು ವಿದ್ವಾಂಸರು ಈ ಕೆಳಗಿನಂತೆ ಗುರುತಿಸಿರುವರು. ಅವು ಹೀಗಿವೆ:
೧. ಗುಲಬರ್ಗಾ ಕನ್ನಡ
೨. ಧಾರವಾಡ ಕನ್ನಡ
೩. ಮಂಗಳೂರು ಕನ್ನಡ
೪. ಮೈಸೂರು ಕನ್ನಡ
ಈ ಮೇಲಿನ ನಾಲ್ಕೂ ಪ್ರಾದೇಶಿಕ ಉಪಭಾಷೆಗಳಲ್ಲಿ ಬಳಕೆಗೊಳ್ಳುವ ಕನ್ನಡವು ಧ್ವನಿ, ಧ್ವನಿಮಾ, ಆಕೃತಿಮಾ, ಶಬ್ದ, ಪದ, ವಾಕ್ಯ ಹಾಗೂ ವ್ಯಾಕರಣ ಪ್ರಕ್ರಿಯೆಗಳಲ್ಲಿ ಭಿನ್ನ ಭಿನ್ನವಾಗಿರುವುದನ್ನು ಗುರುತಿಸುವೆವು.
೧. ಗುಲಬರ್ಗಾ ಕನ್ನಡ:
ಗುಲಬರ್ಗಾ ಕನ್ನಡ ಉಪಭಾಷಾ ವಲಯಕ್ಕೆ ಗುಲಬರ್ಗಾ, ಬೀದರ, ರಾಯಚೂರು ಜಿಲ್ಲೆಗಳು ಒಳಪಡುವವು. ಈ ಪ್ರದೇಶವು ಸ್ವಾತಂತ್ರ್ಯ ಪೂರ್ವದಲ್ಲಿ ಹೈದ್ರಾಬಾದ ನಿಜಾಮನ ಆಡಳಿತಕ್ಕೆ ಒಳಪಟ್ಟಿತ್ತು. ಆಗ ಉರ್ದು ಈ ಪ್ರದೇಶದ ಆಡಳಿತ ಭಾಷೆಯಾಗಿದ್ದುದರಿಂದ ಈ ಪ್ರದೇಶದ ಕನ್ನಡ ಭಾಷೆಯ ಮೇಲೆ ಉರ್ದುವಿನ ಪ್ರಭಾವ ಹೆಚ್ಚಾಗಿ ಆದುದನ್ನು ಗುರುತಿಸುವೆವು. ಅಲ್ಲದೆ ಈ ಪ್ರದೇಶವು ಮಹಾರಾಷ್ಟ್ರ ರಾಜ್ಯಕ್ಕೆ ಹತ್ತಿಕೊಂಡುದದರಿಂದ ಇಲ್ಲಿನ ಭಾಷೆಯ ಮೇಲೆ ಮರಾಠಿ ಭಾಷೆಯ ಪ್ರಭಾವವಾದುದನ್ನೂ ಕಾಣುವೆವು. ಉರ್ದು ಹಾಗೂ ಮರಾಠಿ ಭಾಷೆಗಳ ಗಾಢವಾದ ಪ್ರಭಾವ ಮತ್ತು ಈ ಎರಡೂ ಭಾಷೆಗಳ ಹಿಡಿತದಲ್ಲಿ ನಲುಗಿ ಹೋದ ಈ ಪ್ರದೇಶದ ಕನ್ನಡ ಭಾಷೆಯು ತನ್ನತನವನ್ನು ಉಳಿಸಿಕೊಂಡು ಬಂದುದು ಕಡಿಮೆ. ಈ ಪ್ರದೇಶದಲ್ಲಿ ಹೆಚ್ಚಾಗಿ ದ್ವಿಭಾಷಿಕತೆ (ಃiಟiಟಿguiಚಿಟism), ತ್ರಿಭಾಷಿಕತೆ (ಖಿಡಿiಟiಟಿguiಚಿಟism) ಯು ಪ್ರಯೋಗದಲ್ಲಿರುವುದನ್ನು ಗುರುತಿಸುವೆವು.
ಕಲಬುರ್ಗಿ ಪ್ರದೇಶದ ಉಪಭಾಷೆಯಲ್ಲಿ ಉರ್ದು, ಮರಾಠಿ, ಹಿಂದಿ, ಅರೇಬಿಕ್ ಮುಂತಾದ ಭಾಷೆಗಳ ಶಬ್ದಗಳು ಇಲ್ಲಿನ ಜನತೆಯ ದೈನಂದಿನ ಮಾತುಕತೆಗಳಲ್ಲಿ ಹಾಸು ಹೊಕ್ಕಾಗಿ ಬೆರೆತು ಹೋದುದನ್ನು ಕಾಣುವೆವು. ಉದಾಹರಣೆಗಾಗಿ ಕೆಲ ಶಬ್ದಗಳನ್ನಿಲ್ಲಿ ನೋಡಬಹುದು.ಉದಾ: ತನಖಾ, ಪರೇಶಾನ್, ನಾಲಾಯಕ್, ದುಕಾನ್, ತರೀಖಾ, ತಖ್ತೆ, ತಾರಿಫ್, ದುನಿಯಾದ, ಖತಲ್, ಖೂನ್ ಮೆಹನತ್, ಫೀಛೆ, ಮುಷ್ಕಿಲ್, ಸಿರ್ಫ, ಬತಾಯ್, ಬಾರಿಕ್, ಸಡಕ್, ಸರ್ದಿ, ಬಯಾನ್, ಠಿಕಾಣ, ಖಿಚಡಿ, ದಗದ, ಪೋಣೆಆಠ್, ಅಗಾವ್, ಅಟಾಪ, ರಗಡ, ಝಣಕ, ಠೀಕ್, ಗರೀಬ್, ನಗದಿ, ಜಲಸಾ, ಪಾರ, ಪೋರಿ, ಜಿಲ್ಲಾ, ಚುಕ್ಕೋಳ್, ಹುಂಡಾ, ಮಾಂವಸಿ, ಖ್ಯಾಲ, ಢಿಗಾರಿ, ದುನಿಯಾದ್, ಪಾರಗೋಳ್, ಭಕ್ರಿ, ಥಾಲಿ, ಗಿಂಡಿ, ಪಾವಣ್ಯಾ ಮುಂತಾದ ಶಬ್ದಗಳನ್ನು ಗುರುತಿಸಿ ಪಟ್ಟಿಮಾಡಬಹುದು. ಇವೆಲ್ಲವೂ ಈ ಪ್ರದೇಶದ ಜನರ ನಿತ್ಯದ ಮಾತುಗಳಲ್ಲಿ ಸೇರಿ ಹೋದುದನ್ನು ಕಾಣುವೆವು.
ಈ ಪ್ರದೇಶದ ರಾಯಚೂರು, ಗುಲಬರ್ಗಾ ಹಾಗೂ ಬೀದರ ಜಿಲ್ಲೆಗಳಲ್ಲಿ ಅದರಲ್ಲೂ ಹಳ್ಳಿಗಾಡಿನಲ್ಲಿ ಹನ, ಹನಾ, ಹಾನವೆಂಬ ಪ್ರಯೋಗಗಳು ಇದ್ದಾನೆ ಎಂಬ ಕ್ರಿಯಾಪದಕ್ಕೆ ಬದಲಾಗಿಯೂ, ಹಳ, ಹಳಾ, ಹಾಳವೆಂಬ, ಪ್ರಯೋಗಗಳು ಇದ್ದಾಳೆ ಎಂಬ ಕ್ರಿಯಾಪದಕ್ಕೆ ಬದಲಾಗಿಯೂ ಪ್ರಯೋಗಗೊಳ್ಳುತ್ತಿರುವುದನ್ನು ಗುರುತಿಸುವೆವು. ಇದೊಂದು ಈ ಪ್ರದೇಶದ ಭಾಷಿಕ ವೈಶಿಷ್ಟ್ಯವೇ ಆಗಿದೆ. ಇಂಥ ಪ್ರಯೋಗಗಳು ಕರ್ನಾಟಕದ ಬೇರೆ ಪ್ರಾದೇಶಿಕ ಉಪಭಾಷೆಗಳಲ್ಲಿ ಕಾಣಿಸವು. ಅಪ್ಟನ್, ಅಪ್ಪಳ್ ಹಾಗೂ ಅಪ್ಪರ್ ಎಂಬ ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ಕ್ರಿಯಾರೂಪಗಳು ಕಾಲಾಂತರದಲ್ಲಿ ಇವುಗಳಲ್ಲಿನ ಪ ಕಾರವು ಹ ಕಾರ (ಪ>ಹ)ವಾಗಿ ಪರಿವರ್ತನೆ ಹೊಂದಿದರ ಹಾಗೂ ಅ-ಹ ವರ್ಣಗಳು ಪಲ್ಲಟಗೊಂಡದುದರ ಫಲವಾಗಿ ಇಂಥ ಪ್ರಯೋಗಗಳು ಇಲ್ಲಿ ಬಳಕೆಗೊಳ್ಳುತ್ತಿರುವುದನ್ನು ಕೇಳುವೆವು. ಈ ಪ್ರಯೋಗಗಳು ಭಾಷೆಯಲ್ಲಿ ಬಳಕೆಗೊಳ್ಳುವಾಗ ಪಡೆದುಕೊಂಡ ಪರಿವರ್ತನೆಯನ್ನಿಲ್ಲಿ ಹೀಗೆ ಬಿಡಿಸಿ ತೋರಿಸಬಹುದು.
ಉದಾ: ಅಪ್ಪನ್>ಅಹನ್ (ಪ>ಹ)>ಹಅನ್ (ವರ್ಣಪಲ್ಲಟ)>ಹನ>ಹನಾ>ಹಾನ.
ಅಪ್ಪಳ್>ಅಹಳ್ (ಪ>ಹ)>ಹಅಳ್ (ವರ್ಣಪಲ್ಲಟ)>ಹಳ> ಹಳಾ>ಹಾಳ.
ಅಪ್ಪರ್>ಅಹರ್ (ಪ>ಹ)>ಹ>ಹಅರ್ (ವರ್ಣಪಲ್ಲಟ)>ಹರ>ಹರಾ>ಹಾರ.
ಈ ಪ್ರದೇಶದಲ್ಲಿ ಇವುಗಳಂತೆಯೇ ಪ್ರಯೋಗದಲ್ಲಿರುವ ಹೌದು, ಹೋಯಿಂದ ರೂಪಗಳೂ ಪ>ಹ ವ್ಯತ್ಯಾಸವನ್ನೂ, ಅ-ಹ ವರ್ಣಪಲ್ಲಟವನ್ನೂ ಹೊಂದಿದುದನ್ನು ಕಾಣುವೆವು.
ಉದಾ: ಅಪ್ಪುದು> ಅಹುದು(ಪ>ಹ)>ಹವುದು>
ಹೌದು>ಹೌಂದು>ಹೊಯಿಂದ
೩. ಸರ್ವನಾಮ, ದರ್ಶಕ ಸರ್ವನಾಮ ಹಾಗೂ ಪ್ರಮಾಣವಾಚಿ ಪದಗಳ ಪ್ರಾರಂಭದಲ್ಲಿ ’ಕ್ ವ್ಯಂಜನವು ಸೇರಿ ಪ್ರಯೋಗಗೊಳ್ಳುವುದು ಈ ಪ್ರದೇಶದ ಭಾಷೆಯ ಇನ್ನೊಂದು ವೈಶಿಷ್ಟ್ಯವಾದುದನ್ನು ಗುರುತಿಸುವೆವು. ಇದಕ್ಕೆ ಕೆಲವು ಉದಾಹರಣೆಗಳನ್ನಿಲ್ಲಿ ಕೊಡಬಹುದು.
ಸರ್ವನಾಮಕ್ಕೆ ಉದಾ: ಅವನು> ಕವನು>ಕವ, ಇವನು>ಕಿವನು>ಕಿವ
ಅವರು>ಕವರು, ಇವರು>ಕಿವರು
ಅದು>ಕದು, ಇದು>ಕಿದು
ದರ್ಶಕನಾಮಕ್ಕೆ ಉದಾ: ಅಲ್ಲಿ>ಕಲ್ಲಿ, ಇಲ್ಲಿ>ಕಿಲ್ಲಿ, ಆಕಡೆ>ಕಕಡೆ, ಈಕಡೆ>ಕಿಕಡೆ
ಪ್ರಮಾಣವಾಚಕಕ್ಕೆ ಉದಾ: ಅಷ್ಟು>ಕಷ್ಟು, ಕಟ್ಟು>ಕಾಟು, ಕsಟ, ಇಷ್ಟು>ಕಿಷ್ಟು, ಕಿಟ್ಟು>ಕೀಟು>ಕೀsಟ
ಇಲ್ಲಿ ಕೆಲ ವಾಕ್ಯ ಪ್ರಯೋಗಗಳನ್ನು ಉದಾಹರಿಸಬಹುದು.
ಉದಾ: ಬುಟ್ಟಿ ಕಿಲ್ಲಿ ಖೊಲ್ಯಾಗ ಅದ ನೋಡ, ಕಿಕಡೆ ಹೋಗಿ ಬಾ, ಕಿಷ್ಟ ಊಟಾಮಾಡು, ಬೆಲ್ಲ ಕೀಟ ಏನು? ನಾ ಒಲ್ಲ, ಅಂಕಾತಾ ಕಿಲ್ಲಿ ಕೂಡು, ಕಲ್ಲಿ ಹೋಗಿ ಬಾ ಇತ್ಯಾದಿ.
ಈ ಪ್ರದೇಶದಲ್ಲಿ ಅಲ್ಪಪ್ರಾಣಗಳ ಸ್ಥಾನದಲ್ಲಿ ಮಹಾಪ್ರಾಣಗಳು ಬಳಕೆಗೊಳ್ಳುತ್ತಿರುವುದು ವಿಶೇಷವಾಗಿದೆ. ಇದಕ್ಕೆ ಕಾರಣ ಈ ಪ್ರದೇಶದ ಭಾಷೆಯ ಮೇಲೆ ಮರಾಠಿ ಭಾಷೆಯ ಪ್ರಭಾವವಾದುದೇ ಕಾರಣವೆನ್ನಬಹುದು ಮತ್ತು ಈ ಪ್ರದೇಶದಲ್ಲಿ ಮರಾಠಿ ಭಾಷೆಯನ್ನಾಡುವ ಜನರೂ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿರಲೂಬಹುದು. ಉದಾಹರಣೆಗೆ ಕೆಲ ಶಬ್ದಗಳನ್ನಿಲ್ಲಿ ನೋಡಬಹುದು.
ಉದಾ: ಕಳಿಸು>ಖಳಸು, ಕಾರ>ಖಾರ, ಕಬ್ಬು>ಖಬ್ಬು, ಟೈಂ>ಠೇಮು, ಕೋಣೆ>ಖೊಲ್ಲಿ, ಜಳಕ>ಝಳಕ, ಕೊಬ್ರಿ>ಖೊಬ್ರಿ, ಬೆಲ್ಲ>ಭೆಲ್ಲ, ಬಕ್ರಿ>ಭಕ್ರಿ, ತಂಬಿಗೆ>ಥಂಬಿಗೆ, ತಾಲಿ>ಥಾಲಿ, ಬಹಳ>ಭಕ್ಕಳ.
’ಬಸ್ಸು ಹೊಂಟದ’ ಎಂಬ ವಾಕ್ಯಪ್ರಯೋಗವು ಈ ಪ್ರದೇಶದಲ್ಲಿ ಬಸ್ಸು ಈ ಕಡೆಗೆ ಬರುವುದನ್ನೂ, ಆಕಡೆಗೆ, ಆಚೆ ಹೋಗುವುದನ್ನು ಸೂಚಿಸುತ್ತದೆ. ಬೇರೆಡೆಗಳಲ್ಲಿ ’ಬಸ್ಸು ಹೊಂಟದ’ ಎಂದರೆ ಆಚೆಕಡೆಗೆ ಬಸ್ಸು ಹೊರಟು ಹೋಗುತ್ತಿರುವುದನ್ನಷ್ಟೇ ಈ ಪ್ರಯೋಗ ಸೂಚಿಸುತ್ತದೆ. ಆದರೆ ಈ ಉಪಭಾಷೆಯಲ್ಲಿ ಈ ರೀತಿ ಎರಡೂ ಅರ್ಥಹೊಂದಿ ’ಬಸ್ಸು ಹೊಂಟದ’ ಎಂಬ ಪ್ರಯೋಗವು ಬಳಕೆಯಲ್ಲಿರುವುದು ಒಂದು ವಿಶೇಷವೇ ಆಗಿದೆ.
ಈ ಪ್ರದೇಶದಲ್ಲಿ ಕೆಲವು ಶಬ್ದಗಳ ಪ್ರಾರಂಭದಲ್ಲಿ ಬರುವ ಅವರ್ಗೀಯ ವ್ಯಂಜನ ’ಹ್ವು ಲೋಪಗೊಂಡು ಮುಂದೆ ಉಳಿದ ಸ್ವರಗಳೊಂದಿಗೆ ಮಾತ್ರ ಆ ಶಬ್ದಗಳು ಉಚ್ಚಾರಗೊಳ್ಳುವುದನ್ನು ಗುರುತಿಸುವೆವು. ಇದಕ್ಕೆ ಕೆಲ ಶಬ್ದಗಳನ್ನಿಲ್ಲಿ ನೋಡಬಹುದು. ಉದಾ:ಹಣ್ಣು-ಹ್+ಎ+ಣ್+ಣ್+ಉ>ಎಣ್ಣು
ಹುಳಿ-ಹ್+ಉ+ಳ್+ಇ>ಉಳಿ
ಹೋಳಿಗೆ-ಹ್+ಓ+ಳ್+ಇ+ಗ್+ಎ>ಓಳಿಗೆ
ಹುಷಾರ-ಹ್+ಉ+ಷ್+ಆ+ರ್+ಅ>ಉಷಾರ
’ವಿದ್ಯರ್ಥವನ್ನು ಸೂಚಿಸುವಲ್ಲಿ ’ರಿ’ ಮತ್ತು ಅಮು, ಆಮು, ಪ್ರತ್ಯಯಗಳು ಕ್ರಿಯಾಧಾತುಗಳಿಗೆ ಅನ್ವಯವಾಗುವುದನ್ನು ಕಲಬುರ್ಗಿ ಕನ್ನಡದ ಒಂದು ವೈಶಿಷ್ಟ್ಯ. ಇದು ಪ್ರಥಮ ಪುರುಷ ಬಹುವಚನ ಸರ್ವನಾಮಗಳಿದ್ದಾಗ ಮಾತ್ರ.
ಉದಾ: ಮಾಡಾರಿ-ನಾವು ಮಾಡೋಣ, ಮಾಡಾಮು-ನಾವು
ಮಾಡೋಣ
ತಿನ್ನಮು-ನಾವು ತಿನ್ನೋಣ, ಹೋಗಾರಿ-ನಾವು ಹೋಗೋಣ
ಹೋಗಾಮು-ನಾವು ಹೋಗೋಣ, ಕೊಳ್ಳಮು-ನಾವು ಕೊಳ್ಳೋಣ
ಕೆಲವು ಸಲ ’ಆಮು’ ಬದಲಾಗಿ ’ಎಮಿ’ ಬಳಕೆಗೊಳ್ಳುವುದೂ ಕಂಡು ಬರುತ್ತದೆ.
ಕೇಳೆಮಿ (ಕೇಳೋಣ), ಹೋಗೆಮಿ (ಹೋಗೋಣ), ನೋಡೆಮಿ (ನೋಡೋಣ) ಇತ್ಯಾದಿ.
ಕಲಬುರ್ಗಿ ಪ್ರಾದೇಶಿಕ ಉಪಭಾಷೆಯಲ್ಲಿ ಇಂಥ ಇನ್ನೂ ಅನೇಕ ವೈಶಿಷ್ಟ್ಯ ಪೂರ್ಣವಾದ ಭಾಷಾ ಪ್ರಯೋಗಗಳನ್ನು ಗುರುತಿಸಬಹುದಾಗಿದೆ. ಈ ಪ್ರದೇಶದಲ್ಲಿ ಅದರಲ್ಲೂ ವಿಶೇಷವಾಗಿ ಈ ಪ್ರದೇಶದ ಹಳ್ಳಿಗಳಲ್ಲಿ ಪ್ರಯೋಗದಲ್ಲಿರುವ ವಾಕ್ಯಗಳು ಕನ್ನಡಭಾಷೆಯ ಸ್ವರೂಪವನ್ನು, ವೈಶಿಷ್ಟ್ಯಗಳನ್ನು ಒಳಗೊಂಡ ಪರಿಯನ್ನು ಅರಿಯಲು ಇಲ್ಲಿ ಕೆಲ ವಾಕ್ಯಗಳನ್ನು ಉದಾಹರಿಸಬಹುದು.
ಉದಾ: ಕವ ಅಂದಾ ಕಿ ನಾಭಿ ನಿನ್ನ ಸರಿ ಬರ‍್ತಾ. ಬುಟ್ಟಿ ಕಲ್ಲೆ ಖೊಲ್ಯಾಗ ಅದನೋಡು. ಇಲ್ಲಿ ತಡ್ಯಾಲ ಹೋಯ್ತು ಮನಸ. ಹರವರ್ಷ ಮಳಿ ಬೀಳ್ತದ. ಹೊರಗ ಹುಯ್ಯಕೋತೀರೋ?. ಒಳಗ ಹುಯ್ಯಕೋತೀರೋ?. ನಾ ಛಬ್ಬಡೆ ಬಸ್ಸಿಗೆ ಹೋಯ್ತಾ. ನಾಟಕ ನೋಡಳಿಕ್ ಜನಾ ಬಂದಿದ್ರು. ಅಂವಾ ಸಾಳೀಗ ದಿನ್ನಾ ಹೋಯ್ತಾನ. ಹ್ವಲಕ್ಕ್ ಬಿತ್ತಬೇಕು. ಕಲಬುರ್ಗಿ ಮ್ಯಾಲಹಾರ. ಅಲ್ಲಿ ಸೋಯ್ ಸಿಕ್ತದ. ಎತ್ತ ಹೋಯ್ತಿ? ನಿನ್ನ ಎಲ್ಲೋ ನೋಡಿದಪ್ಲೆ ಆಗೇದ. ಅಂವಾ ಉಂಡ್ರುಪ್ಲೆ ಹ್ವಾದ. ಬಸ್ಸು ಹೊಂಟದ. ಈಗ ಠೇಮು ಎಷ್ಟ ಆಗೇದ? ಮಗಳೀಗ ಖಳ್ಸು, ನಾವು ನಾಳೀಗ್ ಊರಿಗೆ ಹೋಗಾಮು. ನಾಟಕ ನೋಡಿಕೇರಿ ಬರ್ರಿ. ಮದಿಗೆ ಢಿಗಾರಿ ಢಿಗಾರಿ ನೆಂಟ್ರು ಬಂದಿದ್ರು. ರುಪೈ ನಗದಿ ಕುಡ್ತಿನಿ. ಕಬೂಲಿ ತಗೊಂಡ ಕೇಸಿ ಪರವಾನ್ಗಿ ಬಿಟ್ಟ. ನೀರು ಕೊಂಡೇನ? ಕಲ್ಲೀಲೆ ಕುಟ್ಟಿದ, ಕೊಡ್ಲಿಲಿಂದ ಕುಯ್ದ. ಅವ್ರು ಎಂಟ ಮಳಾ ಅವ, ಕುಡಿಟ್ಗೆ ಬಂದ್ರು. ನಾ ಬರಾದರಾಗ ನೀ ಹೋಗಿ ಬಿಡ್ತಿ. ತಿನಕೆಂ ನೋಡು. ನಾನಂಕ ಬರಾಕಿಲ್ಲ. ಅಂವಾಸ್ಯಾಣಾ ಹನಾ ಅಪಾ. ಈಗ ಮೂರ ಬಡದದ. ನಮ್ದು ಉಂಬೋಣ ಆತು. ನಂಗ ನಮ್ಮೂರಾಗ ಭಕ್ಕಳ ದೋಸ್ತ ಅವ. ಅವು ತಮ್ಮ ಮನ್ಯಾಗ ಕನ್ನಡ ಮಾತಾಡ್ತವ. ಅಜೀಬಾತ್ ನಾ ಈ ಸುದ್ದಿ ಕೇಳಿಲ್ಲ. ಅಂವ ಬಿಲ್ಕೂಲ್ ಲಾಯಕ್ಕಿಲ್ಲಾ. ಅಂವಾ ಏನ್ರಿ ಮಾಸ್ತ ಘುಸಮೂರ ಹನಾ. ಪಂಛೇರ್ ಬೆಲ್ಲ ಕೊಂಡಕ್ಯಾಸಿ ಬಾ. ಅಮ್ಮ ಭೀಟ ಅಂದ ಜಾಗದಾಗ ಭೀಟ್ರಿ. ಏನ್ ಆಡಿ ಹೊಂಬ ಇದ್ಯೋ? ಅಂವಗೆ ಈಗ ಪನ್ನಾಸ ವರ್ಷ. ಅವನ ತಾಗ ಒಂದೇ ರೂಪಾಯಿ ಆದ. ಮುಷ್ಕಿಲ್ ಆಗೇದ. ಬಾಜಾರಕರೆ ಹೋಗು.
ಈ ಮೇಲಿನ ವಾಕ್ಯಗಳಲ್ಲಿ ಅಳವಟ್ಟ ಕೆಲ ಶಬ್ದಗಳು ಸ್ವರಾಂತಗೊಳ್ಳದೆ ವ್ಯಂಜನಾಂತವಾಗಿಯೇ ಉಳಿದುದನ್ನು ಕಾಣುವೆವು; ಇದು ವಿಶೇಷವಾಗಿದೆ. ಅಪ್ಲೆ, ಉಪ್ಲೆ, ಕೇಸಿ, ಕೇರಿ ಮುಂತಾದ ವಿಶಿಷ್ಟರೂಪಗಳು ಇಲ್ಲಿನ ವಾಕ್ಯಗಳಲ್ಲಿ ಪ್ರಯೋಗಗೊಂಡುದುದನ್ನು ಕಾಣುವೆವು. ಮರಾಠಿ, ಉರ್ದು ಶಬ್ದಗಳಂತೂ ಈ ಮೇಲಿನ ವಾಕ್ಯಗಳಲ್ಲಿ ಹೆಚ್ಚಾಗಿ ಬಳಕೆಗೊಂಡುದುದನ್ನು ನೋಡುವೆವು. ಇದರಿಂದಾಗಿ ಯಾವೊಂದು ಭಾಷೆಯೂ ತನ್ನಷ್ಟಕ್ಕೆ ತಾನೇ ಪರಿಶುದ್ಧವಾಗಿ ಇಲ್ಲವೇ ಪ್ರಮಾಣ ಭಾಷೆಯಾಗಿ ಇರಲಾರದು, ಎನಿಸುತ್ತದೆ. ಅದು ಅಕ್ಕ ಪಕ್ಕದಲ್ಲಿ ಪ್ರಯೋಗಗೊಳ್ಳುತ್ತಿರುವ ಭಾಷೆಗಳ ಪ್ರಭಾವಕ್ಕೆ ಒಳಗಾಗಲೇ ಬೇಕಾಗುತ್ತದೆ. ಇದಕ್ಕೆ ಗುಲಬರ್ಗಾ ಕನ್ನಡವೇ ಸಾಕ್ಷಿಯಾಗಿದೆ. ಇಲ್ಲಿನ ಭಾಷೆ ಉರ್ದು-ಪರ್ಶಿಯನ್, ಮರಾಠಿ, ಹಿಂದಿ ಭಾಷೆಗಳೊಂದಿಗೆ ಬೆರೆತು ವಿಶಿಷ್ಟರೂಪ ಹೊಂದಿರುವುದನ್ನು ಈ ಮೇಲಿನ ವಾಕ್ಯಗಳಿಂದ ತಿಳಿಯುವೆವು.
೨. ಧಾರವಾಡ ಕನ್ನಡ
ಧಾರವಾಡ ಕನ್ನಡ ಉಪಭಾಷಾ ವಲಯಕ್ಕೆ ಧಾರವಾಡ, ಗದಗ, ವಿಜಾಪುರ, ಬಾಗಲಕೋಟ, ಹಾವೇರಿ, ಬೆಳಗಾವಿ, ಬಳ್ಳಾರಿ ಜಿಲ್ಲೆಗಳು ಒಳಪಡುವವು. ಈ ಪ್ರದೇಶದ ಮೇಲೆ ಮರಾಠಿ ಭಾಷೆಯ ಪ್ರಭಾವವು ಹೆಚ್ಚಾಗಿ ಆಗಿದೆ. ಒಂದು ಬಗೆಯ ದೇಸೀತನ ಜವಾರಿತನವನ್ನು ಈ ಪ್ರದೇಶದ ಭಾಷೆಯು ಒಳಗೊಂಡಿರುವುದುದನ್ನು ಗುರುತಿಸುವೆವು.
೧. ಮೈಸೂರು ಪ್ರದೇಶದಲ್ಲಿ ’ಎ’ ಕಾರಂತಗೊಳ್ಳುವ ಶಬ್ದಗಳೆಲ್ಲವೂ ಇಲ್ಲಿ ’ಇ’ ಕಾರಾಂತ ಹೊಂದಿ ಪ್ರಯೋಗಗೊಳ್ಳುವುದನ್ನು ನೋಡುವೆವು. ಇದಕ್ಕೆ ಇಲ್ಲಿ ಕೆಲವು ಉದಾಹರಣೆಗಳನ್ನು ನೋಡಬಹುದು. ಉದಾ: ಶಾಲೆ-ಶಾಲಿ, ಮನೆ-ಮನಿ, ಆನೆ-ಆನಿ, ಒಂಟೆ-ಒಂಟಿ, ಕುದುರೆ-ಕುದುರಿ, ಹುಡುಗೆ-ಹುಡುಗಿ, ಕೆರೆ-ಕೆರಿ, ಬೆಳೆ-ಬೆಳಿ, ಮಳೆ-ಮಳಿ, ಕೋಣೆ-ಕೋಣಿ, ದೋಸೆ-ದೋಸಿ, ಬೆಣ್ಣೆ-ಬೆಣ್ಣಿ, ಗೆರೆ-ಗೆರಿ.
ಮರಾಠಿ ಶಬ್ದಗಳು ಈ ಪ್ರದೇಶದ ಭಾಷೆಯಲ್ಲಿ ಹೆಚ್ಚಾಗಿ ಸೇರಿಕೊಂಡು ಪ್ರಯೋಗಗೊಳ್ಳುತ್ತಿರುವುದನ್ನು ನಾವು ಕಾಣುವೆವು. ಕೆಲವನ್ನಿಲ್ಲಿ ಉದಾಹರಿಸಬಹುದು.
ಉದಾ: ಖಾನಾವಳಿ, ಗಿಂಡಿ, ಚಾಲೂ, ಶಾಣ್ಯಾ, ಪಾವಣ್ಯಾ, ಸಾಡಿ, ಠೀಕ್, ಖರೀದಿ, ಸಕಾಳ, ಸಂಡಾಸ, ಹಕೀಕತ್, ಚಾಲೂ, ಅಗ್ದಿ, ಭಕ್ರಿ, ಉದ್ರಿ, ನಗದಿ, ಸಮಜಾಸಿ, ಪಾರ, ದುಕಾನ, ಪೌಣೆ ಆಠ, ಪೋರಿ, ದೀಡ್, ದುಪ್ಪಟ, ಗಾಂವ, ಚೌಕಶಿ, ಮುಂತಾದುವನ್ನು ಉಲ್ಲೇಖಿಸಬಹುದು.
ಗುಲಬರ್ಗಾ ಕನ್ನಡದಂತೆ ಇಲ್ಲಿಯೂ ಕೇಸಿ, ಕೇರಿ, ಎಂಬ ಸಹಾಯಕ ಕ್ರಿಯಾ ಪದಗಳು ಕ್ಯಾಸ, ಕ್ಯಾರ, ಎಂದು ರೂಪಾಂತರಹೊಂದಿ ಬಳಕೆಗೊಳ್ಳುವುದನ್ನು ಕಾಣುವೆವು. ಹೋಗಿಕ್ಯಾಸಬರ್ರಿ, ನೋಡಿಕ್ಯಾರ ಬರ್ರಿ, ಮಾಡಿಕ್ಯಾಸ ಬರ್ರಿ, ಮಾಡಿಕ್ಯಾರ ಹೋಗ್ರಿ ಇಂಥ ಪ್ರಯೋಗಗಳು ಬಳಕೆಗೊಳ್ಳುವುದನ್ನು ಇಲ್ಲಿ ಸಾಮಾನ್ಯವಾಗಿದೆ.
ಬೇರೆ ಉಪಭಾಷಾ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಕೆಲ ಶಬ್ದಗಳು ಇಲ್ಲಿ ಯಾವುದೇ ಅರ್ಥ ಬದಲಾವಣೆಯನ್ನು ಹೊಂದದೆ ವಿಶಿಷ್ಟರೂಪಗಳನ್ನು ಪಡೆದುಕೊಂಡು ಬಳಕೆಗೊಳ್ಳುವುದನ್ನು ಗುರುತಿಸುವೆವು. ಉದಾಹರಣೆಗಾಗಿ ಕೆಲವನ್ನಿಲ್ಲಿ ನೋಡಬಹುದು.ಉದಾ: ಕುಳಿತುಕೊಳ್ಳಿ-ಕುಂದರ್ರಿ
ನಿಂತುಕೊಳ್ಳಿ-ನಿಂದರ್ರಿ
ವರೆಗೆ-ಮಟಾ
ಆ ಮೇಲೆ-ಹಿಂದಾಗಡೆ
ಮುಂದೆ-ಮುಂದಾಗಡೆ
ಪ್ರಾರಂಭಿಸಿದ-ಹತ್ಯನ,
ಬೇಗನೆ-ಲಗೂಟ
ನೆನಪು-ನೆಪ್ಪ
ಈ ಉಪಭಾಷೆಯ ಸ್ವರೂಪವನ್ನು ತಿಳಿಯಲು ಇಲ್ಲಿ ಬಳಕೆಯಲ್ಲಿರುವ ಕೆಲವು ವಾಕ್ಯಗಳನ್ನು ನಾವಿಲ್ಲಿ ನೋಡೋಣ.
ಉದಾ: ’ಊರಾಗ ಎಲ್ಲರೂ ಬೇಸಿ ಅದಾರ, ಗಾಂವ ಅದಾರ, ಪಾಡ ಆದಾರ’.
’ಖಾನಾವಳಿ ಚಾಲೂ ಐತೇನ್ರಿ,
’ಏನಬೇ ಇಂದ ವಣಿಗ್ಗಿ ಏನ ಮಾಡಿ’,
’ಏ ತಮ್ಮಾ ಲಗೂಟ, ಈ ಕಡೆ ಬಾರೋ’,
’ಹ್ಯಾಂಗ ನಡದೈತ್ಯೋತಮ್ಮ ನಿನ್ನ ಹ್ವಾರೆ’,
ಭಾಳ ಚಾಲೂ ಅದಿ ನೋಡ್ಲೆ ಭಪ್ಪರೆ ಮಗನ’,
‘ಇಂದನಗದಿ, ನಾಳಿ ಉದ್ರಿ
’ಅವ ನೋಡ್ಕೋತ ಕೂತಾನ’
’ಅವನ ಹೊಲಾ ಅಲ್ಲಿ ಮಟಾ ಅದ’
’ಕಂಡಾ ಪಟಿ ಹುಲ್ಲಿನ ಹೊರಿ ಹೊತ್ಕೊಂಡ ತಂದಾನ’
ನೀವು ಊರಿಗೆ ಹೋಗಿ ಕ್ಯಾಸ ಬರ್ರಿ.
’ಅಂವ ಕೆಲಸಾ ಅಷ್ಟ ಮಾಡಿಕ್ಯಾರ ಹೋಗ್ತಾನ’.
ಇಂಥ ವಾಕ್ಯ ಪ್ರಯೋಗಗಳಲ್ಲದೆ ಇಲ್ಲಿ ಪುರುಷಾರ್ಥಕ ಸರ್ವನಾಮಗಳ ಬಳಕೆಯಲ್ಲಿ ಸಂಕ್ಷೇಪೀಕರಣ ನಡೆದುದನ್ನು ಗುರುತಿಸುವೆವು. ಅವನು, ಇವನಿಗೆ ಬದಲಾಗಿ ’ಅವ>ಅಂವಾ, ಇವ>ಇಂವಾ ಶಬ್ದಗಳೂ ನಾನು, ನೀನುಗಳಿಗೆ ಬದಲಾಗಿ ನಾ, ನೀ ಎಂಬ ಪ್ರಯೋಗಗಳು ಬಳಕೆಯಲ್ಲಿರುವುದನ್ನು ಕಾಣುವೆವು.
ಈ ಉಪಭಾಷೆಯ ಮೇಲೆ ಮರಾಠಿ ಭಾಷೆಯ ಪ್ರಭಾವ ಎಷ್ಟಾಗಿದೆಯೆಂಬುದಕ್ಕೆ ಇಲ್ಲಿನ ಜನ ಬರೆದ ಪತ್ರದ ಬರಹವೊಂದರಲ್ಲಿ ನೋಡಬಹುದು.
’ದೋನ್‌ಮಹಿನೆ ಪಹಿಲೆ ಇಲ್ಲಿ ಬಂದಾಗ ಸಮಜಾಸಿ ಹೇಳಿದ ಮಾತ ನೆಪ್ಪ ಇರಬೇಕು. ಆ ಕೆಲಸ್ ಬದ್ದಲ್ ನಾನು ಭಿ ನಿಮ್ಮ ದುಕಾನಕ ಬರತಾ, ಒಂದಿಷ್ಟ ಸಾಡಿ ಖರೀದಿ ಮಾಡುದೈತಿ. ನಾನ್ ಬಂದಾಗ ನನ್ನ ಮಗಾ ಭಿ ಬರತಾ, ಏನ್ ಹಕೀಕತ್ ತಿಳಿಸಿ ಪತ್ರಾ ಬರ‍್ಯೂದ್. ನಾನೂ ಭಿ ಚಾರ್ ಆಟ್ ದಿವಸ್ ದಾರಿ ನೋಡ್ತಾ. ಆದ ಪತ್ರ ಬಂತು ಠಿಕ್. ಜರಾ ಪತ್ರ ಬರಲಿಲ್ಲ್ ನಾನ್ ಬರುದುಲ್ಲಾ. ಕಿಂವಾ, ನಿಮ್ಮ ಪತ್ರದಮ್ಯಾಲ್ ನಮ್ಮುದು ಎಲ್ಲಾ ನಿಂತದ್."
೩. ಮಂಗಳೂರು ಕನ್ನಡ:-
ಮಂಗಳೂರು ಕನ್ನಡ ಉಪಭಾಷಾ ವಲಯಕ್ಕೆ ದಕ್ಷಿಣ ಕನ್ನಡ, ಉಡುಪಿ, ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಒಳಪಡುವವು. ಈ ಪ್ರದೇಶದ ಭಾಷೆ ಶಿಷ್ಟತೆಯ ಮೆರುಗನ್ನು ಪಡೆದಿದೆ. ಇದರ ಮೇಲೆ ಇಂಗ್ಲೀಷ್, ಮಲೆಯಾಳಿ, ಕೊಂಕಣಿ ಹಾಗೂ ತುಳು ಭಾಷೆಯ ಪ್ರಭಾವವಾದುದನ್ನು ಗುರುತಿಸುವೆವು. ಇಲ್ಲಿನ ಜನರೂ ಹೆಚ್ಚಾಗಿ ಶಿಕ್ಷಿತರಾಗಿರುವುದರಿಂದ ಶಿಷ್ಟ ಭಾಷಾ ಪ್ರಯೋಗಗಳನ್ನು ತಮ್ಮ ನಿತ್ಯದ ಮಾತುಕತೆಗಳಲ್ಲಿ ಹೆಚ್ಚಾಗಿ ಬಳಸುವುದುಂಟು. ಈ ಪ್ರದೇಶದ ಬಹುತೇಕರ ಮಾತೃ ಭಾಷೆ ಕನ್ನಡವಾಗಿರದೆ ತುಳು ಆದುದನ್ನು ಗುರುತಿಸುವೆವು. ಇದರಿಂದಾಗಿ ಇಲ್ಲಿ ತುಳುವಿನ ಪ್ರಭಾವ ಹೆಚ್ಚಾದುದನ್ನು ಕಾಣುವೆವು. ಉದಾಹರಣೆಗಾಗಿ ಕೆಲವು ವಾಕ್ಯಗಳನ್ನಿಲ್ಲಿ ನೋಡಬಹುದು.
ಉದಾ: ಬಸ್ಸು ಬಂತು ಮಾರಾಯ್ರೆ
ನೀವು ನೋಡಿದ ಹಣ್ಣು ಅಲ್ಲಿ ಉಂಟಲ್ಲವೋ?
ಎಂತದು ಮಾರಾಯ್ರ ಡಾಕ್ಟರು ಕೊಟ್ಟ ಮದ್ದು ತಕೋಬೇಕು
ಅವ್ ಮನೆಯನ್ನು ಕ್ರಯಕ್ಕೆ ತೆಕ್ಕೊಂಡ.
ಹೊಟ್ಲದಲ್ಲಿ ಊಟ ಇಲ್ಲದ್ದು ಕೇಳಿ ನನ್ನ ಮಂಡೆ
ಬಿಸಿಯಾದದ್ದುಂಟು.
ಅಣ್ಣನಿಗಿಂತ ತಮ್ಮ ಕಡು ಜಾಣ
’ನಿದ್ರೆ ಚೆನ್ನಾಗಿ ತೆಗೀತಾನೆ’
ಮಂಗಳೂರು ಕನ್ನಡ ಕೆಲವು ಶಬ್ದಗಳ ಪ್ರಾರಂಭದಲ್ಲಿ ಬರುವ ಇ, ಉ, ಅ, ಆ, ಸ್ವರಗಳು ಎ.ಒ.ಏ.ಗಳಾಗಿ ಪರಿವರ್ತನೆಗೊಂಡು ಬಳಕೆಯಲ್ಲಿರುವುದನ್ನು ಗುರುತಿಸುವೆವು. ಇದಕ್ಕೆ ಕೆಲವು ಉದಾಹರಣೆಗಳನ್ನಿಲ್ಲಿ ನೋಡಬಹುದು:
ಉದಾ: ಇಲಿ>ಎಲಿ, ಬಿಳಿ>ಬೆಳಿ (ಇ>ಎ),
ತುಳಿ>ತೊಳಿ, ಸುರಿ>ಸೊರಿ (ಉ>ಒ)
ಕುಣಿ>ಕೊಣಿ, ಕುದಿ>ಕೊದಿ (ಉ>ಒ)
ನಗು>ನೆಗು, ಗಂಟಲು>ಗೆಂಟಲು (ಅ>ಎ)
ಆಡು>ಏಡು, ಆಮೆ>ಏಮೆ (ಅ>ಏ)
ಇಲ್ಲಿ ’ವ್ಯವಹರಣೆಯ ಕನ್ನಡದಲ್ಲಿ ವಿಶಿಷ್ಟ ಪ್ರಯೋಗಗಳೂ ಉಂಟು. ಉದಾ ಕೊಟ್ಟುತುಲೆ (ಕೊಡಲಿಲ್ಲ), ಕೊಡದುಲೆ (ಕೊಡುವುದಿಲ್ಲ) ಕೊಡಕುಲೆ (ಕೊಡಲಿಕ್ಕಿಲ್ಲ), ಕುಡಿನಿ (ಕುಡಿಯಿರಿ), ಬರಡಿ/ಬರಡ (ಬರಬೇಡಿ) ತಿನ್ನಡ/ತಿನ್ನಡಿ (ತಿನ್ನಬೇಡಿ), ಮಾಡ್ಕು(ಮಾಡಬೇಕು). ಇರೆಕ್ಕು (ಇರಬೇಕು), ಹೋಕು (ಹೋಗಬೇಕು)’.
೪. ಮೈಸೂರು ಕನ್ನಡ:
ಮೈಸೂರು ಕನ್ನಡ ಉಪಭಾಷೆ ವಲಯಕ್ಕೆ ಮೈಸೂರು, ಮಂಡ್ಯ, ಬೆಂಗಳೂರು, ತುಮಕೂರು, ಹಾಸನ, ಕೋಲಾರ, ಚಿತ್ರದುರ್ಗಾ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಒಳಪಡುವವು. ಇಲ್ಲಿ ಕನ್ನಡದ ಮೇಲೆ ತಮಿಳು ಹಾಗೂ ಮಲೆಯಾಳಿ ಭಾಷೆಗಳ ಪ್ರಭಾವವಾದುದನ್ನು ಗುರುತಿಸುವೆವು. ಮೈಸೂರು, ಬೆಂಗಳೂರು ನಗರಗಳ ಭಾಷೆ ಶಿಷ್ಟವೆನಿಸಿದರೆ ಇಲ್ಲಿನ ಗ್ರಾಮೀಣ ಪ್ರದೇಶಗಳ ಭಾಷೆ ವಿಶಿಷ್ಟವಾದುದಾಗಿದೆ. ಇದಕ್ಕೆ ಕೆಲವು ಶಬ್ದಗಳನ್ನಿಲ್ಲಿ ನೋಡಬಹುದು.
ಉದಾ: ಬುದ್ಧಿ, ದ್ಯಾವ್ರು, ಅಣ್ಣದೀರು, ತಮ್ಮದೀರು, ಮಡಗ್ಬುಟ್ಟು, ತಿಳುಸು, ಕಳುಸು, ಹೋಗಬುಟಬಾ, ಅರಮನೆ, ಕೇಳುದ್ರು, ಹೇಳುದ್ರು ರಾಕಾಸಿ (ರಾಕ್ಷಸಿ), ಉರುಗ (ಹುಡುಗ), ಉರುಗಿ (ಹುಡುಗಿ) ಲಪ್ಪ (ಅಪ್ಪ) ಲಣ್ಣ (ಅಣ್ಣ) ಲವ್ವ (ಅವ್ವ) ಆಕಳ್ಳಿ (ಹಾಗೇ ಆಗಲಿ). ತಿನ್ನ (ತಿಂದ) ಬನ್ನ (ಬಂದ), ಹೋದ್ನ (ಹೋದ)
ಗುಲಬರ್ಗಾ ಹಾಗೂ ಧಾರವಾಡ ಕನ್ನಡ ಉಪಭಾಷೆಗಳಲ್ಲಿ ಬಳೆಕಗೊಳ್ಳುತ್ತಿರುವ ಕೇಸಿ, ಕೇರಿ, ಕ್ಯಾಸ, ಕ್ಯಾರ ಎಂಬ ಪ್ರಯೋಗಗಳಂತೆ ಈ ಪ್ರದೇಶದಲ್ಲಿ "ಏಳಿ" ಎಂಬ ರೂಪ ವಿಶೇಷವಾಗಿ ಬಳಕೆಗೊಳ್ಳುವುದುಂಟು. ಇಲ್ಲಿ ಮಾತು ಮಾತಿಗೆ ಏಳಿ ಬುದ್ಧಿ, ಏಳಿ ಸ್ವಾಮಿ, ಕೇಳ್ತಿನೇಳಿ, ಹೇಳ್ತಿನೇಳಿ, ಬಂದ್ನೇಳಿ, ನೋಡಿದ್ನೇಳಿ ಎಂದು ಏಳಿ ಶಬ್ದವನ್ನು ಪ್ರಯೋಗಿಸುವುದುಂಟು.
ಉದಾ: ಊರಿಗೆ ಹೋಗಬುಟ್ ಬಾ
ಕ್ಷೌರ ಮಾಡಸಬುಟ್ ಬಾ
ಏಳ್ರೀ ಬುದ್ಧಿ ಏಳ್ರಿ
ಬೆಳಗಿನ ತಿಂಡಿ ಆಯ್ತಾ.
ತಟ್ಟೆ ಅಲ್ಲೇ ಮಡಗು.
’ಅದ್ಯಾವ ಸಟೆ ಮಾತೂಂತುಯೋಳ್ತೀಯಾ, ಒಸಿ ಬುದ್ವಾದ ಯೇಳೋದು ಕೇಳು. ಕೊನ್ನಿ ಬುದ್ದಿ ಕೊನ್ನಿ, ತಕ್ಕನ್ನಿ. (ಕೊಳ್ಳಿ, ಬುದ್ಧಿ ಕೊಳ್ಳಿ, ತೆಗೆದುಕೊಳ್ಳಿ.) ಮಗಾ, ಅಸು, ಬಂತು ಆಲ್ ಕರಿ, ತುಸಾ ಉಲ್ಲಾ ಇಡು.’
ಮೈಸೂರು, ಬೆಂಗಳೂರು ಹಾಗೂ ಮಂಗಳೂರು ಪ್ರದೇಶಗಳಲ್ಲಿ ಪ್ರಚಲಿತದಲ್ಲಿ ಇರುವ ಕನ್ನಡಭಾಷೆ ಶಿಷ್ಟತೆಯ ಕವಚವನ್ನು ಹೊದ್ದುಕೊಂಡಿದೆಯೆನಿಸುತ್ತದೆ. ಇಂಗ್ಲೀಷ ಭಾಷೆಯ ಪ್ರಭಾವ ಇಲ್ಲಿ ಹೆಚ್ಚಿಗೆ ಆಗಿದೆ. ಶಿಕ್ಷಣ ಪಡೆದಂತೆಲ್ಲ ವ್ಯಕ್ತಿ ಶಿಷ್ಟನಾಗಿ ಸೋಪೆಸ್ಟೇಕೇಟೆಡ್ ಆಗಿ ವರ್ತಿಸುವುದು ಸಹಜ. ಅದೇ ಉತ್ತರ ಕರ್ನಾಟಕ ಭಾಗದ ಕನ್ನಡ ಭಾಷೆಯ ಮೇಲೆ ಇಂಗ್ಲೀಷ್ ಭಾಷೆಯ ಪ್ರಭಾವವಾದುದು ಕಡಿಮೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರಯೋಗಗೊಳ್ಳುವ ’ಎ’ ಕಾರಂತ ಶಬ್ದಗಳು ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ’ಇ’ ಕಾರಾಂತವಾಗಿ ಬಳಕೆಗೊಳ್ಳುತ್ತಿರುವುದನ್ನು ಕಾಣುವೆವು.
ಉದಾ-ಆನೆ-ಆನಿ, ಒಂಟೆ-ಒಂಟಿ, ಹುಡುಗೆ-ಹುಡುಗಿ, ಮನೆ-ಮನಿ, ಕುದುರೆ-ಕುದುರಿ, ದೋಸೆ-ದೋಸಿ, ಕೋಣೆ-ಕೋಣಿ, ಜಡೆ-ಜಡಿ, ಶಬ್ದಗಳ ಬಳಕೆಯಲ್ಲಿ ಅಷ್ಟೇ ಏಕೆ ಹಲವಾರು ವಾಕ್ಯಗಳಲ್ಲೂ ಭಿನ್ನತೆಯಿರುವುದನ್ನು ಕಾಣುವೆವು. ಧಾರವಾಡದ ಹೆಣ್ಣು ಮಗಳೊಬ್ಬಳನ್ನು ಮೈಸೂರಿನವನು "ಏನಮ್ಮಾ ಚೆನ್ನಾಗಿದ್ದೀಯಾ" ಎಂದರೆ ಆಕೆ ಮುನಿಸುಗೊಂಡು ನಾನೇನು ಮುದುಕಿನಾ? ಎಂದು ಪ್ರಶ್ನೆ ಮಾಡುವಳು. ಧಾರವಾಡಕ್ಕೆ ಬಂದ ಮೈಸೂರಿನ ಅತಿಥಿಯೊಬ್ಬರಿಗೆ ಆ ಮನೆಯ ಒಡತಿ ಊಟಕ್ಕೆ ಬನ್ನಿ ಎಂದು ಕರೆದಾಗ, ಆತ- ’ಆಯ್ತು’ ಎನ್ನುವನು. ಆಗ ಆಕೆ ಆಯ್ತಾ, ಆಗಲಿ ಬಿಡಿ ಹೋಗಿ ಬನ್ನಿ ಎನ್ನುವಳು. ’ಆಯ್ತು’ ಎಂಬ ಶಬ್ದದ ಅರ್ಥ ಮೈಸೂರಿನ ಕಡೆ ಬಂದೆ, ರೆಡಿ ಎಂದಾದರೆ ಧಾರವಾಡದ ಕಡೆ ಇದರ ಅರ್ಥ ಮುಗಿಯಿತು, ಎಂದಾಗುವುದು.
ಮಂಗಳೂರಿನಲ್ಲಿ ’ಖಾನಾವಳಿ ಚಾಲೂ ಐತೇನ್ರಿ ಎಂದು ಕೇಳಿದರೆ ಯಾರಿಗೂ ಅರ್ಥವಾಗದು. ’ಹೋಟ್ಲದಲ್ಲಿ ಊಟ ಸಿಕ್ಕುತ್ತಾ’ ಎಂದು ಕೇಳಿದರೆ ಅರ್ಥವಾಗುವುದು. ಧಾರವಾಡದ ಗುಲಬರ್ಗಾದ ತನ್ನ ಗೆಳೆಯೊಬ್ಬನ ಮನೆಗೆ ಬಂದು, ’ಅದಾರೇನ್ರಿ ಮನೀ ಒಳಗ’ ಎಂದು ಕೇಳಿದರೆ, ಆ ಮನೆಯೊಡತಿ ’ಹಾರ ಬರ್ರೀ’ ಎನ್ನುವಳು. ಈತನಿಗೆ ಆಕೆಯ ಮಾತು ಕೇಳಿ ಗಾಬರಿಯಾಗುವುದು. ಹಾಗೆಯೇ ಆಕೆಯನ್ನು ನೋಡುತ್ತ ನಿಲ್ಲುವನು. ಆಗ ಆಕೆ ಮುಂದುವರಿದು ’ಮ್ಯಾಲಹಾರ ಬರ್ರೀ’ ಎಂದು ಕರೆಯುವಳು. ಈಕೆಯ ಮಾತಿನ ಅರ್ಥವೇ ಆತನಿಗಾಗದು. ದಕ್ಷಿಣ ಕರ್ನಾಟಕದವನೊಬ್ಬ ಬೀದರ ಜಿಲ್ಲೆಯ ಹಳ್ಳಿಯೊಂದಕ್ಕೆ ಬಂದು. ಅಲ್ಲಿ ಒಬ್ಬರ ಮನೆಯಲ್ಲಿ ಉಳಿದುಕೊಂಡ. ಮನೆಯೊಡತಿ ಆತನಿಗೆ ’ಒಳಗ ಹುಯ್ಯಕೋತೀರೋ ಹೊರಗ ಹುಯ್ಯಕೋತೀರೋ’ ಎಂದು ಕೇಳಿದಾಗ ಆತ ಕಕ್ಕಾಬಿಕ್ಕಿಯಾಗಿ ಆಕಡೆ ಈ ಕಡೆ ನೋಡುತ್ತ ’ಹೊರಗೇ ಹುಯ್ಯಕೋತೀನಿ’ ಎಂದು ಬಿಟ್ಟ. ಇಲ್ಲಿ ಹುಯ್ಯಕೋ ಎಂದರೆ ಸ್ನಾನ ಮಾಡು ಎಂದರ್ಥ. ಆದರೆ ದಕ್ಷಿಣ ಕರ್ನಾಟಕದಲ್ಲಿ ಇದರ ಅರ್ಥ ಬೊಬ್ಬೆ ಹೊಡಿ ಎಂದಾಗುವುದು.
ಈ ರೀತಿ ಆಯಾ ಪ್ರದೇಶಗಳಲ್ಲಿ ಶಬ್ದಗಳಿಗೆ ಭಿನ್ನ ಭಿನ್ನವಾದ ಅರ್ಥಗಳು ಚಲಾವಣೆಯಲ್ಲಿರುವುದರಿಂದ ಭಾಷೆ ತನ್ನ ಸ್ವರೂಪದಲ್ಲಿ ಭಿನ್ನತೆಯನ್ನು ಕಾಯ್ದುಕೊಂಡು ಬಂದಿದೆ. ಒಂದು ಪ್ರದೇಶದಲ್ಲಿ ಬಸ್ಸನ್ನು ಏರು, ಎಂದರೆ ಇನ್ನೊಂದೆಡೆ ಹತ್ತು ಎನ್ನುವರು. ಮಗದೊಂದೆಡೆ ಹೆಬ್ಬು ಎನ್ನುವರು, ಕೆಲವೆಡೆ ’ಇಲ್ಲಿಕೂಡು ಎಂದರೆ ಇನ್ನೊಂದೆಡೆ ಕಿಲ್ಲಿಕೂಡು’ ಎನ್ನುವರು. ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗಿನ ಉಪಹಾರಕ್ಕೆ ’ನಾಷ್ಟಾ’, ನ್ಯಾರಿ ಎಂದರೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಇದಕ್ಕೆ ’ತಿಂಡಿ’ ಎನ್ನುವರು. ಧಾರವಾಡ ಕಡೆಗೆ ’ಮಲಗಿಕೊಂಡ’ ಎಂದರೆ ರಾಯಚೂರು ಕಡೆ ಮಕ್ಕಂಡ ಎನ್ನುವರು. ಕಾರವಾರ ಕಡೆಗೆ ಹೋಗುವಾ, ನೋಡುವಾ, ಮಾಡುವಾ, ಎಂದರೆ ಬಿಜಾಪುರ, ಬೆಳಗಾವಿ ಕಡೆಗೆ ’ಹೋಗೋನು’, ’ನೋಡೋನು’, ’ಮಾಡೋನು’ ಎನ್ನುವುದುಂಟು. ಇನ್ನು ಗುಲಬರ್ಗಾ, ಬೀದರ ಕಡೆಗೆ ಇದಕ್ಕೆ ಹೋಗಾಮು, ಹೋಗಾರಿ, ಮಾಡಾಮು, ಮಾಡಾರಿ, ನೋಡಾಮು, ನೋಡಾರಿ, ಮಾಡೆಮಿ, ನೋಡೆಮಿ ಎನ್ನುವರು. ಹೀಗೆ ಭಾಷೆಯ ಬಳಕೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುವುದನ್ನು ಗುರುತಿಸುವೆವು. ಕನ್ನಡ ನಾಡಿನಲ್ಲಿರುವ ಕನ್ನಡ ಭಾಷೆ ಎಲ್ಲೆಡೆ ಒಂದೇ ತೆರನಾಗಿಲ್ಲ. ಅದು ಆಯಾ ಪ್ರದೇಶಕ್ಕೆ ಅನುಗುಣವಾಗಿ ಭಿನ್ನವಾಗಿರುವುದನ್ನು ಈ ಮೇಲಿನ ಅನೇಕ ನಿದರ್ಶನಗಳಿಂದ ತಿಳಿದುಕೊಂಡೆವು. ಕನ್ನಡ, ತೆಲುಗು ಹಾಗೂ ಮಲೆಯಾಳಿ ಭಾಷೆಗಳ ಪ್ರಭಾವವಾಗಿರುವುದನ್ನೂ ಗುರುತಿಸುವೆವು. ನೆರೆ ಪ್ರಾಂತಗಳ ಅಂಚಿನಲ್ಲಿರುವ ಊರುಗಳಲ್ಲಂತೂ ದ್ವಿಭಾಷೆ (ಃiಟiಟಿguiಚಿಟism) ಹೆಚ್ಚಾಗಿ ಬಳಕೆಗೊಳ್ಳುತ್ತಿರುವುದನ್ನು ಗುರುತಿಸುವೆವು. ಇವೆಲ್ಲವೂ ನಮ್ಮ ಭಾಷೆ ಜೀವಂತವಾಗಿದೆಯೆಂಬುದನ್ನು ತೋರಿಸುವವು. ಯಾವೊಂದು ಜೀವಂತ ಭಾಷೆ ನಿತ್ಯವೂ ಪರಿವರ್ತನೆಗೊಳ್ಳುತ್ತಲೇ ಹೋಗುತ್ತದೆ. ಪ್ರದೇಶದಿಂದ ಪ್ರದೇಶಕ್ಕೆ ಭಾಷೆ ಭಿನ್ನವಾಗಿರುವುದೂ ಅದರ ಬೆಳವಣಿಗೆ ಹಾಗೂ ಜೀವಂತಿಕೆಯ ಲಕ್ಷಣವಾಗಿದೆ. ಕನ್ನಡ ಭಾಷೆಯಲ್ಲಿ ಈ ರೀತಿಯ ಪ್ರಾದೇಶಿಕ ಉಪಭಾಷೆಗಳಿರುವುದರಿಂದ ಇದಕ್ಕೆ ಸೊಗಸು, ಶಕ್ತಿ ಬಂದಿದೆಯೆನ್ನಬಹುದು. ಭಾಷೆ ಮೇಲ್ನೊಟಕ್ಕೆ ತಾನು ಒಂದೇ ಎನ್ನುವಂತೆ ತೋರಿದರೂ ಒಳಹೊಕ್ಕು ನೋಡಿದಾಗ ಇಷ್ಟೆಲ್ಲ ಪೂರಕವೇ ಆಗಿವೆ. ಇಂಥ ಉಪಭಾಷೆಗಳಿರುವುದರಿಂದಲೇ ಇದು ಕಾಲಕಾಲಕ್ಕೆ ಬೆಳೆಯುತ್ತ ಬಂದಿರುವುದನ್ನೂ ಗುರುತಿಸುವೆವು.
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2011
(92)
-
▼
June
(23)
- ನೆಲದ ಒಡಲ ಹಾಡೇ ಜಾನಪದ
- ಜನಪದ ಮಹಿಳೆ
- ಡಬ್ಬಿಂಗ್ ಮತ್ತು ಕನ್ನಡ ಚಿತ್ರಪ್ರೇಕ್ಷಕ
- ಪ್ರಜಾಪ್ರಭುತ್ವದ ನೆಲಗಟ್ಟೇ ಹಳ್ಳಿಗಳು: ಗೊ.ರು.ಚನ್ನಬಸಪ್ಪ
- ಬಸವ ಬೆಳಕು (ರೂಪಕ)
- ಬಹುಭಾಷಿಕತೆ ಮತ್ತು ಕನ್ನಡ
- ಬೆಂಗಳೂರು ಕೆಂಪೇಗೌಡ
- ರಂಗಭೂಮಿಯಲ್ಲಿ ನಿರ್ದೇಶಕನ ಪಾತ್ರ
- ಕನ್ನಡದ ಪ್ರಾದೇಶಿಕ ಉಪಭಾಷೆಗಳು
- ಮಹಾರತ್ನಮೆನಿಸಿದಂ ಕವಿರತ್ನಂ
- ಬಸವ ತತ್ವದ ದಂಡನಾಯಕ
- ಪುರಾಣಗಳ ಪುನರ್ರೂಪಿಕೆಯಾಗಿ ಶೂದ್ರತಪಸ್ವಿ
- ಪೂಜೆ ಮತ್ತು ಪ್ರತಿಭಟನೆ
- ಕರ್ನಾಟಕದ ವಚನಗುಮ್ಮಟ ಡಾ|| ಫ.ಗು.ಹಳಕಟ್ಟಿ
- ಕನ್ನಡಿಗರೆಡೆಗೆ ತೂರಿದ ಚಪ್ಪಲಿಯೇ ಇವರಿಗೆ ಆಭರಣ!
- ಬಸವಣ್ಣ, ಪೈಗಂಬರ್ ಮತ್ತು ಕಾರ್ಮಿಕರು
- ಸ್ವಾಭಿಮಾನಿ ಕನ್ನಡಿಗ ನಾರಾಯಣಗೌಡರು
- ಸ್ನೇಹಕ್ಕ್ಕೂ ಬದ್ಧ ಸಮರಕ್ಕೂ ಸಿದ್ಧ
- ಹೊಸ ದಿಕ್ಕಿನೆಡೆ ನಡೆಯಲಿ
- ಕನ್ನಡವೇ ಜಾತಿ ಕನ್ನಡವೇ ಧರ್ಮ ಕನ್ನಡವೇ ದೇವರು
- ಗುಡುಗಿನ ಶ್ರೀ ನಾರಾಯಣಗೌಡರು
- ಭಾಷಾ ಬದ್ಧತೆಯ ನಾರಾಯಣಗೌಡರು
- ಅದ್ಭುತ ಸಂಘಟನಾ ಶಕ್ತಿ
-
▼
June
(23)
No comments:
Post a Comment