Tuesday, June 14, 2011

ಕರ್ನಾಟಕದ ವಚನಗುಮ್ಮಟ ಡಾ|| ಫ.ಗು.ಹಳಕಟ್ಟಿ



"ಕರ್ನಾಟಕತ್ವವೆಂದರೆ ತನ್ನ ದೇಶದ ಸಂಸ್ಕೃತಿಯ ಅರಿವು ಮತ್ತು ಅದನ್ನು ಅರಿತು ಆಚರಿಸುವುದು. ಇಂಥ ಆಚರಣೆಯೇ ದೇಶದ ಪ್ರಗತಿಯ ಕುರುಹು. ಆದರೆ ಈಗಿನ ಕರ್ನಾಟಕಸ್ಥರು ತಮ್ಮದನ್ನು ತಾವು ಮರೆತುಬಿಟ್ಟಿರುವರು. ಕರ್ನಾಟಕವು ಪೂರ್ವಕಾಲದಿಂದಲೂ ಪ್ರಸಿದ್ಧವಾದ ದೇಶವು. ಇಲ್ಲಿ ಹುಟ್ಟಿದ ಮಹಾವಿಭೂತಿಗಳು ಹಿಂದೂಧರ್ಮದ ಜ್ಞಾನಮಂದಿರದಲ್ಲಿ ಶ್ರೇಷ್ಠವಾದ ಸ್ಥಾನವನ್ನು ಅಲಂಕರಿಸಿದ್ದಾರೆ. ಆದರೆ ಅವರ ಅರಿವು ನಮ್ಮಲ್ಲಿ ಸಂಪೂರ್ಣವಾಗಿ ಹಾರಿಹೋಗಿದೆ ಮತ್ತು ಈಗ ನಾವು ದುರ್ಬಲರು ನಮ್ಮಿಂದೇನೂ ಆಗಲಾರದು ಎಂಬ ಭಾವನೆಯನ್ನು ತಾಳಿಕೊಂಡು ಹತಾಶರಾಗಿ ಉಳಿದಿದ್ದೇವೆ. ಈ ದುಸ್ಥಿತಿಯನ್ನು ತೊಲಗಿಸುವುದರಲ್ಲಿಯೇ ಕರ್ನಾಟಕತ್ವದ ಮಹತ್ವವು ಇದೆ..." ಹೀಗೆಂದು ೧೯೨೬ರಲ್ಲಿ ಬಳ್ಳಾರಿಯಲ್ಲಿ ನಡೆದ ೧೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ೮೬ ವರ್ಷಗಳ ಹಿಂದೆಯೇ ಸುವಿಖ್ಯಾತ ಸಾಹಿತಿ, ಹೆಸರಾಂತ ಪತ್ರಕರ್ತ ಡಾ||ಫ.ಗು.ಹಳಕಟ್ಟಿಯವರು ನುಡಿದಿದ್ದರು. ಕನ್ನಡ ನಾಡು-ನುಡಿ, ತಾಯ್ನೆಲದ ಸ್ಥಿತಿ-ಗತಿ ಬಗ್ಗೆ ಆ ಕಾಲದಲ್ಲೇ ಅಷ್ಟೊಂದು ಕಾಳಜಿ ಹೊತ್ತು ಕನ್ನಡದ ಅಭಿವೃದ್ಧಿಯ ಕನಸುಕಂಡ ಕನ್ನಡ ಕಟ್ಟಾಳು ಅವರು. ಬರೀ ಕಾಳಜಿ ಅಥವಾ ಬರೀ ಕನಸು ಕಾಣುವುದರಿಂದ ಪ್ರಯೋಜನವಾಗಲಾರದೆಂದು ನಂಬಿದ್ದ ಅವರು ಕ್ರಿಯಾತ್ಮಕವಾಗಿ ಕಂಡ ಕನಸುಗಳಿಗೆ ಮುತುವರ್ಜಿಯಿಂದ ನೀರೆರೆದು, ಎದೆಯಲ್ಲಿದ್ದ ಆಸೆಗಳು ಬತ್ತಿಹೋಗದಂತೆ ಜೀವತುಂಬಿ ಕನ್ನಡ ಸಾರಸ್ವತಲೋಕ ಮತ್ತು ಪತ್ರಿಕಾರಂಗದ ಉಭಯ ಕ್ಷೇತ್ರಗಳಲ್ಲೂ ಅದ್ಭುತವಾದುದನ್ನೇ ಸಾಧಿಸಿ ಅದರಲ್ಲೂ ವಚನ ಸಾಹಿತ್ಯದಲ್ಲಿ ಅತ್ಯದ್ಭುತವನ್ನು ಮಾಡಿ "ವಚನ ಪಿತಾಮಹ"ರೆನಿಸಿ ನಾಡಿನ ಬಹುತೇಕ ಕ್ಷೇತ್ರಗಳಲ್ಲಿ ಬಹುಶ್ರುತ ಪ್ರತಿಭೆಯಾಗಿ ಹೊಳೆದ ಇವರು ವಿಶೇಷವಾಗಿ ವಿಶ್ವಸಾಹಿತ್ಯದೆತ್ತರಕ್ಕೆ ಕನ್ನಡದ ವಚನ ಸಾಹಿತ್ಯವನ್ನು ಬೆಳೆಸಿದರು. ನಾಡವರಿಂದ ಕನ್ನಡದ ಮ್ಯಾಕ್ಸ್‌ಮುಲ್ಲರ್ ಎಂದು ಹೊಗಳಿಸಿಕೊಂಡರು.
ಒಮ್ಮೆ ಕನ್ನಡಕಣ್ವ ಪ್ರೊ||ಬಿ.ಎಂ.ಶ್ರೀಕಂಠಯ್ಯನವರು ರಾಜ್ಯೋತ್ಸವ ಸಮಾರಂಭವೊಂದರ ನಿಮಿತ್ತ ಬಿಜಾಪುರಕ್ಕೆ ಹೋಗಿದ್ದರಂತೆ. ಆ ಸಂದರ್ಭದಲ್ಲಿ ಅಲ್ಲಿನ ಸಂಘಟಕರು ವಿಶ್ವವಿಖ್ಯಾತಿ ಪಡೆದಿದ್ದ ಬಿಜಾಪುರದ ಗೋಳಗುಮ್ಮಟ ನೋಡುವಂತೆ ಇವರನ್ನು ಕರೆದಾಗ ನಸುನಕ್ಕ ಬಿ.ಎಂ.ಶ್ರೀ ಅವರು ಗೋಳಗುಮ್ಮಟಕ್ಕಿಂತ ಮುಖ್ಯವಾಗಿ ನಾನು ಇಲ್ಲಿರುವ ವಚನಗುಮ್ಮಟವನ್ನು ನೋಡಬೇಕೆಂದಾಗ, ಯಾವುದೀ ವಚನಗುಮ್ಮಟವೆಂದು ಒಂದು ಕ್ಷಣ ಸಂಘಟಕರು ತಲೆಕೆರೆದುಕೊಳ್ಳತೊಡಗಿದರಂತೆ. ಆಗ ಬಿ.ಎಂ.ಶ್ರೀ ಅವರೇ ನುಡಿದರಂತೆ ಆ ವಚನಗುಮ್ಮಟ ಬೇರಾರೂ ಅಲ್ಲ ವಚನ ಬ್ರಹ್ಮರೆಂದೇ ಹೆಸರಾಗಿರುವ ಫ.ಗು.ಹಳಕಟ್ಟಿಯವರೆಂದು. ಆ ಕಾಲದಲ್ಲಿ ಬಿಜಾಪುರಕ್ಕೆ ಭೇಟಿ ನೀಡಿದ ಸಾಹಿತ್ಯ ಪ್ರೇಮಿಗಳು ಸಾಮಾನ್ಯವಾಗಿ ಈ ’ವಚನ ಗುಮ್ಮಟ’ ದರ್ಶನ ಮಾಡಿಯೇ ಬರುತ್ತಿದ್ದರಂತೆ.
ಹೀಗೆ ಬಿ.ಎಂ.ಶ್ರೀ ಅವರಂಥ ಸಾಹಿತ್ಯ ದಿಗ್ಗಜರಿಂದ ’ವಚನಗುಮ್ಮಟ’ವೆಂದು ಅಭಿಮಾನದಿಂದ ಕರೆಸಿಕೊಂಡ ಫ.ಗು.ಹಳಕಟ್ಟಿ ಹುಟ್ಟಿದ್ದು ೧೮೮೦ರ ಜುಲೈ ೨ ರಂದು ಧಾರವಾಡದಲ್ಲಿ. ತಂದೆ ಗುರುಬಸಪ್ಪ ಹಳಕಟ್ಟಿ ತಾಯಿ ದಾನಾದೇವಿ. ಇವರ ಪೂರ್ಣ ಹೆಸರು ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಎಂದಿದ್ದರೂ ಹೆಸರಾದದ್ದು ಮಾತ್ರ ಫ.ಗು.ಹಳಕಟ್ಟಿ ಎಂದೇ! ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು. ತಂದೆ ಗುರುಬಸಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು. ಇಂಗ್ಲೆಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲಕ್ಕೆ ಸಾಹಿತಿಗಳಾಗಿ ಸಾಕಷ್ಟು ಹೆಸರುಗಳಿಸಿದ್ದರು. ಜೊತೆಗೆ ಆಗಿನ ಪ್ರಮುಖ ಪತ್ರಿಕೆಯಾದ "ವಾಗ್ಭೂಷಣ"ದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು. ಇಂಥವರ ಮಗ ಫ.ಗು.ಹಳಕಟ್ಟಿ ಎಂದರೆ ಕೇಳಬೇಕೇ? ಸಾಹಿತ್ಯವೆಂಬುದು ಇವರಿಗೆ ರಕ್ತಗತವಾಗಿ ಒಲಿದು ಬಂದಿತ್ತು. ಇದಕ್ಕೆ ತಕ್ಕ ಹಾಗೆ ಮಗ ಒಳ್ಳೆ ಸಾಹಿತಿಯಾಗಿ ಮುಂದೊಂದು ದಿನ ಕನ್ನಡ ನಾಡಿಗೆ ಕೀರ್ತಿ ತರಲೆಂಬ ಹೆಬ್ಬಯಕೆಯಿಂದ ಎಳೆವಯಸ್ಸಿನಲ್ಲೇ ಮಗನಿಗೆ ಪ್ರೋತ್ಸಾಹದ ಹಾಲೆರೆದಿದ್ದರು. ಹೀಗಾಗಿ ತಂದೆ ಹಾಕಿಕೊಟ್ಟ ಸನ್ಮಾರ್ಗದಲ್ಲಿ ಹೆಜ್ಜೆಗಳನ್ನೂರುತ್ತಾ ಬಂದ ಹಳಕಟ್ಟಿಯವರು ತಮ್ಮ ಹುಟ್ಟೂರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿ ೧೮೯೬ರಲ್ಲಿ ಮೆಟ್ರಿಕ್ ಮುಗಿಸಿದರು. ನಂತರ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿ ಅಲ್ಲಿನ ಸೇಂಟ್ ಝೇವಿಯರ್ ಕಾಲೇಜು ಸೇರಿದರು. ಅಲ್ಲಿ ಕನ್ನಡ ಪುರೋಹಿತ ಆಲೂರು ವೆಂಕಟರಾಯರು ಇವರ ಸಹಪಾಠಿಗಳಾಗಿದ್ದರು. ಆ ಸಂದರ್ಭದಲ್ಲಿ ಮುಂಬಯಿಯ ವಿದ್ಯಾರ್ಥಿಗಳು ಮತ್ತು ಅಲ್ಲಿನ ಜನರಲ್ಲಿದ್ದ ಗುಜರಾತಿ ಮತ್ತು ಮರಾಠಿ ಭಾಷಾಭಿಮಾನ, ಕನ್ನಡದ ಬಗ್ಗೆ ಅಲ್ಲಿದ್ದ ನಿರಭಿಮಾನ ಇವರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು. ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡ ಉದ್ಧಾರವಾಗದೆಂದು ಆ ಕ್ಷಣವೇ ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗಾಗಿ ದುಡಿಯಲು ವಿದ್ಯಾರ್ಥಿ ದಿಸೆಯಲ್ಲೇ ದೃಢಸಂಕಲ್ಪ ಮಾಡಿದರು. ಕರ್ನಾಟಕ ಏಕೀಕರಣಕ್ಕಾಗಿ ಆಗಲೇ ಹೋರಾಟದಲ್ಲಿ ನಿರತರಾಗಿದ್ದ ಆಲೂರು ಇವರಿಗಾಗ ಸ್ಫೂರ್ತಿಯಾಗಿದ್ದರು.
೧೯೦೧ರಲ್ಲಿ ಬಿ.ಎ. ಪದವಿ ಪಡೆದ ಹಳಕಟ್ಟಿಯವರು ೧೯೦೪ರಲ್ಲಿ ಕಾನೂನು ಪದವೀಧರರಾಗಿ ಬೆಳಗಾವಿಯಲ್ಲಿ ವಕೀಲಿವೃತ್ತಿ ಪ್ರಾರಂಭಿಸಿದರಾದರೂ ಕೆಲವು ತಿಂಗಳುಗಳಲ್ಲೇ ಕಾರಣಾಂತರಗಳಿಂದ ಬೆಳಗಾವಿಯಿಂದ ಬಿಜಾಪುರಕ್ಕೆ ವಾಸ್ತವ್ಯ ಬದಲಾಯಿಸಿದ್ದರು. ಅಲ್ಲಿಂದೀಚೆಗೆ ಬಿಜಾಪುರವನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡರು. ಒಂದೆಡೆ ವಕೀಲಿ ವೃತ್ತಿ, ಮತ್ತೊಂದೆಡೆ ನಾಡು-ನುಡಿಯ ಪ್ರಗತಿಗಾಗಿ ಹಲವು ಹತ್ತು ರೀತಿಯಲ್ಲಿ ದುಡಿಮೆ. ಇದು ಅವರ ನಿತ್ಯ ಕಾಯಕವಾಗಿತ್ತು. ಅದೇ ಸಮಯದಲ್ಲಿ ಚಿಕ್ಕೋಡಿಯ ತಮ್ಮಣ್ಣನವರ ಪುತ್ರಿ ಭಾಗೀರಥಿದೇವಿಯೊಡನೆ ವಿವಾಹವಾಗಿ ಗೃಹಸ್ಥಾಶ್ರಮ ಪ್ರವೇಶಿಸಿದರಾದರೂ ಸಾರ್ವಜನಿಕ ಬದುಕಿನ ಸೇವಾಹಾದಿಯಿಂದ ಹಿಂದೆ ಸರಿಯದೆ ಮತ್ತಷ್ಟು ದೃಢವಾಗಿ ಮುನ್ನುಗ್ಗಿದರು. ಅಪಾರ ಕಾನೂನು ಜ್ಞಾನದಿಂದಾಗಿ ಆ ಭಾಗದ ಪ್ರಸಿದ್ಧ ವಕೀಲರಾಗಿ ರೂಪುಗೊಂಡ ಇವರು ತಮ್ಮ ಜನಪ್ರಿಯತೆಯಿಂದಲೇ ೧೯೦೫ರಲ್ಲಿ ಬಿಜಾಪುರ ನಗರಸಭೆಯ ಶಾಲಾ ಕಾರ್ಯನಿರ್ವಾಹಕ ಮಂಡಳಿಯ ಸಭಾಧ್ಯಕ್ಷರಾಗಿ ಮತ್ತು ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ತನ್ಮೂಲಕ ಕನ್ನಡ ಶಾಲೆಗಳ ಅಭ್ಯುದಯಕ್ಕಾಗಿ, ಗ್ರಾಮೀಣ ಜನರ ಉನ್ನತಿಗಾಗಿ ಎಂದೂ ಮರೆಯದಂಥ ಜನಸೇವೆಗೈದ ಹಿರಿಮೆ ಇವರದು. ಅಂತೆಯೇ ೧೯೨೩ರಲ್ಲಿ ಸರ್ಕಾರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡರಲ್ಲದೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿಯೂ ಆಯ್ಕೆಗೊಂಡರು. ನಂತರದ ದಿನಗಳಲ್ಲಿ ಮುಂಬಯಿ ವಿಧಾನಪರಿಷತ್ತಿನ ಸದಸ್ಯರಾದ ಇವರು ತಮ್ಮ ಶಾಸನಬದ್ಧ ಅಧಿಕಾರದಿಂದ ಕನ್ನಡವನ್ನು ಗಟ್ಟಿಗೊಳಿಸಲು, ಪುಷ್ಠಿಗೊಳಿಸಲು, ಒಟ್ಟಾರೆ ಸಮೃದ್ಧವಾಗಿ ಕನ್ನಡ ಕಟ್ಟಲು ಪ್ರಾಮಾಣಿಕವಾಗಿ ದುಡಿದು ಅಜರಾಮರ ಕೆಲಸ ಮಾಡಿದ್ದಾರೆ.
ಕನ್ನಡವನ್ನು ಉಸಿರಾಗಿಸಿಕೊಂಡಿದ್ದಷ್ಟೇ ವಚನ ಸಾಹಿತ್ಯಕ್ಕೆ ಮಾರುಹೋಗಿದ್ದ ಹಳಕಟ್ಟಿಯವರು ಅಂದು ವಚನಸಾಹಿತ್ಯದ ಹಸ್ತಪ್ರತಿಗಳಿಗಾಗಿ, ಓಲೆಗರಿ ಗ್ರಂಥಗಳಿಗಾಗಿ ಹುಡುಕಾಡಿದ ಊರುಗಳಿಲ್ಲ, ತಡಕಾಡದ ಕೇರಿಗಳಿಲ್ಲ, ಅನ್ವೇಷಣೆಗೈದ ಆಲಯಗಳಿಲ್ಲ, ಸಂಶೋಧನೆಗೊಂಡ ಸ್ಥಳಗಳಿಲ್ಲವೆನ್ನಬಹುದು. ಒಂದು ರೀತಿಯಲ್ಲಿ ಇದಕ್ಕಾಗಿ ದೇಶಸುತ್ತಿದವರಿವರು. ಜಗತ್ತನ್ನೇ ಅಲೆದವರಿವರು. ಹೀಗೆ ತಿರುತಿರುಗಿ ತಾವು ತಂದು ಸಂಗ್ರಹಿಸಿದ ಹಸ್ತ ಪ್ರತಿರೂಪದ ವಚನರಾಶಿಯನ್ನು ೧೯೨೦ರಲ್ಲಿ ಬಿಜಾಪುರದಲ್ಲಿ ಪ್ರದರ್ಶಿಸಿ ಇದರ ಮೌಲ್ಯವನ್ನು ಇಂಚಿಂಚೂ ಬಿಡದಂತೆ ಎಲ್ಲರಿಗೂ ಇವರು ತಿಳಿಸಿದರು. ಆ ಕಾಲದಲ್ಲಿದು ಶರಣರ ನಾಡಿನಲ್ಲಿ ಭಾರಿ ಸಂಚಲನ ಉಂಟುಮಾಡಿತ್ತು. ಆ ನಂತರ ಹಸ್ತಪ್ರತಿ ರೂಪದಲ್ಲಿದ್ದ ಈ ವಚನಸಂಪತ್ತನ್ನು ಸಂಪಾದಿಸಿ ಮುದ್ರಿಸಿ ಪುಸ್ತಕರೂಪದಲ್ಲಿ ಹೊರತರಲು ಮುಂದಾದ ಇವರು ಇದಕ್ಕಾಗಿ ೧೯೨೫ರಲ್ಲಿ ತಮ್ಮ ಸ್ವಂತಮನೆ ಮಾರಿ "ಹಿತಚಿಂತಕ ಮುದ್ರಣಾಲಯ"ವನ್ನು ಪ್ರಾರಂಭಿಸಿದರು. ಅಲ್ಲಿಂದ ವಚನ ಸಾಹಿತ್ಯ ಕೃತಿಗಳ ಸುರಿಮಳೆಯೇ ಶುರುವಾಯಿತು. ನಿಜಕ್ಕೂ ಆಗ ಹಳಕಟ್ಟಿಯವರಿಂದ ವಚನಕ್ರಾಂತಿಯೇ ನಡೆದಿತ್ತು. ಇವರು ಸಂಪಾದಿಸಿ ಪ್ರಕಟಿಸಿದ ಒಂದೊಂದು ವಚನಸಂಕಲನ ಕೃತಿಗಳೂ ಇಂದಿಗೂ ಸಾರಸ್ವತ ಲೋಕದ ಮಾಣಿಕ್ಯಗಳೇ ಆಗಿವೆ. ತಮ್ಮ ಸಂಶೋಧನೆಯ ಮೂಲಕ ೨೫೦ ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದ ಕೀರ್ತಿಯ ಜೊತೆಗೆ ಹರಿಹರನ ೪೨ ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಸಾಧನೆ ಇವರ ಹೆಸರಿನಲ್ಲಿದೆ.
ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ "ವಚನ ಸಾಹಿತ್ಯ ಸಾರ"ವಂತೂ ಅಪೂರ್ವ ವಚನಗಳುಳ್ಳ ಒಂದು ಅದ್ಭುತ ಕೃತಿ. ಈ ಬೃಹತ್ ಗ್ರಂಥ ಹಲವು ಸಂಪುಟಗಳಲ್ಲಿ ೧೯೨೩ ರಿಂದ ೧೯೩೯ರ ಅವಧಿಯಲ್ಲಿ ಪ್ರಕಟಗೊಂಡು ವಚನಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಇವರ ಸ್ವತಂತ್ರ ಕೃತಿಗಳು ಸೇರಿದಂತೆ ಸಂಪಾದಿಸಿದ ವಚನಸಾಹಿತ್ಯ ಕೃತಿಗಳು ೧೭೫ಕ್ಕೂ ಹೆಚ್ಚೆಂದರೆ ಯಾರೂ ಬೇಕಾದರೂ ಊಹಿಸಬಹುದು. ಹಳಕಟ್ಟಿಯವರ ವಚನ ಸಾಹಿತ್ಯದ ದೈತ್ಯಶಕ್ತಿಯನ್ನು! ಶೂನ್ಯ ಸಂಪಾದನೆ, ಶಿವಾನುಭವ, ಕೃಷಿವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ..... ಮುಂತಾದವುಗಳು ಇವರ ಪ್ರಮುಖ ಕೃತಿಗಳು.
ಪತ್ರಿಕೋದ್ಯಮದಲ್ಲೂ ಬಹಳ ಆಸಕ್ತಿ ಹೊಂದಿದ್ದ ಹಳಕಟ್ಟಿಯವರು ೧೯೨೬ರಲ್ಲಿ ಸಂಶೋಧನೆಗಾಗಿ ಮೀಸಲಾದ "ಶಿವಾನುಭವ" ಪತ್ರಿಕೆ ಪ್ರಾರಂಭಿಸಿದರು. ಇದನ್ನು ಸತತವಾಗಿ ನಡೆಸಿಕೊಂಡು ಬಂದ ಇವರು ೧೯೫೧ರಲ್ಲಿ ಇದರ ಬೆಳ್ಳಿಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಹಾಗೆಯೇ ೧೯೨೭ರಲ್ಲಿ "ನವ ಕರ್ನಾಟಕ" ಎಂಬ ವಾರಪತ್ರಿಕೆಯನ್ನೂ ಸಹ ಆರಂಭಿಸಿದ್ದರು. ಈ ಎರಡೂ ಪತ್ರಿಕೆಗಳ ಸಂಪಾದಕ ಮತ್ತು ಪ್ರಕಾಶಕ ಹಾಗೂ ಮುದ್ರಕರಾಗಿ ಹಳಕಟ್ಟಿಯವರ ಪತ್ರಿಕಾರಂಗದ ಸಾಧನೆ ಕೂಡ ಗುರುತರವಾದದ್ದೇ.
ದೂರದೃಷ್ಟಿ ವ್ಯಕ್ತಿತ್ವದ ಹಳಕಟ್ಟಿಯವರು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆ ಜೊತೆಗೆ ಸಂಘಟನೆ, ಬ್ಯಾಂಕಿಂಗ್, ಕೃಷಿ, ನೇಕಾರಿಕೆ, ಸಹಕಾರಿ... ಹೀಗೆ ಎಲ್ಲದರಲ್ಲೂ ತೊಡಗಿಸಿಕೊಂಡಿದ್ದರು. ಇವರು ೧೯೧೦ರಲ್ಲಿ ಬಿಜಾಪುರ ಜಿಲ್ಲಾ ಲಿಂಗಾಯುತ ವಿದ್ಯಾವರ್ಧಕ ಸಂಘ (ಬಿ.ಎಲ್.ಡಿ.ಇ)ವನ್ನು ಮತ್ತು ೧೯೧೨ರಲ್ಲಿ ಶ್ರೀ ಸಿದ್ಧೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕನ್ನು ಸ್ಥಾಪಿಸಿದ್ದರಲ್ಲದೆ ಗ್ರಾಮೀಣಾಭಿವೃದ್ಧಿ ಸಂಘ, ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಂಘ, ಹತ್ತಿ ಮಾರಾಟ ಸಂಘಗಳು ಸೇರಿದಂತೆ ಸಹಕಾರಿ ಸಂಘಗಳನ್ನು ಸಂಸ್ಥಾಪಿಸಿ ತನ್ಮೂಲಕ ಒಟ್ಟಾರೆ ಸಮಾಜಾಭಿವೃದ್ಧಿಗೆ ದುಡಿದ ಅಪರೂಪದ ವ್ಯಕ್ತಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿ ಇವರು ಮಹತ್ತರ ಪಾತ್ರ ವಹಿಸಿದ್ದರು.
ಇಂಥ ಪ್ರಚಂಡ ಸಾಧಕ ಹಳಕಟ್ಟಿಯವರು ೧೯೬೪ರ ಜೂನ್ ೨೭ರಂದು ನಾಡನ್ನು ಬಿಟ್ಟು ಅಗಲಿದರೂ ಇವರು ಮಾಡಿದ ಸೇವೆ, ಸಾಧನೆ, ತ್ಯಾಗ, ಕಟ್ಟಿ ಬೆಳೆಸಿದ ಸಂಸ್ಥೆಗಳು ಎಲ್ಲಕ್ಕಿಂತ ಮಿಗಿಲಾಗಿ ವಚನ ಸಾಹಿತ್ಯ ಕ್ಷೇತ್ರ ಇವರ ಹೆಸರನ್ನು ಅಜರಾಮರಗೊಳಿಸಿವೆ. ಇವರು ಸಂಸ್ಥಾಪಿಸಿದ ಬಿ.ಎಲ್.ಡಿ.ಇ. ಸಂಸ್ಥೆ ಇಂದು ಮೂವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹಳಕಟ್ಟಿಯವರ ಸಮಗ್ರ ಸಾಹಿತ್ಯವನ್ನು ಹದಿನೈದು ಸಂಪುಟಗಳಲ್ಲಿ ಪ್ರಕಟಿಸಿದೆ ಎಂದರೆ ಯಾರಿಗಾದರೂ ಅರ್ಥವಾಗುತ್ತದೆ. ಹಳಕಟ್ಟಿಯವರು ಸಂಸ್ಥಾಪಿಸಿದ್ದ ಸಂಸ್ಥೆಯೊಂದರ ಬೆಳವಣಿಗೆಯ ಪರಿ ಎಂಥಾದ್ದೆಂದು!
೧೯೨೦ರಲ್ಲಿ ಮುಂಬಯಿಯ ವಿಧಾನ ಪರಿಷತ್ತಿನ ಸದಸ್ಯತ್ವ, ೧೯೨೬ರಲ್ಲಿ ಬಳ್ಳಾರಿಯಲ್ಲಿ ನಡೆದ ೧೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೨೮ರಲ್ಲಿ ಜರುಗಿದ ೩ನೇ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ, ೧೯೩೧ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ, ೧೯೩೩ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷತೆ, ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಮುಂತಾದವು ಇವರ ಸೇವೆಗೆ ಸಂದ ಗೌರವ ಪುರಸ್ಕಾರಗಳು.

ಬನ್ನೂರು ಕೆ.ರಾಜು
ಸಾಹಿತಿ-ಪತ್ರಿಕರ್ತ, ನಂ.೮೦/೨, ತ್ಯಾಗರಾಜ ರಸ್ತೆ, ೬ನೇ ತಿರುವು, ಅಗ್ರಹಾರ, ಮೈಸೂರು-೫೭೦ ೦೦೪, ದೂ: ೯೪೮೧೫೩೩೧೬೭

1 comment:

  1. Very good and informative Article about Vachana Pitamaha ಡಾ||ಫ.ಗು.ಹಳಕಟ್ಟಿ

    ReplyDelete

ಹಿಂದಿನ ಬರೆಹಗಳು