Tuesday, June 14, 2011

ಪುರಾಣಗಳ ಪುನರ್ರೂಪಿಕೆಯಾಗಿ ಶೂದ್ರತಪಸ್ವಿ


ಕನ್ನಡ ನಾಟಕ ಪರಂಪರೆಯಲ್ಲಿ ಕುವೆಂಪುರವರ ನಾಟಕಗಳಷ್ಟು ತೀವ್ರ ಸ್ವರೂಪದ ವಾಗ್ವಾದಗಳನ್ನು ಹುಟ್ಟಿಸಿದ ಇತರ ನಾಟಕಗಳು ಇಲ್ಲವೆನ್ನುವಷ್ಟು ಅಪರೂಪ. ಲಂಕೇಶರ ’ಸಂಕ್ರಾಂತಿ’, ಎಚ್.ಎಸ್.ಶಿವಪ್ರಕಾಶರ ’ಮಹಾಚೈತ್ರ ನಾಟಕಗಳು ಈ ಮಾತಿಗೆ ಅಪವಾದವೆನ್ನಬಹುದು. ಶೂದ್ರತಪಸ್ವಿ ನಾಟಕವು ಈ ಬಗೆಯ ಸಾಮಾಜಿಕ ಕಾಳಜಿಯುಳ್ಳ ಚಿಂತನೆಗಳನ್ನು ಹುಟ್ಟಿಸುವುದರ ಜೊತೆಗೆ ಕನ್ನಡ ಸಾಂಸ್ಕೃತಿಕ ಲೋಕದ ಅನೇಕ ಸಾಮಾಜಿಕ ಮಿತಿಗಳನ್ನು ಚರ್ಚೆಗೆ ಒಳಗಾಗುವಂತೆ ಮಾಡಿದೆ. ಈ ಕಾರಣದಿಂದಾಗಿಯೇ ಈ ನಾಟಕವು ಕನ್ನಡದ ಸಂದರ್ಭದಲ್ಲಿ ಮುಖ್ಯ ನಾಟಕವಾಗಿದೆ.
ಕುವೆಂಪುರವರ ಸೃಜನಶೀಲ ಆಯಾಮಗಳಲ್ಲಿ ಕಾವ್ಯ, ಕತೆ, ಕಾದಂಬರಿಗಳಂತೆಯೆ ನಾಟಕವೂ ಬಹುಮುಖ್ಯ ಅಭಿವ್ಯಕ್ತಿ ಮಾಧ್ಯಮವಾಗಿದ್ದು ಚಾರಿತ್ರಿಕ ಕಾರಣಗಳಿಂದಾಗಿ. ಪ್ರಾಚೀನ ಕಾಲದಿಂದಲೂ ಜಾರಿಯಲ್ಲಿದ್ದ ಜಾತಿ ಶ್ರೇಣೀಕರಣ ಮತ್ತು ಶ್ರೇಷ್ಟತೆಯ ವ್ಯಸನಗಳಿಗೆ ಪ್ರಜ್ಞಾವಂತ ಮನಸ್ಸೊಂದು ನೀಡಿದ ಪ್ರತಿಕ್ರಿಯೆಯಾಗಿ ಅವರ ನಾಟಕಗಳು ಸೃಜಿಸಲ್ಪಟ್ಟಿವೆ. ಕುವೆಂಪುರವರ ಸಾಹಿತ್ಯಕ ಪ್ರವೇಶದಿಂದಾಗಿ ಅದುವರೆಗೆ ಕನ್ನಡ ಸಾಹಿತ್ಯದಲ್ಲಿ ಗೈರುಹಾಜರಾಗಿದ್ದ ಶೂದ್ರ ಪ್ರತಿನಿಧೀಕರಣವೊಂದೆ ಅಲ್ಲದೆ; ಅದರೊಟ್ಟಿಗೆ ’ಸಂಸ್ಕೃತಿ ವಿಮರ್ಶೆಯು ಕೂಡ ಆರಂಭವಾಯಿತು. ಕುವೆಂಪುರವರ ವೈಚಾರಿಕತೆಯಿಂದಾಗಿ ಸಾಮಾಜಿಕ ತಾರತಮ್ಯಗಳು ಮತ್ತು ಅವುಗಳ ಪರಿಣಾಮಗಳಷ್ಟೇ ಅಲ್ಲದೇ; ಅವು ಭೂತ ಕಾಲದಿಂದ ವರ್ತಮಾನವನ್ನು ದಾಟಿ ಭವಿಷ್ಯತ್ಕಾಲಕ್ಕೆ ದಾಟಬಾರದೆಂಬ ಕಳಕಳಿಯ ಕಾರಣದಿಂದಾಗಿ ಈ ಹಿಂದಿನ ಮಹಾಕಾವ್ಯ, ಪುರಾಣಗಳನ್ನಾಧರಿಸಿ ಕಟ್ಟಲ್ಪಟ್ಟ ಅಸಮಾನ ಸಮಾಜದ ಏರಿಳಿತಗಳನ್ನು ಪ್ರಶ್ನಿಸಿದರು.
ಶೂದ್ರತಪಸ್ವಿ ನಾಟಕದಲ್ಲಿ ತಪಸ್ಸಿನ ಅಧಿಕಾರ ಕುರಿತು ಮೇಲ್ವರ್ಣದವರ ಸಂಕಥನಕ್ಕೆ ಪ್ರತಿಸಂಕಥನ ನಿರ್ಮಾಣದ ಮೂಲಕ ಅದುವರೆಗೆ ಅಂಚಿಗೆ ತಳ್ಳಲ್ಪಟ್ಟವರನ್ನು ಕೇಂದ್ರದತ್ತ ಚಲಿಸುವ ಇಂಧನ ಪೂರೈಕೆಯ ಕೆಲಸವನ್ನು ಅಲ್ಲಿನ ಶಂಬೂಕ ಪಾತ್ರವು ರಂಗದ ಮೇಲೆ ಬಾರದೆಯೆ ಮಾಡುತ್ತದೆ. ಇಡೀ ನಾಟಕದಲ್ಲಿ ಶಂಬೂಕನ ಒಂದೆ ಒಂದು ಮಾತಿಲ್ಲ. ಇದು ನಾಟಕದಲ್ಲಿನ ಬಂಧದಲ್ಲೂ ಶೂದ್ರನೆಂದು ಭಾವಿಸಲ್ಪಟ್ಟವನನ್ನು ಅದುವರೆಗಿನ ಸಮಾಜವು ಮೂಕನನ್ನಾಗಿಸುವುದನ್ನು ಮೌನವಾಗಿ ಆದರೆ ಅರ್ಥಪೂರ್ಣವಾಗಿ ಧ್ವನಿಸುತ್ತದೆ. ಮೂರು ಚಿಕ್ಕ ದೃಶ್ಯಗಳಿರುವ ನಾಟಕದಲ್ಲಿ ಶತಮಾನಗಳಿಂದಾದ ಸಾಮಾಜಿಕ ಶೋಷಣೆಯನ್ನು ರಾಮ, ಬ್ರಾಹ್ಮಣ ಪಾತ್ರಗಳ ಮಾತುಗಳಲ್ಲಿನ ವ್ಯಂಗ್ಯಗಳ ಮೂಲಕವೇ ನಾಟಕವು ಧ್ವನಿಸುತ್ತದೆ.
ಕುವೆಂಪು ಪರಂಪರೆಯೊಡನೆ ನಡೆಸಿದ ಅನುಸಂಧಾನದ ಫಲಿತಗಳಾದ ತಮ್ಮ ನಾಟಕಗಳಿಗೆ-ಓದುಗರನ್ನು ಸಿದ್ಧಪಡಿಸುವ ಸಲುವಾಗಿ ’ಮುನ್ನುಡಿ’ಯಲ್ಲಿ ಹೇಳಿರುವ ಮಾತುಗಳು ಮುಖ್ಯವೆನಿಸುತ್ತವೆ. "ಉತ್ತಮ ಶಿಲ್ಪಿ ಕಟ್ಟಿದ ದೇವಾಲಯದಲ್ಲಿ ಅದು ಹಳತಾಗುತ್ತ ಬಂದಂತೆಲ್ಲ, ಇಲಿ, ಹಲ್ಲಿ, ಬಾವಲಿ ಮೊದಲಾದ ಅನಾಹುತ ಜೀವಜಂತುಗಳೂ ಗೂಡು ಬೀಡು ಮಾಡುವುದುಂಟು. ವಾಲ್ಮೀಕಿಯ ಮಹಾಕೃತಿಗೂ ಅಂತಹ ಗತಿ ಒದಗಿದರೆ ಅದು ಅದರ ಪುರಾತನತ್ವಕ್ಕೆ ಅನಿವಾರ್ಯ ಲಕ್ಷಣವಾಗುತ್ತದೆ. ದೇವಾಲಯಕ್ಕೆ ಪೂಜೆಗೆಂದು ಹೋಗುವವರು ಯಾರೂ, ಅಲ್ಲಿವೆ ಎಂಬ ಒಂದು ಕಾರಣದಿಂದಲೆ, ಇಲಿ, ಹಲ್ಲಿ, ಬಾವಲಿಗಳನ್ನು ಪೂಜಿಸುವುದಿಲ್ಲವೊ ಹಾಗೆಯೇ ಮಹಾಕವಿಯ ಕೃತಿಯಲ್ಲಿ ಬಂದಳಿಕೆಗಳಂತೆ ಸೇರಿಕೊಂಡಿರುವ ಅಲ್ಪ ದೃಷ್ಟಿಯ ಕುಕವಿ ಕೃತವಾದ ಪ್ರಕ್ಷಿಪ್ತಗಳನ್ನೂ ತಿಳಿದವರು ಯಾರೂ ಗೌರವಿಸುವುದಿಲ್ಲ. ಶ್ರೀಮದ್ ರಾಮಾಯಣದಲ್ಲಿ, ಅದರಲ್ಲಿಯೂ ಉತ್ತರಕಾಂಡದಲ್ಲಿ, ಅಂತಹ ಪ್ರಕ್ಷಿಪ್ತಗಳು ಅನೇಕವಿವೆ. ಶಂಬೂಕವಧ ಪ್ರಸಂಗವೂ ಅಂತಹದೊಂದು" ಕುವೆಂಪುರವರ ಈ ಮಾತುಗಳಲ್ಲಿ ಗತದ ತಪ್ಪುಗಳನ್ನು ’ತಿಳಿದವರು’ ಮುಂದುವರಿಸಬಾರದೆಂಬ ಉದ್ದೇಶದಿಂದ ಈ ಕೃತಿ ರೂಪಿತವಾಗಿರುವುದನ್ನು ಮಂಡಿಸಲಾಗಿದೆ.
ಅದರ ಉದ್ದೇಶವು ಸ್ಪಷ್ಟವಾಗಿರುವಂತೆ ಕಾವ್ಯ, ಪುರಾಣಗಳಲ್ಲಿರುವ ತಾರತಮ್ಯಗಳನ್ನು ಪ್ರಶ್ನಿಸುವ, ಇಲ್ಲವಾಗಿಸುವ ಹಾಗೂ ಪುನರ್ರೂಪಿಸಿ ತಾರತಮ್ಯಗಳನ್ನು ದೂರೀಕರಿಸುವ ಪ್ರಯತ್ನವಾಗಿಯೆ ಅವರ ನಾಟಕಗಳು ರೂಪುಗೊಂಡಿವೆ. "ಪುರಾಣ ಕಥೆಗಳು ಪರಂಪರಾಗತವಾಗಿದ್ದು ಜನಮನದಲ್ಲಿ ಆಳವಾಗಿ ಬೇರೂರಿರುವುದರಿಂದ ಅವುಗಳನ್ನು ಆಶ್ರಯಿಸಿ ಹೊಸ ವಿಚಾರಗಳನ್ನು ಪ್ರತಿಪಾದಿಸುವ ಲೇಖಕ ಒಂದೇ ಕಾಲಕ್ಕೆ ಎರಡು ಉದ್ದೇಶಗಳನ್ನು ಹೊಂದಿರುತ್ತಾನೆ. ಆಧುನಿಕ ವಿಚಾರಗಳನ್ನು ಮಂಡಿಸುವುದು ಮತ್ತು ಹೊಸ ಬೆಳಕಿನಲ್ಲಿ ಹಿಂದಿನ ಕಾಲದ ನಂಬಿಕೆಗಳನ್ನು ಮೌಲ್ಯಗಳನ್ನು ವಿಮರ್ಶಿಸುವುದು-ಇವೆರಡೂ ಕಾರ್ಯಗಳನ್ನು ಒಂದೇ ಕಥಾವಸ್ತುವಿನ ಮೂಲಕ ಆತ ನಿರ್ವಹಿಸುತ್ತಾನೆ. ಕುವೆಂಪುರವರ ಎಲ್ಲ ನಾಟಕಗಳೂ ಪೌರಾಣಿಕ ವಸ್ತುವನ್ನು ಆಶ್ರಯಿಸಿರುವುದರಿಂದ ಅವುಗಳ ವಿವೇಚನೆಯನ್ನು ಅದೇ ಹಿನ್ನೆಲೆಯಲ್ಲಿ ನಡೆಸುವುದು ಸೂಕ್ತವಾದ ದಾರಿ" ಎನ್ನುವ ಕೆ.ಮರುಳಸಿದ್ದಪ್ಪನವರು ಮುಂದುವರೆದು "ಪುರಾಣ" ಕಥೆಯೊಂದರ ಮೌಲ್ಯಗಳನ್ನು ಸಂಪೂರ್ಣವಾಗಿ ಆಧುನಿಕ ನೆಲೆಯಲ್ಲಿ ಪರೀಕ್ಷಿಸುವ ನಾಟಕಗಳು. ಉದಾ: ಬೆರಳ್‌ಗೆ ಕೊರಳ್, ಶೂದ್ರ ತಪಸ್ವಿ ಎನ್ನುತ್ತಾರೆ. ಈ ಬಗೆಯಲ್ಲಿ ಈ ನಾಟಕಗಳಲ್ಲಿ ಪೌರಾಣಿಕ ಆಯಾಮಗಳಲ್ಲಿ ವ್ಯಕ್ತವಾಗಿರುವ ಜಾತಿ ಶ್ರೇಣೀಕರಣ, ವರ್ಣವ್ಯವಸ್ಥೆಯ ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವುದು ಮುಖ್ಯವಾಗುತ್ತದೆ. ಈ ಬಗೆಯ ಪ್ರಶ್ನೆಗಳನ್ನು ಕನ್ನಡದಲ್ಲಿ ಮೊತ್ತಮೊದಲು ಪ್ರತಿಪಾದಿಸಿದ ಕೃತಿಗಳಿವು. ಆ ಕಾರಣದಿಂದಾಗಿ ಆ ಕಾಲಕ್ಕೆ ’ಮಾಸ್ತಿ’ಯವರೊಡನೆ ತೀವ್ರವಾದ ವಾಗ್ವಾದಕ್ಕೂ ಈ ಕೃತಿ ಕಾರಣವಾಗಿದೆ. ’ಶೂದ್ರ ತಪಸ್ವಿಯ ಮಾರ್ನುಡಿಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕುವೆಂಪುರವರು "ಹಳೆಯ ಕಥೆಯನ್ನು ಹೊಸ ಸಾಹಿತಿ ತನ್ನ ಕೃತಿಗೆ ತನ್ನಿಷ್ಟದಂತೆ ಉಪಯೋಗಿಸಿಕೊಳ್ಳುವ ಪದ್ಧತಿಯೂ ಮಹಾಕವಿ ಸಂಪ್ರದಾಯ ಸಿದ್ಧವಾದುದು. ನಾನು ತಪ್ಪಿದರೂ ಕಾಳಿದಾಸ, ಬಾಸ, ಪಂಪ, ಕುಮಾರವ್ಯಾಸಾದಿಗಳೊಡನೆ ತಪ್ಪಿದ್ದೇನೆ. ಮಹಿಮರೊಡನೆ ತಪ್ಪಿದರೆ ಆ ತಪ್ಪು ನನಗೊಪ್ಪು ಎಂದು ಪುರಾಣಗಳ ಪುನರ್ರೂಪೀಕರಣದ ತಮ್ಮ ಒಲವನ್ನು ಪ್ರತಿಪಾದಿಸುತ್ತಾರೆ. ಈ ಪ್ರಸಂಗವು ಕನ್ನಡ ಸಾರಸ್ವತ ಲೋಕದಲ್ಲಿ ಪ್ರಮುಖ ವಾಗ್ವಾದವಾಗಿ ಚರ್ಚಿತವಾಗಿದೆ. ಜಾತಿ ಶ್ರೇಣೀಕೃತ ಸಮಾಜವೊಂದು, ಭಿನ್ನ ಜಾತಿಯ ಕಾರಣಗಳಿಂದಾಗಿ ಸೃಷ್ಟಿಸುವ ’ಅನ್ಯತೆಯ ರೂಪಕವಾಗಿ ಈ ವಾಗ್ವಾದವು ಸಾಂಸ್ಕೃತಿಕವಾಗಿ ಮುಖ್ಯವಾದುದು. ಒಂದೊಂದು ಜಾತಿಯವರಿಗೆ ಒಂದೇ ಕೃತಿ ಭಿನ್ನವಾಗಿ ವ್ಯಾಖ್ಯಾನಿಸಲ್ಪಡುವ ಸಾಧ್ಯಾಸಾಧ್ಯತೆಗಳ ಜೊತೆಗೆ, ಜಾತಿಯ ಮೂಲಬೇರುಗಳ ಆಳಗಳನ್ನು ಈ ಬಗೆಯ ಚರ್ಚೆಗಳು ದಾಖಲಿಸುತ್ತವೆ. ಸಹೃದಯ ವಿಮರ್ಶೆಯ ಕೊರತೆಯನ್ನು ಮಂಡಿಸುತ್ತವೆ.
ಈ ಬಗೆಯ ಅನೇಕ ಸಾಧ್ಯತೆಗಳತ್ತ ವಿಶಿಷ್ಟ ದೃಷ್ಟಿಕೋನವನ್ನು ಮಂಡಿಸುವ ’ಶೂದ್ರತಪಸ್ವಿಯು ಈಚಿನ ದಿನಗಳಲ್ಲಿ ಹೊಸ ಬಗೆಯ ಓದುಗಳಿಗೂ ಪ್ರಸ್ತುತವಾಗಿರುವುದನ್ನು ಕಾಣಬಹುದು. "ರಾಜಪ್ರಭುತ್ವ-ಪುರೋಹಿತಶಾಹಿ, ಯಾಜಮಾನ್ಯಗಳ ನಡುವಿನ ಮುಖಾಮುಖಿ ಮತ್ತು ಬ್ರಾಹ್ಮಣರ ಶೂದ್ರತ್ವದ ನಡುವಿನ ಸಂಘರ್ಷದ ನೆಲೆಗಳನ್ನು ಮಾರ್ಮಿಕವಾಗಿ ಶೋಧಿಸುವ ಪ್ರಯತ್ನ ಈ ನಾಟಕದ ಮುಖ್ಯ ನೆಲೆ. ಪುರೋಹಿತಶಾಹಿ ಯಾಜಮಾನ್ಯವು ಜನ ಸಮುದಾಯದ ಮೇಲೆ ರೂಢಿಗತ ಮೌಲ್ಯಗಳನ್ನು ಹೇರಿ ಹತ್ತಿಕ್ಕುವ ಕ್ರೌರ್ಯವನ್ನು, ಅದರ ತಳತಂತ್ರಗಳನ್ನು ಈ ನಾಟಕದ ಪ್ರಭುತ್ವ ಪ್ರಶ್ನಿಸುತ್ತದೆ, ವಿಶ್ಲೇಷಿಸುತ್ತದೆ. ಅದರ ಜೊತೆಗೆ ಶೂದ್ರಶಕ್ತಿಯ ಗಟ್ಟಿತನವನ್ನು ಪ್ರಸ್ತುತ ಪಡಿಸುವುದು ಈ ನಾಟಕದ ಮುಖ್ಯ ಆಶಯವಾಗಿದೆ" ಎಂಬ ಡಾ. ಟಿ.ವೆಂಕಟೇಶ ಮೂರ್ತಿಯವರ ಮಾತುಗಳಲ್ಲಿ ಈಚಿನ ಪರಿಭಾಷೆಗಳಾದ ಯಾಜಮಾನ್ಯ, ಜ್ಞಾನಾಧಿಕಾರ (ಗ್ರಾಂಶಿ, ಫುಕೊ) ಮುಂತಾದವುಗಳನ್ನು ಒಳಗೊಂಡಿರುವುದು, ಈ ನಾಟಕಗಳು ಇಂದಿಗಾದರೂ ಪ್ರಸ್ತುತವಾಗಿರುವುದನ್ನು ತೋರಿಸುತ್ತದೆ.
’ಶೂದ್ರ ತಪಸ್ವಿಯ ಈ ಬಗೆಯ ಅನೇಕ ಸೂಕ್ಷ್ಮಾಂಶಗಳಿಂದಾಗಿ ಅನೇಕ ಧ್ವನಿಗಳನ್ನು ಹೊರಡಿಸುತ್ತಲೇ ಪುರಾಣಗಳನ್ನು ಪುನರ್ರೂಪಿಸುವ ಹಾಗೂ ಅವುಗಳನ್ನು ಜನಸಮುದಾಯಗಳಲ್ಲಿ ತಳಕ್ಕೊತ್ತಲ್ಪಟ್ಟ, ಶೋಷಿತರ ಧ್ವನಿಯಾಗುವಂತೆ ಏಕಕಾಲಕ್ಕೆ ಪುರೋಹಿತಶಾಹಿ ಹಾಗೂ ಆ ವ್ಯವಸ್ಥೆಯ ವಿರುದ್ಧ ತಳ ಸಮುದಾಯದವರನ್ನೂ ಎಚ್ಚರಿಸುತ್ತ, ವಿರೋಧಿಗಳಿಗೆ ತಮ್ಮ ತಪ್ಪನ್ನು ಇನ್ನಾದರೂ ತಿದ್ದಿಕೊಳ್ಳಿ ಎನ್ನುವ ಎಚ್ಚರವನ್ನೂ ನೀಡುವುದರಲ್ಲೆ ಈ ನಾಟಕವು ಸಾರ್ಥಕತೆಯನ್ನು ಕಾಣುತ್ತದೆ.

ಪ್ರದೀಪ್ ಮಾಲ್ಗುಡಿ

1 comment:

  1. ವಂದನೆಗಳು ಈ ಪತ್ರಿಕೆ ನಮಗೆ ತಲುಪಿಸಿದುದಕೆ.

    ReplyDelete

ಹಿಂದಿನ ಬರೆಹಗಳು